ಹಿರಿಯೂರು: ವಿಜೃಂಭಣೆಯಿಂದ ನೆರವೇರಿದ ದೇವರಿಗೆ ಹಾವು, ಚೇಳು ಅರ್ಪಿಸುವ ಜಾತ್ರೆ
ಹಿರಿಯೂರು, ಅಕ್ಟೋಬರ್, 13: ಹಿರಿಯೂರು ತಾಲೂಕಿನಲ್ಲಿರುವ ರಂಗಯ್ಯನಿಗೆ ಹಾವು ಚೇಳುಗಳ ಹರಕೆಯ ಜಾತ್ರೆ ವಿಜೃಂಭಣೆಯಿಂದ ನೆರವೇರಿತು. ವಾಣಿ ವಿಲಾಸ ಸಾಗರ ಜಲಾಶಯದ ಹಿನ್ನೀರಿನ ದಡದಲ್ಲಿರುವ ಬುಡಕಟ್ಟು ಕಾಡುಗೊಲ್ಲರ ಆರಾಧ್ಯ ದೈವ ಹಾರನಕಣಿವೆ ಶ್ರೀ ರಂಗನಾಥಸ್ವಾಮಿಯ ಅಂಬಿನೋತ್ಸವ ಹಾಗೂ ಹಾವು, ಚೇಳುಗಳ ಅರ್ಪಿಸುವ ಹರಕೆಯ ಜಾತ್ರೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಭಾನುವಾರ (ಅಕ್ಟೋಬರ್ 13) ಸಂಭ್ರಮ ಸಡಗರದಿಂದ ನೇರವೇರಿತು.
ಹಿರಿಯೂರು ಹಾಗೂ ಹೊಸದುರ್ಗ ತಾಲೂಕಿನ ಗಡಿಭಾಗದಲ್ಲಿ ಹರಿಹರರು ನೆಲೆಸಿದ್ದ ಪ್ರಮುಖ ಕ್ಷೇತ್ರವೆಂದು ಕರೆಯುವ ಹಾರನಕಣಿವೆ ಅಪಾರ ಮಹಿಮೆ ಹಾಗೂ ಭಕ್ತರನ್ನು ಹೊಂದಿರುವ ಪುಣ್ಯ ಕ್ಷೇತ್ರವಾಗಿದೆ. ಶ್ರೀ ರಂಗನಾಥಸ್ವಾಮಿಯ ದಸರಾ ಪ್ರಯುಕ್ತ ವಿಶೇಷ ಜಾತ್ರೆ, ಅಂಬಿನೋತ್ಸವ ಹಾಗೂ ವಿಶೇಷ ಪೂಜೆಗಳು ನಡೆದವು.

ಹೊಸದುರ್ಗ ತಾಲೂಕಿನ ಅಂಚಿಬಾರಿಹಟ್ಟಿ ಗ್ರಾಮದಲ್ಲಿರುವ ಶ್ರೀ ರಂಗನಾಥಸ್ವಾಮಿಯ ಉತ್ಸವ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ವಾಣಿವಿಲಾಸ ಸಾಗರ ಜಲಾಶಯದಲ್ಲಿ ಸ್ವಾಮಿಗೆ ಗಂಗಾಪೂಜೆ ಹಾಗೂ ಕುದುರೆ ಪೂಜೆ ಕಾರ್ಯ ನೆರವೇರಿಸಲಾಯಿತು. ಬಳಿಕ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಕೂರಿಸಿ ಮೆರವಣಿಗೆಯೊಂದಿಗೆ ಗುಡಿ ಗೌಡ, ಪೂಜಾರಿ, ಗ್ರಾಮದ ಅಣ್ಣ-ತಮ್ಮಂದಿರು ಹಾಗೂ ಭಕ್ತರ ನೇತೃತ್ವದಲ್ಲಿ ಅದ್ದೂರಿಯಾಗಿ ಹಾರನಕಣಿವೆ ಕ್ಷೇತ್ರಕ್ಕೆ ಕರೆತಂದು ಶಿವ ಹಾಗೂ ವಿಷ್ಣುವಿಗೆ ಮೊದಲ ಪೂಜೆ ಸಲ್ಲಿಸಿದರು.
