ಲೈಂಗಿಕ ಕಿರುಕುಳ ಆರೋಪ; ಚಿತ್ರದುರ್ಗ ಶಿಕ್ಷಕನ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಬಾಲಕಿಯರು
ಚಿತ್ರದುರ್ಗ, ಫೆಬ್ರವರಿ 06: ಮಕ್ಕಳು ಶಾಲೆಯಲ್ಲಿ ಪಾಠ ಕಲಿತಾರೆ ಅಂತ ಪೋಷಕರು ನೆಮ್ಮದಿಯಾಗಿದ್ದರು, ಆದರೆ ಆ ಗುರು ಸ್ಥಾನದಲ್ಲಿದ್ದ ಶಿಕ್ಷಕ ಮಾಡುತ್ತಿದ್ದ ನೀಚ ಕೃತ್ಯವನ್ನು ಮಕ್ಕಳ ಬಾಯಿಂದ ಕೇಳಿದ ಪೋಷಕರು, ದಿಗ್ಬ್ರಾಂತರಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಸರ್ಕಾರಿ ಶಾಲಾ ಶಿಕ್ಷಕನಿಂದ ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಕಿರುಕುಳ ಕೊಟ್ಟಿರುವ ಆರೋಪವೊಂದು ಚಿತ್ರದುರ್ಗದಲ್ಲಿ ಕೇಳಿಬಂದಿದೆ. ಆರೋಪ ಕೇಳಿಬಂದ ಹಿನ್ನೆಲೆ ಶಿಕ್ಷಕ ತಿಪ್ಪೇಸ್ವಾಮಿ ನಾಪತ್ತೆಯಾಗಿದ್ದಾನೆ.
ಚಿತ್ರದುರ್ಗದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯೊಂದರಲ್ಲಿ ಶಿಕ್ಷಕನಾಗಿರೋ ತಿಪ್ಪೇಸ್ವಾಮಿ ಎಂಬಾತನೇ, ಕಳೆದ ಮೂರ್ನಾಲ್ಕು ತಿಂಗಳಿನಿಂದ ಅಪ್ರಾಪ್ತ ವಿದ್ಯಾರ್ಥಿನಿಯರನ್ನು ಹತ್ತಿರ ಕರೆದು ಮೈ-ಕೈ ಮುಟ್ಟೋದು ಮಾತ್ರವಲ್ಲದೇ ಇನ್ನೂ ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದನಂತೆ.

ಈತನ ಕಿರುಕುಳ ಸಹಿಸಲು ಅಸಾಧ್ಯವಾದಾಗ ಮಕ್ಕಳೆಲ್ಲಾ ತಮ್ಮ ಪೋಷಕರ ಬಳಿ ಶಿಕ್ಷಕನ ನೀಚ ಕೃತ್ಯದ ಬಗ್ಗೆ ಬಾಯಿ ಬಿಟ್ಟಿದ್ದಾರೆ, ತಕ್ಷಣ ಎಚ್ಚೆತ್ತ ಪೋಷಕರು, ಕಾಮುಕ ಶಿಕ್ಷಕನ ಕೃತ್ಯದ ಬಗ್ಗೆ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ.
ಇನ್ನು ಅಪ್ರಾಪ್ತ ಬಾಲಕಿಯರು ಪೊಲೀಸ್ ಠಾಣೆಗೆ ಬಂದಿರುವ ವಿಷಯ ತಿಳಿದ ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ ಅವರು ಮಫ್ತಿಯಲ್ಲಿ ಮಹಿಳಾ ಠಾಣೆಗೆ ಆಗಮಿಸಿ ಮಕ್ಕಳ ಅಹವಾಲು ಕೇಳಿದ್ದಾರೆ. ಸದ್ಯ ಈಗಾಗಲೇ ಏಳು ಮಂದಿ ಬಾಲಕಿಯರು ಎಸ್ಪಿ ಬಳಿ ಶಿಕ್ಷಕನ ನೀಚ ಕೃತ್ಯದ ಬಗ್ಗೆ ಹೇಳಿಕೊಂಡಿದ್ದಾರೆ.

ಹೀಗಾಗಿ ಶಿಕ್ಷಕನ ವಿರುದ್ದ ಐಪಿಸಿ ಕಲಂ 354, ಹಾಗೂ POCSO ಕಾಯಿದೆ ಕಲಂ 8 ಮತ್ತು 15 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ಪಾಠದ ಜೊತೆಗೆ ಸಂಸ್ಕಾರ ಕಲಿಸಬೇಕಾದ ಗುರುವೇ ತನ್ನ ಸ್ಥಾನದ ಜವಾಬ್ದಾರಿ ಮರೆತು ಮೊಮ್ಮಕ್ಕಳ ವಯಸ್ಸಿನ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿ ಶಿಕ್ಷಕ ವೃತ್ತಿಗೆ ಅಪಚಾರವೆಸಗಿ ತಲೆ ಮರೆಸಿಕೊಂಡಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಮಹಿಳಾ ಠಾಣೆ ಪೊಲೀಸರು ಆರೋಪಿ ಪತ್ತೆಗೆ ಹುಡುಕಾಟ ನಡೆಸಿದ್ದಾರೆ. ಕಾಮುಕ ಶಿಕ್ಷಕನಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂಬುದು ಪೋಷಕರ ಆಗ್ರಹವಾಗಿದೆ.












Click it and Unblock the Notifications