21ನೇ ಶತಮಾನದಲ್ಲಿ ಅಕ್ಕಿ, ಬೇಳೆ, ರಾಗಿ ಮೊಟ್ಟೆ ನಡೆಯಲ್ಲ, ಅಭಿವೃದ್ಧಿ ಬೇಕಾಗಿದೆ: ಹೀಗೆ ಹೇಳಿದ್ದು ಯಾರು ಹಾಗೂ ಯಾಕೆ?
ಹಿರಿಯೂರು, ಏಪ್ರಿಲ್, 07: ಅಕ್ಕಿ, ಬೇಳೆ, ರಾಗಿ, ಮೊಟ್ಟೆ ಕೊಡುತ್ತಿದ್ದೇವೆ ಎಂದು ಹೇಳುವ ಸಿದ್ದರಾಮಯ್ಯನವರೇ ಇದು 21ನೇ ಶತಮಾನ. ಈ ಶತಮಾನದಲ್ಲಿ ಜನತೆಗೆ ಬೇಕಾಗಿರುವುದು ಶಿಕ್ಷಣ, ಕುಡಿಯುವ ನೀರು, ಉದ್ಯೋಗ, ಮೂಲಭೂತ ಸೌಕರ್ಯ ಹಾಗೂ ಅಭಿವೃದ್ಧಿ ಎಂದು ಮೈತ್ರಿ ಅಭ್ಯರ್ಥಿ ಗೋವಿಂದ ಕಾರಜೋಳ ಲೇವಡಿ ಮಾಡಿದರು.
ನಗರದ ಹುಳಿಯಾರು ರಸ್ತೆಯಲ್ಲಿರುವ ತುಳಸಿ ಬಿ.ನಾರಾಯಣರಾವ್ ಕಲ್ಯಾಣ ಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಸಮನ್ವಯ ಸಮಿತಿ ಸಭೆ ಹಾಗೂ ಚುನಾವಣಾ ಪೂರ್ವ ಸಿದ್ಧತಾ ಸಭೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷ ಕಳೆದರೂ ದೇಶದ ಅಭಿವೃದ್ಧಿ ಕಾಣಲಿಲ್ಲ, ದಿನದಲಿತರು ಉದ್ಧಾರ ಆಗಲಿಲ್ಲ. ಜಾತಿ -ಜಾತಿಗಳ ಮಧ್ಯೆ ವಿಷಬೀಜ ಬಿತ್ತಿ, ದೇಶದಲ್ಲಿ ಒಡೆದು ಆಳುವ ನೀತಿಯನ್ನು ಕಾಂಗ್ರೆಸ್‌ನವರು ನಡೆಸಿಕೊಂಡು ಬಂದಿದ್ದಾರೆ. ಕಾಂಗ್ರೆಸ್ ಆಡಳಿತದಲ್ಲಿ ಭಯೋತ್ಪಾದಕರು ಹೆಚ್ಚಾದರು ಎಂದು ಆರೋಪ ಮಾಡಿದರು.
ಕಾಂಗ್ರೆಸ್ ಆಡಳಿತದಲ್ಲಿ ಪ್ರಧಾನಿಯಾಗಿದ್ದ ರಾಜೀವ್ ಗಾಂಧಿಯನ್ನೇ ಕೊಂದು ಬಿಟ್ಟರು. ಕುಟುಂಬದ ಉದ್ಧಾರಕ್ಕಾಗಿ ರಾಜಕಾರಣ ಮಾಡಿಕೊಂಡು ಬಂದವರು ಅವರು. ಇವರ ಸರ್ಕಾರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಭಾರತರತ್ನ ಪ್ರಶಸ್ತಿ ನೀಡಲು ಸಾಧ್ಯವಾಗಲಿಲ್ಲ ಎಂದರು.
