ಸರಕಾರದ ವಿರುದ್ದ ಡಿಕೆಶಿ ಕಿಡಿಕಾರುತ್ತಿರುವುದು ಇದೇ ಕಾರಣಕ್ಕೆ: ಬಿ.ಸಿ.ಪಾಟೀಲ್
ಚಿತ್ರದುರ್ಗ, ಏಪ್ರಿಲ್ 16: ಕೆಪಿಸಿಸಿ ಅಧ್ಯಕ್ಷರು ಕೊರೊನಾ ಹಾವಳಿಯ ಇಂತಹ ಸಮಯದಲ್ಲೂ ರಾಜಕೀಯ ಮಾಡೋದನ್ನು ಬಿಡಬೇಕು" ಎಂದು ಕೃಷಿ ಬಿ.ಸಿ.ಪಾಟೀಲ್ ಕಿಡಿಕಾರಿದ್ದಾರೆ.
"ನಾವೆಲ್ಲರೂ ಸೇರಿ ಕೊರೊನಾ ವಿರುದ್ದ ಹೋರಾಡಬೇಕಾದ ಸಮಯದಲ್ಲೂ ಕಾಂಗ್ರೆಸ್ಸಿನವರು ಸರಕಾರವನ್ನು ವೃಥಾ ಟೀಕಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಜನರಿಗೆ ಸತ್ಯಾಸತ್ಯತೆಯ ಎಲ್ಲಾ ಅರಿವಿದೆ"ಎಂದು ಸಚಿವರು ಹೇಳಿದ್ದಾರೆ.
"ಕೊರೊನಾ ವಿರುದ್ದ ರಾಜ್ಯ ಮತ್ತು ಕೇಂದ್ರ ಸರಕಾರ ತೆಗೆದುಕೊಂಡಿರುವ ಮುಂಜಾಗೃತ ಕ್ರಮವನ್ನು ನೋಡಿ, ಡಿ.ಕೆ.ಶಿವಕುಮಾರ್ ಅವರ ಕಣ್ಣು ಕೆಂಪಾಗಿದೆ, ಹಾಗಾಗಿ, ನಮ್ಮ ಸರಕಾರವನ್ನು ಟೀಕಿಸುವುದನ್ನು ಆರಂಭಿಸಿದ್ದಾರೆ" ಎಂದು ಸಚಿವ ಪಾಟೀಲ್, ವ್ಯಂಗ್ಯವಾಡಿದ್ದಾರೆ.

"ಇತ್ತೀಚಿನ ದಿನಗಳಲ್ಲಿ, ರಾಜ್ಯದಲ್ಲಿ ಎಲ್ಲೂ ಕೋಮು ಗಲಭೆ ವರದಿಯಾಗಲಿಲ್ಲ. ಆದರೂ, ರಾಜ್ಯದಲ್ಲಿ ಕೋಮು ಗಲಭೆಯ ಆತಂಕವಿದೆ ಎಂದು ಕೆಪಿಸಿಸಿ ಅಧ್ಯಕ್ಷರು ಸುಮ್ಮನೆ ಆರೋಪಿಸುತ್ತಿದ್ದಾರೆ" ಎಂದು ಬಿ.ಸಿ.ಪಾಟೀಲ್ ಬೇಸರ ವ್ಯಕ್ತಪಡಿಸಿದ್ದಾರೆ.
"ಲಾಕ್ ಡೌನ್ ನಿಂದ ರಾಜ್ಯದಲ್ಲಿ ಕೃಷಿ ಚಟುವಟಿಕೆಗಳನ್ನು ಯಾವುದೇ ಕಾರಣಕ್ಕೂ ನಿಲ್ಲಬಾರದು ಎಂದು ಸರ್ಕಾರ ಎಲ್ಲಾ ಇಲಾಖೆಗಳಿಗೆ ನಿರ್ದೇಶನ ನೀಡಿದೆ. ರೈತರ ಬೆಳೆ, ಮಾರುಕಟ್ಟೆಗೆ ಬರಲು ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಲಲಾಗುತ್ತಿದೆ. ಆದರೂ, ವಿರೋಧ ಪಕ್ಷದವರು ಟೀಕಿಸುವ ಕೆಲಸನ್ನು ಮಾಡುತ್ತಿದ್ದಾರೆ"ಎಂದು ಸಚಿವ ಪಾಟೀಲ್ ಆರೋಪಿಸಿದ್ದಾರೆ.
"ಕೊರೊನಾ ಮಹಾಮಾರಿಯನ್ನು ಎಲ್ಲರೂ ಪಕ್ಷಭೇದ ಮರೆತು ಎದುರಿಸಬೇಕಾಗಿದೆ. ಇಂತಹ ಸಮಯದಲ್ಲಿ ಯಾರೂ ರಾಜಕೀಯ ಮಾಡಬಾರದು" ಎಂದು ಸಚಿವರು, ಕೆಪಿಸಿಸಿ ನಿಯೋಜಿತ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಕಿವಿಮಾತನ್ನು ಹೇಳಿದ್ದಾರೆ.












Click it and Unblock the Notifications