ಚಿತ್ರದುರ್ಗಕ್ಕೆ ಮೋದಿ ಸ್ವಾಗತಿಸಿದ ಕಾಂಗ್ರೆಸ್ ನಾಯಕ, ಪ್ರಶ್ನೆಗಳು!
ಚಿತ್ರದುರ್ಗ, ಮೇ 01; ಪ್ರಧಾನಿ ನರೇಂದ್ರ ಮೋದಿ ಕರ್ನಾಟಕ ವಿಧಾನಸಭೆ ಚುನಾವಣಾ ಪ್ರಚಾರ ಕೈಗೊಂಡಿದ್ದಾರೆ. ಸಮಾವೇಶ, ರೋಡ್ ಶೋಗಳ ಮೂಲಕ ಪಕ್ಷದ ಅಭ್ಯರ್ಥಿಗಳ ಪರವಾಗಿ ಮತಯಾಚನೆ ಮಾಡುತ್ತಿದ್ದಾರೆ. 'ಈ ಬಾರಿಯ ನಿರ್ಧಾರ ಸಂಪೂರ್ಣ ಬಹುಮತದ ಬಿಜೆಪಿ ಸರ್ಕಾರ' ಎಂದು ರಾಜ್ಯದಲ್ಲಿ ಸಂಚಾರ ನಡೆಸುತ್ತಿದ್ದಾರೆ.
ಮೇ 2ರ ಮಂಗಳವಾರ ನರೇಂದ್ರ ಮೋದಿ ರಾಜ್ಯ ಪ್ರವಾಸ ಕೈಗೊಂಡಿದ್ದಾರೆ. ಚಿತ್ರದುರ್ಗ, ಅಂಕೋಲ ಸೇರಿದಂತೆ ವಿವಿಧ ಕಡೆ ಅವರು ಪ್ರಚಾರ ನಡೆಸಲಿದ್ದಾರೆ. ಚಿತ್ರದುರ್ಗದ ಕಾಂಗ್ರೆಸ್ ನಾಯಕ, ಈ ಬಾರಿಯ ಚುನಾವಣೆಯ ಅಭ್ಯರ್ಥಿ ಕೆ. ಸಿ. ವಿರೇಂದ್ರ ಪಪ್ಪಿ ನರೇಂದ್ರ ಮೋದಿಯನ್ನು ಕೋಟೆ ನಾಡಿಗೆ ಸ್ವಾಗತಿಸಿದ್ದಾರೆ. ಚಿತ್ರದುರ್ಗದ ಬಿಜೆಪಿ ಶಾಸಕರಾದ ಜಿ. ಎಚ್. ತಿಪ್ಪಾರೆಡ್ಡಿಯ ವಿರುದ್ಧ ಹಲವು ದೂರುಗಳನ್ನು ಅವರು ಹೇಳಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಕೆ. ಸಿ. ವಿರೇಂದ್ರ ಪಪ್ಪಿ ಮತ್ತು ಜಿ. ಎಸ್. ತಿಪ್ಪಾರೆಡ್ಡಿ ಎದುರಾಳಿಗಳು.

ಸೋಮವಾರ ಸರಣಿ ಫೇಸ್‌ಬುಕ್ ಪೋಸ್ಟ್ ಮೂಲಕ ಅವರು ನರೇಂದ್ರ ಮೋದಿ ಸ್ವಾಗತಿಸಿ ಪ್ರಶ್ನೆಗಳ ಬಾಣ ಬಿಟ್ಟಿದ್ದಾರೆ. ಚಿತ್ರದುರ್ಗ ನಗರದ ಮುರುಘಾರಾಜೇಂದ್ರ ಕ್ರೀಡಾಂಗಣದಲ್ಲಿ ಮಂಗಳವಾರ ನಡೆಯುವ ಸಮಾವೇಶದಲ್ಲಿ ನರೇಂದ್ರ ಮೋದಿ ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಮತಯಾಚನೆ ಮಾಡಲಿದ್ದಾರೆ.
