ವಿಧಾನಸಭೆ ಚುನಾವಣೆ 2023; ಮೊಳಕಾಲ್ಮೂರು ಅಥವಾ ಚಳ್ಳಕೆರೆಯಿಂದ ಸ್ಪರ್ಧೆ ಎಂದ ನಟ ಶಶಿಕುಮಾರ್
ಚಿತ್ರದುರ್ಗ, ಡಿಸೆಂಬರ್, 14: ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಈಗಿನಿಂದಲೇ ಮೂರು ಪಕ್ಷಗಳ ನಾಯಕರು ಪ್ರಚಾರದ ಮೂಲಕ ಸಕಲ ತಯಾರಿಗಳನ್ನು ನಡೆಸುತ್ತಿದ್ದಾರೆ. ಹಾಗೆಯೇ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಅಥವಾ ಚಳ್ಳಕೆರೆ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲಾಗುವುದು ಎಂದು ಮಾಜಿ ಸಂಸದ ಹಾಗೂ ನಟ ಶಶಿಕುಮಾರ್ ಹೇಳಿದರು.
ಚಿತ್ರದುರ್ಗ ನಗರದ ಹೊರವಲಯದಲ್ಲಿರುವ ಮಾದಾರ ಚನ್ನಯ್ಯ ಮಠಕ್ಕೆ ತೆರಳಿ ಬಸವಮೂರ್ತಿ ಮಾದಾರ ಚನ್ನಯ್ಯ ಶ್ರೀಗಳನ್ನು ಭೇಟಿ ಮಾಡಿ ಆಶಿರ್ವಾದ ಪಡೆದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊಳಕಾಲ್ಮೂರು ಮತ್ತು ಚಳ್ಳಕೆರೆ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರವಾಸ ಕೈಗೊಂಡಿದ್ದೇನೆ. ಹಿಂದೆ 1999ರಲ್ಲಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿ ಸಂಸದನಾಗಿದ್ದೆ. ಇತ್ತ ಮಠದ ಶ್ರೀಗಳನ್ನು ಭೇಟಿ ಮಾಡಿ ತುಂಬಾ ದಿನಗಳು ಕಳೆದಿತ್ತು. ಈ ಹಿನ್ನೆಲೆಯಲ್ಲಿ ಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದು ಬಂದಿದ್ದೇನೆ ಎಂದರು.
ಕ್ಷೇತ್ರದ ಬಗ್ಗೆ ಪಕ್ಷ ತೀರ್ಮಾನ ಮಾಡುತ್ತದೆ
ಜಿಲ್ಲೆಯಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿದ ಎರಡು ಮೀಸಲು ಕ್ಷೇತ್ರಗಳಿವೆ. ನಾನು ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂದು ಪಕ್ಷ ನಿರ್ಧಾರ ಮಾಡುತ್ತದೆ. ಪಕ್ಷದ ನಿರ್ಧಾರ ಮೇರೆಗೆ ಸ್ಪರ್ಧೆ ಮಾಡುತ್ತೇನೆ. ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಪಕ್ಷ ಸಂಘಟನೆ ಮಾಡುವಂತೆ ಬಿಜೆಪಿ ಪಕ್ಷದ ಹಿರಿಯ ನಾಯಕರು ತಿಳಿಸಿದ್ದಾರೆ. ಹಾಗಾಗಿ ಪಕ್ಷ ಸಂಘಟನೆ ಬಲಗೊಳಿಸುವ ಕೆಲಸ ಮಾಡುತ್ತಿದ್ದೇನೆ ಎಂದರು.

ಟಿಕೆಟ್ ಬಗ್ಗೆ ಹೈಕಮಾಂಡ್ ನಿರ್ಧಾರ ಮಾಡಲಿದೆ
ಇನ್ನು ಟಿಕೆಟ್ ಬಗ್ಗೆ ಹೈಕಮಾಂಡ್ ನಿರ್ಧಾರ ಮಾಡಲಿದೆ. ಚಳ್ಳಕೆರೆ ಮತ್ತು ಮೊಳಕಾಲ್ಮೂರು ಎರಡು ಕ್ಷೇತ್ರಗಳಲ್ಲಿ ಎಲ್ಲಿ ನೀಡಿದರೂ ಸ್ಪರ್ಧಿಸಿ ಗೆಲುವು ಸಾಧಿಸುತ್ತೇನೆ. ಬಿಜೆಪಿ ಒಂದು ರಾಷ್ಟ್ರೀಯ ಪಕ್ಷವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಉತ್ತಮ ಕಾರ್ಯಕ್ರಮಗಳನ್ನು ನೀಡುತ್ತಿದ್ದಾರೆ. ಹಾಗಾಗಿ ನಾನು ಪಕ್ಷದಲ್ಲಿ ಸೇರ್ಪಡೆ ಆಗಿದ್ದೇನೆ. ಶ್ರೀರಾಮುಲು ಮೊಳಕಾಲ್ಮೂರಲ್ಲಿ ಸ್ಪರ್ಧೆ ಮಾಡಿದರೆ, ನಾನು ಚಳ್ಳಕೆರೆಯಿಂದ ಸ್ಪರ್ಧಿಸುತ್ತೇನೆ. ಗ್ರಾಮ ಪಂಚಾಯತಿ ಮಟ್ಟದಿಂದ ಪಕ್ಷ ಸಂಘಟನೆ ಮಾಡುತ್ತಿದ್ದೇನೆ. ಎಲ್ಲಾ ರೀತಿಯಲ್ಲಿ ಕೆಲಸ ಮಾಡಿ ತಯಾರಾಗಿದ್ದೇನೆ. ಪಕ್ಷೇತರರ ಸ್ಪರ್ಧೆ ಪ್ರಶ್ನೆಯೇ ಇಲ್ಲ, ಪಕ್ಷದ ನಿರ್ಧಾರವೇ ಅಂತಿಮವಾಗಿದೆ. ಕಳೆದ ಬಾರಿಯಾದಂತೆ, ಈ ಬಾರಿ ಆಗುವುದಿಲ್ಲ. ಚಳ್ಳಕೆರೆ ಮತ್ತು ಮೊಳಕಾಲ್ಮೂರು ಮಧ್ಯ ಭಾಗದಲ್ಲಿ ಮನೆ ನೋಡಿದ್ದೇನೆ. ಜನವರಿಯಲ್ಲಿ ಸಂಕ್ರಾಂತಿ ಮುಗಿದ ನಂತರ ಮನೆಯಲ್ಲಿ ಇರುತ್ತೇನೆ ಎಂದು ನಟ ಶಶಿಕುಮಾರ್ ತಿಳಿಸಿದರು.












Click it and Unblock the Notifications