ಹಿರಿಯೂರು: "ಕರ್ಪಿ" ಕುರಿಗೆ ಮೂರನೇ ವರ್ಷದ ಬರ್ತಡೇ ಆಚರಣೆ-ಪಾರ್ಟಿಯಲ್ಲಿ ಏನೆಲ್ಲ ವ್ಯವಸ್ಥೆ ಇತ್ತು?
ಚಿತ್ರದುರ್ಗ, ಮೇ, 03: ಸಾಮಾನ್ಯಚಾಗಿ ಮನುಷ್ಯರು ಬರ್ತಡೇ ಆಚರಣೆ ಮಾಡಿಕೊಳ್ಳುವುದನ್ನು ನೋಡಿದ್ದೇವೆ. ಆದರೆ ಇದೀಗ ಕುರಿಗೆ ಹುಟ್ಟುಹಬ್ಬ ಆಚರಣೆ ಮಾಡಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ಬರ್ತಡೇ, ಮದುವೆ ಸೇರಿದಂತೆ ಇನ್ನಿತರ ಸಂಭ್ರಮದ ಕ್ಷಣಗಳನ್ನು ಕಳೆಯಲು ಕೇಕ್ ಕತ್ತರಿಸುವುದು ರೂಡಿಯಲ್ಲಿದೆ. ಆಧುನಿಕತೆಯ ಭರಾಟೆಯಲ್ಲಿ ತಂತ್ರಜ್ಞಾನ ಬೆಳೆದಂತೆ ಹೊಸ ಹೊಸ ಆಚರಣೆಗಳು ಹುಟ್ಟಿಕೊಳ್ಳುತ್ತಿವೆ. ಹೌದು ಇತ್ತೀಚಿನ ದಿನಗಳಲ್ಲಿ ಪ್ರಾಣಿಗಳಿಗೆ ಸೀಮಂತ, ಹುಟ್ಟು ಹಬ್ಬ ಆಚರಣೆಗಳು ನಡೆಯುತ್ತಿರುವುದು ವಿಶೇಷವಾಗಿದೆ. ಇದೇ ರೀತಿ ಕುರಿ ಮಾಲೀಕ ಕುರಿಗೆ ಬರ್ತಡೇ ಆಚರಿಸಿರುವ ಘಟನೆ ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ.

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಮಸ್ಕಲ್ ಟಿಬಿ ಗೊಲ್ಲರಹಟ್ಟಿ ಗ್ರಾಮದ ಕೃಷ್ಣಮೂರ್ತಿ ಎಂಬ ಕುರಿ ಮಾಲೀಕ, ತಮ್ಮ ಕುರಿಗೆ ಮೂರು ವರ್ಷ ಪೂರೈಸಿದ ಹಿನ್ನಲೆ ಮೂರನೇ ವರ್ಷದ ಬರ್ತಡೇ ಆಚರಣೆ ಮಾಡಿದ್ದಾರೆ. 2021ನೇ ಸಾಲಿನ ಮೇ 2ರಂದು ಕುರಿ ಜನಿಸಿದ್ದು, ಈ ಕುರಿಗೆ "ಕರ್ಪಿ" ಎಂದು ನಾಮಕರಣ ಮಾಡಲಾಗಿದೆ.
ಮೇ 2ಕ್ಕೆ ಈ ಕುರಿ ಮೂರು ವರ್ಷ ಪೂರೈಸಿದೆ. ಗ್ರಾಮದ ಕೃಷ್ಣಮೂರ್ತಿ ಅವರ ಮನೆಯ ಸಮೀಪ ಇರುವ ಶ್ರೀಗೊಲ್ಲಳ್ಳಮ್ಮ ದೇವಸ್ಥಾನ ಆವರಣದಲ್ಲಿ ಕುರಿಗೆ ಕಾಲಿಗೆ ಬೆಳ್ಳಿ ಕಡಗ ತೊಡಿಸಿ, ಕೇಕ್ ಕತ್ತರಿಸುವ ಮೂಲಕ ತನ್ನ ಪ್ರೀತಿಯ ಕುರಿಗೆ ಹುಟ್ಟು ಹಬ್ಬ ಆಚರಿಸಿದ್ದಾರೆ.
ಕೃಷ್ಣಮೂರ್ತಿ ಪ್ರೀತಿಯಿಂದ ಒಂದು ಕುರಿಮರಿ ಸಾಕಿದ್ದರು. ಕುರಿ ದೊಡ್ಡದಾದ ಬಳಿಕ ಒಂದು ಹೆಣ್ಣು ಕುರಿ ಮರಿಗೆ ಜನ್ಮ ನೀಡಿದೆ. ಕಾರಣಾಂತರಗಳಿಂದ ಜನ್ಮ ನೀಡಿದ ಕುರಿ ಸಾವನ್ನಪ್ಪಿದೆ. ಅನಾಥವಾಗಿದ್ದ ಸಣ್ಣ ಕುರಿ ಮರಿಯ ಜೊತೆಗೆ ಇನ್ನೊಂದು ಕುರಿ ಮರಿ ತಂದು ಎರಡು ಮರಿಗಳನ್ನು ಸಾಕಿದ್ದಾರೆ.
