ಸೋನೆ ಮಳೆಯಲ್ಲೂ ಮೊಣಕಾಲ್ಮುರಿನಿಂದ ಭಾರತ್ ಜೋಡೋ ಯಾತ್ರೆ ಪುನಾರಂಭ
ಚಿತ್ರದುರ್ಗ, ಅಕ್ಟೋಬರ್ 13: ರಾಹುಲ್ ಗಾಂಧಿ ನೇತೃತ್ವದಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಕಾಂಗ್ರೆಸ್ ಕೈಗೊಂಡಿರುವ ಭಾರತ್ ಜೋಡೋ ಪಾದಯಾತ್ರೆ ರಾಜ್ಯದಲ್ಲಿ 14ನೇ ದಿನಕ್ಕೆ ಕಾಲಿಟ್ಟಿದೆ. ಗುರುವಾರ ಚಿತ್ರದುರ್ಗದ ಮೊಣಕಾಲ್ಮುರು ತಾಲೂಕಿನ ಬೊಮ್ಮನಗೊಂಡನ ಹಳ್ಳಿಯಿಂದ ಭಾರತ್ ಜೋಡೋ ಯಾತ್ರೆ ಆರಂಭವಾಗಿದೆ.
ಬುಧವಾರ ರಾತ್ರಿ ಮಳೆಯ ನಡುವೆ ಹೆಜ್ಜೆ ಹಾಕಿದ್ದ ರಾಹುಲ್ ಗಾಂಧಿ ಗುರುವಾರ ಕೂಡ ತುಂತುರು ಮಳೆಯ ನಡುವೆ ಪಾದಯಾತ್ರೆಯನ್ನು ಮುಂದುವರಿಸಿದ್ದಾರೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ನೂರಾರು ಕಾಂಗ್ರೆಸ್ ಕಾರ್ಯಕರ್ತರು ಸಾಥ್ ನೀಡಿದ್ದಾರೆ.
14ನೇ ದಿನ ಮೊಣಕಾಲ್ಮುರಿನ ಬೊಮ್ಮನಗೊಂಡನ ಹಳ್ಳಿಯ ಬಿಜೆ ಕೆರೆ ಅಂಡರ್ ಪಾಸ್‌ನಿಂದ ಗುರುವಾರ ಪಾದಯಾತ್ರೆ ಆರಂಭಗೊಂಡಿದೆ. ಬೆಳಗ್ಗೆ 11 ಗಂಟೆಗೆ ಕೋನಸಾಗರ ಗ್ರಾಮದಲ್ಲಿ ವಿರಾಮ ತೆಗೆದುಕೊಂಡಿದೆ.

