ಪೂಜೆ ಇದ್ದಿದ್ದು 4 ಕಿ.ಮೀ. ಸಮೀಪ, ಭೇಟಿ ಕೊಟ್ಟಿದ್ದು 350 ಕಿ.ಮೀ ದೂರದ ರೇಣುಕಾಸ್ವಾಮಿ ಮನೆಗೆ: ಪ್ರಥಮ್ ಕೊಟ್ಟ ಕಾರಣ ಏನು?
ಚಿತ್ರದುರ್ಗ, ಆಗಸ್ಟ್, 16: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ & ಗ್ಯಾಂಗ್ ಜೈಲುಪಾಲಾಗಿದೆ. ಇನ್ನು ದರ್ಶನ್ ಪರ-ವಿರೋಧದ ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ ಜೋರಾಗಿಯೇ ನಡೆಯುತ್ತಿವೆ. ಇದರ ನಡುವೆಯೇ ಇದೀಗ ಬಿಗ್‌ಬಾಸ್ ಪ್ರಥಮ್ ಮೃತ ರೇಣುಕಾಸ್ವಾಮಿ ಮನೆಗೆ ಭೇಟಿ ನೀಡಿದ್ದಾರೆ. ಹಾಗಾದರೆ ಅವರು ಈ ವೇಳೆ ಏನೆಲ್ಲ ಹೇಳಿದ್ದಾರೆ ಎಂದು ಇಲ್ಲಿ ತಿಳಿಯಿರಿ.
ನಟ ಪ್ರಥಮ್ ಅವರು ಗುರುವಾರ (ಆಗಸ್ಟ್ 15) ರಾತ್ರಿ ಮೃತ ರೇಣುಕಾಸ್ವಾಮಿ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಇನ್ನು ಪ್ರಥಮ್ ಭೇಟಿ ವೇಳೆ ಮೃತ ರೇಣುಕಾಸ್ವಾಮಿ ತಂದೆ ಮಗನನ್ನು ನೆನೆದು ಕಣ್ಣೀರು ಹಾಕಿದರು. ಈ ವೇಳೆ ರೇಣುಕಾ ಸ್ವಾಮಿ ಪತ್ನಿ ಸಹನಾ ಸೇರಿ ಕುಟುಂಬಸ್ಥರಿಗೆ ಪ್ರಥಮ್ ಸಾಂತ್ವನ ಹೇಳಿದರು. ನಂತರ ಮುಂದಿನ ದಿನಗಳಲ್ಲಿ ಆರ್ಥಿಕ ಸಹಾಯ ಮಾಡುವುದಾಗಿ ಭರವಸೆ ನೀಡಿದರು.

ಅಲ್ಲದೆ, ರೇಣುಕಾ ಪತ್ನಿ ಸಹನಾಗೆ ಕೆಲಸ ಕೊಡಿಸುವ ಬಗ್ಗೆ ಸಿಎಂ ಜೊತೆ ಮಾತಾಡುತ್ತೇನೆ. ನಾನು ಯಾರನ್ನೂ ಸಮರ್ಥನೆ ಮಾಡಿಕೊಳ್ಳಲು ಬಂದಿಲ್ಲ, ಹಲವರು ಸಮರ್ಥನೆ ಮಾಡಿಕೊಳ್ಳುವವರು ಇದ್ದಾರೆ. ನನಗೆ ರೇಣುಕಾಸ್ವಾಮಿ ತಂದೆ ಹಾಗೂ ಪತ್ನಿಯನ್ನು ಭೇಟಿ ಮಾಡಬೇಕು ಅನಿಸಿತ್ತು. ಆ ಒಂದೇ ಕಾರಣಕ್ಕೆ ನಾನು 350 ಕಿಲೋ ಮೀಟರ್ ದೂರದಿಂದ ಬಂದಿದ್ದೇನೆ ಎಂದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಥಮ್, ಮೊಳಕಾಲ್ಮೂರು ತಾಲೂಕಿನ ಕೊಂಡ್ಲಹಳ್ಳಿಯಲ್ಲಿ ಸಂಗೊಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆಗೆ ಬಂದಿದ್ದೆ. ಹಾಗೆಯೇ ರೇಣುಕಾಸ್ವಾಮಿಯವರ ಮನೆಗೆ ಭೇಟಿ ನೀಡಲಾಯಿತು. ಇಲ್ಲಿ ಬಂದು ಯಾರನ್ನೋ ಸಮರ್ಥನೆ ಮಾಡಿಕೊಂಡು ಮನಸ್ಸು ನೋಯಿಸಲು ಬಂದಿಲ್ಲ. ಇಷ್ಟೊಂದು ಹೀನಾಯವಾಗಿ ಸಾವಾಗಿತ್ತು, ಹಾಗಾಗಿ ಸಹನಾರನ್ನು ನಾನು ಮಾತನಾಡಿಸಬೇಕಿತ್ತು. ಆ ಕುಟುಂಬಕ್ಕಾದ ನೋವು ನನಗೆ ತುಂಬಾ ಕಾಡುತ್ತಿತ್ತು. ಇವರನ್ನು ಕಂಡು ನನ್ನ ಕೈಲಾದ ಸಹಾಯ ಮಾಡಬೇಕೆನಿಸಿತು. ಯಾರನ್ನೂ ನೋಯಿಸುವ ಹೇಳಿಕೆ ಕೊಡೋಕೆ ಇಲ್ಲಿಗೆ ಬಂದಿಲ್ಲ ಎಂದರು.
ಜನ ಯಾರ ಪರ ಅಥವಾ ವಿರೋಧವಾಗಿ ಬೇಕಾದ್ರೂ ಮಾತನಾಡಿ, ಅದನ್ನು ನಾನು ಜನರ ವಿವೇಚನೆಗೆ ಬಿಡುತ್ತೇನೆ. ರೇಣುಕಾಸ್ವಾಮಿ ಕುಟುಂಬಕ್ಕೆ ಹರ್ಟ್ ಆಗುತ್ತದೆ ಅಂತಾ ತಿಳಿದು ಮಾತನಾಡಿ. ಕೆಲವರು ತುಂಬಾ ಏನೋ ತಿಳಿದುಕೊಂಡಿರುವ ಹಾಗೆ ಮಾತನಾಡುತ್ತಾರೆ. ನಾನು ಒಂದು ಹೇಳಿಕೆ ಕೊಟ್ಟಾಗ ಅದನ್ನು ತಿರುಚು ಹೇಳಲಾಗಿತ್ತು. ಅದಕ್ಕೆ ನನ್ನ ಮನೆಯ ಮುಂದೆ ಸೆಕ್ಷನ್ 144 ಹಾಕಿದ್ರು. ಅದರಿಂದ ಆಫೀಸ್‌ಗೆ ಹೋಗೋಕು ತೊಂದರೆಯಾಗಿತ್ತು ಎಂದರು.
ಆದರೆ ಈ ಕುಟುಂಬ ಮಗನನ್ನು ಕಳೆದುಕೊಂಡಿದೆ. ಸಹನಾ ಅವರು ಗಂಡನನ್ನು ಕಳೆದುಕೊಂಡು ನೋವಿನಲ್ಲಿದ್ದಾರೆ. ನಾನು ಇಲ್ಲಿಗೆ ಬಂದು ಕಾಟಾಚಾರಕ್ಕೆ ವಿಷಾದದ ನುಡಿ ಹೇಳಲ್ಲ. ಇವರಿಗೆ ಆಗಿರುವುದು ಅಕ್ಷಮ್ಯ, ಅದು ಆಗಬಾರದಿತ್ತು. ರೇಣುಕಾಸ್ವಾಮಿ ಬಗ್ಗೆ ಬೈಯ್ಯುವವರು ಇವರ ಬಗ್ಗೆ ಒಂದು ಬಾರಿ ಯೋಚಿಸಿ. ಕಮೆಂಟ್ ಹಾಕೋರು ನಿಮ್ಮ ಕುಟುಂಬದಲ್ಲೇ ಹೀಗಾಗಿದ್ರೆ ಏನು ಮಾಡುತ್ತಿದ್ರಿ ಎಂದು ಯೋಚಿಸಿ. ನೊಂದಿರುವ ಕುಟುಂಬವನ್ನು ಯಾರೂ ಮತ್ತೆ ನೋಯಿಸುವ ಪ್ರಯತ್ನ ಮಾಡಬೇಡಿ. ನಾನು ಆ ಕುಟುಂಬಕ್ಕೆ ಏನು ಸಹಾಯ ಮಾಡಬೇಕೋ ಮಾಡ್ತೀನಿ ಎಂದರು.
