Actor Sudeep Campaign: ಹಿರಿಯೂರು, ಹೊಳಲ್ಕೆರೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ "ರನ್ನ"ನ ಮತಬೇಟೆಗೆ ಕೆಲವೇ ಕ್ಷಣಗಳು ಬಾಕಿ
ಚಿತ್ರದುರ್ಗ, ಮೇ, 07: ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಮೇ 10ರಂದು ಮತದಾನ ನಡೆಯಲಿದೆ. ಇತ್ತ ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಅಲ್ಲದೆ ಇಲ್ಲಿನ ಹಿರಿಯೂರು ಹಾಗೂ ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಭಾನುವಾರ (ಮೇ 07) ನಟ ಅಭಿನಯ ಚಕ್ರವರ್ತಿ ಸುದೀಪ್ ಪ್ರಚಾರ ಮಾಡಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ನಟ ಕಿಚ್ಚ ಸುದೀಪ್ ಇಂದು ಬಿಜೆಪಿ ಅಭ್ಯರ್ಥಿಗಳ ಪ್ರಚಾರ ಮಾಡಲು ಕೋಟೆ ನಾಡು ಚಿತ್ರದುರ್ಗಕ್ಕೆ ಆಗಮಿಸಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂ.ಚಂದ್ರಪ್ಪ ಅವರ ಪರವಾಗಿ ಮತಯಾಚನೆ ಮಾಡಲಿದ್ದು, ನಂತರ ಸಂಜೆ 4 ಗಂಟೆಗೆ ಹಿರಿಯೂರಿನಲ್ಲಿ ಬಿಜೆಪಿ ಅಭ್ಯರ್ಥಿ ಕೆ.ಪೂರ್ಣಿಮಾ ಶ್ರೀನಿವಾಸ್ ಅವರ ಪರವಾಗಿ ರೋಡ್ ಶೋ ನಡೆಸಿ ಮತಯಾಚನೆ ಮಾಡಲಿದ್ದಾರೆ.

ಇನ್ನು ಹಿರಿಯೂರು ಮತ್ತು ಹೊಳಲ್ಕೆರೆ ಕ್ಷೇತ್ರಗಳಲ್ಲಿ ನಟ ಸುದೀಪ್ನೋಡಲು ಅಭಿಮಾನಿಗಳ ದಂಡು ಹರಿದುಬರುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ಮತ್ತೊಂದೆಡೆ ನಟ ಸುದೀಪ್ ಅವರಿಗೆ ಹಿರಿಯೂರು ಕ್ಷೇತ್ರ ಪರಿಚಯವಿದೆ. ತಾಲೂಕಿನ ವಿವಿ ಸಾಗರ ಜಲಾಶಯದ ಬಳಿ "ಹುಚ್ಚ" ಚಿತ್ರೀಕರಣ ನಡೆಸಿದ್ದು, ಈ ಚಿತ್ರದ "ಉಸಿರೇ ಉಸಿರೇ" ಎನ್ನುವ ಹಾಡು ಕೂಡ ಹಿಟ್ ಆಗಿ ಹೊರಹೊಮ್ಮಿತ್ತು.
ಅಷ್ಟೇ ಅಲ್ಲದೆ ಹಿರಿಯೂರು ತಾಲೂಕಿನ ಬಗ್ಗನಡು ಗ್ರಾಮದ ಸರ್ಕಾರಿ ಶಾಲೆಯನ್ನು ಸುದೀಪ್ ಅವರು ದತ್ತು ಪಡೆದಿದ್ದು, ಈ ಗ್ರಾಮಕ್ಕೂ ಸಹ ಭೇಟಿ ನೀಡಿದ್ದಾರೆ. ಈ ನಿಟ್ಟಿನಲ್ಲಿ ಸುದೀಪ್ ಅವರಿಗೆ ಹಿರಿಯೂರು ಕ್ಷೇತ್ರ ಪರಿಚಯ ಇರುವುದರಿಂದ ಅವರನ್ನು ನೋಡಲು ಸಾವಿರಾರು ಅಭಿಮಾನಿಗಳು ಜಾಮಾಯಿಸುವ ಸಾಧ್ಯತೆಯೂ ಇದೆ.
ಎಂ.ಪಿ.ರೇಣುಕಾಚಾರ್ಯರ ಪರ ಡಿ ಬಾಸ್ ಪ್ರಚಾರ
ಅದೇ ರೀತಿ ಹೊನ್ನಾಳಿ - ನ್ಯಾಮತಿ ಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿ ಎಂ. ಪಿ.ರೇಣುಕಾಚಾರ್ಯರ ಪರ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಅವರು ನಿನ್ನೆ ಭರ್ಜರಿ ಪ್ರಚಾರ ನಡೆಸಿದರು. ಈ ವೇಳೆ ದರ್ಶನ್ ಅವರನ್ನು ನೋಡಲು ಅಭಿಮಾನಿಗಳ ದಂಡೇ ನೆರೆದಿತ್ತು.
