ಐತಿಹಾಸಿಕ ಕೋಟೆನಾಡು ಚಿತ್ರದುರ್ಗದ ಈ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ₹28.40 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿ-ಮಾಹಿತಿ
ಚಿತ್ರದುರ್ಗ, ಜುಲೈ, 05: ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮ & ಗಣಿಬಾಧಿತ ವಲಯದ ಸಮಗ್ರ ಪರಿಸರ ಅಭಿವೃದ್ಧಿ ಯೋಜನೆಯಡಿ ನಗರದ ಐತಿಹಾಸಿಕ ಕೋಟೆ ಹಾಗೂ ಚಂದ್ರವಳ್ಳಿ ಪ್ರದೇಶದಲ್ಲಿ ಒಟ್ಟು 28.40 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಪ್ರಸ್ತಾವನೆ ಸಿದ್ದಪಡಿಸಲಾಗಿದೆ.
ಮುಖ್ಯವಾಗಿ 11.50 ಕೋಟಿ ರೂಪಾಯಿ ವೆಚ್ಚದಲ್ಲಿ ಐತಿಹಾಸಿಕ ಕೋಟೆಯ ನಾಲ್ಕು ಪ್ರಮುಖ ಸ್ಥಳಗಳಲ್ಲಿ ಧ್ವನಿ ಬೆಳಕು ವ್ಯವಸ್ಥೆಯನ್ನು ಅಳವಡಿಸಲಾಗುವುದು. ಈ ಯೋಜನೆ ಅನುಷ್ಠಾನಕ್ಕೆ ಭಾರತೀಯ ಪುರಾತತ್ವ ಇಲಾಖೆಯ ಅನುಮತಿಯನ್ನು ಶೀಘ್ರವೇ ಪಡೆದುಕೊಳ್ಳುವಂತೆ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜರುಗಿದ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಚಿತ್ರದುರ್ಗ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣವಾಗಿರುವ ಕೋಟೆಗೆ ಪ್ರತಿ ತಿಂಗಳು 35,000 ಪ್ರವಾಸಿಗರು ಭೇಟಿ ನೀಡುತ್ತಾರೆ. ಇನ್ನೂ ಹೆಚ್ಚಿನ ರೀತಿಯಲ್ಲಿ ಕೋಟೆಯನ್ನು ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗಿದೆ.
ಇದರಡಿ 75 ಲಕ್ಷ ರೂಪಾಯಿಯಲ್ಲಿ ಮಕ್ಕಳ ಉದ್ಯಾನವನ, 1 ಕೋಟಿ ರೂಪಾಯಿ ವೆಚ್ಚದಲ್ಲಿ ಅಕ್ಕ-ತಂಗಿ ಹೊಂಡದ ಬಳಿ ನೀರಿನ ಕಾರಂಜಿಗಳನ್ನು ನಿರ್ಮಿಸಲಾಗುವುದು. ಇದರ ಜೊತೆಗೆ ಕೋಟೆಯ ಒನಕೆ ಓಬವ್ವ ಕಿಂಡಿ ಬಳಿಯ ಹನುಮನ ದ್ವಾರದಿಂದ ಚಂದ್ರವಳ್ಳಿ ತೋಟಕ್ಕೆ ತೆರಳಲು 3 ಮೀಟರ್ ಅಗಲದ ಹಾಗೂ 1.5 ಕಿಲೋ ಮೀಟರ್ ಉದ್ದದ ನೂತನ ಕಾಲುದಾರಿ ಮಾಡಲಾಗುವುದು.
ಚಂದ್ರವಳ್ಳಿ ಕೆರೆಯ ಸುತ್ತ 3.75 ಕೋಟಿ ರೂಪಾಯಿ ವೆಚ್ಚದಲ್ಲಿ ವಾಕಿಂಗ್ ಟ್ರ್ಯಾಕ್, ಬೀದಿ ದೀಪಗಳನ್ನು ಅಳವಡಿಕೆ ಮಾಡಲಾಗುವುದು. 15 ಲಕ್ಷ ರೂಪಾಯಿ ವೆಚ್ಚದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ, 75 ಲಕ್ಷ ರೂಪಾಯಿನಲ್ಲಿ ವಾಹನ ನಿಲುಗಡೆ, 1 ಕೋಟಿ ರೂಪಾಯಿ ವೆಚ್ಚದಲ್ಲಿ ಚಂದ್ರವಳ್ಳಿ ಗುಹೆಗೆ ವಿದ್ಯುತ್ ದೀಪಗಳ ಅಳವಡಿಕೆ ಮಾಡಲಾಗುವುದು.
6 ಕೋಟಿ ರೂಪಾಯಿ ವೆಚ್ಚದಲ್ಲಿ ಮಕ್ಕಳ ಆಟಿಕೆ ಟ್ರೈನ್, 1.25 ಕೋಟೆ ರೂಪಾಯಿ ವೆಚ್ಚದಲ್ಲಿ ಚಂದ್ರವಳ್ಳಿ ಸಂಪರ್ಕಿಸುವ ರಸ್ತೆ ಬೀದಿ ದೀಪ ಅಳವಡಿಕೆ ಮಾಡಲಾಗುವುದು. ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಶೀಘ್ರವೇ ಪುರಾತತ್ವ ಇಲಾಖೆಯಿಂದ ಕಾಮಗಾರಿಗಳನ್ನು ಕೈಗೊಳ್ಳಲು ಅನುಮತಿ ಪಡೆದುಕೊಳ್ಳುವಂತೆ ಹೇಳಿದರು.