ನರೇಂದ್ರ ಮೋದಿಗೆ ಪ್ರಶ್ನೆಗಳು; ಚಿತ್ರದುರ್ಗ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ. ಸಿ. ವಿರೇಂದ್ರ ಪಪ್ಪಿ ಸರಣಿ ಪೋಸ್ಟ್‌ಗಳ ಮೂಲಕ ನರೇಂದ್ರ ಮೋದಿಗೆ ಪ್ರಶ್ನೆಗಳನ್ನು ಕೇಳಿದ್ದಾರೆ. ಮೊದಲ ಪೋಸ್ಟ್‌ನಲ್ಲಿ ಶೇ 40 ಕಮೀಷನ್ ಆರಂಭವಾಗಿದ್ದೇ ಚಿತ್ರದುರ್ಗದ ಬಿಜೆಪಿ ಶಾಸಕರಿಂದ. 'ನಾ ಖಾವೂಂಗಾ, ನಾ ಖಾನೇ ದೂಂಗಾ' ಎಂದು ತಾವು ಹೇಳಿದ್ದೀರಿ. ಆದರೆ, ಇಡೀ ರಾಜ್ಯದಲ್ಲಿಯೇ ಶೇ 40ರಷ್ಟು ಕಮಿಷನ್ ದಂಧೆ ಬಯಲಿಗೆ ಬಂದಿದ್ದೇ ನಮ್ಮ ಚಿತ್ರದುರ್ಗ ಬಿಜೆಪಿ ಶಾಸಕ ಜಿ. ಎಚ್. ತಿಪ್ಪಾರೆಡ್ಡಿ ಅವರಿಂದ. ಹಣ ಪಡೆಯದೇ ಯಾವುದೇ ಕೆಲಸವನ್ನು ಇಲ್ಲಿನ ಬಿಜೆಪಿ ಶಾಸಕರು ಮಾಡುವುದಿಲ್ಲ. ಸನ್ಮಾನ್ಯ ಶ್ರೀ ಮೋದಿಜೀ ಅವರೇ ನೀವು ಇಲ್ಲಿಗೆ ಬರುತ್ತಿದ್ದೀರಿ, ಇಲ್ಲಿನ ಗುತ್ತಿಗೆದಾರರು ಮತ್ತು ಜನರ ಸಂಕಷ್ಟವನ್ನು ನೀವೇ ಒಮ್ಮೆ ಕೇಳಿ ತಿಳಿದುಕೊಳ್ಳಲು ಕೋರಿಕೆ ಎಂದು ತಿಳಿಸಲಾಗಿದೆ.

2ನೇ ಪೋಸ್ಟ್‌ನಲ್ಲಿ ಚಿತ್ರದುರ್ಗ ಜಿಲ್ಲೆಯಲ್ಲಿ ಒಂದು ತಾಲೂಕು ಕೇಂದ್ರವಾಗಿದ್ದ ದಾವಣಗೆರೆ ಪ್ರತ್ಯೇಕ ಜಿಲ್ಲೆಯಾಗಿ ಕೆಲವೇ ವರ್ಷಗಳಲ್ಲಿ ಬೃಹದಾಕಾರವಾಗಿ ಬೆಳೆದು ನಿಂತಿದೆ. ಅಲ್ಲಿನ ನಗರ ಸಭೆ, ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿ ಸಾಕಷ್ಟು ಅಭಿವೃದ್ಧಿ ಕಂಡಿರುವುದು ನಮ್ಮ ಕಣ್ಣ ಮುಂದೆಯೇ ಇದೆ. ಆದರೆ, ಚಿತ್ರದುರ್ಗ ನಗರಸಭೆ ಮಹಾನಗರ ಪಾಲಿಕೆಯನ್ನಾಗಿ ಮೇಲ್ದರ್ಜೆಗೇರಿಸುವ ಎಲ್ಲಾ ಅರ್ಹತೆಗಳಿದ್ದರೂ ಆಗಿಲ್ಲ ಏಕೆ?. ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿಕಾರದ ನಿಯಮಗಳ ಪ್ರಕಾರ ಪ್ರತಿ ಐದು ವರ್ಷಕ್ಕೊಮ್ಮೆ ನಗರ ಪ್ರದೇಶವನ್ನು ವಿಸ್ತರಿಸಬೇಕು ಎನ್ನುವ ನಿಯಮಕ್ಕೆ ನಿಮ್ಮದೇ ಬಿಜೆಪಿ ಪಕ್ಷದ ಶಾಸಕರು ಎಳ್ಳು-ನೀರು ಬಿಟ್ಟಿದ್ದು ಏಕೆ? ಬಿಜೆಪಿ ಶಾಸಕ ಜಿ. ಎಚ್. ತಿಪ್ಪಾರೆಡ್ಡಿಯವರ ರಿಯಲ್ ಏಸ್ಟೇಟ್ ದಂಧೆಯ ಸಲುವಾಗಿ ಇಡೀ ನಗರದ ಅಭಿವೃದ್ಧಿಯನ್ನೇ ಬಲಿ ಕೊಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
