ಬಿಜೆಪಿ ಟಿಕೆಟ್ ಕೈ ತಪ್ಪಿದ ಬೆನ್ನಲ್ಲೇ ದಿಢೀರ್ ಗಾಲಿ ಜನಾರ್ದನ ರೆಡ್ಡಿ ಭೇಟಿಯಾದ ಗೂಳಿಹಟ್ಟಿ ಶೇಖರ್
ಹೊಸದುರ್ಗ, ಏಪ್ರಿಲ್, 12: 2023ರ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಂಗಳವಾರ ರಾತ್ರಿ (ಏಪ್ರಿಲ್ 11) ಬಿಜೆಪಿ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಇತ್ತ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ ಗೂಳಿಹಟ್ಟಿ ಡಿ ಶೇಖರ್‌ಗೆ ಟಿಕೆಟ್ ಮಿಸ್ ಆಗಿದ್ದು, ಇವರ ಬದಲಿಗೆ ಎಸ್. ಲಿಂಗಮೂ೧ರ್ತಿ ಅವರಿಗೆ ಟಿಕೆಟ್ ನೀಡಿದೆ. ಇದರಿಂದ ಗೂಳಿಹಟ್ಟಿ ಡಿ ಶೇಖರ್ ಮುನಿಸಿಕೊಂಡಿದ್ದು, ಅವರು ಜನಾರ್ದನ ರೆಡ್ಡಿ ಅವರ ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ ಸೇರ್ಪಡೆ ಆಗುವ ಸಾಧ್ಯತೆ ಇದೆ ಎನ್ನುವ ಮಾತುಗಳು ಕೇಳಿಬಂದಿವೆ.
ಬಿಜೆಪಿಯಿಂದ ಮಂಗಳವಾರ ರಾತ್ರಿ 189 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಪಟ್ಟಿಯಲ್ಲಿ ತಮ್ಮ ಹೆಸರು ಇಲ್ಲದಿರುವುದನ್ನು ಗಮನಿಸಿದ ಗೂಳಿಹಟ್ಟಿ ಶೇಖರ್ ಬೆಂಗಳೂರಿನಲ್ಲಿರುವ ಜನಾರ್ದನ ರೆಡ್ಡಿ ಮನೆಗೆ ತೆರಳಿ ಕೆಲ ಹೊತ್ತು ಅವರ ಜೊತೆ ಮಾತುಕತೆ ನಡೆಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಟಿಕೆಟ್ ಕೊಟ್ಟರೆ ಬಿಜೆಪಿಯಿಂದ ಸ್ಪರ್ಧೆ ಮಾಡುತ್ತೇನೆ. ಇಲ್ಲದಿದ್ದರೆ ಸ್ವತಂತ್ರವಾಗಿ ಸ್ಪರ್ಧೆಗೆ ಇಳಿಯುತ್ತೇನೆ. ಮುಂದಿನ ಲೋಕಸಭೆ ಚುನಾವಣೆಗೂ ಸ್ಪರ್ಧಿಸುತ್ತೇನೆಂದು ಎಂದು ನಾಲ್ಕೈದು ತಿಂಗಳಿನಿಂದ ಹೇಳಿಕೊಂಡೇ ಬಂದಿದ್ದಾರೆ.

ಹೊಸದುರ್ಗ ವಿಧಾನಸಭೆ ಕ್ಷೇತ್ರ ಸಾಮಾನ್ಯ ಆಗಿದ್ದರೂ ಪರಿಶಿಷ್ಟ ಜಾತಿಗೆ ಸೇರಿರುವ ಗೂಳಿಹಟ್ಟಿ ಶೇಖರ್ ಇಲ್ಲಿ ಎರಡು ಬಾರಿ ಗೆಲುವು ಸಾಧಿಸಿದ್ದರು. 2018ರಲ್ಲಿ ಗೆಲುವು ಸಾಧಿಸಿದ್ದ ಗೂಳಿಹಟ್ಟಿ ಶೇಖರ್ ಸಹಜವಾಗಿ ಬಿಜೆಪಿಯಿಂದ ಮರು ಸ್ಪರ್ಧೆಗೆ ಬಯಸಿದ್ದರು. ಕಳೆದ ನಾಲ್ಕು ವರ್ಷಗಳಲ್ಲಿ ತಾಲೂಕು ಬಿಜೆಪಿಯಲ್ಲಿ ಅನೇಕ ರಾಜಕೀಯ ಬದಲಾವಣೆಗಳು ಆಗಿದ್ದವು. ಇತ್ತೀಚೆಗೆ ಪಕ್ಷದೊಳಗಿನ ಮುಸುಕಿನ ಗುದ್ದಾಟ ಆಕಾಂಕ್ಷಿಗಳ ಹೆಚ್ಚಳಕ್ಕೆ ಕಾರಣ ಆಗಿತ್ತು.
