ಚಿತ್ರದುರ್ಗ: ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಅಸಮಾಧಾನ, ಸೌಭಾಗ್ಯ ಬಸವರಾಜನ್ ಪಕ್ಷೇತರವಾಗಿ ಕಣಕ್ಕೆ
ಬೆಂಗಳೂರು, ಏಪ್ರಿಲ್ 09: ಕೋಟೆನಾಡು ಚಿತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಬಂಡಾಯದ ಬಿಸಿ ಆರಿದಂತೆ ಕಾಣುತ್ತಿಲ್ಲ. ಪಕ್ಷದಿಂದ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡಿದ ಮೇಲಂತೂ ಆಕಾಂಕ್ಷಿಗಳ ಸಿಟ್ಟು ತೀವ್ರಗೊಂಡಿದೆ. ಟಿಕೆಟ್ ಕೈ ತಪ್ಪಿದ್ದರಿಂದ ಕೆಲವರು ಪಕ್ಷೇತರವಾಗಿ ಕಣಕ್ಕಿಳಿದೇ ತೀರುತ್ತೇವೆ ಎಂದು ಹೇಳಿದ್ದಾರೆ.
ಚಿತ್ರದುರ್ಗದ ಮಾಜಿ ಶಾಸಕ ಎಸ್.ಕೆ. ಬಸವರಾಜನ್ ಪತ್ನಿಯು ಆಗಿರುವ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್ ಅವರು ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಅವರಿಗೆ ಕಾಂಗ್ರೆಸ್ ಬಿಡುಗಡೆ ಮಾಡಿದ ಎರಡನೇ ಪಟ್ಟಿಯಲ್ಲಿ ಅವರ ಹೆಸರು ಇರಲಿಲ್ಲ. ಈ ಕಾರಣದಿಂದ ಅವರು ಪಕ್ಷೇತರರಾಗಿ ಚುನಾವಣಾ ಅಖಾಡಕ್ಕೆ ಇಳಿಯುವುದಾಗಿ ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷ ಚಿತ್ರದುರ್ಗಕ್ಕೆ ಇತ್ತೀಚೆಗೆ ಕೆ.ಸಿ.ವೀರೇಂದ್ರ ಅವರನ್ನು ಸ್ಪರ್ಧೆ ಇಳಿಸುವುದಾಗಿ ಪಟ್ಟಿ ಬಿಡುಗಡೆಯಲ್ಲಿ ಅಧಿಕೃತಪಡಿಸಿದೆ. ಇದರಿಂದ ಕಾಂಗ್ರೆಸ್ ಪಕ್ಷದಲ್ಲಿ ಚಿತ್ರದುರ್ಗದಿಂದ ಟಿಕೆಟ್ ಬಯಸಿದ್ದ ಹಲವು ಆಕಾಂಕ್ಷಿಗಳಿಗೆ ನಿರಾಶೆಯಾಗಿದೆ. ಈ ಕಾರಣದಿಂದ ಬಂಡಾಯದ ಬಿಸಿ ದಿನೇ ದಿನೆ ಹೆಚ್ಚಾಗುತ್ತಿದೆ.
