ಏನೇನೋ ಹೇಳಿಕೆ ನೀಡಿ ಹೈಕಮಾಂಡ್ ಕೆಂಗಣ್ಣಿಗೆ ಗುರಿಯಾಗಬೇಡಿ; ದುರ್ಗದ ಶಾಸಕರಿಗೆ ಸಿಎಂ ಕಿವಿಮಾತು
ಚಿತ್ರದುರ್ಗ, ಆಗಸ್ಟ್ 29: "ಸಚಿವ ಸ್ಥಾನ ಸಿಗದಿದ್ದಕ್ಕೆ ಮಾಧ್ಯಮಗಳ ಮುಂದೆ ಬಹಿರಂಗ ಹೇಳಿಕೆ ನೀಡಿ, ಹೈಕಮಾಂಡ್ ಕೆಂಗಣ್ಣಿಗೆ ಗುರಿಯಾಗಬೇಡಿ" ಎಂದು ಚಿತ್ರದುರ್ಗ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಮತ್ತು ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ಗೆ ಸಿಎಂ ಬಿಎಸ್ ವೈ ಬುದ್ಧಿಮಾತು ಹೇಳಿದ್ದಾರೆ.
"ಮುಂದೆ ಅವಕಾಶ ಸಿಕ್ಕೇ ಸಿಗುತ್ತದೆ. ತಾಳ್ಮೆ ಕಳೆದುಕೊಳ್ಳಬೇಡಿ. ಶಾಂತ ರೀತಿಯಿಂದ ಕಾಯಿರಿ" ಎಂದು ಅಸಮಾಧಾನಿತರಿಗೆ ಸಿಎಂ ಕಿವಿಮಾತು ಹೇಳಿರುವುದಾಗಿ ತಿಳಿದುಬಂದಿದೆ.
ಒಂದೆಡೆ ಸಚಿವ ಸ್ಥಾನ ಸಿಗದಿರುವವರಿಗೆ, ಮತ್ತೊಂದೆಡೆ ನಿರ್ದಿಷ್ಟ ಖಾತೆ ಮೇಲೆ ಕಣ್ಣಿಟ್ಟು ಅಸಮಾಧಾನಗೊಂಡಿರುವವರಿಗೆ ಯಡಿಯೂರಪ್ಪ ಹಿತೋಪದೇಶ ಮಾಡುವ ಮೂಲಕ ಉಂಟಾಗಿರುವ ಭಿನ್ನಮತವನ್ನು ಸರಿಪಡಿಸಲು ಮುಂದಾಗಿದ್ದಾರೆ. ತಮ್ಮ ಡಾಲರ್ಸ್ ಕಾಲೋನಿ ನಿವಾಸಕ್ಕೆ ಶಾಸಕರಾದ ಗೂಳಿಹಟ್ಟಿ ಶೇಖರ್, ತಿಪ್ಪಾರೆಡ್ಡಿ, ಚಿತ್ರದುರ್ಗ ಸಂಸದ ನಾರಾಯಣಸ್ವಾಮಿ ಅವರನ್ನು ಕರೆಸಿಕೊಂಡಿದ್ದು, ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

ಈಚೆಗಷ್ಟೆ, "ನಾನು ಜೆಡಿಎಸ್ ಮೂಲದಿಂದ ಬಂದವನು. ನನಗೆ ಬಿಜೆಪಿ ಸಿದ್ಧಾಂತಗಳನ್ನು ಒಪ್ಪಿಕೊಳ್ಳಲು ಕಷ್ಟವಾಗುತ್ತಿದೆ. ನನ್ನ ಬೆಂಬಲಿಗರಿಗೂ ಕಷ್ಟವಾಗುತ್ತಿದೆ" ಎಂದು ಗೂಳಿಹಟ್ಟಿ ಶೇಖರ್ ಮಾಧ್ಯಮಗಳ ಮುಂದೆ ಮಾತನಾಡಿದ್ದರು. ತಮಗೆ ಪಕ್ಷದಲ್ಲಿ ಬೆಲೆ ಇಲ್ಲ ಎಂದೂ ಹೇಳಿಕೊಂಡಿದ್ದರು.












Click it and Unblock the Notifications