6 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಣೆ
ಇತ್ತ ಹಿರಿಯೂರು ಕೆ.ಪೂರ್ಣಿಮಾ ಶ್ರೀನಿವಾಸ್, ಚಿತ್ರದುರ್ಗ ಜಿ.ಹೆಚ್.ತಿಪ್ಪಾರೆಡ್ಡಿ, ಮೊಳಕಾಲ್ಮೂರು ಎಸ್.ತಿಪ್ಪೇಸ್ವಾಮಿ, ಹೊಳಲ್ಕೆರೆ ಎಂ.ಚಂದ್ರಪ್ಪ, ಚಳ್ಳಕೆರೆ ಅನಿಲ್ ಕುಮಾರ್ (ಹೊಸಮುಖಗಳು) ಇವರಿಗೆ ಟಿಕೆಟ್ ನೀಡಿದೆ. 2008ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಕಂಡು ಬಿಜೆಪಿ ಸರ್ಕಾರ ರಚನೆಗೆ ಕಾರಣವಾಗಿದ್ದ ಗೂಳಿಹಟ್ಟಿ ಶೇಖರ್, 2013ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ 37,999 ಮತ ಪಡೆದು ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಸೋಲುಂಡಿದ್ದರು. ನಂತರ 2018ರಲ್ಲಿ ಬಿಜೆಪಿ ಟಿಕೆಟ್ ಪಡೆದು ವಿಜಯಶಾಲಿ ಆಗಿದ್ದರು.
ಬಳಿಕ 2023ರ ವಿಧಾನಸಭಾ ಚುನಾವಣೆಗೆ ಟಿಕೆಟ್ ನಿರೀಕ್ಷೆಯಲ್ಲಿದ್ದ ಗೂಳಿಹಟ್ಟಿ ಡಿ. ಶೇಖರ್‌ಗೆ ಹೈಕಮಾಂಡ್ ಗುನ್ನ ಇಟ್ಟಿದೆ. ಖನಿಜ ನಿಗಮ ಅಧ್ಯಕ್ಷರಾಗಿದ್ದ ಎಸ್. ಲಿಂಗಮೂರ್ತಿ ಹಾಗೂ ಗೂಳಿಹಟ್ಟಿ ನಡುವೆ ಆಗಾಗ ಟಿಕೆಟ್ ಪೈಪೋಟಿ ನಡೆಯುತ್ತಿತ್ತು. ಏನೆ ಆದರೂ ನನಗೆ ಟಿಕೆಟ್ ಸಿಗುತ್ತದೆ ಎಂಬ ವಿಶ್ವಾಸದಲಿದ್ದ ಗೂಳಿಹಟ್ಟಿ ಬದಲಿಗೆ ಲಿಂಗಮೂರ್ತಿಗೆ ಹೈಕಮಾಂಡ್ ಸೊಪ್ಪು ಹಾಕಿದೆ.
ಆದ್ದರಿಂದ ಇದೀಗ ಶೇಖರ್‌ಗೆ ಟಿಕೆಟ್ ಕೈ ತಪ್ಪಿದ್ದು, ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸಾಧ್ಯತೆಯಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಕೆಲವು ತಿಂಗಳ ಹಿಂದೆಯಷ್ಟೇ ಗೂಳಿಹಟ್ಟಿ ಶೇಖರ್, ಟಿಕೆಟ್ ನೀಡದಿದ್ದರೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ ಎಂದು ಹೇಳಿಕೆ ನೀಡಿದ್ದರು. ಇದೀಗ ಟಿಕೆಟ್ ಕೈ ತಪ್ಪಿದ್ದು, ಅವರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಅನ್ನುವುದನ್ನು ಕಾದುನೋಡಬೇಕಿದೆ.
ಹೀಗೆ ಹೊಸದುರ್ಗ ಕ್ಷೇತ್ರದ ಬಿಜೆಪಿ ಟಿಕೆಟ್ ವಿಚಾರವಾಗಿ ಹಲವು ಬದಲಾವಣೆಗಳು ಆಗಿದ್ದು, ಬಿಜೆಪಿಯಿಂದ ಟಿಕೆಟ್ ಸಿಗದಿದ್ದಕ್ಕೆ ಮುನಿಸಿಕೊಂಡ ಗೂಳಿಹಟ್ಟಿ ಶೇಖರ್ ಜನಾರ್ದನ ರೆಡ್ಡಿಯವರ ಪಕ್ಷದ ಕಡೆಗೆ ಒಲವು ತೋರಿಸಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿವೆ. ಅಲ್ಲದೇ ಇದೀಗ ಅವರು ದೀಢೀರ್ ಜನಾರ್ದನ ರೆಡ್ಡಿಯವರನ್ನು ಭೇಟಿ ಮಾಡಿರುವುದು ಕೂಡ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.












Click it and Unblock the Notifications