ಹಿರಿಯೂರಿನಲ್ಲಿ ರಾತ್ರೋರಾತ್ರಿ ಕುವೆಂಪು, ಅಪ್ಪು ಪ್ರತಿಮೆಗಳ ನಿರ್ಮಾಣ: ಕಾರಣವೇನು..?
ಚಿತ್ರದುರ್ಗ, ಅಕ್ಟೋಬರ್ 03: ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದಲ್ಲಿ ರಾತ್ರೋರಾತ್ರಿ ಎರಡು ಪ್ರತಿಮೆ ನಿರ್ಮಾಣ ಮಾಡಲಾಗಿದ್ದು, ಕುತೂಹಲಕ್ಕೆ ಕಾರಣವಾಗಿದೆ.
ಹಿರಿಯೂರು ನಗರದ ಇಂದಿರಾ ಕ್ಯಾಂಟೀನ್ ಬಳಿ ಇರುವ ನೂತನ ಬಿಇಓ ಕಚೇರಿ ಮುಂಭಾಗದಲ್ಲಿ ಕರ್ನಾಟಕ ರತ್ನ ನಟ ಪುನೀತ್ ರಾಜ್ ಕುಮಾರ್ ಅವರ ಪ್ರತಿಮೆಯನ್ನು ನಿರ್ಮಾಣ ಮಾಡಲಾಗಿದೆ. ಮತ್ತೊಂದು ಕಡೆ ರಾಷ್ಟ್ರಕವಿ ಕುವೆಂಪು ಅವರ ಪ್ರತಿಮೆಯನ್ನು ಕೂಡ ನಿರ್ಮಾಣ ಮಾಡಲಾಗಿದೆ.

ಇನ್ನು ರಾತ್ರೋರಾತ್ರಿ ನಿರ್ಮಾಣವಾದ ಈ ಪ್ರತಿಮೆಗಳಿಗೆ ಕೆಂಪು ಹಾಗೂ ಹಳದಿ ಬಣ್ಣದ ಬಟ್ಟೆಯನ್ನು ಸುತ್ತಲಾಗಿದ್ದು, ಉದ್ಘಾಟನಾ ಕಾರ್ಯಕ್ರಮ ಏರ್ಪಡಿಸುವ ಸಾಧ್ಯತೆ ಇದೆ. ಪ್ರತಿಮೆಗಳ ಕೆಳ ಭಾಗದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಎಂದು ಬರೆಯಲಾಗಿದ್ದು, ಹೀಗಾಗಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರಿಂದ ಈ ಪ್ರತಿಮೆ ಸ್ಥಾಪನೆ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಮತ್ತೊಂದು ಕಡೆ ನಗರದ ರಂಜಿತಾ ಹೋಟೆಲ್ ಮುಂಭಾಗದಲ್ಲಿ ರಾಷ್ಟ್ರಕವಿ ಕುವೆಂಪು ಅವರ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಎರಡು ಪ್ರತಿಮೆಗಳನ್ನು ಕರವೇ ಕಾರ್ಯಕರ್ತರು ಪ್ರತಿಷ್ಟಾಪಿಸಿದ್ದಾರೆ ಎನ್ನಲಾಗಿದೆ. ಈ ಎರಡು ಪ್ರತಿಮೆಗಳನ್ನು ಬೆಂಗಳೂರಿನಿಂದ ಪ್ರತಿಮೆಗಳನ್ನು ತರಲಾಗಿದೆ ಎನ್ನಲಾಗಿದೆ. ರಾತ್ರಿ ಬೆಳಾಗುವುದರಲ್ಲಿ ಒಂದೇ ನಗರದಲ್ಲಿ ಎರಡು ಪ್ರತಿಮೆಗಳು ನಿರ್ಮಾಣವಾಗಿರಿವುದು ತೀವ್ರ ಕುತೂಹಕ್ಕೆ ಕಾರಣವಾಗಿದೆ.
ಈ ಪ್ರತಿಮೆಗಳ ನಿರ್ಮಾಣದ ಹಿಂದಿನ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ. ಈ ಬಗ್ಗೆ ಸ್ವತಃ ಕರವೇ ಕಾರ್ಯಕರ್ತರೇ ಸ್ಪಷ್ಟನೆ ನೀಡಬೇಕಿದೆ.ಆದರೆ ಬೆಳ್ಳಂಬೆಳಗ್ಗೆಯೇ ನಗರದಲ್ಲಿ ಪುನಿತ್ ರಾಜ್ ಕುಮಾರ್ ಹಾಗೂ ಕುವೆಂಪು ಅವರ ಪ್ರತಿಮೆಗಳನ್ನು ಕಂಡ ಸ್ಥಳೀಯರು ಖುಷಿಪಟ್ಟಿದ್ದು, ಪ್ರತಿಮೆ ನಿರ್ಮಾಣ ಬಗ್ಗೆ ಕನ್ನಡ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.












Click it and Unblock the Notifications