ಕೊಳೆತು ತಿಪ್ಪೆ ಸೇರಿದ ಈರುಳ್ಳಿ: ಸಂಕಷ್ಟದಲ್ಲಿ ಬೆಳೆಗಾರ
ಚಿತ್ರದುರ್ಗ, ಅಕ್ಟೋಬರ್ 16: ಪ್ರತಿ ವರ್ಷದಂತೆ ಈ ವರ್ಷವೂ ಸಹ ಕೋವೆರಹಟ್ಟಿಯ ಈರುಳ್ಳಿ ಬೆಳೆಗಾರರು ತಮ್ಮ ಭೂಮಿಯಲ್ಲಿ ಸುಮಾರು 20ಕ್ಕೂ ಹೆಚ್ಚು ರೈತರು ನೂರಾರು ಎಕರೆಯಲ್ಲಿ ಈರುಳ್ಳಿ ಬೆಳೆ ಬಿತ್ತನೆ ಮಾಡಿದ್ದರು.
ಗೊಬ್ಬರ, ಔಷಧ ಸಿಂಪಡಿಸಿ ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡಿ ಈರುಳ್ಳಿ ಬೆಳೆದಿದ್ದರು. ಪ್ರತಿ ವರ್ಷದಂತೆ ಈ ಸಲವು ಈರುಳ್ಳಿ ತಮ್ಮ ಕೈಹಿಡಿಯುತ್ತದೆ ಎಂದು ಉತ್ಸುಕರಾಗಿದ್ದರು. ಉತ್ತಮ ಬೆಳೆ ಬಂದಿದ್ದಲ್ಲಿ ಪ್ರತಿ ರೈತರಿಗೂ ಲಕ್ಷಾಂತರ ರೂಪಾಯಿ ಆದಾಯ ಬರುತ್ತಿತ್ತು.
ಆದರೆ ಈ ಬಾರಿ ಅಧಿಕ ಮಳೆಯಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬ ಮಾತಿನಂತೆ ಸಾವಿರಾರು ಕೆಜಿ ಈರುಳ್ಳಿ ಚೀಲಗಳಲ್ಲಿ ಕೊಳೆತು ಹೋಗಿವೆ. ಇನ್ನು ಕೊಳೆತ ಈರುಳ್ಳಿ ಚೀಲಗಳನ್ನು ಜೆಸಿಬಿ ಮೂಲಕ ಗುಂಡಿಗೆ ಹಾಕಿ ಮಣ್ಣು ಮುಚ್ಚಲಾಗಿದೆ.

150 ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬೆಳೆ
ಲಾಭದ ನಿರೀಕ್ಷೆಯಲ್ಲಿದ್ದ ರೈತರಿಗೆ ಇದೀಗ ಬರಸಿಡಿಲು ಬಡಿದಂತಾಗಿದೆ. ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಐಮಂಗಲ ಹೋಬಳಿಯ ಕೋವೆರಹಟ್ಟಿ ಗ್ರಾಮದ ಸೋಮಣ್ಣ, ರಾಜಣ್ಣ, ಛೇರ್ಮನ್ ಶಿವಣ್ಣ, ಗುರುಸ್ವಾಮಿ, ಚೇತನ್, ಉಮಾಪತಿ, ರವಿಕುಮಾರ್, ತಿಪ್ಪೇಸ್ವಾಮಿ ಸೇರಿದಂತೆ ಇನ್ನಿತರ ರೈತರು ಸುಮಾರು 150 ಹೆಕ್ಟೇರ್ ಪ್ರದೇಶದಲ್ಲಿ ಸಾವಿರ ಸಾವಿರ ಚೀಲಗಟ್ಟಲೆ ಈರುಳ್ಳಿ ಬೆಳೆದಿದ್ದರು.

ಈ ವರ್ಷ ಲಾಭದ ನಿರೀಕ್ಷೆಯಲ್ಲಿದ್ದ ರೈತರು
ಈರುಳ್ಳಿ ಬೆಳೆಯಲ್ಲಿ ಉತ್ತಮ ಲಾಭ ಬರುವ ನಿರೀಕ್ಷೆಯಲ್ಲಿದ್ದರು. ಅತಿಯಾದ ಮಳೆ ಹಾಗೂ ಬೆಲೆ ಕುಸಿತದಿಂದ ಲಕ್ಷಾಂತರ ರೂಪಾಯಿ ನಷ್ಟದ ಸುಳಿಯಲ್ಲಿ ಸಿಲುಕಿ, ಕಂಗಾಲಾಗಿದ್ದಾರೆ. ಕಳೆದ ಎರಡು ವರ್ಷಗಳಿಂದ ಕೊರೊನಾ ಹಿನ್ನೆಲೆಯಲ್ಲಿ ಯಾವುದೇ ಆದಾಯ ಇರಲಿಲ್ಲ. ಹೀಗಾಗಿ ಈ ವರ್ಷದಲ್ಲಿ ರೈತರು ಉತ್ತಮ ಆದಾಯದ ನಿರೀಕ್ಷೆ ಹೊಂದಿದ್ದರು. ಆದರೆ ಏನು ಪ್ರಯೋಜನವಾಗಿಲ್ಲ ಎನ್ನಲಾಗಿದೆ.

