ಇತಿಹಾಸ ಪ್ರಸಿದ್ಧ ಹಾರನಕಣಿವೆ ರಂಗಪ್ಪನಿಗೆ ಹಾವು, ಚೇಳು, ಜರಿ ಅರ್ಪಿಸಿದ ಭಕ್ತರು

ಹಿರಿಯೂರು, ಅಕ್ಟೋಬರ್‌, 25: ತಾಲೂಕಿನ ವಾಣಿ ವಿಲಾಸ ಸಾಗರ ಜಲಾಶಯದ ಹಿನ್ನೀರಿನ ದಡದಲ್ಲಿರುವ ಬುಡಕಟ್ಟು ಕಾಡುಗೊಲ್ಲರ ಆರಾಧ್ಯ ದೈವ ಹಾರನಕಣಿವೆ ಶ್ರೀ ರಂಗನಾಥಸ್ವಾಮಿಯ ಅಂಬಿನೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಬುಧವಾರ 12 ಗಂಟೆ ಸಮಯದಲ್ಲಿ ಸಂಭ್ರಮ ಸಡಗರದಿಂದ ನೇರವೇರಿತು.

ಹಿರಿಯೂರು ಹಾಗೂ ಹೊಸದುರ್ಗ ತಾಲೂಕಿನ ಗಡಿಭಾಗದಲ್ಲಿ ಹರಿಹರರು ನೆಲೆಸಿದ್ದ ಪ್ರಮುಖ ಕ್ಷೇತ್ರವೆಂದು ಕರೆಯುವ ಹಾರನಕಣಿವೆ ಕ್ಷೇತ್ರದ ಅಪಾರ ಮಹಿಮೆ ಹಾಗೂ ಭಕ್ತರನ್ನು ಹೊಂದಿರುವ ಪುಣ್ಯ ಕ್ಷೇತ್ರವಾಗಿದ್ದು, ಶ್ರೀ ರಂಗನಾಥಸ್ವಾಮಿಯ ದಸರಾ ಪ್ರಯುಕ್ತ ವಿಶೇಷ ಜಾತ್ರೆ, ಅಂಬಿನೋತ್ಸವ ಹಾಗೂ ವಿಶೇಷ ಪೂಜೆಗಳು ನಡೆದವು.

Devotees flocked to Historical famous Haranakanive Ranganathaswamy Ambinotsava

ಹೊಸದುರ್ಗ ತಾಲೂಕಿನ ಹಂಚಿಬಾರಿಹಟ್ಟಿ ಗ್ರಾಮದಲ್ಲಿರುವ ಶ್ರೀ ರಂಗನಾಥಸ್ವಾಮಿಯ ಉತ್ಸವ ಮೂರ್ತಿಗೆ ವಿಶೇಷಪೂಜೆ ಸಲ್ಲಿಸಿದ ಬಳಿಕ ವಾಣಿವಿಲಾಸ ಸಾಗರ ಜಲಾಶಯದಲ್ಲಿ ಸ್ವಾಮಿಗೆ ಗಂಗಾಪೂಜೆ ಹಾಗೂ ಕುದುರೆ ಪೂಜೆ ಕಾರ್ಯ ನೆರವೇರಿಸಲಾಯಿತು. ಬಳಿಕ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಕೂರಿಸಿ ಮೆರವಣಿಗೆಯೊಂದಿಗೆ ಗುಡಿ ಗೌಡ, ಪೂಜಾರಿ, ಗ್ರಾಮದ ಅಣ್ಣ-ತಮ್ಮಂದಿರು ಹಾಗೂ ಭಕ್ತರ ನೇತೃತ್ವದಲ್ಲಿ ಅದ್ದೂರಿಯಾಗಿ ಹಾರನಕಣಿವೆ ಕ್ಷೇತ್ರಕ್ಕೆ ಕರೆತಂದು ಶಿವ ಹಾಗೂ ವಿಷ್ಣುವಿಗೆ ಮೊದಲ ಪೂಜೆ ಸಲ್ಲಿಸಿದರು.

