ಚಿತ್ರದುರ್ಗ: ಭೀಕರ ರಸ್ತೆ ಅಪಘಾತದಲ್ಲಿ ಮೂವರ ಸಾವು
ಚಿತ್ರದುರ್ಗ, ಜುಲೈ 2: ಚಿತ್ರದುರ್ಗದಲ್ಲಿ ಭಾನುವಾರ ರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಚಿತ್ರದುರ್ಗ ತಾಲ್ಲೂಕಿನ ಮಾಡನಾಯಕನಹಳ್ಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ದುರ್ಘಟನೆ ಸಂಭವಿಸಿದೆ.
ಅಪಘಾತದ ತೀವ್ರತೆಗೆ ಕಾರು ಚಾಲಕ ನೇವಿಲ್ (26), ಮಂದಾರ (20) ಮತ್ತು ರುಕ್ಮಿಣಿ (19) ಸ್ಥಳದಲ್ಲಿಯೇ ದುರ್ಮರಣ ಹೊಂದಿದ್ದಾರೆ.
ಮೃತರೆಲ್ಲರೂ ಬೆಂಗಳೂರು ಮೂಲದವರು ಎಂದು ತಿಳಿದುಬಂದಿದೆ. ಮುಧೋಳದಲ್ಲಿ ಸಂಬಂಧಿಕರ ಮದುವೆಗೆಂದು ತೆರಳಿದ್ದ ಕಾರಿನಲ್ಲಿ ಐದು ಮಂದಿ ಇದ್ದರು,

ಮದುವೆ ಮುಗಿಸಿ ರಾತ್ರಿ ಬೆಂಗಳೂರಿಗೆ ಮರಳುವ ಸಂದರ್ಭದಲ್ಲಿ ಕಾರು ಮತ್ತು ಕಂಟೇನರ್ ನಡುವೆ ಡಿಕ್ಕಿ ಸಂಭವಿಸಿದೆ. ಕಾರು ವೇಗವಾಗಿ ಕಂಟೇನರ್‌ಗೆ ಡಿಕ್ಕಿ ಹೊಡೆದಿದ್ದರಿಂದ ತೀವ್ರ ಗಾಯಗೊಂಡ ನೇವಿಲ್, ಮಂದಾರ ಮತ್ತು ರುಕ್ಮಿಣಿ ರಕ್ತಸ್ರಾವದಿಂದ ಅಲ್ಲಿಯೇ ಕೊನೆಯುಸಿರೆಳೆದರು.
ಕಾರ್‌ನಲ್ಲಿದ್ದ ಇನ್ನು ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನಾ ಸ್ಥಳಕ್ಕೆ ಪಿಎಸ್ಐ ಶ್ರೀನಿವಾಸ ಭೇಟಿ ಪರಿಶೀಲನೆ ನಡೆಸಿದರು. ತುರುವನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.












Click it and Unblock the Notifications