ಮಳೆಯಿಂದ ರೈತರು ಕಂಗಾಲು
ಎರಡು ವರ್ಷಗಳಿಂದ ಈರುಳ್ಳಿ ದರ ಕುಸಿತ ಕಂಡಿದ್ದು ಈ ವರ್ಷ ಹೆಚ್ಚಳವಾಗುವ ನಿರೀಕ್ಷೆಯಲ್ಲಿ ರೈತರು ಈರುಳ್ಳಿ ಬೆಳೆ ಬೆಳೆದಿದ್ದರು. ಇನ್ನು ಕೆಲವು ರೈತರು ಸಾಲಸೋಲ ಮಾಡಿ ಈರುಳ್ಳಿ ಬೆಳೆ ಬೆಳೆದಿದ್ದು, ಇದೀಗ ನಷ್ಟದಿಂದಾಗಿ ಕೈಸುಟ್ಟುಕೊಳ್ಳುವಂತಾಗಿದೆ. ಪ್ರತಿಯೊಬ್ಬ ರೈತರು 1 ಹೆಕ್ಟೇರ್ ಭೂಮಿಯಲ್ಲಿ ಉತ್ಕೃಷ್ಟವಾದ ಬೆಳೆ ಬೆಳೆದು 1.5ರಿಂದ 2 ಲಕ್ಷ ರೂ.ವರೆಗೆ ಆದಾಯ ಗಳಿಸುವ ನಿರೀಕ್ಷೆಯಲ್ಲಿದ್ದರು. ಆದರೆ ಈ ಸಲ ಉಕ್ಕೆ, ಬೇಸಾಯ, ಗೊಬ್ಬರ, ಬಿತ್ತನೆ ಬೀಜ ಸೇರಿದಂತೆ ಹತ್ತಾರು ಸಾವಿರಾರು ರೂ.ಗಳನ್ನು ಖರ್ಚು ಮಾಡಿದ್ದು, ಮಳೆ ಹಾಗೂ ಬೆಲೆ ಕುಸಿತದಿಂದಾಗಿ ನಷ್ಟ ಅನುಭವಿಸುವಂತಾಗಿದೆ.

ಸಂಕಷ್ಟದಲ್ಲಿ ಚಿತ್ರದುರ್ಗ ರೈತರು
ಬೆಳೆ ನಷ್ಟದಿಂದ ಕಂಗಾಲಾಗಿರುವ ರೈತರು ಪರಿಹಾರಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈಗಾಗಲೇ ಈರುಳ್ಳಿ ಬೆಳೆ ನಾಶವಾಗಿರುವ ಜಮೀನಿನ ಫೋಟೋ, ಪಹಣಿ ಮುಂತಾದ ದಾಖಲೆಗಳನ್ನು ಕೃಷಿ ಇಲಾಖೆ ಹಾಗೂ ಕಂದಾಯ ಇಲಾಖೆಗೆ ತಲುಪಿಸಿದ್ದಾರೆ. "ಈ ಬಾರಿ ಉತ್ತಮ ಬೆಳೆ ನಿರೀಕ್ಷೆಯಲ್ಲಿ ಈರುಳ್ಳಿ ಬೆಳೆದಿದ್ದೆವು. ನಮ್ಮ ಭಾಗದಲ್ಲಿ ಬಹಳಷ್ಟು ರೈತರು ನೂರಾರು ಎಕರೆಯಲ್ಲಿ ಈರುಳ್ಳಿ ಬೆಳೆದಿದ್ದರು. ಕೆಲವರು ಸಾಲಸೋಲ ಮಾಡಿ ಕೃಷಿ ಮಾಡಿದ್ದರು. ಆದರೆ ಈ ಭಾರಿ ಹೆಚ್ಚಿನ ಮಳೆ ಸುರಿದ ಪರಿಣಾಮ ಬೆಳೆ ನಾಶವಾಗಿದ್ದು, ದಿಕ್ಕು ತೋಚದಂತಾಗಿದೆ" ಎನ್ನುತ್ತಾರೆ ಕೋವೆರಹಟ್ಟಿ ಈರುಳ್ಳಿ ಬೆಳೆಗಾರರು.












Click it and Unblock the Notifications