3ನೇ ಪೋಸ್ಟ್‌ನಲ್ಲಿ ಚಿತ್ರದುರ್ಗದ ಬಿಜೆಪಿ ಶಾಸಕರಾದ ಜಿ. ಎಚ್. ತಿಪ್ಪಾರೆಡ್ಡಿಯವರು ನಗರ ಹಾಗೂ ಹಳ್ಳಿಗಳಲ್ಲಿ ಅವೈಜ್ಞಾನಿಕವಾಗಿ ಬರೀ ಸಿಸಿ ರಸ್ತೆಗಳನ್ನಷ್ಟೇ ಏಕೆ ನಿರ್ಮಿಸಿದ್ದಾರೆ? ವೈಜ್ಞಾನಿಕವಾದ ಚರಂಡಿ ಇಲ್ಲದ ಕಾರಣ ಮಳೆಗಾಲದಲ್ಲಿ ಮನೆಗಳಿಗೆ ನೀರು ನುಗ್ಗುತ್ತವೆ. ಕೆಲ ಹಳ್ಳಿಗಳಲ್ಲಿ ಶಾಲೆ ಆವರಣದೊಳಗೆ ನೀರು ಹರಿಯುತ್ತಿದ್ದು ಮಕ್ಕಳ ಶೈಕ್ಷಣಿಕ ಪ್ರಗತಿಗೆ ಹಿನ್ನಡೆಯಾಗುತ್ತಿದೆ. ನಗರದಲ್ಲಿನ ಚಿಕ್ಕ ಚಿಕ್ಕ ರಸ್ತೆಗಳಿಗೆ ಅವೈಜ್ಞಾನಿಕವಾಗಿ ಡಿವೈಡರ್(ರಸ್ತೆ ವಿಭಜಕ)ಗಳನ್ನು ಹಾಕಲಾಗಿದೆ. ಸುಗಮ ಸಂಚಾರಕ್ಕೆ ಅಡಚಣೆಯಾಗಿದ್ದು ಡಿವೈಡರ್‌ಗೆ ವಾಹನಗಳು ಡಿಕ್ಕಿ ಹೊಡೆದು ಅನೇಕರು ಪ್ರಾಣ ಬಿಟ್ಟಿದ್ದಾರೆ. ಕಳಪೆ ಗುಣಮಟ್ಟದ ಸಿಸಿ ರಸ್ತೆಗಳನ್ನು ನಿರ್ಮಿಸುತ್ತಿರುವುದರ ಹಿಂದಿನ ಶಾಸಕರ ಉದ್ದೇಶವೇನು? ಇದರಲ್ಲಿ ಅದೆಷ್ಟು ಪರ್ಸೆಂಟ್ ಕಮಿಷನ್ ತೆಗೆದುಕೊಂಡಿದ್ದಾರೆ? ಎಂದು ದೂರಿದ್ದಾರೆ.
4ನೇ ಪೋಸ್ಟ್‌ನಲ್ಲಿ ಮಜರೆ ಗ್ರಾಮ, ಲಂಬಾಣಿ ತಾಂಡ, ಗೊಲ್ಲರಹಟ್ಟಿ ಹಾಗೂ ನಾಯಕರಹಟ್ಟಿಗಳಲ್ಲಿ ತಲೆಮಾರುಗಳಿಂದ ವಾಸ ಮಾಡಿಕೊಂಡು ಬಂದ ಸಾವಿರಾರು ಬಡ ಕುಟುಂಬಗಳಿಗೆ ಬಿಜೆಪಿ ಶಾಸಕ ಜಿ. ಎಚ್. ತಿಪ್ಪಾರೆಡ್ಡಿಯವರು ಹಕ್ಕು ಪತ್ರ ನೀಡಿಲ್ಲ ಏಕೆ? . ರಾಜ್ಯಾದ್ಯಾಂತ ಪರಿಣಾಮಕಾರಿಯಾಗಿ ಹಕ್ಕು ಪತ್ರ ನೀಡುತ್ತಿದ್ದರೆ ಇಲ್ಲಿನ ಶಾಸಕರು ಕೇವಲ ಎರಡೇ ಗ್ರಾಮಗಳಿಗೆ ಹಕ್ಕು ಪತ್ರ ನೀಡಿ ಕೈ ತೊಳೆದುಕೊಂಡಿದ್ದಾರೆ. ಅದರ ಹಿಂದಿನ ಉದ್ದೇಶ ಏನು?. ಬಡವರು ಬಡವರಾಗಿಯೇ ಉಳಿಯಬೇಕೆ? ಅಥವಾ ಬಡವರು ಬಿಜೆಪಿ ಶಾಸಕರ ಮನೆ ಮುಂದೆ ಹಕ್ಕು ಪತ್ರಗಳಿಗಾಗಿ ನಿರಂತರ ಬೇಡಿಕೊಂಡೇ ಜೀವನ ಸಾಗಿಸಬೇಕೆ? ಎಂದು ಪ್ರಶ್ನೆ ಮಾಡಲಾಗಿದೆ.
