ಚಿತ್ರದುರ್ಗದಲ್ಲಿ ಮಳೆ, ಒಂದು ಗಂಟೆ ತಡವಾಗಿ ಆರಂಭವಾದ ಭಾರತ್ ಜೋಡೋ ಯಾತ್ರೆ
ಚಿತ್ರದುರ್ಗ, ಅಕ್ಟೋಬರ್ 11 : ಎಐಸಿಸಿ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯ 12ನೇ ದಿನದ ಪಾದಯಾತ್ರೆ ಮಂಗಳವಾರ ಒಂದು ಗಂಟೆ ತಡವಾಗಿ ಆರಂಭವಾಗಿದೆ.
ಮಂಗಳವಾರ ಮಳೆ ಬಂದ ಹಿನ್ನೆಲೆಯಲ್ಲಿ ಪಾದಯಾತ್ರೆ ನಿಗದಿತ ಸಮಯಕ್ಕಿಂತ ಒಂದು ಗಂಟೆ ತಂಡವಾಗಿ ಆರಂಭಗೊಂಡಿದೆ. ಹಿರಿಯೂರು ತಾಲ್ಲೂಕಿನ ಹರ್ತಿಕೋಟೆ ಗ್ರಾಮದಿಂದ ಯಾತ್ರೆ ಸಾಗಿ ಮುಂದು ಚಳ್ಳಕೆರೆ ತಾಲೂಕಿನ ಸಾಣಿಕೆರೆ ಬಳಿ ಇರುವ ಚೇತನ್ ಹೋಟೆಲ್ ಬಳಿ ವಿಶ್ರಾಂತಿ ಪಡೆಯಲಿದೆ.
ಹಿರಿಯೂರಿನ ಹರ್ತಿಕೋಟೆಯಿಂದ ಮಂಗಳವಾರ ಶುರುವಾಗಿರುವ ಪಾದಯಾತ್ರೆ ಆರಂಭವಾಗಿದೆ. 11ಗಂಟೆಗೆ ಸಾಣಿಕೆರೆಯಲ್ಲಿ ವಿಶ್ರಾಂತಿ ತೆಗೆದುಕೊಳ್ಳುಲಿದ್ದು, ಸಂಜೆ 4 ಗಂಟೆಗೆ ಸಾಣಿಕೆರೆಯಿಂದ ಮತ್ತೆ ಪುನಾರಂಭಗೊಳ್ಳಲಿದೆ. 7 ಗಂಟೆಗೆ ಸಂಜೆ ಚಿತ್ರದುರ್ಗದ ಸಿದ್ದಾಪುರದ ಸಮರ್ಥ್ ನಗರದ ಬಳಿ ವಿಶ್ರಾಂತಿ ತೆಗೆದುಕೊಳ್ಳಲಿದ್ದು, ಸಿದ್ದಾಪುರದ ಸಾಯಿ ಗಣೇಶ್ ಲೇಔಟ್ ನಲ್ಲಿ ತಂಗಲಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಹರ್ತಿಕೋಟೆ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್ ಪ್ರತಿ ದಿನವೂ 6 ಗಂಟೆಗೆ ನಮ್ಮ ಪಾದಯಾತ್ರೆ ಆರಂಭವಾಗುತ್ತಿತ್ತು. ಆದರೆ ಮಳೆಯಿಂದ ಒಂದು ಗಂಟೆ ತಡವಾಗಿ ಆರಂಭವಾಗಿದೆ. ಇನ್ನು ಮುಲಾಯಂ ಸಿಂಗ್ ಯಾದವ್ ಅವರ ಅಂತ್ಯಕ್ರಿಯೆಯಲ್ಲಿ ಬಾಗಿಯಾಗುವ ಕುರಿತು ಚರ್ಚೆ ನಡೆಯಿತು. ರಾಹುಲ್ ಗಾಂಧಿಯವರು ಭಾಗಿಯಾಗಬೇಕು ಎಂದು ಒತ್ತಡ ಇತ್ತು.
