ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೊಳಲ್ಕೆರೆಯ ಬಡ ಮಕ್ಕಳಿಗೆ ಕಿವಿಯಾದ ಜಪಾನ್‍ನ ಡಾ. ಶ್ರೀಹರಿ

|
Google Oneindia Kannada News

ಹೊಳಲ್ಕೆರೆ, ಜನವರಿ 29, 2019: ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆಯ ತಾಲೂಕು ಆಸ್ಪತ್ರೆಯಲ್ಲಿ ಶ್ರವಣ ದೋಷ ಹೊಂದಿದ ಬಡ ಮಕ್ಕಳಿಗೆ ಶ್ರವಣ ಸಾಧನ ಅಳವಡಿಸುವ ಶಿಬಿರ ನಡೆಯಿತು. ಹೊಳಲ್ಕೆರೆ ಮತ್ತು ಹೊಸದುರ್ಗ ತಾಲೂಕುಗಳ ಹಳ್ಳಿಗಾಡಿನ ಸುಮಾರು 40 ಮಕ್ಕಳು ಉಚಿತವಾಗಿ ಶ್ರವಣ ಸಾಧನ ಅಳವಡಿಸಿಕೊಂಡು ಉತ್ತಮ ಭವಿಷ್ಯದೆಡೆಗೆ ಹೆಜ್ಜೆಯಿಟ್ಟರು.

ಜಪಾನ್‍ನ ಲಾಭ ರಹಿತ ಸೇವಾಸಂಸ್ಥೆ ಕಿಬೌ ನೊ ಹಿಕಾರಿ (ಆಶಾ ಕಿರಣ), ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೊಳಲ್ಕೆರೆ ಮತ್ತು ಹೊಸದುರ್ಗ ಘಟಕಗಳು, ಏಶ್ಯಾ ಹಾರ್ಟ್ ಫೌಂಡೇಶನ್, ನಾರಾಯಣ ಸಿಎಸ್‍ಆರ್ ಮತ್ತು ಚಾರಿಟೇಬಲ್ ಟ್ರಸ್ಟ್‍ಗಳ ಸಂಯುಕ್ತ ಆಶ್ರಯದಲ್ಲಿ ಈ ಜನೋಪಕಾರಿ ಶಿಬಿರ ಏರ್ಪಾಡಾಗಿತ್ತು.

ಯಶೋಗಾಥೆ: ಜಪಾನ್ನಿನಲ್ಲಿ ಮಿನುಗುತ್ತಿರುವ ನಮ್ಮ ಕೃಷಿತಜ್ಞ ಡಾ. ಶ್ರೀಹರಿಯಶೋಗಾಥೆ: ಜಪಾನ್ನಿನಲ್ಲಿ ಮಿನುಗುತ್ತಿರುವ ನಮ್ಮ ಕೃಷಿತಜ್ಞ ಡಾ. ಶ್ರೀಹರಿ

ಎಲ್ಲಿಯ ಜಪಾನ್-ಎಲ್ಲಿಯ ಹೊಳಲ್ಕೆರೆ ಎಂದು ಆಶ್ಚರ್ಯವಾ? ಕೇಳಿ ಇಲ್ಲಿ. ಜಪಾನ್ ರಾಜಧಾನಿ ಟೋಕಿಯೋದ ಕಿಬೌ ನೊ ಹಿಕಾರಿ ಸೇವಾ ಸಂಸ್ಥೆಯ ಸಂಸ್ಥಾಪಕ ಡಾ. ಶ್ರೀಹರಿ ಚಂದ್ರಘಟ್ಗಿ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದವರು. ಈ ಅಂತರಾಷ್ಟ್ರೀಯ ಖ್ಯಾತಿಯ ಸೂಕ್ಷ್ಮಾಣುಜೀವಿ ವಿಜ್ಞಾನಿ ಜಪಾನ್‍ನ ಇಕೋಸೈಕಲ್ ಕಾರ್ಪೊರೇಷನ್ ಕಂಪನಿಯ ಮುಖ್ಯಸ್ಥರು. ಭಾರತ ಸರ್ಕಾರ ಕೂಡ ತ್ಯಾಜ್ಯ ನಿರ್ವಹಣೆ ಮತ್ತು ಪರಿಸರ ಸಂಬಂಧಿ ನೀತಿ ನಿರೂಪಣೆಗೆ ಡಾ. ಶ್ರೀಹರಿಯವರ ಸಲಹೆ ಪಡೆಯುತ್ತಿದೆ.