ನಂತರ ಜಂಬೂ ಮರದ ಮುಂದೆ ನೆಟ್ಟಿದ್ದ ಬಾಳೆ ಗಿಡಕ್ಕೆ ಪೂಜಾರಿಯು ಮೂರು ಬಾರಿ ಪ್ರದಕ್ಷಿಣೆ ಹಾಕಿ, ಬಿಲ್ಲು ಹಿಡಿದು ಬಾಣ ಹೊಡೆದು, ಬಾಳೆಗಿಡ ಕಡಿಯುವ ಮೂಲಕ ಅಂಬಿನೋತ್ಸವ ಕಾರ್ಯ ನೇರವೇರಿತು.
ವಿಷ ಜಂತುಗಳ ಹರಕೆ: ಮನೆ, ಹೊಲ ಗದ್ದೆಗಳಲ್ಲಿ, ರಾತ್ರಿ ವೇಳೆ ವಿಷ ಜಂತುಗಳು ತಮಗೆ ಕಾಣಿಸಿಕೊಂಡಾಗ ರಂಗನಾಥ ಸನ್ನಿಧಿಗೆ ಬಂದು ಜಾತ್ರೆಯಲ್ಲಿ ಹುಳಗಳನ್ನು ಅರ್ಪಿಸುತ್ತೇವೆ ಎಂದು ಹರಕೆ ಕಟ್ಟಿಕೊಳ್ಳುತ್ತಾರೆ. ಕಟ್ಟಿಕೊಂಡ ಹರಕೆ ತೀರಿಸಲು ತಂದಿದ್ದ ಜರಿ, ಹಾವು, ಚೇಳುಗಳನ್ನು ಭಕ್ತರು ಸರತಿ ಸಾಲಿನಲ್ಲಿ ನಿಂತು ಹುಂಡಿಯಲ್ಲಿ ಹಾಕಿ ಹರಕೆ ತೀರಿಸು ದೃಶ್ಯ ಗಮನ ಸೆಳೆಯಿತು.
ಜೊತೆಗೆ ಕೆಲವು ಭಕ್ತಾಧಿಗಳು ತಮ್ಮ ಮತ್ತೊಂದು ಹರಕೆಯಂತೆ ಬಾಳೆಹಣ್ಣು ಹಾಗೂ ಸಕ್ಕರೆ ತಂದು ದೇವಾಲಯದ ಸುತ್ತಮುತ್ತ ಇರುವ ಹಸಿರು ಗಿಡಗಳ ಹತ್ತಿರ ಬಾಳೆ ಎಲೆ ಹಾಕುತ್ತಾರೆ. ಬಳಿಕ ಅದರಲ್ಲಿ ಸುಲಿದ ಬಾಳೆ ಹಣ್ಣು ಹಾಕಿ, ಸಕ್ಕರೆ ಬೆರೆಸಿ ಪೂಜೆ ಸಲ್ಲಿಸಿದರು. ನಂತರ ದಾಸಯ್ಯರಿಂದ ಗೋವಿಂದ ಅನ್ನಿಸಿ ಸುತ್ತ ಮುತ್ತ ಇದ್ದ ಭಕ್ತರಿಗೆ ಪ್ರಸಾದ ವಿತರಣೆ ಮಾಡುವುದು ಮತ್ತೊಂದು ವಿಶೇಷವಾಗಿತ್ತು.