ನಂತರ ವಿಶೇಷ ಪೂಜೆ ಸಲ್ಲಿಸಿ, ಪೂಜಾರಿಯು ಜಂಬೂ ಮರದ ಮುಂದೆ ನೆಟ್ಟಿದ್ದ ಬಾಳೆ ಗಿಡಕ್ಕೆ ಮೂರು ಬಾರಿ ಪ್ರದಕ್ಷಿಣೆ ಹಾಕಿ, ಬಿಲ್ಲು ಹಿಡಿದು ಬಾಣ ಹೊಡೆದು, ಬಾಳೆಗಿಡ ಕುಡಿಯುವ ಮೂಲಕ ಅಂಬಿನೋತ್ಸವ ಕಾರ್ಯ ನೇರವೇರಿತು. ದೇವರು ಬರುವಾಗ ಭಕ್ತಾಧಿಗಳು ಬಾಳೆಹಣ್ಣುಗಳನ್ನು ತೂರಿ ತಮ್ಮ ಭಕ್ತಿಯನ್ನು ಸಮರ್ಪಿಸಿದರು.

ಇನ್ನು ಕೆಲವು ಭಕ್ತಾಧಿಗಳು ಮನೆ, ಹೊಲ ಗದ್ದೆಗಳಲ್ಲಿ, ರಾತ್ರಿವೇಳೆ ವಿಷ ಜಂತುಗಳು ತಮಗೆ ಕಾಣಿಸಿಕೊಂಡಾಗ ರಂಗನಾಥ ಸನ್ನಿಧಿಗೆ ಬಂದು ಜಾತ್ರೆಯಲ್ಲಿ ಹುಳಗಳನ್ನು ಅರ್ಪಿಸುತ್ತೇವೆಂದು ಹರಕೆ ಕಟ್ಟಿಕೊಳ್ಳುತ್ತಾರೆ. ಕಟ್ಟಿಕೊಂಡ ಹರಕೆ ತೀರಿಸಲು ತಂದಿದ್ದ ಜರಿ, ಹಾವು, ಚೇಳುಗಳನ್ನು ಭಕ್ತರು ಸರತಿ ಸಾಲಿನಲ್ಲಿ ನಿಂತು ಹುಂಡಿಯಲ್ಲಿ ಹಾಕಿ ಹರಕೆ ತೀರಿಸು ದೃಶ್ಯ ಗಮನ ಸೆಳೆಯಿತು.

ಜೊತೆಗೆ ಕೆಲವು ಭಕ್ತಾಧಿಗಳು ತಮ್ಮ ಹರಕೆಯಂತೆ ಬಾಳೆಹಣ್ಣು ಹಾಗೂ ಸಕ್ಕರೆ ತಂದು ದೇವಾಲಯದ ಸುತ್ತಮುತ್ತ ಇರುವ ಹಸಿರು ಗಿಡಗಳ ಹತ್ತಿರ ಬಾಳೆ ಎಲೆ ಹಾಕಿ ಅದರಲ್ಲಿ ಸುಲಿದ ಬಾಳೆ ಹಣ್ಣು ಹಾಕಿ, ಅದರಲ್ಲಿ ಸಕ್ಕರೆ ಬೆರೆಸಿ ಪೂಜೆ ಸಲ್ಲಿಸಿದರು. ನಂತರ ದಾಸಯ್ಯರಿಂದ ಗೋವಿಂದ ಅನ್ನಿಸಿ ಸುತ್ತ ಮುತ್ತ ಇದ್ದ ಭಕ್ತರಿಗೆ ಪ್ರಸಾದ ವಿತರಣೆ ಮಾಡುವುದು ಮತ್ತೊಂದು ವಿಶೇಷವಾಗಿತ್ತು.