ಏಪ್ರಿಲ್ 14ಕ್ಕೆ ರಘು ಆಚಾರ್ ಜೆಡಿಎಸ್ ಸೇರ್ಪಡೆ
ಚಿತ್ರದುರ್ಗ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿ ಮಾಜಿ ವಿಧಾನಪರಿಷತ್ ಸದಸ್ಯ ರಘು ಆಚಾರ್ ಪಕ್ಷ ತೊರೆದು ಏಪ್ರಿಲ್ 14ರಂದು ಜೆಡಿಎಸ್ ಸೇರ್ಪಡೆಯಾಗಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.ಇದರ ಬೆನ್ನಲ್ಲೇ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿರುವ ಮಾಜಿ ಶಾಸಕ ಎಸ್.ಕೆ. ಬಸವರಾಜನ್ ಪತ್ನಿ ಪಕ್ಷೇತರವಾಗಿ ಸ್ಪರ್ಧೆ ಮಾಡಲಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಎಸ್.ಕೆ. ಬಸವರಾಜನ್, ವಿಧಾನಪರಿಷತ್ ಮಾಜಿ ಸದಸ್ಯ ರಘು ಅವರು ಜೆಡಿಎಸ್‌ನಿಂದ ಸ್ಪರ್ಧಿಸುವುದಾಗಿ ಹೇಳಿದ್ದಾರೆ. ಹೀಗಾಗಿ ನಾನು ಆ ಪಕ್ಷದಿಂದ ಮತ್ತೆ ಟಿಕೆಟ್ ಕೇಳುವುದು ಸರಿಯಲ್ಲ. ಆದ್ದರಿಂದ ನಾನು ಪಕ್ಷೇತರವಾಗಿ ಸ್ಪರ್ಧೆ ಮಾಡಲು ತೀರ್ಮಾನ ಮಾಡಿದ್ದೇನೆ. ನನ್ನ ಬದಲು ಪತ್ನಿ ಸೌಭಾಗ್ಯ ಬಸವರಾಜನ್ ಅವರನ್ನು ಕಣಕ್ಕೆ ಇಳಿಸುತ್ತಿದ್ದೇನೆ ಎಂದು ಮಾಜಿ ಶಾಸಕ ಬಸವರಾಜನ್ ತಿಳಿಸಿದರು.

ಕಾಂಗ್ರೆಸ್ ಗೆಲ್ಲುವುದಿಲ್ಲ: ರಘು ಆಚಾರ್
ಟಿಕೆಟ್ ಘೋಷಣೆ ಬೆನ್ನಲ್ಲೆ ಚಿತ್ರದುರ್ಗದ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಟೋಟಿಸಿದೆ. ಟಿಕೆಟ್ ಆಕಾಂಕ್ಷಿಗಳು ಬಹಿರಂಗವಾಗೇ ಅಸಮಧಾನ ಹೊರ ಹಾಕಿದ್ದಾರೆ. ಮಾಜಿ ಎಂಎಲ್ಸಿ ರಘು ಆಚಾರ್ ನಾಯಕತ್ವದಲ್ಲಿ ಟಿಕೆಟ್ ಆಕಾಂಕ್ಷಿಗಳು ಸಾಮೂಹಿಕವಾಗಿ ಕಾಂಗ್ರೆಸ್ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಈ ಮಧ್ಯೆ, ರಘು ಆಚಾರ್ ಜೆಡಿಎಸ್ ಸೇರಲು ಸಿದ್ಧತೆ ನಡೆಸಿದ್ದಾರೆ ಎಂದೂ ವರದಿಯಾಗಿದೆ. ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರೇ ನನಗೆ ಶಾಸಕ ಸ್ಥಾನಕ್ಕೆ ಸ್ಪರ್ಧಿಸುವಂತೆ ಹೇಳಿದ್ದರು. ಎಂಎಲ್ಸಿ ಬೇಡ, ಶಾಸಕ ಸ್ಥಾನಕ್ಕೆ ಸ್ಪರ್ಧಿಸಿ ಎಂದು ಪಕ್ಷದ ನಾಯಕರು ಸಲಹೆ ನೀಡಿದ್ದರು. ಇದೀಗ ಎರಡನೇ ಪಟ್ಟಿಯಲ್ಲಿ ಬೇರೆಯವರಿಗೆ ಟಿಕೆಟ್ ನೀಡಿದ್ದಾರೆ. ಈ ಮೂಲಕ ಅರ್ಧ ದಾರಿಯಲ್ಲೇ ಕತ್ತು ಹಿಸುಕಿದ್ದಾರೆ ಎಂದ ಅವರು ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದಿಲ್ಲ ಎಂದು ರಘು ಆಚಾರ್ ಭವಿಷ್ಯ ನುಡಿದಿದ್ದಾರೆ. 197 ಸಣ್ಣ ಸಮುದಾಯಗಳಲ್ಲಿ ಒಬ್ಬರೇ ಒಬ್ಬರಿಗೂ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಸಿಕ್ಕಿಲ್ಲ. ಆ ಸಮುದಾಯಗಳ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ಗೌರವ ಇದೆಯೊ, ಇಲ್ಲವೊ ಗೊತ್ತಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.












Click it and Unblock the Notifications