• search
 • Live TV
ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಚಿತ್ರದುರ್ಗ ವಿಶೇಷ: ಕೊಳವೆ ಬಾವಿಗೆ ಮಗು ಬಿದ್ದು ಸತ್ತು 19 ವರ್ಷವಾದರೂ ಸಿಗದ ಪರಿಹಾರ!

By ಚಿದಾನಂದ್ ಮಸ್ಕಲ್
|
Google Oneindia Kannada News

ಚಿತ್ರದುರ್ಗ, ನವೆಂಬರ್ 18: ಕೊಳವೆ ಬಾವಿಗೆ ಬಿದ್ದು ಸಾವನ್ನಪ್ಪಿದ ಮಕ್ಕಳ ಕುಟುಂಬಕ್ಕೆ ಪರಿಹಾರ ಕೊಡಲಾಗುತ್ತದೆ ಎಂದು ಸರ್ಕಾರ ಪ್ರತಿ ಬಾರಿಯೂ ಹೇಳುತ್ತದೆ. ಆದರೆ ಏಳು ವರ್ಷದ ಬಾಲಕನೊಬ್ಬ ಕೊಳವೆ ಬಾವಿಯಲ್ಲಿ ಬಿದ್ದು ಸಾವನ್ನಪ್ಪಿ 19 ವರ್ಷ ಗತಿಸಿದರೂ ಇದುವರೆಗೂ ಯಾವ ಸರ್ಕಾರವೂ ಕೂಡ ಕುಟುಂಬಕ್ಕೆ ಪರಿಹಾರ ನೀಡದಿರುವ ಘಟನೆಯೊಂದು ಚಿತ್ರದುರ್ಗ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

ಪರಿಹಾರಕ್ಕಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿಕೊಂಡು ಸರ್ಕಾರಿ ಕಚೇರಿ ಹಾಗೂ ಜನಪ್ರತಿನಿಧಿಗಳ ಬಳಿಗೆ ಅಲೆದಲೆದು ಬೇಸತ್ತು ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬರಲಾಗಿದೆ ಎಂದು ಕುಟುಂಬದ ಯಜಮಾನ ಕಣ್ಣೀರಿಟ್ಟಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನಲ್ಲಿ ನಡೆದಿದೆ.

ದಾಸಣ್ಣನ ಮಾಳಿಗೆ ಗ್ರಾಮದ ಬಡ ಕೂಲಿ ಕಾರ್ಮಿಕ ಅಂಜಿನಪ್ಪ

ದಾಸಣ್ಣನ ಮಾಳಿಗೆ ಗ್ರಾಮದ ಬಡ ಕೂಲಿ ಕಾರ್ಮಿಕ ಅಂಜಿನಪ್ಪ

ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಐಮಂಗಲ ಹೋಬಳಿಯ ದಾಸಣ್ಣನ ಮಾಳಿಗೆ ಗ್ರಾಮದ ಬಡ ಕೂಲಿ ಕಾರ್ಮಿಕ ಅಂಜಿನಪ್ಪ ಹಾಗೂ ಸುಶೀಲಮ್ಮ ದಂಪತಿಯ ಏಳು ವರ್ಷದ ಮಗ ರವಿಕುಮಾರ್ 19 ವರ್ಷಗಳ ಹಿಂದೆ ಕೊಳವೆ ಬಾವಿಗೆ ಬಿದ್ದು ಮೃತಪಟ್ಟಿದ್ದನು. ಆಗ ಸರ್ಕಾರ ಪರಿಹಾರ ನೀಡುತ್ತೇನೆಂದು ಹೇಳಿ ಪರಿಹಾರ ಸಿಗದೇ ನೆನಪಿಸಿಕೊಂಡು ದಂಪತಿಗಳು ಬಿಕ್ಕಿ ಬಿಕ್ಕಿ ಅಳುತ್ತಿದ್ದಾರೆ.