ಇನ್ನು ಈ ಕ್ಷೇತ್ರದಲ್ಲಿ ದಿವಂಗತ ಮಾಜಿ ಸಚಿವ ಕೆ.ಹೆಚ್.ರಂಗನಾಥ್ ಅವರನ್ನು ಹೀನಾಯವಾಗಿ ನಡೆಸಿಕೊಂಡರು. ಜೊತೆಗೆ ಕಾಂಗ್ರೆಸ್‌ನಲ್ಲಿ ಮತ್ತೊಬ್ಬ ಸಚಿವರಾಗಿದ್ದ ದಿವಂಗತ ಡಿ.ಮಂಜುನಾಥ್ ಅವರನ್ನು ಅವಮಾನದಿಂದ ನಡೆಸಿಕೊಂಡ ಹಿನ್ನೆಲೆಯಲ್ಲಿ ಅವರು ಜೆಡಿಎಸ್ ಸೇರಬೇಕಾಯಿತು ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್‌ನಲ್ಲಿ ಸಿಎಂ ಆಗಿ, ದೇಶದ ಪ್ರಧಾನಿಯಾಗಿ ಕಳಂಕ ರಹಿತ ಆಡಳಿತ ನಡೆಸಿದ್ದಾರೆ. ಈ ನಿಟ್ಟಿನಲ್ಲಿ ಈಗಾಗಲೇ ಅನೇಕ ಸರ್ವೇ ನಡೆಸಿದ್ದು, 400ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲುವುದು ಸೂರ್ಯ ಚಂದ್ರರಷ್ಟೇ ಸತ್ಯವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಳೆದ ಹತ್ತು ವರ್ಷಗಳ ಕೇಂದ್ರ ಬಿಜೆಪಿ ಆಡಳಿತ ಸೇವೆ, ಹಿಂದೆ ಇದ್ದ ರಾಜ್ಯ ಬಿಜೆಪಿ ಸರ್ಕಾರ ಸಾಧನೆಗಳನ್ನು ನೆನಪಿನಲ್ಲಿ ಇಟ್ಕೊಂಡು ಮತಕೇಳಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು. ಇನ್ನು ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸಲು ಮೈತ್ರಿ ಅಭ್ಯರ್ಥಿ ಬೆಂಬಲಿಸಿ. ಜಿಲ್ಲೆಯ ನೇರ ರೈಲು ಮಾರ್ಗ ಕಾಮಗಾರಿ ವೇಗವಾಗಿ ಮುಗಿಸಲು ಪ್ರಯತ್ನಿಸುವೆ. ಜೊತೆಗೆ, ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುವುದಾಗಿ ಅಭ್ಯರ್ಥಿ ಭರವಸೆ ನೀಡಿದರು.
ಮಾಜಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಮಾತನಾಡಿ, ದೇಶದ ಹಿತ ದೃಷ್ಟಿಯಿಂದ ಈ ಚುನಾವಣೆ ಮಹತ್ವವಾಗಿದೆ. ಕಳೆದ 2019ರಲ್ಲಿ 25 ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು. ಒಂದು ಜೆಡಿಎಸ್, ಒಂದು ಪಕ್ಷೇತರ ಸ್ಥಾನ ಬಂದಿತ್ತು. ಕೇವಲ ಒಂದು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದಿತ್ತು. ಈ ಬಾರಿ ಚುನಾವಣೆಯಲ್ಲಿ 28ಕ್ಕೆ, 28 ಕ್ಷೇತ್ರದಲ್ಲೂ ಗೆಲ್ಲಲು ಗುರಿ ಹೊಂದಿದ್ದು, ಒಂದು ಕ್ಷೇತ್ರದಲ್ಲೂ ಕಾಂಗ್ರೆಸ್ ಗೆಲ್ಲಲು ಬಿಡುವುದಿಲ್ಲ ಎಂದರು.
ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡ ಅವರು ಕಡಿಮೆ ಅವಧಿಯಲ್ಲಿ ಪ್ರಧಾನಿಯಾಗಿದ್ದಾಗ ಜನಪರ ಯೋಜನೆಗಳನ್ನ ಜನರಿಗೆ ತಲುಪಿಸಿದರು. ಮಾಜಿ ಮುಖ್ಯಮಂತ್ರಿ ಬಿಎಸ್. ಯಡಿಯೂರಪ್ಪ ಅವರು 45 ವರ್ಷಗಳ ಕಾಲ ರೈತರ ಪರವಾಗಿ ಕೆಲಸ ಮಾಡಿದ್ದಾರೆ. ಕೇಂದ್ರ ಸರ್ಕಾರದಿಂದ ರಾಜ್ಯದ ರೈತರಿಗೆ 6 ಸಾವಿರ ಹಣ ನೀಡಿದರೇ, ರಾಜ್ಯ ಸರ್ಕಾರದಿಂದ 4 ಸಾವಿರ ಹಣ ನೀಡಿ ರೈತರ ಪರ ನಿಲ್ಲಿಸಲಾಯಿತು.