ದರ್ಶನ ಬಿಡುಗಡೆಯಾಗಲಿ ಅಂತಾ ಬೆಂಗಳೂರಲ್ಲಿ ಪೂಜೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಪ್ರಥಮ್, ನನಗೆ ಅದಕ್ಕೆ ಸಮಯ ಇಲ್ಲ. ನಾನು ಬೆಳಗ್ಗೆ ಈಶ್ವರನ ಪೂಜೆ ಮಾಡುತ್ತೇನೆ. ಮನೆದೇವ್ರು ಕಬ್ಬಾಳಮ್ಮಗೆ ನಮಸ್ಕಾರ ಮಾಡ್ತೀನಿ, ಪೂಜೆ ಜೊತೆ ನಾನು ಉರುಳು ಸೇವೆ ಬೇಕಾದ್ರೂ ಮಾಡ್ತೀನಿ, ಆದರೆ, ಇವರ ಕುಟುಂಬಕ್ಕೆ ಆದ ನೋವನ್ನು ತುಂಬಿಕೊಡೋಕೆ ಸಾಧ್ಯವಾ? ಎಂದು ಪ್ರಶ್ನೆ ಮಾಡಿದರು.
ರೇಣುಕಾಸ್ವಾಮಿ ಪತ್ನಿ ಸಹನಾಗೆ ಆದ ಅನ್ಯಾಯ ಸರಿಪಡಿಸಲು ಸಾಧ್ಯವಾ? ಅದು ದರ್ಶನ್ ಬಿಡುಗಡೆಗೆ ಮಾಡಿದ ಪೂಜೆ ಅಲ್ಲ, ಚಿತ್ರರಂಗದ ಒಳಿತಿಗೆ ಮಾಡಿದ ಪೂಜೆ ಅಂತಾ ನನಗೆ ಗೊತ್ತಾಯ್ತು. ಜಗ್ಗೇಶ್ ಸರ್ ಈ ಬಗ್ಗೆ ತುಂಬಾ ಮಾರ್ಮಿಕವಾಗಿ ಹೇಳಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಕಳೆದ ಒಂದು ವರ್ಷದಿಂದ ಸಕ್ಸಸ್ ಇಲ್ಲ. ಆದ್ದರಿಂದ ಮಾಡಿದ ಪೂಜೆ ಅಂತಾ ಗೊತ್ತಾಯ್ತು. ಯಾವುದೇ ವ್ಯಕ್ತಿಗಿಂತ ನಮಗೆ ಚಿತ್ರರಂಗ ದೊಡ್ಡದು ಎಂದರು.
