ಅಂತರ್ಜಾತಿ ವಿವಾಹವಾದ ಅಂಗವಿಕಲ ದಂಪತಿ: ಮಗು ಸಮೇತ ಬಹಿಷ್ಕಾರ ಹಾಕಿದ ಗ್ರಾಮಸ್ಥರು
ಚಿತ್ರದುರ್ಗ, ಸೆಪ್ಟೆಂಬರ್ 28: ಪ್ರೀತಿಸಿ ಅಂತರ್ಜಾತಿ ವಿವಾಹವಾಗಿದಕ್ಕಾಗಿ 30 ಸಾವಿರ ರೂಪಾಯಿ ದಂಡ ವಿಧಿಸಿ ದಂಪತಿಯನ್ನು ಒಂದು ತಿಂಗಳ ಮಗುವಿನೊಂದಿಗೆ ಗ್ರಾಮದಿಂದ ಬಹಿಷ್ಕಾರ ಹಾಕಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಚಳ್ಳಕೆರೆ ತಾಲೂಕಿನ ಎನ್.ದೇವನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಕಳೆದ ಒಂದು ವರ್ಷದ ಹಿಂದೆ ಸಾವಿತ್ರಮ್ಮ ಮತ್ತು ಮಣಿಕಂಠ ಎಂಬ ದಂಪತಿ ಪ್ರೀತಿಸಿ ಅಂತರ್ಜಾತಿ ವಿವಾಹವಾಗಿದ್ದರು. ಇವರಿಬ್ಬರು ಹುಟ್ಟಿನಿಂದಲೇ ಶ್ರವಣ ಹಾಗೂ ವಾಕ್ ದೋಷ ಸಮಸ್ಯೆ ಹೊಂದಿದ್ದರು. ಇಬ್ಬರು ಬೇರೆ ಬೇರೆ ಜಾತಿಯವರಾಗಿದ್ದರು ಪ್ರೀತಿಸಿ ಮದುವೆಯಾಗಿ ಸಂಸಾರ ನಡೆಸುತ್ತಿದ್ದರು. ಆದರೆ ತವರಿಗೆ ಹೆರಿಗೆಗೆ ಬಂದವಳು ಎಂಬ ಕನಿಕರ ಇಲ್ಲದೆ ಅಮಾನೀಯವಾಗಿ ವರ್ತಿಸಿ ಗ್ರಾಮಸ್ಥರು ತರಾಟೆ ತೆಗೆದು ದಂಪತಿಗೆ ಅಂತರ್ಜಾತಿ ಮದುವೆ ಆಗಿದ್ದಕ್ಕೆ 30,000 ರೂಪಾಯಿ ದಂಡ ವಿಧಿಸಿ ದಂಡ ಕಟ್ಟಿಸಿಕೊಂಡು ಊರಿನಿಂದ ಗ್ರಾಮದಿಂದ ಇಬ್ಬರನ್ನ ಬಹಿಷ್ಕಾರ ಹಾಕಿದ್ದಾರೆ.

ಅಲ್ಲದೇ ಹುಡುಗಿಯ ಕುಟುಂಬಕ್ಕೆ ಇಬ್ಬರನ್ನು ಮನೆಯಿಂದ ಹೊರ ಹಾಕುವಂತೆ ಗ್ರಾಮಸ್ಥರು ಆಗ್ರಹಿಸಿದ್ದು, ಒಂದು ವೇಳೆ ಮನೆಯಿಂದ ಹೊರ ಹಾಕದಿದ್ದರೆ ಇಡೀ ಕುಟುಂಬವನ್ನು ಬಹಿಷ್ಕಾರ ಹಾಕುವಲಾಗುವುದು ಎಂದು ಬೆದರಿಕೆಯನ್ನು ಹಾಕಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಇವರಿಬ್ಬರಿಗೂ ಪ್ರೀತಿಸಿ 2021ರಲ್ಲಿ ಮದುವೆ ಮಾಡಿಕೊಂಡಿದ್ದಾರೆ. ಇದೀಗ ಈ ಇಬ್ಬರಿಗೆ ಒಂದು ತಿಂಗಳ ಮಗು ಕೂಡ ಇದೆ. ಸಾವಿತ್ರಮ್ಮ ಹೆರಿಗೆಗಾಗಿ ಗ್ರಾಮದಲ್ಲಿರುವ ತವರಿನ ಮನೆಗೆ ಬಂದಿದ್ದರು ಎನ್ನಲಾಗಿದೆ.
ಈ ದಂಪತಿಗೆ ಚಿತ್ರದುರ್ಗದ ಸಾಂತ್ವನ ಕೇಂದ್ರದಲ್ಲಿ ತಾತ್ಕಾಲಿಕವಾಗಿ ಆಶ್ರಯ ನೀಡಲಾಗಿದೆ. ಅಧಿಕಾರಿಗಳು ಈ ಪ್ರಕರಣ ಗಮನದಲ್ಲಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ತಿಳಿದು ಬಂದಿದೆ.












Click it and Unblock the Notifications