ಚಿತ್ರದುರ್ಗ ಜೆಡಿಎಸ್ ಅಭ್ಯರ್ಥಿ ರಘು ಆಚಾರ್ ಮನೆ ಮೇಲೆ ಚುನಾವಣಾಧಿಕಾರಿಗಳ ದಾಳಿ
ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ರಘು ಆಚಾರ್ ಮನೆ ಮೇಲೆ ಚುನಾವಣಾಧಿಕಾರಿಗಳು ದಾಳಿ ಮಾಡಿದ್ದು, ಪರಿಶೀಲನೆ ನಡೆಸಿದ್ದಾರೆ. ತಾಲೂಕಿನ ಕ್ಯಾದಿಗೆರೆ ಬಳಿ ಇರುವ ಅವರ ನಿವಾಸದ ಮೇಲೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಮತದಾನಕ್ಕೆ ಹಿಂದಿನ ದಿನ ಚುನಾವಣಾಧಿಕಾರಿಗಳು ದಾಳಿ ಮಾಡುವ ಮೂಲಕ ರಘು ಆಚಾರ್ ಅವರಿಗೆ ಶಾಕ್ ನೀಡಿದ್ದಾರೆ.
ಕಾಂಗ್ರೆಸ್ ನಾಯಕರಾಗಿದ್ದ ರಘು ಆಚಾರ್ ಟಿಕೆಟ್ ಕೈ ತಪ್ಪಿದ್ದರಿಂದ ಅಸಮಾಧಾನಗೊಂಡು ಜೆಡಿಎಸ್‌ಗೆ ಸೇರ್ಪಡೆಯಾಗಿದ್ದರು. ಜೆಡಿಎಸ್‌ನಿಂದ ಟಿಕೆಟ್ ಪಡೆದುಕೊಂಡಿದ್ದ ಅವರು ಭರ್ಜರಿಯಾಗಿ ಪ್ರಚಾರ ಮಾಡಿದ್ದು, ಗೆಲುವಿನ ಲೆಕ್ಕಾಚಾರದಲ್ಲಿದ್ದರು. ಕೊನೆಯ ದಿನ ಮತದಾರರನ್ನು ಸೆಳೆಯುವಲ್ಲಿ ನಿರತರಾಗಿದ್ದ ಅವರಿಗೆ ಚುನಾವಣಾಧಿಕಾರಿಗಳು ದಾಳಿ ಮಾಡಿರುವುದು ಅಡ್ಡಿಯಾದಂತಾಗಿದೆ.

ಚಿತ್ರದುರ್ಗ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಮೂಲೆಗುಂಪು ಮಾಡುವುದಾಗಿ ಅವರು ಶಪಥ ಮಾಡಿದ್ದರು. ಜಿಲ್ಲೆ ಆರೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲದಂತೆ ಮಾಡುವುದಾಗಿ ಹೇಳಿದ್ದರು. ಮಾಜಿ ಎಂಎಲ್‌ಸಿ ರಘು ಆಚಾರ್ ನಾಯಕತ್ವದ ಬಗ್ಗೆ ಅಸಮಾಧಾನ ವ್ಯಕ್ತವಾದ ಹಿನ್ನಲೆಯಲ್ಲಿ ಅವರಿಗೆ ಟಿಕೆಟ್ ತಪ್ಪಿಸಿ ಕಾಂಗ್ರೆಸ್ ಕೆ.ಸಿ.ವಿರೇಂದ್ರ ಪಪ್ಪಿಯನ್ನು ಕಣಕ್ಕಿಳಿಸಿದೆ.
ಹಿರಿಯೂರಿನ ಜೆಡಿಎಸ್ ಅಭ್ಯರ್ಥಿ ಪತ್ನಿ ಐಟಿ ವಶಕ್ಕೆ
ಜಿಲ್ಲೆಯ ಹಿರಿಯೂರು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಂ.ರವೀಂದ್ರಪ್ಪ ಪತ್ನಿಯನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ. ರವೀಂದ್ರಪ್ಪ ಅವರ ಪತ್ನಿ ಜಿ.ಪಿ. ಲತಾ ಅವರನ್ನು ಮಂಗಳವಾರ ಐಟಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಹಿರಿಯೂರು ತಾಲೂಕಿನ ಧರ್ಮಪುರ ಹೋಬಳಿಯ ಮುಂಗುಸುವಳ್ಳಿ ಗ್ರಾಮದಲ್ಲಿರುವ ಅವರ ನಿವಾಸದ ಮೇಲೆ ದಾಳಿ ಮಾಡಿ ಹೆಚ್ಚಿನ ವಿಚಾರಣೆಗೆ ಬೆಂಗಳೂರಿಗೆ ಕರೆದೊಯ್ದಿದ್ದಾರೆ.












Click it and Unblock the Notifications