ಪುತ್ರನನ್ನು ಕಳೆದುಕೊಂಡು ನೋವು ಒಂದು ಕಡೆಯಾದರೆ, ಮತ್ತೊಂದು ಕಡೆ ನಾಳೆ ಪರಿಹಾರ ಸಿಗಬಹುದು, ನಾಡಿದ್ದು ಸಿಗಬಹುದು, ಅವರ ಹತ್ತಿರ ಹೋದರೆ ಸಿಗುತ್ತದೆ, ಇವರ ಹತ್ತಿರ ಹೋದರೆ ಪರಿಹಾರ ಸಿಗುತ್ತದೆ ಎಂದು ಕೈಯಲ್ಲಿ ದಾಖಲೆ ಹಿಡಿದು ಸರ್ಕಾರಿ ಕಚೇರಿ ಹಾಗೂ ಜನಪ್ರತಿನಿಧಿಗಳ ಬಳಿಗೆ ಪ್ರತಿನಿತ್ಯ ಅಲೆಯುತ್ತಿರುವುದು ನೋಡಿದರೆ ಕಣ್ಣೀರು ಬರುತ್ತದೆ.

ಘಟನೆಯ ಹಿನ್ನೆಲೆ

ಘಟನೆಯ ಹಿನ್ನೆಲೆ

19 ವರ್ಷಗಳ ಹಿಂದೆ (2002ರಲ್ಲಿ ಮೃತನ ತಂದೆ ಹೇಳಿಕೆ) ದಾಸಣ್ಣನ ಮಾಳಿಗೆಯ ಅಂಜಿನಪ್ಪ ಹಾಗೂ ಸುಶೀಲಮ್ಮ ಪುತ್ರ 7 ವರ್ಷದ ರವಿಕುಮಾರ್ ಸೌದೆ ತರಲು ಚಿಕ್ಕಮ್ಮನ ಜೊತೆಗೆ ಅಡವಿಗೆ ಹೋಗಿ ಕಟ್ಟಿಗೆ ತೆಗೆದುಕೊಂಡು ವಾಪಸ್ ಬರುವಾಗ ಗ್ರಾಮದ 2 ಕಿಲೋಮೀಟರ್ ದೂರ ಇರುವ ಜಮೀನುವೊಂದರಲ್ಲಿ ಕೊಳವೆ ಬಾವಿ ಇದ್ದು, ಆ ಕೊಳವೆ ಬಾವಿಗೆ ಮಗು ಬಿದ್ದು, ಸುಮಾರು 30 ಅಡಿ ಆಳದವರೆಗೂ ಮಗು ಜಾರಿತ್ತು. ವಿಷಯ ತಿಳಿದ ತಕ್ಷಣ ಜಿಲ್ಲಾಧಿಕಾರಿ, ತಹಶೀಲ್ದಾರ್, ಪೋಲಿಸ್ ಅಧಿಕಾರಿಗಳು, ಅಗ್ನಿಶಾಮಕ ದಳದ ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ಮಗುವನ್ನು ರಕ್ಷಿಸಲು ಪ್ರಯತ್ನಿಸಿದರು. ಕಾರ್ಯಾಚರಣೆ ಸಾಧ್ಯವಾಗದ ಕಾರಣ ಮಗು ಕೊಳವೆ ಬಾವಿಯಲ್ಲಿ ಮೃತಪಟ್ಟಿತ್ತು. ಮಗುವನ್ನು ಕಳೆದುಕೊಂಡ ಕುಟುಂಬ, ಪರಿವಾರ ಸಿಗುವ ಎಂಬ ನಿರೀಕ್ಷೆಯಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಅರ್ಜಿ ಸಲ್ಲಿಸಿದರೆ ಇದುವರೆಗೂ ಯಾವುದೇ ಪರಿಹಾರ ಸಿಕ್ಕಿಲ್ಲ.