ದೇಶದಲ್ಲಿ ಬಿಜೆಪಿ ಆಡಳಿತಕ್ಕೆ ಬರುವ ಮುನ್ನ ಜಮ್ಮು-ಕಾಶ್ಮೀರದಲ್ಲಿ ದಿನನಿತ್ಯ ಕಾಳಗ ನಡೆಯುತ್ತಿತ್ತು. ಇತ್ತೀಚೆಗಷ್ಟೇ ಬೆಂಗಳೂರಿನ ರಾಮೇಶ್ವರಂ ಕೆಫೆನಲ್ಲಿ ಬಾಂಬ್ ಬ್ಲಾಸ್ಟ್ ಆಗಿತ್ತು. ಎಲ್ಲೆಲ್ಲಿ ಕಾಂಗ್ರೆಸ್ ಸರ್ಕಾರ ಅಸ್ಥಿತ್ವಕ್ಕೆ ಬಂದಿದೆಯೋ ಅಲ್ಲೆಲ್ಲ ಘರ್ಷಣೆ ನಡೆಯುತ್ತಿದ್ದವು. ಆದರೆ ನರೇಂದ್ರ ಮೋದಿ ಅವರ ಪ್ರಧಾನಿ ಆದ್ಮೇಲೆ ಪಾಕಿಸ್ತಾನದಲ್ಲೂ ನೆಮ್ಮದಿ ಜೀವನ ನಡೆಸುತ್ತಿದ್ದಾರೆ ಎಂದರು.
ಡಾ.ಬಿ.ಆರ್.ಅಂಬೇಡ್ಕರ್ ನಿಧನ ಹೋಂದಿದಾಗ ಶವಸಂಸ್ಕಾರಕ್ಕೆ ಜಾಗ ಕೊಡದ ಕಾಂಗ್ರೆಸ್ ಇದೀಗ ಅಂಬೇಡ್ಕರ್ ನಮ್ಮವರು ಎಂದು ಹೇಳಿಕೊಳ್ಳುತ್ತಿರುವುದು ನಾಚಿಕೆಯ ಸಂಗತಿಯಾಗಿದೆ. ಉಕ್ರೇನ್ ಮತ್ತು ರಷ್ಯಾ ನಡುವೆ ನಡೆಯುತ್ತಿರುವ ಯುದ್ದವನ್ನು ತಡೆಯುವ ಶಕ್ತಿ ನರೇಂದ್ರ ಮೋದಿಗೆ ಇದೆ ಎಂದು ಇಡೀ ವಿಶ್ವವೇ ಒತ್ತಿ ಒತ್ತಿ ಹೇಳುತ್ತಿದೆ. ಈಗಿರುವಾಗ ಈ ಬಾರಿ ಅಧಿಕಾರಕ್ಕೆ ಬಂದ್ಮೇಲೆ ಪಿಓಕೆಯನ್ನು ವಾಪಸ್ ಪಡೆಯುತ್ತೇವೆ ಎಂದರು.
ವಿಧಾನ ಪರಿಷತ್ ಸದಸ್ಯ ನಾರಾಯಣಸ್ವಾಮಿ ಮಾತನಾಡಿ, ದೇಶವನ್ನು ಗೆಲ್ಲಿಸುವ ಈ ಚುನಾವಣೆ ಮಹತ್ವವಾಗಿದೆ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ದುರಹಂಕಾರದ ಸಿಎಂ ಆಗಿದ್ದಾರೆ. ಚೀಲ ಸಿದ್ದರಾಮಯ್ಯನದು, ಅದರೊಳಗೆ ಇರುವ ಅಕ್ಕಿ ಮೋದಿಯವರದು, ಸಿದ್ದರಾಮಯ್ಯ ಚೀಲದಲ್ಲಿ ಮೋದಿ ಅಕ್ಕಿ ಎಂದು ಲೇವಡಿ ಮಾಡಿದರು.
