ಓಟು ಹಾಕಿದವರ ಬಳಿಯೇ ನೀರು ಕೇಳಿ: ಚಿತ್ರದುರ್ಗ ಶಾಸಕರ ಕೋಪ
ಚಿತ್ರದುರ್ಗ, ಜನವರಿ 30: 'ವಿಧಾನಸಭೆ ಚುನಾವಣೆಯಲ್ಲಿ ನೀವು ನನಗೆ ವೋಟು ಹಾಕಿಲ್ಲ. ಹೀಗಿರುವಾಗ ನಾನ್ಯಾಕೆ ನಿಮ್ಮ ಸಮಸ್ಯೆಗೆ ಸ್ಪಂದಿಸಲಿ? ನೀವು ಯಾರಿಗೆ ಮತ ಹಾಕಿದ್ದೀರೋ ಅವರನ್ನೇ ಕೇಳಿ' !
ಇದು ಚಿತ್ರದುರ್ಗ ಶಾಸಕ ಬಿ ಎಚ್ ತಿಪ್ಪಾರೆಡ್ಡಿ ತಮ್ಮ ಬಳಿ ಅಹವಾಲು ಸಲ್ಲಿಸಿದ ಮಹಿಳೆಯರ ವಿರುದ್ಧ ಹರಿಹಾಯ್ದ ಪರಿ.
ನೀರಿನ ಸಮಸ್ಯೆಯಿಂದ ಬಳಲುತ್ತಿರುವ ಜನರು ಆ ಬಗ್ಗೆ ಶಾಸಕರ ಬಳಿ ಅಹವಾಲು ತೋಡಿಕೊಂಡರೆ, ಶಾಸಕ ತಿಪ್ಪಾರೆಡ್ಡಿ ಅವರ ಮೇಲೆ ತಮಗೆ ಮತ ಹಾಕದ ಕೋಪವನ್ನು ತೀರಿಸಿಕೊಂಡರು. ಈ ಸಮಯದಲ್ಲಿ ಮಾತಿಗೆ ಮಾತು ಬೆಳೆದು ವಾಗ್ವಾದ ನಡೆಯಿತು.

ಚಿತ್ರದುರ್ಗ ತಾಲ್ಲೂಕಿನ ಸೊಂಡೆಕೊಳ ಗ್ರಾಮದಲ್ಲಿ ಬೇಸಿಗೆಗೆ ಮುನ್ನವೇ ಕುಡಿಯುವ ನೀರಿನ ಕೊರತೆ ಎದುರಾಗಿದೆ. ಹನಿ ನೀರಿಗಾಗಿ ಒದ್ದಾಡುತ್ತಿರುವ ಗ್ರಾಮಸ್ಥರು ಹೈರಾಣಾಗಿದ್ದಾರೆ.
ಅಧಿಕಾರಿಗಳಿಂದ ಯಾವ ವ್ಯವಸ್ಥೆಯು ಆಗದೆ ಬೇಸರಗೊಂಡ ಜನರು ಚಿತ್ರದುರ್ಗಕ್ಕೆ ತೆರೆಳಿ ಶಾಸಕ ತಿಪ್ಪಾರೆಡ್ಡಿ ಅವರನ್ನು ಭೇಟಿ ಮಾಡಿ ಸಮಸ್ಯೆ ವಿವರಿಸಿದ್ದರು. ಊರಿಗೆ ಶಾಶ್ವತ ಕುಡಿಯುವ ನೀರು ಒದಗಿಸುವ ಯೋಜನೆ ಮೂಲಕ ಪರಿಹಾರ ಒದಗಿಸಿ ಎಂದು ಕೋರಿಕೊಂಡರು.
ಆದರೆ, ಶಾಸಕ ತಿಪ್ಪಾರೆಡ್ಡಿ ಅವರ ಸಂಕಷ್ಟಕ್ಕೆ ಕಿವಿಗೊಡಲಿಲ್ಲ. ಬದಲಾಗಿ ತಮ್ಮನ್ನು ಭೇಟಿ ಮಾಡಲು ಬಂದ ಮಹಿಳೆಯರ ವಿರುದ್ಧವೇ ಗರಂ ಆದರು.
ಕಳೆದ ಬಾರಿ ನಿಮ್ಮ ಸಮಸ್ಯೆಗೆ ನಾನು ಸ್ಪಂದಿಸಿದ್ದೆ, ಆದರೆ ವಿಧಾನಸಭೆ ಚುನಾವಣೆಯಲ್ಲಿ ನೀವು ನನಗೆ ವೋಟ್ ಹಾಕಿಲ್ಲ, ಹೀಗಾದರೆ ನಾನೆಲ್ಲಿ ಹೋಗಬೇಕು? ಎಂದು ಕೋಪ ಹಾಕಿದರು.
ಇಡೀ ಜಿಲ್ಲೆಯನ್ನೇ ಕಂಟ್ರೋಲ್ನಲ್ಲಿ ಇಟ್ಕೊಂಡಿರೋ ಜಿಲ್ಲಾ ಪಂಚಾಯ್ತಿ ಅಧ್ಯಕ್ಷರ ಪತಿ ಅದೇ ಊರಿನಲ್ಲಿ ಹುಟ್ಟಿದವರು. ಅವರು ನೀರು ಕೊಡೋಕೆ ಬರಲ್ಲ, ಅದೇ ಸರ್ಕಾರದಿಂದ ಅನುದಾನ ಬಿಡುಗಡೆ ಆದಾಗ ಮಾತ್ರ ಬರ್ತಾರೆ ಎಂದು ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.












Click it and Unblock the Notifications