ಹೊಳಲ್ಕೆರೆ; ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಓ, ಎಸ್‌ಡಿಎ ಸಿಬ್ಬಂದಿ
ಚಿತ್ರದುರ್ಗ, ನವೆಂಬರ್; ವ್ಯಕ್ತಿಯೊಬ್ಬರಿಂದ ಇ-ಸ್ವತ್ತು ಮಾಡಿಕೊಡಲು ಲಂಚಕ್ಕೆ ಬೇಡಿಕೆ ಇಟ್ಟು, ಲಂಚ ಸ್ವೀಕರಿಸುತ್ತಿದ್ದ ವೇಳೆ ಪಂಚಾಯಿತಿ ಪಿಡಿಓ ಮತ್ತು ಎಸ್.ಡಿ.ಎ. ಸಿಬ್ಬಂದಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಹೊಳಲ್ಕೆರೆ ತಾಲೂಕಿನಲ್ಲಿ ನಡೆದಿದೆ.
ತಾಲೂಕಿನ ಅಂದನೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಹಾಗೂ ದ್ವಿತೀಯ ದರ್ಜೆಯ ಸಹಾಯಕ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಪಿಡಿಒ ಶಿವಕುಮಾರ್ ಹಾಗೂ ದ್ವಿತೀಯ ದರ್ಜೆಯ ಸಹಾಯಕ ಸೋನು ಬಂಧಿತ ಆರೋಪಿಗಳಾಗಿದ್ದಾರೆ. ಲಂಚದ ರೂಪದಲ್ಲಿ ಪಡೆದ 8 ಸಾವಿರ ಹಣವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಹೊಳಲ್ಕೆರೆ ತಾಲೂಕಿನಲ್ಲಿ ಗಂಜಿಗಟ್ಟೆ ಗ್ರಾಮದ ತಿಪ್ಪೇಸ್ವಾಮಿ ಎಂಬುವರ ಮನೆಯ ಇ-ಸ್ವತ್ತು ಮಾಡಿಕೊಡಲು ಅಧಿಕಾರಿಗಳು 8 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ತಿಪ್ಪೇಸ್ವಾಮಿ ಎನ್ನುವವರು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು.

ಪಿಡಿಒ ಹಾಗೂ ದ್ವಿತೀಯ ದರ್ಜೆಯ ಸಹಾಯಕ ಲಂಚ ಪಡೆಯುವ ಸಂದರ್ಭದಲ್ಲಿ ಲೋಕಾಯುಕ್ತ ಡಿವೈಎಸ್‌ಪಿ ಜಿ. ಮಂಜುನಾಥ್ ನೇತೃತ್ವದಲ್ಲಿ ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಲಂಚಕ್ಕೆ ಬೇಡಿಕೆ ಇಟ್ಟು ಸೆರೆಯಾದ ಪೊಲೀಸ್; ಇತ್ತೀಚೆಗೆ ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿ ಉಪ ಪೋಲಿಸ್ ಠಾಣೆಯ ಪೇದೆಯೊಬ್ಬರು ಲಂಚಕ್ಕೆ ಬೇಡಿಕೆ ಇಟ್ಟು ಲೋಕಾಯುಕ್ತ ಬಲೆಗೆ ಬಿದ್ದಿದ್ದ ಘಟನೆ ನಡೆದಿತ್ತು.
ವ್ಯಕ್ತಿಯೊಬ್ಬರು ಕಳೆದುಕೊಂಡಿದ್ದ ಮೊಬೈಲ್ ಅನ್ನು ಪತ್ತೆ ಹಚ್ಚಿ ಕೊಡುವುದಕ್ಕೆ ಎರಡು ಸಾವಿರ ಲಂಚ ಸ್ವೀಕರಿಸುತ್ತಿದ್ದ ವೇಳೆ ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿ ಹೋಬಳಿಯ ಉಪ ಪೋಲಿಸ್ ಠಾಣೆಯ ಹರೀಶ್ ಲೋಕಾಯುಕ್ತರಿಗೆ ಸಿಕ್ಕಿಬಿದ್ದದ್ದರು.

ಹಿರಿಯೂರು ತಾಲೂಕಿನ ಕಾಟನಾಯಕನಹಳ್ಳಿ ಗ್ರಾಮದ ಆರ್.ಟಿ.ಐ. ಕಾರ್ಯಕರ್ತರೊಬ್ಬರು ಮೊಬೈಲ್ ಕಳೆದುಕೊಂಡಿದ್ದರು. ಮೊಬೈಲ್ ಪೋನ್ ಹುಡುಕಿ ಕೊಡಲು ಹರೀಶ್ ಐದು ಸಾವಿರ ರೂಪಾಯಿಗೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.
ಈ ಬಗ್ಗೆ ಲೋಕಾಯುಕ್ತದಲ್ಲಿ ದೂರು ದಾಖಲಾಗಿತ್ತು. ಮೂರು ಸಾವಿರ ಹಣ ಮೊದಲೇ ಪಡೆದಿದ್ದ ಹರೀಶ್ ಮತ್ತೆ ಎರಡು ಸಾವಿರಕ್ಕೆ ಬೇಡಿಕೆ ಇಟ್ಟು ಹಣ ಪಡೆಯಲು ಸಮಯ ನಿಗದಿ ಮಾಡಿದ್ದರು. ಅದರಂತೆ ಹರೀಶ್ ಮೊಬೈಲ್ ಕಳೆದುಕೊಂಡ ವ್ಯಕ್ತಿಯಿಂದ ಎರಡು ಸಾವಿರ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದರು. ಡಿವೈಎಸ್‌ಪಿ ಜಿ.ಮಂಜುನಾಥ್ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿತ್ತು.












Click it and Unblock the Notifications