ಇನ್ನು ಹಿಂದೆ ಜಲಸಂಪನ್ಮೂಲ ಸಚಿವರಾಗಿದ್ದ ಗೋವಿಂದ ಕಾರಜೋಳ ಅವರು ಹಿರಿಯೂರಿನ ಧರ್ಮಪುರ ಕೆರೆ ಸೇರಿದಂತೆ ನೀರಾವರಿ ಅಭಿವೃದ್ಧಿಗೆ ಶ್ರಮಿಸಿದ್ದರು. ಆಗ ನೀಡಿದ ಅನುದಾನ ಗೋವಿಂದ ಕಾರಜೋಳ ಅವರಿಗೆ ಸೇರುತ್ತದೆ. ಹಿಂದೆ ಇದ್ದ ಶಾಸಕರಿಗೆ ಸೇರುವುದಿಲ್ಲ ಎಂದು ಮಾಜಿ ಶಾಸಕಿ ಕೆ.ಪೂರ್ಣಿಮಾ ಹೆಸರು ಹೇಳದೇ ಟಾಂಗ್ ನೀಡಿದರು.
ಜೆಡಿಎಸ್ ಮುಖಂಡ ಎಂ.ರವೀಂದ್ರಪ್ಪ ಮಾತನಾಡಿ, ಜಿಲ್ಲೆಯ ಸಮಗ್ರ ನೀರಾವರಿ ಹಾಗೂ ರೈತರ ಅಭಿವೃದ್ಧಿಗೆ ಮೈತ್ರಿ ಅಭ್ಯರ್ಥಿ ಗೋವಿಂದ ಕಾರಜೋಳ ಅವರನ್ನು ಗೆಲ್ಲಿಸಬೇಕು. ಅದರಲ್ಲೂ ಹಿರಿಯೂರು ಕ್ಷೇತ್ರದಲ್ಲೂ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಲು ಶ್ರಮಿಸಬೇಕು. ಮೈತ್ರಿ ಅಭ್ಯರ್ಥಿ ಗೆದ್ದರೆ ಜಿಲ್ಲೆಗೆ ಶಾಶ್ವತ ನೀರಾವರಿ ಯೋಜನೆ ಸಿಗಲಿದೆ ಎಂದರು.
ಲೋಕಸಭಾ ಕ್ಷೇತ್ರದ ಉಸ್ತುವಾರಿ ಎಸ್.ಲಿಂಗಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾಜಿ ಶಾಸಕ ಪಾವಗಡ ತಿಮ್ಮರಾಯಪ್ಪ, ಬಿಜೆಪಿ ಮುಖಂಡ ಎನ್.ಆರ್.ಲಕ್ಷ್ಮೀಕಾಂತ್, ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ಜಯಣ್ಣ, ಮಾಜಿ ಅಧ್ಯಕ್ಷ ಡಿ.ಯಶೋಧರ, ತಾಲೂಕು ಅಧ್ಯಕ್ಷ ಹನುಮಂತರಾಯಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರುಳಿ, ತಾಲೂಕು ಅಧ್ಯಕ್ಷ ವಿ.ವಿಶ್ವನಾಥ್, ಸಿದ್ದಾರ್ಥ್ ತಿಪ್ಪಾರೆಡ್ಡಿ, ಮಾಜಿ ಜಿ.ಪಂ.ಅಧ್ಯಕ್ಷ ಮೀಸೆ ಮಹಾಲಿಂಗಪ್ಪ, ಜೆ.ಜೆ.ಹಳ್ಳಿ ಮಂಜುನಾಥ್, ವಕೀಲ ಶಿವಶಂಕರ್, ಶ್ರವಣಗೆರೆ ಶಿವಪ್ರಸಾದ್ ಗೌಡ, ಮಾಜಿ ಜಿ.ಪಂ. ಸದಸ್ಯೆ ರಾಜೇಶ್ವರಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.











Click it and Unblock the Notifications