ಬುಡಕಟ್ಟು ಜನಾಂಗದ ಆರಾಧ್ಯ ದೈವ

ಬಯಲು ಸೀಮೆಯ ಬುಡಕಟ್ಟು ಕಾಡುಗೊಲ್ಲ ಸಮುದಾಯದ ಧಾರ್ಮಿಕ ಕೇಂದ್ರ ಹಾಗೂ ಆರಾಧ್ಯ ದೈವ ಹಾರನಕಣಿವೆ ರಂಗನಾಥ ಸ್ವಾಮಿಯ ಮಹಿಮೆ ಅಪಾರವಾಗಿದೆ. ಕರಡಿ ಬುಳ್ಳಪ್ಪ ವಂಶಸ್ಥರಾದ ಕರಡಿಗೊಲ್ಲರು ರಂಗನಾಥ ಸ್ವಾಮಿಯನ್ನು ಪೂಜಿಸಿಕೊಂಡು ಬರುತ್ತಾರೆ. ನಂಬಿ ಬಂದವರನ್ನು ರಂಗಯ್ಯ ಯಾರನ್ನೂ ಕೈ ಬಿಟ್ಟಿಲ್ಲ ಎನ್ನುವುದು ಸಮುದಾಯದ ನಂಬಿಕೆ.

ಈ ದೇವಾಲಯಕ್ಕೆ ತನ್ನದೇ ಆದ ಐತಿಹಾಸಿಕ ಹಿನ್ನೆಲೆ ಇದೆಯಂತೆ. ಹಾವು, ಚೇಳು ಕಚ್ಚಿ ಆಸ್ಪತ್ರೆಗೆ ಹೋಗಿ ಗುಣಮುಖರಾಗದೇ ಸಾವು ಬದುಕಿನ ನಡುವೆ ಹೋರಾಟ ನಡೆಸಿ, ರಂಗಪ್ಪನ ಸನ್ನಿಧಿಗೆ ಬಂದು ಗುಣಮುಖ ವಾಗಿರುವುದು ಅದೇಷ್ಟೋ ಉದಾಹರಣೆಗಳಿರುವುದು ಸ್ವಾಮಿಯ ಪವಾಡವಂತೆ. ಆದ್ದರಿಂದ ರಂಗನಾಥ ಸ್ವಾಮಿಯನ್ನು ವಿಷ ಜಂತುಗಳ ಪರಿಹಾರಕ ಎಂತಲೂ ಕರೆಯುವುದುಂಟು.

ಒಂದೇ ದಿನ ಅಂಬಿನೋತ್ಸವ ನಡೆದರೂ ತುಮಕೂರು, ಬಳ್ಳಾರಿ, ದಾವಣಗೆರೆ, ಹಾವೇರಿ ಚಿತ್ರದುರ್ಗ, ಬೆಂಗಳೂರು, ಹಾಸನ ಸೇರಿದಂತೆ ನೆರೆ ರಾಜ್ಯಗಳಾದ ಆಂಧ್ರಪ್ರದೇಶ, ತಮಿಳುನಾಡಿನ ವಿವಿಧ ಜಿಲ್ಲೆಗಳಿಂದಲೂ ಸಾವಿರಾರು ಭಕ್ತರು ಆಗಮಿಸಿದ್ದರು. ಜೊತೆಗೆ ಹೊಸದುರ್ಗ ಹಾಗೂ ಹಿರಿಯೂರು ತಾಲೂಕುಗಳಲ್ಲಿನ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ದ್ವಿಚಕ್ರ ವಾಹನ, ಕಾರು, ಟೆಂಪೋ, ಬಸ್ ಹಾಗೂ ನೂರಾರು ಎತ್ತಿನ ಗಾಡಿಗಳನ್ನು ಕಟ್ಟಿಕೊಂಡು ಆಗಮಿಸಿದ್ದು, ಸ್ವಾಮಿ ಅಂಬಿನೋತ್ಸವ ಕಾರ್ಯವನ್ನು ಕಣ್ತುಂಬಿ ನೋಡಿ ತಮ್ಮ ಇಷ್ಟಾರ್ಥಗಳನ್ನು ಬೇಡಿಕೊಂಡರು.

