ರಸ್ತೆ ಅಪಘಾತ : ಕೊಪ್ಪಳದಲ್ಲಿ 5, ಚಿತ್ರದುರ್ಗದಲ್ಲಿ 4 ಸಾವು
ಚಿತ್ರದುರ್ಗ, ಜನವರಿ 28 : ಚಿತ್ರದುರ್ಗ ಮತ್ತು ಕೊಪ್ಪಳದಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ರಸ್ತೆ ಅಪಘಾತದಲ್ಲಿ 9 ಜನರು ಮೃತಪಟ್ಟಿದ್ದಾರೆ. ಸರ್ಕಾರಿ ಬಸ್ ಮತ್ತು ಲಾರಿ, ಟೆಂಪೋ ಟ್ರಾವೆಲರ್ ಮತ್ತು ಲಾರಿಯ ನಡುವೆ ಅಪಘಾತ ಸಂಭವಿಸಿದೆ.
ಚಿತ್ರದುರ್ಗ : ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಹಿರೇಹಳ್ಳಿ ಬಳಿ ಕೆಎಸ್ಆರ್‌ಟಿಸಿ ಬಸ್ ಲಾರಿಗೆ ಡಿಕ್ಕಿ ಹೊಡೆದಿದ್ದು, ನಾಲ್ವರು ಪ್ರಯಾಣಿಕರು ಮೃತಪಟ್ಟಿದ್ದಾರೆ. ಐವರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. [ಕೆಎಸ್ಆರ್ ಟಿಸಿ ನೇಮಕಾತಿ, ಅರ್ಜಿ ಹಾಕಲು ಫೆ.4 ಕೊನೆ ದಿನ]

ಮೃತಪಟ್ಟವರನ್ನು ಮಲ್ಲಪ್ಪ (35), ಅಶೋಕ (30), ಸಾಬಯ್ಯ (20), ವೀರಭದ್ರಪ್ಪ (45) ಎಂದು ಗುರುತಿಸಲಾಗಿದೆ. ಇವರೆಲ್ಲರು ರಾಯಚೂರು ಜಿಲ್ಲೆಗೆ ಸೇರಿದವರಾಗಿದ್ದಾರೆ. ರಾಯಚೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಬಸ್ ಹಿರೇಹಳ್ಳಿ ಬಳಿ ಲಾರಿಗೆ ಡಿಕ್ಕಿ ಹೊಡೆದಿದ್ದರಿಂದ ಈ ಅಪಘಾತ ಸಂಭವಿಸಿದೆ. ತಳಕು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಪ್ಪಳ : ಕೊಪ್ಪಳ ಜಿಲ್ಲೆಯ ಯಲಬಯರ್ಗಾ ತಾಲೂಕಿನ ಚಿಕ್ಕ ಮ್ಯಾದ್ನೇರಿ ಕ್ರಾಸ್ ಬಳಿ ಟೆಂಪೋ ಟ್ರಾವೆಲರ್ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದ್ದು, 5 ಜನರು ಸಾವನ್ನಪ್ಪಿದ್ದಾರೆ. ಬೇವೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅಪಘಾತ ನಡೆದಿದೆ.
ಮೃತಪಟ್ಟವರೆಲ್ಲರೂ ಮಹಾರಾಷ್ಟ್ರದ ಅಹ್ಮದ್ ನಗರದಿಂದ ಮೈಸೂರಿಗೆ ಮದುವೆಗಾಗಿ ತೆರಳುತ್ತಿದ್ದರು. ವೇಗವಾಗಿ ತೆರಳುತ್ತಿದ್ದ ಟಿಟಿ ಮ್ಯಾದ್ನೇರಿ ಕ್ರಾಸ್ ಬಳಿ ಕೆಟ್ಟು ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದ್ದರಿಂದ ಈ ಅಪಘಾತ ಸಂಭವಿಸಿದೆ. ಘಟನೆ ಬಳಿಕ ಲಾರಿ ಚಾಲಕ ಪರಾರಿಯಾಗಿದ್ದು, ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತ್ಯಾಗರಾಜನ್ ಸ್ಥಳಕ್ಕೆ ತೆರಳಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.












Click it and Unblock the Notifications