ಬುಡಕಟ್ಟು ಜನಾಂಗದ ಆರಾಧ್ಯ ದೈವ: ಬಯಲು ಸೀಮೆಯ ಬುಡಕಟ್ಟು ಕಾಡುಗೊಲ್ಲ ಸಮುದಾಯದ ಧಾರ್ಮಿಕ ಕೇಂದ್ರ ಹಾಗೂ ಆರಾಧ್ಯ ದೈವ ಹಾರನಕಣಿವೆ ರಂಗನಾಥ ಸ್ವಾಮಿಯ ಮಹಿಮೆ ಅಪಾರವಾಗಿದೆ. ಕರಡಿ ಬುಳ್ಳಪ್ಪ ವಂಶಸ್ಥರಾದ ಕರಡಿ ಗೊಲ್ಲರು ರಂಗನಾಥ ಸ್ವಾಮಿಯನ್ನು ಪೂಜಿಸಿಕೊಂಡು ಬರುತ್ತಾರೆ. ನಂಬಿ ಬಂದವರನ್ನು ರಂಗಯ್ಯ ಯಾರನ್ನೂ ಕೈಬಿಟ್ಟಿಲ್ಲ ಎನ್ನುವುದು ಸಮುದಾಯದ ನಂಬಿಕೆ.
ಈ ದೇವಾಲಯಕ್ಕೆ ತನ್ನದೇ ಆದ ಐತಿಹಾಸಿಕ ಹಿನ್ನೆಲೆ ಇದೆಯಂತೆ. ಹಾವು, ಚೇಳು ಕಚ್ಚಿ ಆಸ್ಪತ್ರೆಗೆ ಹೋಗಿ ಗುಣಮುಖರಾಗದೇ ಸಾವು ಬದುಕಿನ ನಡುವೆ ಹೋರಾಟ ನಡೆಸಿ, ರಂಗಪ್ಪನ ಸನ್ನಿಧಿಗೆ ಬಂದು ಗುಣಮುಖ ವಾಗಿರುವುದು ಅದೇಷ್ಟೋ ಉದಾಹರಣೆಗಳಿರುವುದು ಸ್ವಾಮಿಯ ಪವಾಡವಂತೆ. ಆದ್ದರಿಂದ ರಂಗನಾಥ ಸ್ವಾಮಿಯನ್ನು ವಿಷ ಜಂತುಗಳ ಪರಿಹಾರಕ ಎಂತಲೂ ಕರೆಯುವುದುಂಟು.
ಲಕ್ಷಾಂತರ ಭಕ್ತರು ಭಾಗಿ: ಒಂದೇ ದಿನ ಅಂಬಿನೋತ್ಸವ ನಡೆದರೂ ತುಮಕೂರು, ಬಳ್ಳಾರಿ, ದಾವಣಗೆರೆ, ಹಾವೇರಿ ಚಿತ್ರದುರ್ಗ, ಬೆಂಗಳೂರು, ಹಾಸನ ಸೇರಿದಂತೆ ನೆರೆ ರಾಜ್ಯಗಳಾದ ಆಂಧ್ರಪ್ರದೇಶ, ಕೇರಳ ತಮಿಳುನಾಡು ಮಹಾರಾಷ್ಟ್ರ ಸೇರಿದಂತೆ ವಿವಿಧ ಭಾಗಗಳಿಂದ ಭಕ್ತರು ಆಗಮಿಸಿದ್ದರು.
ಜೊತೆಗೆ ಹೊಸದುರ್ಗ ಹಾಗೂ ಹಿರಿಯೂರು ತಾಲೂಕುಗಳಲ್ಲಿನ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ದ್ವಿಚಕ್ರ ವಾಹನ, ಕಾರು, ಟೆಂಪೋ, ಬಸ್ ಹಾಗೂ ನೂರಾರು ಎತ್ತಿನ ಗಾಡಿಗಳನ್ನು ಕಟ್ಟಿಕೊಂಡು ಆಗಮಿಸಿದ್ದು, ಸ್ವಾಮಿ ಅಂಬಿನೋತ್ಸವ ಕಾರ್ಯವನ್ನು ಕಣ್ತುಂಬಿ ನೋಡಿ ತಮ್ಮ ಇಷ್ಟಾರ್ಥಗಳನ್ನು ಬೇಡಿಕೊಂಡರು.
