ರಾಜ್ಯದ 224 ಕ್ಷೇತ್ರಗಳಲ್ಲೂ ಜೆಡಿಯು ಸ್ಪರ್ಧಿಸಲಿದೆ: ಚಿತ್ರದುರ್ಗದಲ್ಲಿ ಜೆ. ಮಾಹಿಮಾ ಪಟೇಲ್ ಸ್ಪಷ್ಟನೆ
ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ, ಅಭ್ಯರ್ಥಿಗಳ ಸ್ಪರ್ಧೆ ಬಗ್ಗೆ ಜೆಡಿಯು ರಾಜ್ಯಾಧ್ಯಕ್ಷ ಮಹಿಮಾ ಜೆ. ಪಟೇಲ್ ಹೇಳಿದ್ದೇನು?
ಚಿತ್ರದುರ್ಗ, ಫೆಬ್ರವರಿ, 02: ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ 224 ಕ್ಷೇತ್ರಗಳಲ್ಲಿ ಜೆಡಿಯು ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ ಎಂದು ರಾಜ್ಯಾಧ್ಯಕ್ಷ ಮಹಿಮಾ ಜೆ. ಪಟೇಲ್ ಚಿತ್ರದುರ್ಗದಲ್ಲಿ ತಿಳಿಸಿದರು.
ಚಿತ್ರದುರ್ಗ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಇತ್ತ ಚಿತ್ರದುರ್ಗ ಜಿಲ್ಲೆಯಲ್ಲಿ ಸ್ಪರ್ಧೆ ಮಾಡಲು ನಮ್ಮ ಪಕ್ಷದ ಟಿಕೆಟ್ ಆಕಾಂಕ್ಷಿಗಳಿದ್ದಾರೆ ಎಂದರು. ಇಂದು ರಾಜ್ಯದಲ್ಲಿ ರಾಜಕಾರಣ ಗೊತ್ತಿಲ್ಲದವರು ರಾಜಕಾರಣ ಮಾಡುತ್ತಿದ್ದಾರೆ. ಆದರೆ ಸಂಯುಕ್ತ ಜನತಾದಳ ಅದಕ್ಕೆ ಸೇವೆ ಎಂಬ ಹೆಸರು ನೀಡಿ ರಾಜಕಾರಣ ಮಾಡುತ್ತಿದೆ. ಬೇರೆ ಬೇರೆ ಕ್ಷೇತ್ರ ಹಾಗೂ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಅಭ್ಯರ್ಥಿಗಳಿಗಾಗಿ ಹುಡುಕಾಟ ಆರಂಭಿಸಲಾಗಿದೆ. ಆಡಳಿತ, ಶಿಕ್ಷಣ, ಆರೋಗ್ಯ, ಕೃಷಿ ಸೇರಿದಂತೆ ರಾಜ್ಯದ ಜನರಿಗೆ ಉತ್ತಮ ಆಡಳಿತ ನೀಡುವ ಹಿನ್ನೆಲೆಯಲ್ಲಿ ಅಭ್ಯರ್ಥಿಗಳಿಗಾಗಿ ಎದುರು ನೋಡುತ್ತಿದ್ದೇವೆ ಎಂದು ತಿಳಿಸಿದರು.
ತುಂಬಾ ಜನ ಆಕಾಂಕ್ಷಿಗಳಿದ್ದಾರೆ
ಜಿಲ್ಲೆಯಲ್ಲಿ ಜೆಡಿಯು ಪಕ್ಷದಿಂದ ಸ್ಪರ್ಧಿಸಲು ಸಹ ಬಹಳ ಜನ ಆಕಾಂಕ್ಷಿಗಳಿದ್ದಾರೆ. ಯೋಚನೆ ಮಾಡಿ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುತ್ತದೆ. ಸಮಾಜಕ್ಕಾಗಿ ಸೇವೆ ಮಾಡಲು ಸಿದ್ಧವಿರುವ ಅಭ್ಯರ್ಥಿಗಳ ಅವಶ್ಯಕತೆ ಇದೆ. ಹಾಗಾಗಿ ಇಂದು ಸಾವಯವ ರಾಜಕಾರಣ ಬೇಕಾಗಿದೆ.