ಕಳೆದೊಂದು ದಶಕದಿಂದ ನಿರಂತರ ಹಣಕಾಸಿನ ಸಹಾಯ

ಕಳೆದೊಂದು ದಶಕದಿಂದ ನಿರಂತರ ಹಣಕಾಸಿನ ಸಹಾಯ

ಡಾ. ಶ್ರೀಹರಿ ಅವರು ತನ್ನ ತಾಯ್ನಾಡಿಗೆ ಕೈಲಾದಷ್ಟು ಸೇವೆ ಮಾಡುವ ಸದುದ್ದೇಶದಿಂದ ಬಡ ಮಕ್ಕಳ ವಿದ್ಯಾಭ್ಯಾಸ ಮತ್ತು ಸಂಕೀರ್ಣ ಆರೋಗ್ಯ ಸಮಸ್ಯೆಗಳಿಗೆ ಕಳೆದೊಂದು ದಶಕದಿಂದ ನಿರಂತರ ಹಣಕಾಸಿನ ಸಹಾಯ ಮಾಡುತ್ತಿದ್ದಾರೆ.

ಆ ಸರಣಿಯಲ್ಲಿ ಇದೀಗ ಹೊಳಲ್ಕೆರೆ-ಹೊಸದುರ್ಗದ ಬಡ ಮಕ್ಕಳ ಶ್ರವಣ ದೋಷ ನಿವಾರಣೆಗೆ ಮುಂದಾಗಿದ್ದಾರೆ. ಗ್ರಹಿಕೆ-ಕಲಿಕೆಯ ಚಿಕ್ಕ ವಯಸ್ಸಿನಲ್ಲಿಯೇ ಶ್ರವಣ ಸಮಸ್ಯೆ ನಿವಾರಣೆಯಾದಲ್ಲಿ ಅವರೂ ಇತರ ಮಕ್ಕಳಂತಾಗಿ ಭವಿಷ್ಯ ಉತ್ತಮಗೊಳ್ಳುವುದೆಂಬ ಉದ್ದೇಶದಿಂದ ಈ ಸೇವಾ ಕಾರ್ಯಕ್ಕೆ ಮಕ್ಕಳನ್ನೇ ಆಯ್ದುಕೊಳ್ಳಲಾಗಿದೆ.

ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದಡಿಯಲ್ಲಿ ಚಿತ್ರದುರ್ಗ ಆರೋಗ್ಯ ಇಲಾಖೆಯ ವೈದ್ಯರ ತಂಡ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ, ಶಿಶುವಿನಿಂದ 18 ವರ್ಷ ವಯೋಮಾನದ ಅಂದಾಜು 80,000 ಮಕ್ಕಳನ್ನು ಪರಿಶೀಲಿಸಿ ಶ್ರವಣ ದೋಷ ಇರುವ ಸುಮಾರು 110 ಮಕ್ಕಳ ಯಾದಿ ತಯಾರಿಸಿತ್ತು.

ಹುಟ್ಟಿನಿಂದ ಬರುವ ವೈಕಲ್ಯ,ಪೋಷಕಾಂಶಗಳ ಕೊರತೆ, ರೋಗರುಜಿನೆಗಳು ಮತ್ತು ನಿಧಾನ ಬೆಳವಣಿಗೆ ಇಂಥ ಪೂರ್ತಿ ಅಥವಾ ಭಾಗಶಃ ಕಿವುಡುತನಕ್ಕೆ ಕಾರಣವಾಗುತ್ತವೆ. ಈ ದೋಷವನ್ನು ಬೇಗ ಗುರುತಿಸಿ 6 ವರ್ಷದೊಳಗೆ ಶ್ರವಣ ಸಾಧನ ಅಳವಡಿಸಿದರೆ ಹೆಚ್ಚು ಪರಿಣಾಮಕಾರಿ.