ಕಡು ಬಡತನದಲ್ಲಿ ಜೀವನ ಸಾಗಿಸುತ್ತಿರುವ ಕುಟುಂಬಕ್ಕೆ ಆಸರೆಯಾಗಿ ನಿಲ್ಲಬೇಕಿದ್ದ ಮಗ ರವಿಕುಮಾರ್ ಸಾವಿನಿಂದ ತುತ್ತು ಅನ್ನಕ್ಕಾಗಿ ಪರದಾಡುವ ಸ್ಥಿತಿ ಎದುರಾಗಿದೆ. ನನಗೆ ವಯಸ್ಸು ಆಗಿದೆ ದಿನನಿತ್ಯ ಕೂಲಿ ನಾಲಿ ಮಾಡಿಕೊಂಡು ಸಂಸಾರ ಸಾಗಿಸಬೇಕಾಗಿದೆ. ಪರಿಹಾರ ಸಿಗುತ್ತದೆ ಎಂದು ಬೆಂಗಳೂರು ಸೇರಿದಂತೆ ಸರ್ಕಾರಿ ಕಚೇರಿಗಳಿಗೆ ಊಟ, ನೀರು, ನಿದ್ದೆ ಇಲ್ಲದೆ ಫುಟ್‌ಪಾತ್ ಮೇಲೆ ಉಪವಾಸ ಮಲಗಿಕೊಂಡು ಅಲೆದಾಡಿದರೂ ಏನು ಪ್ರಯೋಜನವಿಲ್ಲ.

ಮುಖ್ಯಮಂತ್ರಿಯವರ ಜಂಟಿ ಕಾರ್ಯದರ್ಶಿಗಳಿಗೆ ಪತ್ರ

ಮುಖ್ಯಮಂತ್ರಿಯವರ ಜಂಟಿ ಕಾರ್ಯದರ್ಶಿಗಳಿಗೆ ಪತ್ರ

"ನನ್ನ ಅಲೆದಾಟ ನೋಡಿ ಮಾಹಿತಿ ಪಡೆದ ಆಗಿನ ಹಿರಿಯೂರು ಶಾಸಕರಾಗಿದ್ದ ಡಿ. ಸುಧಾಕರ್ 2013, ಜೂನ್ 22ರಂದು ಮುಖ್ಯಮಂತ್ರಿಯವರ ಜಂಟಿ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದರು. ಒಂದೊಂದು ಶಿಫಾರಸು ಪತ್ರಕ್ಕೆ ಅಲೆದಾಟ ಹೆಚ್ಚಾಯಿತೇ ಹೊರತು ಯಾವುದೇ ಫಲ ಸಿಗಲಿಲ್ಲ. ಇನ್ನೂ ನಮಗೆ ಹೊಲ, ಮನೆ ಏನು ಇಲ್ಲ, ಸೊಸೈಟಿಯಿಂದ ಕೊಡುವ ಒಂದೆರೆಡು ಕೆಜಿ ಅಕ್ಕಿ, ಅಷ್ಟೇ ನೋಡಿ ಸ್ವಾಮಿ. ಹೀಗೆ ಆದರೆ ನಮ್ಮ ಜೀವನ ತುಂಬಾ ಕಷ್ಟ ಸ್ವಾಮಿ. ಈ ಕಷ್ಟ ನೋಡಲು ಆಗುತ್ತಿಲ್ಲ. ಹೆಂಡತಿ, ಮೊಮ್ಮಕ್ಕಳಿಗೆ ವಿಷ ಕೊಟ್ಟು, ನಾನು ವಿಷ ಕುಡಿದು ಸಾಯ್ತಿನಿ," ಎಂದು ಅಂಜಿನಪ್ಪ ಕಣ್ಣೀರಿಡುತ್ತಾರೆ.

