ಕೋಟೆನಾಡು ಚಿತ್ರದುರ್ಗ ಜಿಲ್ಲೆಯ "ಆ" ನಾಲ್ಕು ಶಾಸಕರಿಂದ ಸಚಿವ ಸ್ಥಾನಕ್ಕಾಗಿ ಭಾರಿ ಪೈಪೋಟಿ
ಚಿತ್ರದುರ್ಗ, ಮೇ, 16: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ನಡೆಸಲು ಸ್ಪಷ್ಟ ಬಹುಮತ ಬಂದಿದ್ದು, ಮುಖ್ಯಮಂತ್ರಿ ಸ್ಥಾನ ಆಯ್ಕೆ ಕಗ್ಗಂಟಾಗಿ ಪರಿಣಮಿಸಿದೆ. ಮತ್ತೊಂದು ಕಡೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ನಡುವೆ ಸಿಎಂ ಸ್ಥಾನಕ್ಕೆ ತೀವ್ರ ಪೈಪೋಟಿ ಶುರುವಾಗಿದೆ. ಇತ್ತ ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಐದು ಶಾಸಕರಲ್ಲಿ ಯಾರಿಗೆ ಸಚಿವ ಸ್ಥಾನ ಸಿಗಲಿದೆ ಎಂಬ ತೀವ್ರ ಚರ್ಚೆ ನಡೆಯುತ್ತಿದೆ.
ಮೊದಲ ಬಾರಿಗೆ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿರುವ ಕೆ.ಸಿ.ವೀರೇಂದ್ರ ಪಪ್ಪಿ ಅವರಿಗೆ ಸಚಿವ ಸ್ಥಾನ ಸಿಗುವುದಿಲ್ಲ ಎನ್ನುವ ಮಾತುಗಳು ಕೇಳಿಬರುತ್ತಿವೆ. ಆದರೆ ಹೊಸದುರ್ಗ ಶಾಸಕ ಬಿ.ಜಿ.ಗೋವಿಂದಪ್ಪ, ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ, ಮೊಳಕಾಲ್ಮೂರು ಶಾಸಕ ಎ.ನ್.ವೈ. ಗೋಪಾಲಕೃಷ್ಣ ಹಾಗೂ ಹಿರಿಯೂರು ಶಾಸಕ ಡಿ.ಸುಧಾಕರ್ ನಡುವೆ ಮಂತ್ರಿ ಸ್ಥಾನದ ಲಾಭಿ ಜೋರಾಗಿದೆ.

ಈಗಾಗಲೇ ಚುನಾವಣಾ ಫಲಿತಾಂಶ ಪ್ರಕಟಗೊಂಡ ಬೆನ್ನಲ್ಲೇ ಮೊಳಕಾಲ್ಮೂರು ಶಾಸಕ ಎನ್.ವೈ. ಗೋಪಾಲಕೃಷ್ಣ ಅವರು ನಾನು ಹಿರಿಯ ಶಾಸಕ, ಮಂತ್ರಿ ಸ್ಥಾನ ಕೇಳುವ ಹಕ್ಕಿದೆ ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದರು.
ಮತ್ತೊಂದು ಕಡೆ ಹೊಸದುರ್ಗ ವಿಧಾನಸಭಾ ಕ್ಷೇತ್ರದ ಶಾಸಕ ಬಿ.ಜಿ.ಗೋವಿಂದಪ್ಪ ಅವರು ನಾಲ್ಕು ಬಾರಿ ಶಾಸಕರಾಗಿ ಆಯ್ಕೆ ಆಗಿದ್ದಾರೆ. ಇದು ನನ್ನ ಕೊನೆಯ ಚುನಾವಣೆ ಆಗಿದೆ. ಹಿಂದುಳಿದ ವರ್ಗಗದಡಿಯಲ್ಲಿ ನನಗೆ ಸಚಿವ ಸ್ಥಾನ ಕೇಳುವ ಅವಕಾಶ ಇದೆ. ಹಾಗಾಗಿ ನಾನು ಕೂಡ ಸಚಿವ ಆಕಾಂಕ್ಷಿ ಆಗಿದ್ದೇನೆ ಎಂದು ಬಿ.ಜಿ.ಗೋವಿಂದಪ್ಪ ಹೇಳಿದ್ದಾರೆ.
ಇನ್ನು 2008ರಲ್ಲಿ ಹಿರಿಯೂರು ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪ್ರಚಂಡ ಗೆಲುವು ಸಾಧಿಸಿ, ಬಿಜೆಪಿ ಸರ್ಕಾರದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿ ಆಡಳಿತ ನಡೆಸಿದ್ದ ಶಾಸಕ ಡಿ.ಸುಧಾಕರ್, 2013ರಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಪಕ್ಷದ ಶಾಸಕರಾಗಿ ಆಯ್ಕೆ ಆಗಿದ್ದರು.