ಶಿರಸಿಯ ಪರಿಸರ ತಜ್ಞ ಡಾ.ಶ್ರೀಹರಿಗೆ ಜಪಾನ್ ಸರ್ಕಾರದ ಪ್ರಶಸ್ತಿ ಶಿರಸಿಯ ಪರಿಸರ ತಜ್ಞ ಡಾ.ಶ್ರೀಹರಿಗೆ ಜಪಾನ್ ಸರ್ಕಾರದ ಪ್ರಶಸ್ತಿ

ಸೇವಾ ಸಂಸ್ಥೆ ಕಿಬೌ ನೊ ಹಿಕಾರಿ ಮೂಲಕ ಸಹಾಯ

ಸೇವಾ ಸಂಸ್ಥೆ ಕಿಬೌ ನೊ ಹಿಕಾರಿ ಮೂಲಕ ಸಹಾಯ

ಎರಡೂ ಕಿವಿಗೆ ಉತ್ತಮ ಗುಣಮಟ್ಟದ ಸಾಧನ ಅಳವಡಿಸಲು ಸುಮಾರು 35 ರಿಂದ 40 ಸಾವಿರ ರೂಪಾಯಿ ಬೇಕು. ಬಡತನ, ಮಾಹಿತಿ ಕೊರತೆ ಮತ್ತು ನಿರ್ಲಕ್ಷಗಳಿಂದಾಗಿ ಬಡ ಮಕ್ಕಳು ಹಾಗೇ ಉಳಿದುಬಿಡುತ್ತಾರೆ. ಹಾಗೆಂದು ಈ ಸಾಧನ ಅಳವಡಿಸಿದರೂ ಸಮಸ್ಯೆಯ ಶೇಕಡಾ 100 ರಷ್ಟು ಪರಿಹಾರದ ಭರವಸೆ ಕೊಡಲಾಗದು. ಸಾಧನ ಅಳವಡಿಸಿ 3 ತಿಂಗಳಾದರೂ ಹೆಚ್ಚಿನ ಸುಧಾರಣೆ ಕಾಣದಿದ್ದಲ್ಲಿ ಕಾಕ್ಲಿಯರ್ ಇಂಪ್ಲಾಂಟ್ ಎಂಬ ದುಬಾರಿ ಚಿಕಿತ್ಸೆ ಮಾಡಬೇಕಾಗುತ್ತದೆ.

ರಾಷ್ಟ್ರೀಯ ಕಿವುಡುತನ ತಡೆ ಮತ್ತು ನಿಯಂತ್ರಣ ಕಾರ್ಯಕ್ರಮದನ್ವಯ ನಡೆಸಿದ ಸಮೀಕ್ಷೆಯ ಪ್ರಕಾರ ಭಾರತದಲ್ಲಿ 1 ಲಕ್ಷದಲ್ಲಿ 291 ಜನರಿಗೆ ವಿವಿಧ ಪ್ರಮಾಣದಲ್ಲಿ ಕಿವುಡುತನ ಇದೆ. ನಮ್ಮ ರಾಜ್ಯದಲ್ಲೂ ಶ್ರವಣ ದೋಷ ನಿವಾರಣೆ ಅಗತ್ಯವಿರುವವರ ಪಟ್ಟಿ ದೊಡ್ಡದಿದೆ.

ನಮ್ಮ ಆರೋಗ್ಯ ಇಲಾಖೆ ಸರ್ಕಾರದ ವಿವಿಧ ಯೋಜನೆಗಳು, ದಾನಿಗಳು ಮತ್ತು ಸಂಘಸಂಸ್ಥೆಗಳ ನೆರವಿನೊಂದಿಗೆ ಚಿಕಿತ್ಸೆ ಒದಗಿಸಲು ಹರಸಾಹಸ ಪಡುತ್ತಿರುವುದು ನಿಜವಾದರೂ ಬೇಡಿಕೆ ತುಂಬ ದೊಡ್ಡದಿದೆ.

ಡಾ. ಶ್ರೀಹರಿ ತಮ್ಮ ಮಿತ್ರರಿಂದ ಪರಿಸ್ಥಿತಿಯ ವಿವರ ಪಡೆದು ತಮ್ಮ ಸೇವಾ ಸಂಸ್ಥೆ ಕಿಬೌ ನೊ ಹಿಕಾರಿ ಮೂಲಕ ಸಹಾಯ ಮಾಡಲು ಯೋಜಿಸಿದರು. ಹೊಳಲ್ಕೆರೆ ಮತ್ತು ಹೊಸದುರ್ಗದ ವೈದ್ಯಾಧಿಕಾರಿಗಳ ಬಡ ಮಕ್ಕಳೆಡೆಗಿನ ಕಾಳಜಿ-ಕಳಕಳಿ ಮತ್ತು ಸೇವಾ ತತ್ಪರತೆ ಡಾ. ಶ್ರೀಹರಿಯವರನ್ನು ಇಲ್ಲಿಗೆ ಕರೆತಂದಿತು.