ಸಂಜೆ 4 ಗಂಟೆಗೆ ಕೋನಸಾಗರದಿಂದ ಪಾದಯಾತ್ರೆ ಪುನಾರಂಭಗೊಂಡು ಸಂಜೆ 7ಕ್ಕೆ ಮೊಣಕಾಲ್ಮುರಿನ ದಿವ್ಯಾನಗರದ ದೀಪಿಕಾ ಶಾಲೆಯಲ್ಲಿ ರಾತ್ರಿ ವಿರಾಮ ತೆಗೆದುಕೊಳ್ಳಲಿದ್ದಾರೆ. ರಾತ್ರಿ ರಾಂಪುರದ ನ್ಯೂ ಹೋಟೆಲ್ ಅಮೃತ ಲಾಡ್ಜ್ ಬಳಿಯ ಮೈದಾನದಲ್ಲಿ ಉಳಿದುಕೊಳ್ಳಲಿದ್ದಾರೆ.
ಪಾದಯಾತ್ರೆಯು ಬಿ.ಜಿ. ಕೆರೆ ಮೂಲಕ ಮೊಗಲಹಳ್ಳಿ, ಕೊಂಡ್ಲಹಳ್ಳಿ, ಕೋನಸಾಗರ, ನೇರ್ಲಹಳ್ಳಿ ಕ್ರಾಸ್, ಮರ್ಲಹಳ್ಳಿಗಳ ಮೂಲಕ ಪಟ್ಟಣದ ಕೆಇಬಿ ವೃತ್ತ ತಲುಪಲಿದೆ. ರಾಹುಲ್ ಗಾಂಧಿ ನೇಕಾರರ ಜತೆ ಸಂವಾದ ನಡೆಸುವ ಕಾರ್ಯಕ್ರಮ ರದ್ದಾಗಿದೆ. ಹಾನಗಲ್ ರಸ್ತೆಯ ಕಾಂಗ್ರೆಸ್ ಕಚೇರಿಯನ್ನು ರಾಹುಲ್ ಗಾಂಧಿ ಉದ್ಘಾಟಿಸಲಿದ್ದಾರೆ.
ತಾಲೂಕಿನಲ್ಲಿಎರಡು ಪಾಯಿಂಟ್‌ಗಳನ್ನು ಗುರುತಿಸಲಾಗಿದೆ. ರಾಹುಲ್ ಗಾಂಧಿ ಜತೆಯಲ್ಲಿಸುಮಾರು 300 ಜನರ ತಂಡ ಹಾಗೂ 50 ಕ್ಕೂ ಹೆಚ್ಚು ಕಂಟೈನರ್‌ಗಳು, ನೂರಾರು ವಾಹನಗಳು ಆಗಮಿಸಲಿವೆ. ಪಾದಯಾತ್ರೆಯಲ್ಲಿ ಬರುವ ಜನರಿಗೆ ಊಟದ ವ್ಯವಸ್ಥೆಯನ್ನು ಪಾದಯಾತ್ರೆಯಲ್ಲಿ ಕರೆತಂದ ಅಡುಗೆಯವರೇ ಮಾಡಿಕೊಳ್ಳಲಿದ್ದಾರೆ.

ಬಳ್ಳಾರಿಯಲ್ಲಿ ಸಮಾವೇಶ; ಬಳ್ಳಾರಿಯಲ್ಲಿ ಬೃಹತ್ ಸಮಾವೇಶ ಆಯೋಜಿಸಿರುವುದರಿಂದ ಜಿಲ್ಲೆಯ ಹಿರಿಯೂರು ಹಾಗೂ ಚಳ್ಳಕೆರೆಯಲ್ಲಿಪಾಲ್ಗೊಂಡಿರುವ ಜನರ ಜತೆ ಎನ್‌ಎಸ್‌ಯುಐ, ಸೇವಾದಳ, ಮಹಿಳಾ ಕಾಂಗ್ರೆಸ್ ಪದಾಧಿಕಾರಿಗಳು ಸೇರಿದಂತೆ ಚಿತ್ರದುರ್ಗ, ಜಗಳೂರು, ಮಾಯಕೊಂಡದಿಂದ ತಲಾ 5 ಸಾವಿರ ಜನ ಬರಲಿದ್ದಾರೆ.
ಇನ್ನು ಮಾಜಿ ಸಚಿವ ಸತೀಶ್ ಜಾರಕಿಹೊಳಿ ತನ್ನ ಕ್ಷೇತ್ರದಿಂದ 750 ಬಸ್‌ಗಳ ಮೂಲಕ ಜನರನ್ನು ಕರೆತರುವುದಾಗಿ ತಿಳಿಸಿದ್ದಾರೆ. ಇವರ ಜತೆ ಲಕ್ಷ್ಮಿ ಹೆಬ್ಬಾಳ್ಕರ್, ವೀಣಾ ಕಾಶಪ್ಪನವರ್ ಕೂಡಾ ಜನರನ್ನು ಕರೆತರಲಿದ್ದು, ಸುಮಾರು 60 ಸಾವಿರಕ್ಕೂ ಹೆಚ್ಚು ಜನ ತಾಲೂಕಿನ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಲಿದ್ದಾರೆ.












Click it and Unblock the Notifications