ರಾಜಕುಮಾರ್, ವಿಷ್ಟು ಸರ್ ಅಂತಹ ಕಲಾವಿದರು ಚಿತ್ರರಂಗದಲ್ಲಿದ್ದರು. ಹಲವು ಕಲಾವಿದರು ಅಲ್ಲಿ ಊಟ ಮಾಡಿ, ಭವಿಷ್ಯ ಕಟ್ಟಿಕೊಂಡಿದ್ದಾರೆ. ಹಾಗಾಗಿ ಚಿತ್ರರಂಗದ ಭವಿಷ್ಯಕ್ಕಾಗಿ ಪೂಜೆ ಮಾಡಿದಾರೆ ಅಂದುಕೊಳ್ಳೋಣ. ಕಲಾವಿದರ ಸಂಘ ನನ್ನ ಮನೆಯಿಂದ 4 ಕಿಲೋ ಮಿಟರ್ ದೂರದಲ್ಲಿದೆ. ನಾನು ಆ ಪೂಜೆಗೆ ಹೋಗಲಿಕ್ಕೆ ಆಗಲಿಲ್ಲ, ಆದರೆ 350 ಕಿಲೋ ಮಿಟರ್ ದೂರದಲ್ಲಿರುವ ಇವರನ್ನು ಕಾಣಲು ಮನಸ್ಸು ಬಯಸುತ್ತಿತ್ತು ಎಂದರು.
ಚಿತ್ರರಂಗದ ಒಳಿತಿಗೆ ಪೂಜೆ ಮಾಡೋದಾದ್ರೆ ನನ್ನ ಮನೆಯಲ್ಲಿ ಮಾಡ್ತೀನಿ. ನನಗೆ ಕಷ್ಟದ ನೋವು, ಈ ಕುಟುಂಬದ ನೋವು ಎರಡೂ ಗೊತ್ತು. ನಾನು ರೆಣುಕಾಸ್ವಾಮಿ ಕುಟುಂಬದ ಪರವಾಗಿ ನಿಂತುಕೊಳ್ಳುತ್ತೇನೆ. ವಿಚಾರ ತಿರುಚಿ ತಪ್ಪು ಸಂದೇಶವನ್ನು ಕೊಡುವುದಿಲ್ಲ. ಸಾಧ್ಯವಾದರೆ, ಸಹನಾ ಕುಟುಂಬಕ್ಕೆ ಒಳ್ಳೆಯದನ್ನು ಮಾಡಿ. ಸಹನಾಗೆ ಸರ್ಕಾರ ನೌಕರಿ ಕೊಡೋಕೆ ಮೀನಮೇಶ ಎಣಿಸುತ್ತಿದೆ ಎಂದರು.
ಸರ್ಕಾರ ಮನಸ್ಸು ಮಾಡಿದರೆ ರೇಣುಕಾಸ್ವಾಮಿ ಪತ್ನಿಗೆ ಸರ್ಕಾರಿ ಕೆಲಸ ಕೊಡೋದು ದೊಡ್ಡ ವಿಚಾರ ಅಲ್ಲ. ನಾನಿಲ್ಲಿ ಯಾರ ಪರವಾಗಿ ಮಾತನಾಡಲು ಬಂದಿಲ್ಲ, ಯಾರ ಪರವಾಗಿ ನಿರ್ಧಾರ ತಿಳಿಸಲು ನಾನು ಜಡ್ಜ್ ಅಲ್ಲ, ನನ್ನ ಒಂದು ಹೇಳಿಕೆ ತಿರುಚುವುದ್ದಕ್ಕೆ ಕೆವರು ನನ್ನ ಕೈ ಮುರಿತೀನಿ ಅಂದಿದ್ದರು. ಅಲ್ಲದೆ ಬ್ಯಾಡ್ ಕಮೆಂಟ್‌ಗಳನ್ನು ಹಾಕಿದ್ದರು, ನನ್ನ ಮನೆ ಮುಂದೆ 144 ಹಾಕಿದ್ರು. ನನಗೆ 20 ದಿನ ನೋವು ಕೊಟ್ರು, ರೇಣುಕಾಸ್ವಾಮಿ ಕುಟುಂಬಕ್ಕೆ ಶಾಶ್ವತ ನೋವು ಕೊಟ್ರು ಎಂದು ಪ್ರಥಮ್ ಬೇಸರ ಹೊರಹಾಕಿದರು.












Click it and Unblock the Notifications