ಆದರೆ ಕೊನೆಗೆ ಸೋನಿಯಾ ಗಾಂಧಿ ಮತ್ತು ಪ್ರಿಯಾಂಕ ಗಾಂಧಿ ಅವರಿಗೆ ಭಾಗವಹಿಸುವಂತೆ ಮನವಿ ಮಾಡಲಾಗಿದೆ. ಹೀಗಾಗಿ ಪ್ರಿಯಾಂಕ ಗಾಂಧಿ ಅವರು ಮುಲಾಯಂ ಸಿಂಗ್ ಅಂತ್ಯಕ್ರಿಯೆಯಲ್ಲಿ ಭಾಗಿಯಾಗುತ್ತಾರೆ. ಯಾತ್ರೆ ವೇಳೆ ಮುಲಾಯಂ ಸಿಂಗ್ ಯಾದವ್ ಅವರಿಗೆ ಗೌರವ ಸಲ್ಲಿಸಲಾಗುತ್ತದೆ. ರಾಷ್ಟ್ರ ರಾಜಕಾರಣದಲ್ಲಿ ಮುಲಾಯಂ ಸಿಂಗ್ ಯಾದವ್ ಅವರು ದೊಡ್ಡ ಪಾತ್ರ ವಹಿಸಿದ್ದವರು ಎಂದು ಹೇಳಿದರು.
ಭಾರತ್ ಜೋಡೋ ಪಾದಯಾತ್ರೆ ಆರಂಭವಾದ ಬೆನ್ನಲ್ಲೇ ರಾಹುಲ್ ಗಾಂಧಿ ನಾಲ್ಕು ಮಕ್ಕಳು ಜೊತೆ ಹೆಜ್ಜೆ ಹಾಕಿದ್ದು ಇಂದಿನ ವಿಶೇಷವಾಗಿತ್ತು. ಹಿರಿಯೂರು ತಾಲ್ಲೂಕಿನ ಹರ್ತಿಕೋಟೆ ಗ್ರಾಮದಿಂದ ಯಾತ್ರೆ ಮುಂದೆ ಸಾಗಿತು. ಈ ಸಂದರ್ಭದಲ್ಲಿ ನಾಲ್ಕು ಚಿಕ್ಕ ಮಕ್ಕಳು ರಾಹುಲ್ ಗಾಂಧಿ ಜೊತೆಗೆ ಹೆಜ್ಜೆ ಹಾಕಿದರು.

ನಂತರ ಪಾದಯಾತ್ರೆಯಲ್ಲಿ ಜೊತೆಯಾದ ಕೂಲಿ ಕಾರ್ಮಿಕ ಮಹಿಳೆಯರೂ ಕೂಡ ರಾಹುಲ್ ಗಾಂಧಿ ಜೊತೆಗೆ ಹೆಜ್ಜೆ ಹಾಕಿ ಗಮನ ಸೆಳೆದರು. ಹಿರಿಯೂರು ತಾಲ್ಲೂಕಿನ ಗೊಲ್ಲಹಳ್ಳಿ ಗ್ರಾಮದ ಬಳಿ ಯಾತ್ರೆ ಸಾಗುವ ವೇಳೆ ಕೂಲಿ ಕಾರ್ಮಿಕ ಮಹಿಳೆಯರ ಜೊತೆಗೆ ಚರ್ಚೆ ನಡೆಸಿದರು.
ಈ ಕುರಿತು ಮಾತನಾಡಿದ ಕೂಲಿ ಕಾರ್ಮಿಕರು, "ರಾಹುಲ್ ಗಾಂಧಿ ಜೊತೆಗೆ ಮಾತನಾಡಿದ್ದು ತುಂಬಾ ಖುಷಿಕೊಟ್ಟಿದೆ. ಅವರನ್ನು ನೋಡುವುದಕ್ಕಾಗಿ ಬೆಳಗ್ಗೆ ಆಗಮಿಸಿ ದೂರದಲ್ಲಿ ನಿಂತಿದ್ದೆವು. ಅವರೇ ನಮ್ಮನ್ನು ಕರೆದು ಮಾತನಾಡಿಸಿದರು. ಈ ವೇಳೆ ನಮ್ಮ ಕೂಲಿ ಎಷ್ಟು, ಮಕ್ಕಳು ಸಮೇತ ಬಂದಿದ್ದಿರಾ ಎಂದು ವಿಚಾರಿಸಿದರು. ನಾವು ನಮ್ಮಗೆ ದಿನಕ್ಕೆ 500 ರೂ ಕೂಲಿ ಎಂದು ಹೇಳಿದೆವು, ಹಿಂದಿ ಭಾಷೆಯಲ್ಲಿ ನಮ್ಮ ಜೊತೆ ಮಾತಾಡಿದರು" ಎಂದು ಮಹಿಳೆಯರು ಮಾಹಿತಿಯನ್ನು ಹಂಚಿಕೊಂಡರು.












Click it and Unblock the Notifications