ಸಚಿವ ಆಂಜನೇಯ ದೆಹಲಿ ಪ್ರವಾಸದ ಗುಟ್ಟು ಬಹಿರಂಗ!
ಬೆಂಗಳೂರು, ಫೆ.21 : ತಾವು ಚಿತ್ರದುರ್ಗ ಕ್ಷೇತ್ರದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಸ್ಪಷ್ಟಪಡಿಸಿದ್ದಾರೆ. ಇದರಿಂದಾಗಿ ಸಚಿವ ಆಂಜನೇಯ ಅವರು ದೆಹಲಿ ಪ್ರವಾಸ ಕೈಗೊಂಡಿದ್ದು ಏಕೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಸಚಿವ ಎಚ್.ಆಂಜನೇಯ, ತಾವು ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ನನ್ನ ದೆಹಲಿ ಪ್ರವಾಸದ ಇಲಾಖೆಯ ವಿಷಯಕ್ಕೆ ಸಂಬಂಧಿಸಿಸಿತ್ತು. ನಾನು ಪಕ್ಷದ ಯಾವ ಹೈಕಮಾಂಡ್ ನಾಯಕರನ್ನು ಭೇಟಿಯಾಗಲು ಹೋಗಿರಲಿಲ್ಲ ಎಂದು ಸ್ಟಷ್ಟಪಡಿಸಿದ್ದಾರೆ.

ರಾಜ್ಯ ಚುನಾವಣಾ ಸಮಿತಿ ಮತ್ತು ಕೇಂದ್ರ ಚುನಾವಣಾ ಸಮತಿ ಸಭೆಯಲ್ಲಿ ಆಂಜನೇಯ ಅವರನ್ನು ಚಿತ್ರದುರ್ಗ ಕ್ಷೇತ್ರದಿಂದ ಲೋಕಸಭೆ ಚುನಾವಣೆ ಕಣಕ್ಕೆ ಇಳಿಸಬೇಕು ಎಂದು ಚರ್ಚೆ ನಡೆದಿರುವುದು ಸತ್ಯ. ಆದರೆ, ತಮಗೆ ಆ ಬಗ್ಗೆ ಆಸಕ್ತಿ ಇಲ್ಲ. ಆದ್ದರಿಂದ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಆಂಜನೇಯ ಹೇಳಿದರು.[ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿಗಳು]
ಕಾಂಗ್ರೆಸ್ ಸಿದ್ಧಪಡಿಸಿದ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯಲ್ಲಿ ಚಿತ್ರದುರ್ಗ ಕ್ಷೇತ್ರಕ್ಕೆ ತಿಪ್ಪೇಸ್ವಾಮಿ, ಎಚ್ ಹನುಮಂತಪ್ಪ ಅವರ ಹೆಸರನ್ನು ಕಾಂಗ್ರೆಸ್ ಸೇರಿಸಿತ್ತು. ಆದರೆ, ಕೇಂದ್ರ ಚುನಾವಣಾ ಸಮತಿ ಸಭೆಯಲ್ಲಿ ಹೊಳಲ್ಕೆರೆ ಶಾಸಕ ಮತ್ತು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಅವರನ್ನು ಕಣಕ್ಕಿಳಿಸುವ ಕುರಿತು ಚರ್ಚೆ ನಡೆದಿತ್ತು. [ಕಾಂಗ್ರೆಸ್ ಟಿಕೆಟ್ ಹಂಚಿಕೆ ಕಸರತ್ತು ಎಲ್ಲಿಗೆ ಬಂತು]
ಕೇಂದ್ರ ಚುನಾವಣಾ ಸಮಿತಿ ಸಭೆ ಮುಗಿದ ಬಳಿಕ ಎಚ್.ಆಂಜನೇಯ ಅವರು ದೆಹಲಿ ಪ್ರವಾಸ ಕೈಗೊಂಡಿದ್ದು, ಹಲವಾರು ಅನುಮಾನಗಳಿಗೆ ಕಾರಣವಾಗಿತ್ತು. ಆದರೆ, ಸದ್ಯ ಸ್ವತಃ ಆಂಜನೇಯ ಅವರು ತಾವು ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದಾರೆ. ಹಾಗಾದರೆ ಚಿತ್ರದುರ್ಗದಲ್ಲಿ ಅಭ್ಯರ್ಥಿ ಯಾರು? [ಬಿಜೆಪಿ 20 ಕ್ಷೇತ್ರದ ಅಭ್ಯರ್ಥಿಗಳು ಇವರು]
ಅಂದಹಾಗೆ, ಚಿತ್ರದುರ್ಗ ಕ್ಷೇತ್ರದಲ್ಲಿ ಸದ್ಯ ಬಿಜೆಪಿಯ ಜನಾರ್ದನ ಸ್ವಾಮಿ ಸಂಸದರು, ಮುಂದಿನ ಚುನಾವಣೆಗೆ ಬಿಜೆಪಿ ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸುವುದು ಖಚಿತವಾಗಿದೆ. ಜೆಡಿಎಸ್ ನಿಂದ ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ಸ್ಪರ್ಧಿಸಲಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ನಾಲ್ಕು ಕ್ಷೇತ್ರಗಳಲ್ಲಿ ಜಯಸಾಧಿಸಿರುವ ಕಾಂಗ್ರೆಸ್ ಯಾರನ್ನು ಕಣಕ್ಕಿಳಿಸಲಿದೆ ಎನ್ನುವುದು ಕುತೂಹಲ ಮೂಡಿಸಿದೆ.











Click it and Unblock the Notifications