ಹೊನ್ನಾಳಿ - ನ್ಯಾಮತಿ ವಿಧಾನಸಭಾ ಕ್ಷೇತ್ರವು ಜಿದ್ದಾಜಿದ್ದಿನ ಕಣವಾಗಿದೆ. ಶುಕ್ರವಾರವಷ್ಟೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಕಾಂಗ್ರೆಸ್ ಅಭ್ಯರ್ಥಿ ಡಿ.ಜಿ. ಶಾಂತನಗೌಡ ಪರ ಪ್ರಚಾರ ನಡೆಸಿದ್ದರು. ಈ ವೇಳೆ ರೇಣುಕಾಚಾರ್ಯ ವಿರುದ್ಧ ವಾಗ್ಬಾಣಗಳ ಸುರಿಮಳೆಗೈದಿದ್ದರು. ಸಮಾವೇಶದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು, ಯುವಕರು ಪಾಲ್ಗೊಂಡಿದ್ದರು. ಹಾಗೆಯೆ ಇಂದು ದರ್ಶನ್ ಅವರನ್ನು ಕರೆಯಿಸಿ ರೋಡ್ ಶೋ ನಡೆಸುವ ಮೂಲಕ ತಿರುಗೇಟು ನೀಡುವ ಪ್ರಯತ್ನವನ್ನು ರೇಣುಕಾಚಾರ್ಯ ಮಾಡಿದರು.
ರೇಣುಕಾಚಾರ್ಯ ಪತ್ನಿ, ಪುತ್ರಿ ಹಾಗೂ ಪುತ್ರರ ಜೊತೆ ತೆರೆದ ವಾಹನದಲ್ಲಿ ರೋಡ್ ಶೋ ನಡೆಸುವ ವೇಳೆ ಜನಜಂಗುಳಿಯೇ ನೆರೆದಿತ್ತು. ರಸ್ತೆಯ ಇಕ್ಕೆಲಗಳಲ್ಲಿ ದರ್ಶನ್ ಪರ ಘೋಷಣೆಗಳು ಮುಗಿಲು ಮುಟ್ಟಿದವು. ನೆಚ್ಚಿನ ನಟನನ್ನು ನೋಡಲು ಹಳ್ಳಿ ಹಳ್ಳಿಗಳಿಂದಲೂ ಅಭಿಮಾನಿಗಳು ಆಗಮಿಸಿದ್ದರು. ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಜನಸ್ತೋಮದ ನಡುವೆ ದರ್ಶನ್ ಮಾತನಾಡಿದರೂ ಸರಿಯಾಗಿ ಕೇಳಿಸುತ್ತಿರಲಿಲ್ಲ. ಅಷ್ಟರ ಮಟ್ಟಿಗೆ ಜೈಕಾರ ಮೊಳಗಿತ್ತು.
ಹೊನ್ನಾಳಿ ಪಟ್ಟಣದಲ್ಲಿ ಮಾತನಾಡಿದ ನಟ ದರ್ಶನ್, ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಿ. ಜನರ ಪರವಾಗಿ ಕೆಲಸ ಮಾಡುವ ರೇಣುಕಾಚಾರ್ಯ ಅವರನ್ನು ಗೆಲ್ಲಿಸಿ. ಅವರಿಗೆ ಮತ ನೀಡುವ ಮೂಲಕ ಜಯಶಾಲಿಯಾಗುವಂತೆ ಮಾಡಿ ಎಂದು ಮನವಿ ಮಾಡಿದರು.
ಕೊರೊನಾ ಸಂದರ್ಭದಲ್ಲಿ ನಿಮ್ಮ ಜೊತೆ ಯಾರು ಇದ್ದರು. ಆಂಬುಲೆನ್ಸ್, ಕೊರೊನಾ ಲಸಿಕೆ, ಆಕ್ಸಿಜನ್ ಸೇರಿದಂತೆ ಜನರ ಮಧ್ಯೆಯೇ ಇದ್ದು ರೇಣುಕಾಚಾರ್ಯ ಸೇವೆ ಮಾಡಿದ್ದಾರೆ. ಅಧಿಕಾರ ಇರಲಿ, ಇಲ್ಲದಿರಲಿ ನಿಮಗಾಗಿ ಕೆಲಸ ಮಾಡುತ್ತಾರೆ. ಅಧಿಕಾರ ಇಲ್ಲದಿದ್ದರೂ ಬಡವರು, ಮತದಾರರಿಗಾಗಿ ಸೇವೆ ಮಾಡಿದರು. ಇಷ್ಟು ಸೇವೆ ಮಾಡಿದವರನ್ನು ನೋಡಿದ್ದು ಕಡಿಮೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.












Click it and Unblock the Notifications