ಅಂತರ್ಜಲ ಉಳಿಸಿ! ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟ ಸಿದ್ದಾಪುರದ ವಿಜ್ಞಾನಿ ಅಂತರ್ಜಲ ಉಳಿಸಿ! ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟ ಸಿದ್ದಾಪುರದ ವಿಜ್ಞಾನಿ

ಕಿಬೌ ನೊ ಹಿಕಾರಿ ಸಂಸ್ಥೆಯಿಂದ ಇನ್ನಿತರ ಭಾಗಗಳಿಗೂ ನೆರವು

ಕಿಬೌ ನೊ ಹಿಕಾರಿ ಸಂಸ್ಥೆಯಿಂದ ಇನ್ನಿತರ ಭಾಗಗಳಿಗೂ ನೆರವು

ಕಿಬೌ ನೊ ಹಿಕಾರಿ, ಭಾರತ, ಜಪಾನ್ ಮತ್ತಿತರೆ ದೇಶಗಳ ಅನಿವಾಸಿ ಭಾರತೀಯ ದಾನಿಗಳಿಂದ ಹಣ ಸಂಗ್ರಹಿಸಿ ಡಾ. ಶ್ರೀಹರಿ ಮೊದಲ ಹಂತದಲ್ಲಿ ಸುಮಾರು 40 ಮಕ್ಕಳಿಗೆ ಉತ್ತಮ ಗುಣಮಟ್ಟದ ಶ್ರವಣ ಸಾಧನ ಕೊಡಿಸಿದ್ದಾರೆ. ಎರಡನೆ ಹಂತದಲ್ಲಿ ಇನ್ನುಳಿದ ಮಕ್ಕಳಿಗೆ ಮತ್ತು ಮುಂಬರುವ ದಿನಗಳಲ್ಲಿ ರಾಜ್ಯದ ಇನ್ನಿತರ ಭಾಗಗಳಲ್ಲೂ ತನ್ನ ಸೇವೆ ಒದಗಿಸಲು ಡಾ. ಶ್ರೀಹರಿ ನಿರ್ಧರಿಸಿದ್ದಾರೆ.

ಕಿಬೌ ನೊ ಹಿಕಾರಿ ಜಪಾನ್‍ನಲ್ಲಿ ಕೂಡ ಭೂಕಂಪ ಸಂತ್ರಸ್ತರು ಮತ್ತು ಅನಾಥಾಶ್ರಮಗಳಿಗೆ ಸಾಕಷ್ಟು ನೆರವು ಒದಗಿಸುತ್ತಿದೆ. ಡಾ. ಶ್ರೀಹರಿ ಜಪಾನ್ ಮತ್ತು ಭಾರತದಲ್ಲಿ ದಾನಿಗಳಿಂದ ಇನ್ನಷ್ಟು ಹಣ ಸಂಗ್ರಹಿಸಿ ಮತ್ತಷ್ಟು ಬಡ ಮಕ್ಕಳಿಗೆ ನೆರವು ನೀಡುವ ಗುರಿ ಹೊಂದಿದ್ದಾರೆ.

ಹೊಳಲ್ಕೆರೆಯ ಈ ಶಿಬಿರದ ಯಶಸ್ಸಿಗೆ ಶ್ರಮಿಸಿದ ಆರೋಗ್ಯ ಇಲಾಖೆಯ ವೈದ್ಯಾಧಿಕಾರಿಗಳಿಗೆ ಧನ್ಯವಾದ ಅರ್ಪಿಸಿದ್ದಾರೆ. ಅಂತೆಯೇ ಇಂಥದೊಂದು ಸೇವಾಕಾರ್ಯಕ್ಕೆ ವೇದಿಕೆ ನಿರ್ಮಿಸಿಕೊಟ್ಟ ಆರೋಗ್ಯ ಇಲಾಖೆ, ನಾರಾಯಣ ಸಿಎಸ್‍ಆರ್ ಮತ್ತು ಚಾರಿಟೇಬಲ್ ಟ್ರಸ್ಟ್, ದಾನಿಗಳು, ಹಿತೈಶಿಗಳು ಮತ್ತು ಮಾಧ್ಯಮ ಮಿತ್ರರಿಗೆ ಧನ್ಯವಾದ ಹೇಳುತ್ತಿದ್ದಾರೆ.