"ತುತ್ತು ಅನ್ನಕ್ಕಾಗಿ ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿರುವ ನಮಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಅವರನ್ನು ಸಾಲ ಮಾಡಿ ಮದುವೆ ಮಾಡಲಾಗಿದೆ. ಅದರಲ್ಲಿ ಒಬ್ಬರು ಕುಟುಂಬದ ಕಲಹದಿಂದ ಗಂಡನ ಮನೆಗೆ ಹೋಗಿಲ್ಲ, ಇಬ್ಬರ ಹೆಣ್ಣು ಮಕ್ಕಳಿಂದ ಆರು ಜನ ಮೊಮ್ಮಕ್ಕಳಿದ್ದಾರೆ. ಅವರನ್ನು ನಾವೇ ನೋಡಿಕೊಳ್ಳುತ್ತೇವೆ. ಜೀವನ ನಡೆಸಲು ತುಂಬಾ ಕಷ್ಟವಾಗಿದೆ. ನಮಗೆ ಹೋಲ, ಮನೆ ಏನೂ ಇಲ್ಲ. ಯಾರದ್ದೋ ಜಾಗದಲ್ಲಿ ಮುರುಕಲು ಗುಡಿಸಲು ಕಟ್ಟಿಕೊಂಡಿವಿ, ಅದು ಕೂಡ ನಮ್ಮ ಹೆಸರಿಗೆ ಖಾತೆ ಇಲ್ಲ," ಎಂದು ಅಂಜಿನಪ್ಪ ನೋವು ತೋಡಿಕೊಂಡರು.

  ಗೇಮ್ ಪ್ಲ್ಯಾನ್ ಸಕ್ಸಸ್ ಆಗಿದ್ದು ಹೇಗೆ ಅಂತಾ ಹೇಳಿದ ರೋಹಿತ್ | Oneindia Kannada
  ನಮ್ಮ ಗೋಳನ್ನು ಶಾಶ್ವತವಾಗಿ ನಿವಾರಿಸಿ

  ನಮ್ಮ ಗೋಳನ್ನು ಶಾಶ್ವತವಾಗಿ ನಿವಾರಿಸಿ

  "ಹೊಸ ಹೊಸ ಸರ್ಕಾರ ಬಂದಾಗೆಲ್ಲ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿದೆ. ನಮ್ಮ ಕಷ್ಟದ ಪ್ರಯತ್ನಕ್ಕೆ ಫಲ ಸಿಕ್ಕಿಲ್ಲ. ಈಗಿನ ಸಿಎಂ ಬಸವರಾಜ ಬೊಮ್ಮಾಯಿಯವರು ತಾಯಿ ಹೃದಯಿಯಾಗಿ ಯೋಚಿಸಿ ನಮ್ಮ ಗೋಳನ್ನು ಶಾಶ್ವತವಾಗಿ ನಿವಾರಿಸಲಿ. ಕನಿಷ್ಠ ಒಂದಿಷ್ಟು ಭೂಮಿ ನೀಡಿ, ಸ್ವಂತ ಸೂರನ್ನಾದರೂ ವ್ಯವಸ್ಥೆ ಮಾಡಿದರೆ ಉಪವಾಸ, ವನವಾಸ ಓಡಾಡಿದ್ದೂ ಎಲ್ಲಾ ನೋವುಗಳನ್ನು ಮರೆಯಬಹುದು," ಎಂದು ಮಗನನ್ನು ನೆನೆದು ತಾಯಿ ಸುಶೀಲಮ್ಮ ಕಣ್ಣೀರಿಟ್ಟರು.

  ಒಟ್ಟಾರೆಯಾಗಿ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದ ಈ ಕುಟುಂಬ ಕಣ್ಣೀರಲ್ಲಿ ಕೈತೊಳೆಯುತ್ತಿದೆ. ಹೀಗೆ 19 ವರ್ಷಗಳಿಂದ ಅಲೆಯುತ್ತಿರುವ ಕುಟುಂಬದ ಕಡೆಗೆ ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು, ಚಿತ್ರದುರ್ಗ ಜಿಲ್ಲೆಯ ಕೇಂದ್ರ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕ್ಷೇತ್ರದ ಶಾಸಕರು ಗಮನಹರಿಸಿ ಈ ನಿರ್ಗತಿಕ ಬಡ ಕುಟುಂಬಕ್ಕೆ ಪರಿಹಾರ ದೊರಕಿಸಿ ಕೊಡುತ್ತಾರಾ ಕಾದು ನೋಡಬೇಕಿದೆ.

  English summary
  No compensation given to family of 7-year-old boy dies after falling into borewell 19 years back at Dasannana Malige village in Hiriyur taluk of Chitradurga district.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X