ನಂತರ ಅವರು 2018ರಲ್ಲಿ ಸೋಲು ಕಂಡಿದ್ದರು. ಇದೀಗ ಮೊನ್ನೆ ನಡೆದ ಚುನಾವಣೆಯಲ್ಲಿ ಮತ್ತೆ ಗೆಲುವು ಸಾಧಿಸಿದ್ದಾರೆ. ಇತ್ತ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಬೆಂಬಲಿಗರ ಬಳಗದಲ್ಲಿ ಗುರುತಿಸಿಕೊಂಡಿದ್ದು, ಅಲ್ಪಸಂಖ್ಯಾತರ ಕೋಟಾದ ಅಡಿಯಲ್ಲಿ ಮಂತ್ರಿ ಸ್ಥಾನ ಸಿಗಬಹುದು ಎಂಬ ಲೆಕ್ಕಾಚಾರದಲ್ಲಿ ಡಿ.ಸುಧಾಕರ್ ಇದ್ದಾರೆ.
ಇನ್ನು ಚಳ್ಳಕೆರೆ ವಿಧಾನಸಭಾ ಕ್ಷೇತ್ರದಲ್ಲಿ 2013, 2018 ಮತ್ತು 2023ರ ಚುನಾವಣೆಯಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿರುವ ಶಾಸಕ ಟಿ.ರಘುಮೂರ್ತಿ ಸಚಿವ ಸ್ಥಾನದ ರೇಸ್‌ನಲ್ಲಿದ್ದಾರೆ. ಕಳೆದ 2018ರ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಆರು ಕ್ಷೇತ್ರಗಳಲ್ಲಿ ಬಿಜೆಪಿ ಐದು ಸ್ಥಾನ ಗೆಲುವು ಸಾಧಿಸಿತ್ತು. ಚಳ್ಳಕೆರೆ ಕ್ಷೇತ್ರದಲ್ಲಿ ಶಾಸಕರಾಗುವ ಮೂಲಕ ಕಾಂಗ್ರೆಸ್ ಪಕ್ಷದ ಮರ್ಯಾದೆ ಉಳಿಸಿದ ಕೀರ್ತಿ ರಘುಮೂರ್ತಿ ಅವರಿಗೆ ಸಲ್ಲುತ್ತದೆ.
ಕ್ಷೇತ್ರದಲ್ಲಿ ಉತ್ತಮ ಅಭಿವೃದ್ಧಿಯನ್ನು ಮಾಡುವ ಮೂಲಕ ಹೆಸರು ಪಡೆದಿರುವ ಟಿ. ರಘುಮೂರ್ತಿ ಅವರಿಗೆ ಮಂತ್ರಿ ಸ್ಥಾನ ನೀಡುವಂತೆ ಒತ್ತಾಯ ಕೇಳಿಬರುತ್ತಿವೆ.
ಮತ್ತೊಂದೆಡೆ ಎಚ್.ಆಂಜನೇಯ ಅವರು ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದಲ್ಲಿ 2013ರಲ್ಲಿ ಗೆಲುವು ಸಾಧಿಸಿ ಸಮಾಜ ಕಲ್ಯಾಣ ಇಲಾಖೆಯ ಸಚಿವರಾಗಿದ್ದರು. ನಂತರ ನಡೆದ 2018 ಮತ್ತು 2023ರ ವಿಧಾನಸಭಾ ಚುನಾವಣೆಯಲ್ಲಿ ಎಚ್.ಆಂಜನೇಯ ಅವರು ಪರಾಜಿತಗೊಂಡಿದ್ದಾರೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಆಂಜನೇಯ ಅವರಿಗೆ ದಲಿತ ನಾಯಕ ಕೋಟಾದಲ್ಲಿ ಎಂಎಸ್‌ಸಿ ಸ್ಥಾನ ನೀಡಿ ಸಚಿವರನ್ನಾಗಿ ಮಾಡಿಕೊಂಡರೂ ಆಶ್ಚರ್ಯ ಪಡಬೇಕಾಗಿಲ್ಲ.
ಒಟ್ಟಾರೆಯಾಗಿ ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಮಂತ್ರಿ ಸ್ಥಾನದ ಲಾಭಿ ಜೋರಾಗಿದ್ದು, ಯಾರಿಗೆ ಸಚಿವ ಸಂಪುಟದಲ್ಲಿ ಸ್ಥಾನ ಸಿಗಲಿದೆ ಎಂಬುದನ್ನು ಕಾದುನೋಡಬೇಕಿದೆ.












Click it and Unblock the Notifications