ಸಿದ್ದಾಪುರದವರಾದ ಡಾ. ಶ್ರೀಹರಿ ಚಂದ್ರಘಾಟಗಿ

ಸಿದ್ದಾಪುರದವರಾದ ಡಾ. ಶ್ರೀಹರಿ ಚಂದ್ರಘಾಟಗಿ

ಕರ್ನಾಟಕದ ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದವರಾದ ಡಾ. ಶ್ರೀಹರಿ ಚಂದ್ರಘಾಟಗಿ ಸುಮಾರು ಎರಡು ದಶಕಗಳಿಂದ ಟೊಕಿಯೊದಲ್ಲಿ ನೆಲೆಸಿದ್ದಾರೆ. ಪರಿಸರ ಬಯೊಟೆಕ್ನಾಲಜಿ ಕ್ಷೇತ್ರದಲ್ಲಿ ಶ್ಲಾಘನೀಯ ಕೆಲಸ ಮಾಡಿದ್ದಾರೆ. ಡಾ.ಶ್ರೀಹರಿ ತಂದೆ ವಾಯುಪಡೆ ಅಧಿಕಾರಿ. 1961 ರಲ್ಲಿ ಗೋವಾ ವಿಮೋಚನೆ ಮತ್ತು 1971 ರಲ್ಲಿ ಬಾಂಗ್ಲಾ ವಿಮೋಚನೆಯಲ್ಲಿ ಭಾಗಿಯಾಗಿದ್ದರು. ತಾಯಿ ಶಿಕ್ಷಕಿ. ಸಿದ್ದಾಪುರದಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿದ ಶ್ರೀಹರಿ, 1992 ರಲ್ಲಿ ಧಾರವಾಡ ಕೃಷಿ ವಿಜ್ಞಾನ ವಿಶ್ವವಿದ್ಯಾನಿಲಯದಲ್ಲಿ ಪದವಿ ಪಡೆದರು.

ದೆಹಲಿಯ ಇಂಡಿಯನ್ ಕೌನ್ಸಿಲ್ ಆಫ್ ಆಗ್ರಿಕಲ್ಚರಲ್ ರಿಸರ್ಚನಿಂದ ಜೂನಿಯರ್ ರಿಸರ್ಚ್ ಸ್ಕಾಲರ್ ಶಿಪ್ ಪಡೆದು ಅದೇ ಕಾಲೇಜಿನಲ್ಲಿ 1994 ರಲ್ಲಿ ಸ್ನಾತಕೋತ್ತರ ಹಾಗೂ 1997 ರಲ್ಲಿ ಕೃಷಿ ಮೆಕ್ರೊಬಾಯಾಲಜಿಯಲ್ಲಿ ಪಿಎಚ್‍ಡಿ ಹಾಗೂ ಸ್ವರ್ಣ ಪದಕ ಪಡೆದರು. 1998ರಲ್ಲಿ ಮಾನ್‍ಬುಶೊ ಫೆಲೋಶಿಪ್ ಶಿಕ್ಷಣ ಸಚಿವಾಲಯ, ಜಪಾನ್ ಪಡೆದು ಶಿಬಾ ವಿಶ್ವವಿದ್ಯಾನಿಲಯದಲ್ಲಿ ಸಂಶೋಧಕರಾಗಿ ಸೇರಿದರು. 2000 ರಲ್ಲಿ ಎಕೊಸೈಕಲ್ ಕಾರ್ಪೊರೇಷನ್ ವಿಜ್ಞಾನಿಯಾಗಿ ವೃತ್ತಿಪರ ಜಿವನ ಆರಂಭಿಸಿದರು. 2005 ರಲ್ಲಿ ಎಕೊಸೈಕಲ್‍ನ ಅಧ್ಯಕ್ಷ ಮತ್ತು ಸಿಇಓ ಆದರು.

English summary
Karnataka origin Dr. Shrihari Chandraghatgi founded Japanese NPO Kibou no Hikari; District Health office, Chitradurga, Taluk Health Office, Holalkere & Hosadurga with support of Health and Family Welfare Services, Government of Karnataka, through their timely intervention has restored hearing of about 40 children
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X