5ನೇ ಪೋಸ್ಟ್‌ನಲ್ಲಿ ದೇಶದಲ್ಲಿಯೇ ಶಾಶ್ವತ ಬರಗಾಲ ಪ್ರದೇಶದ ಪಟ್ಟಿಯಲ್ಲಿ ಚಿತ್ರದುರ್ಗ ಈಗಲೂ ಇದೆ. 2002ರಲ್ಲಿ ಅರ್ಥಶಾಸ್ತ್ರಜ್ಞ ಡಾ. ಡಿ. ಎಂ. ನಂಜುಂಡಪ್ಪನವರ ವರದಿಯಲ್ಲಿಯೂ ಸಹ ಹಿಂದುಳಿದ ತಾಲ್ಲೂಕು ಎಂದು ಘೋಷಿಸಲಾಗಿದೆ. ಬಿಜೆಪಿ ಪಕ್ಷದ ಶಾಸಕ ಜಿ. ಎಚ್. ತಿಪ್ಪಾರೆಡ್ಡಿಯವರು ಕ್ಷೇತ್ರದ ಅಧಿಕಾರ ನಡೆಸಲು ಆರಂಭಿಸಿ ಮೂವತ್ತು ವರ್ಷಗಳೇ ಕಳೆದಿವೆ. ಆದರೆ, ಬರದ ನಾಡು ಮತ್ತು ಹಿಂದುಳಿದ ತಾಲ್ಲೂಕು ಎನ್ನುವ ಹಣೆಪಟ್ಟಿ ಕಳಚಲು ಶಾಸಕರು ಮುಂದಾಗಿಲ್ಲ ಏಕೆ?. ರಾಜಧಾನಿಗೆ ಕೇವಲ 200 ಕಿ. ಮೀ. ದೂರ ಇದ್ದೂ, ರಾಷ್ಟ್ರೀಯ ಹೆದ್ದಾರಿ ಮಾರ್ಗದಲ್ಲಿದ್ದೂ ಅಭಿವೃದ್ಧಿ ಸಾಧ್ಯವಾಗಿಲ್ಲ ಏಕೆ?. ಹಿಂದುಳಿದ ತಾಲ್ಲೂಕು ಕೇಂದ್ರದ ಅಭಿವೃದ್ಧಿಗೆ ಹರಿದು ಬರುವ ಹಣ ಯಾವ ರೂಪದಲ್ಲಿ ಯಾರ ಜೇಬು ಸೇರುತ್ತಿದೆ? ಎಂದು ಮೋದಿಯನ್ನು ಪ್ರಶ್ನಿಸಿದ್ದಾರೆ.
6ನೇ ಪೋಸ್ಟ್‌ನಲ್ಲಿ ಶಾಂತಿಸಾಗರ ಮತ್ತು ವಾಣಿ ವಿಲಾಸ ಜಲಾಶಯಗಳಿದ್ದರೂ ಚಿತ್ರದುರ್ಗ ಕ್ಷೇತ್ರಕ್ಕೆ ಶಾಶ್ವತ ನೀರು ಪೂರೈಕೆ ಮಾಡಿಲ್ಲ ಏಕೆ?. ಹಳ್ಳಿಗಳಲ್ಲಿ ಮಳೆಗಾಲದ ವೇಳೆ ತುಂಬಿ ಹರಿಯುವ ಹಳ್ಳಗಳಿಗೆ ಚೆಕ್ ಡ್ಯಾಂಗಳನ್ನು ನಿರ್ಮಿಸಿ ನೀರು ನಿಲ್ಲಿಸಲು ಮುಂದಾಗಿಲ್ಲ. ಕೆಲವೆಡೆ ಕೋಟ್ಯಂತರ ರೂಪಾಯಿಗಳನ್ನು ವ್ಯಯಿಸಿ ಚೆಕ್ ಡ್ಯಾಂಗಳನ್ನು ನಿರ್ಮಿಸಿದ್ದಾರೆ. ಒಂದೇ ಮಳೆಗೆ ಚೆಕ್ ಡ್ಯಾಂಗಳು ನೀರಲ್ಲಿ ಕೊಚ್ಚಿ ಹೋಗಿವೆ. ಇದರಲ್ಲಿ ಅದೆಷ್ಟು ಪರ್ಸೆಂಟ್ ಕಮಿಷನ್ ಪಡೆದಿದ್ದಾರೆ? ನೀರಿಗಾಗಿ ಜನ-ಜಾನುವಾರುಗಳು ಪರಿತಪಿಸುತ್ತಿದ್ದಾರೆ ಎಂದು ಗಮನ ಸೆಳೆಯಲಾಗಿದೆ.












Click it and Unblock the Notifications