ನಮ್ಮ ಪಕ್ಷದಿಂದ ಆಕಾಂಕ್ಷಿಗಳಿದ್ದಾರೆ
ರಾಜ್ಯದ 224 ಕ್ಷೇತ್ರಗಳಲ್ಲಿಯೂ ಕೂಡ ಪಕ್ಷ ಅಭ್ಯರ್ಥಿಗಳಿಗಾಗಿ ಎದುರು ನೋಡುತ್ತಿದೆ. ಇಲ್ಲವಾದರೆ 100 ಅಥವಾ 50 ಅಭ್ಯರ್ಥಿಗಳಾಲಿ ಸ್ಪರ್ಧಿಸಲಿದ್ದಾರೆ. ಒಂದು ವೇಳೆ ಉತ್ತಮ ಅಭ್ಯರ್ಥಿಗಳು ಸಿಗದಿದ್ದರೇ, ಪ್ರಾಮಾಣಿಕ 10 ಅಭ್ಯರ್ಥಿಗಳು ಸಿಕ್ಕರೂ ಈ ಬಾರಿ ಸ್ಪರ್ಧೆಗೆ ಅವಕಾಶ ನೀಡಲಾಗುತ್ತದೆ. ಜಿಲ್ಲೆಯಲ್ಲಿಯೂ ಸ್ಪರ್ಧೆ ಮಾಡಲು ನಮ್ಮ ಪಕ್ಷದಿಂದ ಆಕಾಂಕ್ಷಿಗಳಿದ್ದಾರೆ ಎಂದು ಮಹಿಮಾ ಪಟೇಲ್ ತಿಳಿಸಿದರು.

ಎಂಎಲ್‌ಸಿ ರಘು ಆಚಾರ್ ಆಕ್ರೋಶ
ಹಾಗೆಯೇ ಬಿಜೆಪಿ ಶಾಸಕ ಜಿ.ಹೆಚ್ ತಿಪ್ಪಾರೆಡ್ಡಿ ವಿರುದ್ಧ ಕಮಿಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಎಂಎಲ್‌ಸಿ ರಘು ಆಚಾರ್ ಇತ್ತೀಚೆಗಷ್ಟೇ ಕಿಡಿಕಾರಿದ್ದರು. ಚಿತ್ರದುರ್ಗ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ಅವರು, ಸ್ಥಳೀಯ ಶಾಸಕರ ಕಮಿಷನ್ ದಂಧೆ ಕುರಿತು ಲೋಕಾಯುಕ್ತ ತನಿಖೆಗೆ ನಾವೇ ಆಗ್ರಹಿಸಿದ್ದೇವೆ. ಈ ಆರೋಪ ಜನಪ್ರತಿನಿಧಿಗಳಿಗೆ ಅಂಟಿರುವ ಕಳಂಕವಾಗಿದೆ ಎಂದು ಆಕ್ರೋಶ ಹೊರಹಾಕಿದ್ದರು. ಶಾಸಕರಾಗಲಿ, ಗ್ರಾಮ ಪಂಚಾಯಿತಿ ಸದಸ್ಯನಾಗಲಿ ಯಾರೇ ಆದರೂ ಅವರ ಮೇಲೆ ನಂಬಿಕೆ ಇಟ್ಟು ಮತ ಹಾಕಿರುತ್ತೇವೆ. ಆ ಮಹತ್ವ ಉಳಿಸಿಕೊಳ್ಳುವುದು ಶಾಸಕರ ಹಾಗೂ ಜನಪ್ರತಿನಿಧಿಗಳ ಕರ್ತವ್ಯವಾಗಿರುತ್ತದೆ. ಶಾಸಕರೇ ಖುದ್ದಾಗಿ ಮುಖ್ಯಮಂತ್ರಿ ಬಳಿ ಹೋಗಿ ಈ ಪ್ರಕರಣ ತನಿಖೆ ಮಾಡಿಸಲು ಸೂಚನೆ ನೀಡಬೇಕು ಎಂದು ತಿಳಿಸಿದ್ದರು.












Click it and Unblock the Notifications