ಟ್ರಾಫಿಕ್ ಜಾಮ್‌ನಿಂದ ಹೈರಣಾದ ವಾಹನ ಸವಾರರು

ಹಾರನಕಣಿವೆ ರಂಗಯ್ಯನ ಅಂಬಿನೋತ್ಸವ ಹಿನ್ನೆಲೆ ವಾಣಿವಿಲಾಸ ಜಲಾಶಯ ಕ್ರಾಸ್ ಹೊಂದಿಕೊಂಡಂತೆ ಹೊಸದುರ್ಗ ಮಾರ್ಗ ಹಾಗೂ ಹಿರಿಯೂರು ಕಡೆ ಹೋಗುವ ರಸ್ತೆ ಸುಮಾರು 1 ಗಂಟೆಗೂ ಹೆಚ್ಚು ಕಾಲ ಟ್ರಾಫಿಕ್ ಜಾಮ್ ಉಂಟಾಗಿ, ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಟ್ರಾಫಿಕ್‌ನಲ್ಲಿ ಬೈಕ್, ಕಾರು, ಆಟೋ, ಅಂಬುಲೆನ್ಸ್ ವಾಹನ ಸೇರಿದಂತೆ ಸಾವಿರಾರು ವಾಹನಗಳ ಸವಾರರು ಸಮಸ್ಯೆಯಲ್ಲಿ ಸಿಲುಕಿ ತೊಂದರೆ ಅನುಭವಿಸುವಂತಾಯಿತು.

ಟ್ರಾಫಿಕ್ ಸಮಸ್ಯೆಯಲ್ಲಿ ಸಿಲುಕಿದ್ದ ಹಿರಿಯೂರಿನ ಪತ್ರಕರ್ತರೊಬ್ಬರು 112 ನಂಬರ್ ಡಯಲ್ ಮಾಡಿ ಟ್ರಾಫಿಕ್ ಸಮಸ್ಯೆ ಬಗ್ಗೆ ಮಾಹಿತಿ ನೀಡಿದರು. ಮಾಹಿತಿ ಪಡೆದುಕೊಂಡ 112 ಡಯಲ್ ಪೊಲೀಸ್ ಅಧಿಕಾರಿಗಳು ತಕ್ಷಣವೇ ಸಂಬಂಧಪಟ್ಟ ಹಿರಿಯೂರು ಗ್ರಾಮಾಂತರ ಪೋಲೀಸ್ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿ ಸಮಸ್ಯೆ ಬಗೆಹರಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ವಿವಿ ಸಾಗರಕ್ಕೆ ಆಗಮಿಸಿದ ಪ್ರವಾಸಿಗರ ದಂಡು

ಬಯಲು ಸೀಮೆಯ ಏಕೈಕ ಜೀವನಾಡಿಯಾಗಿರುವ ವಾಣಿ ವಿಲಾಸ ಜಲಾಶಯ ವೀಕ್ಷಿಸಲು ಪ್ರವಾಸಿಗರು ಹಾಗೂ ಭಕ್ತರು ಡ್ಯಾಂಗೆ ಲಗ್ಗೆ ಇಟ್ಟಿದ್ದರು. ಜಲಾಶಯದಿಂದ ಕಾಲುವೆಗೆ ನೀರು ಹರಿಯುತ್ತಿರುವ ದೃಶ್ಯ, ವಿವಿ ಸಾಗರ ಡ್ಯಾಂ, ಸೇರಿದಂತೆ ವಿವಿಧ ಭಾಗಗಳನ್ನು ವೀಕ್ಷಿಸಿ ಸೆಲ್ಪೀ ತೆಗೆದುಕೊಂಡು ಸಂಭ್ರಮಿಸಿದರು. ಅಲ್ಲದೆ ಜಲಾಶಯದ ರಕ್ಷಕಿ ಎಂದೇ ಕರೆಸಿಕೊಳ್ಳುವ ಕಣಿವೆ ಮಾರಮ್ಮ ದೇವಿಯ ದರ್ಶನ ಕೂಡ ಪಡೆದು ಕಣ್ತುಂಬಿಕೊಂಡರು.

ವಿಶೇಷ ಬಸ್ ಸೌಲಭ್ಯ

ಹಿರಿಯೂರು ಹಾಗೂ ಹೊಸದುರ್ಗ ತಾಲೂಕಿನಿಂದ ಜಾತ್ರೆಗೆ ಸಾವಿರಾರು ಭಕ್ತರು ಆಗಮಿಸುವ ಹಿನ್ನೆಲೆ ವಿಶೇಷವಾಗಿ ಬಸ್ ಸೌಲಭ್ಯಗಳನ್ನು ಕಲ್ಪಿಸಲಾಗಿತ್ತು. ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+