ಕೆ.ಎಂ.ಇ.ಆರ್.ಸಿ ಅನುದಾನದ ಅಡಿಯಲ್ಲಿಯೇ ಹೊಸದುರ್ಗ ತಾಲ್ಲೂಕಿನ ಹಾಲು ರಾಮೇಶ್ವರದಲ್ಲಿ ಧರ್ಮಛತ್ರ, ಪಾರ್ಕಿಂಗ್, ಸಾರ್ವಜನಿಕ ಶೌಚಾಲಯ, ಹೈಮಾಸ್ಟ್ ದೀಪಗಳನ್ನು ಅಳವಡಿಸಲಾಗುವುದು. ಹೊಳಲ್ಕೆರೆ ತಾಲ್ಲೂಕಿನ ದೊಡ್ಡಹೊಟ್ಟೆ ರಂಗನಾಥ ಸ್ವಾಮಿ ಬೆಟ್ಟಕ್ಕೆ ಮೆಟ್ಟಿಲುಗಳ ನಿರ್ಮಾಣ, ಬೆಟ್ಟದಲ್ಲಿ ಕಲ್ಯಾಣಿಯ ಪುನರುಜ್ಜೀವನ, ಧರ್ಮಛತ್ರ, ಪಾರ್ಕಿಂಗ್, ಸಾರ್ವಜನಿಕ ಶೌಚಾಲಯ, ಹೈಮಾಸ್ಟ್ ದೀಪಗಳನ್ನು ಅಳವಡಿಕೆ ಮಾಡಲಾಗುವುದು.
ವಾಣಿ ವಿಲಾಸ ಸಾಗರ ಜಲಾಶಯದ ಹಿನ್ನೀರಿನಲ್ಲಿ ಸಾಹಸಮಯ ಜಲಕ್ರೀಡೆ ಆರಂಭಿಸಲು ಸಹ ಯೋಜನೆ ರೂಪಿಸಲಾಗಿದೆ. ಒಂದು ಜಿಲ್ಲೆ ಒಂದು ತಾಣ ಯೋಜನೆಯಡಿ ವಾಣಿ ವಿಲಾಸ ಸಾಗರವನ್ನು ಸಂಪೂರ್ಣವಾಗಿ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಿ, ಇದರೊಂದಿಗೆ ಚಂದ್ರವಳ್ಳಿ ಕೆರೆಯಲ್ಲಿ ಜಲಕ್ರೀಡೆ ಹಾಗೂ ದೋಣಿ ವಿಹಾರಕ್ಕೂ ಯೋಜನೆ ಪ್ರಸ್ತಾವನೆ ಸಲ್ಲಿಸುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅಧಿಕಾರಿಗಳಿಗೆ ಸೂಚಿಸಿದರು.
ಕರ್ನಾಟಕ ಪ್ರವಾಸೋದ್ಯಮ ವ್ಯಾಪಾರ (ಸೌಲಭ್ಯ ಮತ್ತು ನಿಯಂತ್ರಣ) ಕಾಯ್ದೆ 2015ರ ಅಡಿ ಜಿಲ್ಲೆಯ ಪ್ರಮುಖ ಹೋಟೆಲ್‍ಗಳ ನೊಂದಣಿ ಕಡ್ಡಾಯವಾಗಿ ಮಾಡಬೇಕು. ಇದರಿಂದ ಜಿಲ್ಲೆಗೆ ಭೇಟಿ ನೀಡಿದ ಹೊರ ದೇಶ ಹಾಗೂ ಹೊರ ರಾಜ್ಯದ ಪ್ರವಾಸಿಗರ ಮಾಹಿತಿ ಲಭ್ಯವಾಗುತ್ತಿದೆ. ಜಿಲ್ಲೆಯ ಎಲ್ಲಾ ಪ್ರವಾಸಿ ತಾಣಗಳಲ್ಲಿಯೂ ಮೂಲಭೂತ ಸೌಕರ್ಯ ಕಲ್ಪಿಸುವಂತೆ ನಿರ್ದೇಶನ ನೀಡಿದರು.
ಪ್ರವಾಸೋದ್ಯಮ ಇಲಾಖೆಯಿಂದ ಕೈಗೊಳ್ಳುತ್ತಿರುವ ಕಾಮಗಾರಿಗಳನ್ನು ಶೀಘ್ರವೇ ಪೂರ್ಣಗೊಳಿಸಬೇಕು. ಯಾತ್ರಿ ನಿವಾಸಗಳು ಸಾರ್ವಜನಿಕರ ಬಳಕೆ ಒದಗುವಂತಾಗಬೇಕು. ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ನಿರ್ಮಿಸಿರುವ ಯಾತ್ರಿ ನಿವಾಸಗಳನ್ನು ಗ್ರಾಮ ಪಂಚಾಯಿತಿಗಳಿಗೆ ಹಸ್ತಾಂತರಿಸಿ, ನಿರ್ವಹಣೆ ಜವಾಬ್ದಾರಿ ವಹಿಸುವಂತೆ ಹೇಳಿದರು.
ಜಿಲ್ಲೆಯ ಪ್ರವಾಸಿ ತಾಣಗಳ ಕುರಿತು ಕಿರುಹೊತ್ತಿಗೆ ಮುದ್ರಿಸಬೇಕು. ಇದರಲ್ಲಿ ಕೇಂದ್ರ, ರಾಜ್ಯ ಹಾಗೂ ಪ್ರವಾಸೊದ್ಯಮ ಇಲಾಖೆಯಿಂದ ನಿರ್ವಹಿಸುತ್ತಿರುವ ಪ್ರವಾಸಿ ತಾಣಗಳ ಸಂಪೂರ್ಣ ಮಾಹಿತಿ ಇರಬೇಕು ಎಂದರು.












Click it and Unblock the Notifications