ವಿವಿ ಸಾಗರಕ್ಕೆ ಭಕ್ತರ ದಂಡು: ಶ್ರೀ ರಂಗನಾಥಸ್ವಾಮಿಯ ಅಂಬಿನೋತ್ಸವ ಮುಗಿದ ಬಳಿಕ ಭಕ್ತರ ದಂಡು ವಿವಿ ಸಾಗರದ ಕಡೆ ಲಗ್ಗೆ ಇಟ್ಟಿತು. ಜಲಾಶಯದಲ್ಲಿ 122.25 ಅಡಿ ನೀರು ಸಂಗ್ರಹವಾಗಿದೆ. ಮಳೆ ಬಂದ ಹಿನ್ನೆಲೆ ಜಲಾಶಯದ ಸುತ್ತ ಮುತ್ತಲಿನ ಗುಡ್ಡಗಳು ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದು, ನೋಡುಗರನ್ನು ಆಕರ್ಷಿಸುವಂತೆ ಕಾಣುತ್ತದೆ.
ವಾಣಿ ವಿಲಾಸ ಸಾಗರ ಜಲಾಶಯ ಸೇರಿದಂತೆ ವಿವಿಧ ಭಾಗಗಳನ್ನು ವೀಕ್ಷಿಸಿ ಸೆಲ್ಪೀ ತೆಗೆದುಕೊಂಡು ಸಂಭ್ರಮಿಸಿದರು. ಅಲ್ಲದೆ, ಜಲಾಶಯದ ರಕ್ಷಕಿ ಎಂದೇ ಕರೆಸಿಕೊಳ್ಳುವ ಕಣಿವೆ ಮಾರಮ್ಮ ದೇವಿಯ ದರ್ಶನ ಕೂಡ ಪಡೆದು ಕಣ್ತುಂಬಿಕೊಂಡರು.
ವಿಶೇಷ ಬಸ್ ಸೌಲಭ್ಯ: ಹಿರಿಯೂರು ಹಾಗೂ ಹೊಸದುರ್ಗ ತಾಲೂಕಿನಿಂದ ಜಾತ್ರೆಗೆ ಸಾವಿರಾರು ಭಕ್ತರು ಆಗಮಿಸುವ ಹಿನ್ನೆಲೆ ವಿಶೇಷವಾಗಿ ಬಸ್ ಸೌಲಭ್ಯಗಳನ್ನು ಕಲ್ಪಿಸಲಾಗಿತ್ತು. ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಸಂಸದ ಗೋವಿಂದ ಕಾರಜೋಳ, ಕಾಡುಗೊಲ್ಲ ಸಂಘದ ರಾಜ್ಯಾಧ್ಯಕ್ಷ ರಾಜಣ್ಣ, ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರುಳಿ, ಬಿಜೆಪಿ ತಾಲ್ಲೂಕು ಅಧ್ಯಕ್ಷ ವಿಶ್ವನಾಥ್, ಮುಖಂಡರಾದ ಎನ್.ಆರ್.ಲಕ್ಷ್ಮೀಕಾಂತ್, ಜೆಡಿಎಸ್ ಮುಖಂಡ ಎಂ.ರವೀರಂದ್ರಪ್ಪ, ವೆಣುಕಲ್ ಗುಡ್ಡ ಕೆ.ಅಭಿನಂದನ್, ಹಾರನಕಣಿವೆ ಶ್ರೀ ರಂಗನಾಥಸ್ವಾಮಿ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಡಾ.ಆರ್.ರಂಗನಾಥ, ಕಂದಿಕೆರೆ ಜಗದೀಶ್, ಜೆಡಿಎಸ್ ತಾಲೂಕು ಅಧ್ಯಕ್ಷ ಹನುಮಂತರಾಯಪ್ಪ, ವಿಶೇಷವಾಗಿ ಅಂಚಿಬಾರಿಹಟ್ಟಿ, ಕಕ್ಕಯ್ಯನಹಟ್ಟಿ ಗ್ರಾಮಸ್ಥರು ಸೇರಿದಂತೆ ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಭಕ್ತರು ಭಾಗವಹಿಸಿ ದೇವರ ದರ್ಶನ ಪಡೆದರು.












Click it and Unblock the Notifications