ಆದರೆ ತಬ್ಬಲಿಯಾಗಿದ್ದ ಕುರಿ ಮರಿ ದೊಡ್ಡದಾಗಿ ಬೆಳೆದು ಒಂದು ವರ್ಷ ಪೂರೈಸಿದ ಹಿನ್ನಲೆ ಮೊದಲನೇ ವರ್ಷದಲ್ಲಿ ಐದು ಕೆಜಿ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಣೆ ಮಾಡಿದ್ದರು. ಇದೀಗ ಎರಡನೇ ಬಾರಿಗೆ ಮೂರು ಕೆಜಿ ಕೇಕ್ ಕತ್ತರಿಸಿ ಜನ್ಮ ದಿನಾಚರಣೆ ಆಚರಿಸಿದ್ದರು. ಇದೀಗ ಮೂರನೇ ವರ್ಷಕ್ಕೂ ಕೇಕ್ ಕತ್ತರಿಸುವ ಮೂಲಕ ಜನ್ಮದಿನಾಚರಣೆ ಕಾರ್ಯಕ್ರಮ ಮಾಡಿದ್ದಾರೆ.
ಇಷ್ಟೆ ಅಲ್ಲದೇ ಕುರಿ ಮಾಲೀಕ ಗ್ರಾಮದ ಅಕ್ಕಪಕ್ಕದವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ. ಕುರಿ ಮಾಲೀಕನ ಒಪ್ಪಿಗೆಯ ಮೇರೆಗೆ ಸ್ನೇಹಿತರು, ಗ್ರಾಮಸ್ಥರು ಬರ್ತಡೇ ಸಮಾರಂಭದಲ್ಲಿ ಭಾಗವಹಿಸಿ ಕುರಿಗೆ ಹ್ಯಾಪಿ ಬರ್ತಡೇ ಕರ್ಪಿ ಎಂದು ಶುಭಾಶಯ ಕೋರಿದ್ದಾರೆ. ಈ ಕಾರ್ಯಕ್ರಮದಲ್ಲಿ ಸುಮಾರು 20ಕ್ಕೂ ಹೆಚ್ಚು ಜನರು ಭಾಗವಹಿಸಿದ್ದು, ಅವರಿಗೆ ಕೇಕ್ ಹಾಗೂ ಕಾರ ಹಂಚಿದರು.
ಈ ಕುರಿತು ಮಾತನಾಡಿದ ಕುರಿ ಮಾಲೀಕ ಕೃಷ್ಣಮೂರ್ತಿ "ನಾನು ಮೂರು ವರ್ಷದ ಹಿಂದೆ ಒಂದು ಕುರಿ ಸಾಕಿದ್ದೆ. ಅದು ಒಂದು ಮರಿಗೆ ಜನ್ಮ ನೀಡಿ, ಮೃತಪಟ್ಟಿತ್ತು. ತಾಯಿಯನ್ನು ಕಳೆದುಕೊಂಡ ಮರಿ ಅನಾರೋಗ್ಯಕ್ಕೆ ತುತ್ತಾಗಿತ್ತು. ಅದನ್ನು ಪಶುವೈದ್ಯರ ಬಳಿ ಚಿಕಿತ್ಸೆ ಕೊಡಿಸಿ, ಗುಣಪಡಿಸಿಲಾಯಿತು. ನಂತರ ಕುರಿ ಮರಿ ನಮ್ಮೊಂದಿಗೆ ಬೆರೆಯಿತು. ಆದ್ದರಿಂದ ನನಗೆ ತುಂಬಾ ಇಷ್ಟವಾಯಿತು. ಮೂರು ವರ್ಷಗಳಿಂದ ಕುರಿ ಹುಟ್ಟು ಹಬ್ಬ ಆಚರಣೆ ಮಾಡಿಕೊಂಡು ಬರುತ್ತಿದ್ದೇನೆ," ಎಂದರು.
ಇನ್ನು ಈ ವರ್ಷದಲ್ಲಿ ಕುರಿಯ ಕಾಲಿಗೆ ಬೆಳ್ಳಿ ಕಡಗ ಮಾಡಿಸಿದ್ದೇನೆ. ಮೂರನೇ ವರ್ಷದಲ್ಲಿ ಅದ್ದೂರಿಯಾಗಿ ಆಚರಿಸಲು ಸಿದ್ಧತೆಯಲ್ಲಿ ಇದ್ದೆ. ಆದರೆ ನನ್ನ ಪತ್ನಿಗೆ ಆರೋಗ್ಯ ಸರಿಯಿಲ್ಲದ ಕಾರಣ ಈ ಬಾರಿ ಸರಳವಾಗಿ ಆಚರಿಸಲಾಯಿತು. ಮುಂದಿನ ವರ್ಷ ಕೂಡ ಹುಟ್ಟು ಹಬ್ಬ ಆಚರಿಸಲಾಗುತ್ತದೆ. ಈ ಕುರಿಯನ್ನು ಯಾರಿಗೂ ಕೊಡುವುದಿಲ್ಲ, ಹಾಗೂ ಕೊಯ್ಯುವುದು ಇಲ್ಲ. ಮನೆಯ ಸದಸ್ಯನಾಗಿ ಇರುತ್ತದೆ. ಕುರಿಯ ಜೀವ ಇರುವವರೆಗೂ ನಾನು ಅದರ ಹುಟ್ಟುಹಬ್ಬ ಆಚರಣೆ ಮಾಡುತ್ತೇನೆ" ಎಂದು ಕೃಷ್ಣಮೂರ್ತಿ ಅಭಿಪ್ರಾಯ ವ್ಯಕ್ತಪಡಿಸಿದರು.












Click it and Unblock the Notifications