Flower show 2023: ಚಿತ್ರದುರ್ಗದಲ್ಲಿ 30ನೇ ಫಲಪುಷ್ಪ ಪ್ರದರ್ಶನಕ್ಕೆ ಸಿದ್ಧತೆ ಹೇಗಿದೆ?, ಇಲ್ಲಿದೆ ವಿವರ
ಕೋಟೆ ನಾಡಿನಲ್ಲಿ ಫೆಬ್ರವರಿ 10ರಿಂದ ಫಲಪುಷ್ಪ ಪ್ರದರ್ಶನ ಆರಂಭವಾಗಲಿದ್ದು, ಸಿದ್ಧತೆ ಯಾವ ರೀತಿಯಾಗಿದೆ ಎನ್ನುವ ಮಾಹಿತಿಯನ್ನು ಇಲ್ಲಿ ಗಮನಿಸಿ,
ಚಿತ್ರದುರ್ಗ, ಫೆಬ್ರವರಿ, 09: ಚಿತ್ರದುರ್ಗದಲ್ಲಿ ಫೆಬ್ರವರಿ 10ರಿಂದ ಫಲಪುಷ್ಪ ಪ್ರದರ್ಶನ ಆರಂಭವಾಗಲಿದ್ದು, ಸಿದ್ಧತೆ ಯಾವ ರೀತಿಯಾಗಿ ಮಾಡಿಕೊಳ್ಳಲಾಗಿದೆ ಎನ್ನುವ ವಿವರವನ್ನು ಇಲ್ಲಿ ನೀಡಲಾಗಿದೆ.
ಚಿತ್ರದುರ್ಗದಲ್ಲಿ ತೋಟಗಾರಿಕೆ ಇಲಾಖೆ, ಜಿಲ್ಲಾ ಪಂಚಾಯತ್, ಜಿಲ್ಲಾ ತೋಟಗಾರಿಕೆ ಸಂಘ ಮತ್ತು ಕೃಷಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಇದೇ ಫೆಬ್ರವರಿ 10ರಂದು ಫಲಪುಷ್ಪ ಪ್ರದರ್ಶನ ಆರಂಭವಾಗಲಿದೆ. ಫೆಬ್ರವರಿ 10ರಂದು ಸಂಜೆ 6ಕ್ಕೆ ತೋಟಗಾರಿಕೆ ಇಲಾಖೆ ಆವರಣದಲ್ಲಿ 30ನೇ ಫಲಪುಷ್ಪ ಪ್ರದರ್ಶನ ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ. ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಹಾಗೂ ಸಾರಿಗೆ ಸಚಿವ ಬಿ. ಶ್ರೀರಾಮುಲು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಕೃಷಿ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ಪಾಟೀಲ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ವಿಶೇಷ ಅಹ್ವಾನಿತರಾಗಿ ವಿಧಾನ ಪರಿಷತ್ ಮುಖ್ಯ ಸಚೇತಕ ಡಾ.ವೈ.ಎ ನಾರಾಯಣಸ್ವಾಮಿ ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ. ಶಾಸಕ ಜಿ.ಹೆಚ್. ತಿಪ್ಪಾರೆಡ್ಡಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಹೊಳಲ್ಕೆರೆ ಶಾಸಕರು ಹಾಗೂ ರಾಜ್ಯ ಸಾರಿಗೆ ನಿಗಮದ ಅಧ್ಯಕ್ಷ ಎಂ. ಚಂದ್ರಪ್ಪ, ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಹೊಸದುರ್ಗ ಶಾಸಕ ಗೂಳಿಹಟ್ಟಿ ಡಿ. ಶೇಖರ್, ಶಾಸಕರಾದ ಟಿ. ರಘುಮೂರ್ತಿ, ಪೂರ್ಣಿಮಾ ಕೆ. ಶ್ರೀನಿವಾಸ್, ವಿಧಾನ ಪರಿಷತ್ ಸದಸ್ಯರಾದ ಚಿದಾನಂದ ಎಂ.ಗೌಡ, ಕೆ.ಎಸ್. ನವೀನ್ ಸೇರಿದಂತೆ ಮತ್ತಿತರರು ಭಾಗಿಯಾಗಲಿದ್ದಾರೆ.

ಕೋಟೆ ನಾಡಲ್ಲಿ ಫಲಪುಷ್ಪ ಪ್ರದರ್ಶನ
ಫಲಪುಷ್ಪ ಪ್ರದರ್ಶನದ ಅಂಗವಾಗಿ ತೋಟಗಾರಿಕೆ ಇಲಾಖೆ, ಜಿಲ್ಲಾ ಪಂಚಾಯತ್, ಜಿಲ್ಲಾ ತೋಟಗಾರಿಕೆ ಸಂಘ ಮತ್ತು ಕೃಷಿ ಇಲಾಖೆ ಸಹಯೋಗದಲ್ಲಿ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ತೋಟಗಾರಿಕೆ ಆವರಣದಲ್ಲಿ ಫೆಬ್ರವರಿ 10 ರಂದು ಬೆಳಗ್ಗೆ 11 ಗಂಟೆಯಿಂದ ಸಂಜೆ 5ರವರೆಗೆ ತರಕಾರಿ ಕೆತ್ತನೆ ಮತ್ತು ಹೂವುಗಳ ಜೋಡಣೆ, ರಂಗೋಲಿ ಸ್ಪರ್ಧೆಗಳು ಸೇರಿದಂತೆ ವಿವಿಧ ಕಾರ್ಯಕ್ರಮಗಳು ಜರುಗಲಿವೆ. ಸ್ಪರ್ಧಿಗಳು ರಂಗೋಲಿ ಹಾಕಲು ಹಣ್ಣು, ತರಕಾರಿ, ಹೂಗಳು, ಕಾಳುಗಳನ್ನು ಮಾತ್ರ ಉಪಯೋಗಿಸಬೇಕು.

ಕಾರ್ಯಕ್ರಮ ಆರಂಭದ ಸಮಯ
ಇನ್ನು ಫೆಬ್ರವರಿ 11 ರಂದು ಬೆಳಗ್ಗೆ 11 ರಿಂದ 12 ಗಂಟೆವರಗೆ 1 ಮತ್ತು 2ನೇ ತರಗತಿ ವಿದ್ಯಾರ್ಥಿಗಳಿಗೆ ಹಣ್ಣು ಮತ್ತು ತರಕಾರಿಗಳನ್ನು ಗುರುತಿಸುವ, ಬೆಳಗ್ಗೆ 12 ರಿಂದ 12:30ರವರೆಗೆ 5 ರಿಂದ 7 ಹಾಗೂ 8 ರಿಮದ 10ನೇ ತರಗತಿ ವಿದ್ಯಾರ್ಥಿಗಳಿಗೆ ಎರಡು ವಿಭಾಗದಲ್ಲಿ ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಲಾಗುತ್ತದೆ.

ಸ್ಪರ್ಧೆಯಲ್ಲಿ ಭಾಗವಹಿಸಲು ಇರುವ ನಿಯಮ
8 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನ 2 ರಿಂದ 3 ಗಂಟೆವರಗೆ ಆಶುಭಾಷಣ ಮತ್ತು ಪ್ರಬಂಧ ಸ್ಪರ್ಧೆ ಇರಲಿದೆ. ಸಂಜೆ 6:30ಕ್ಕೆ 1 ರಿಂದ 4ನೇ ತರಗತಿ ವಿದ್ಯಾರ್ಥಿಗಳಿಗೆ ಹೂವು-ಹಣ್ಣು, ಸೊಪ್ಪು, ತರಕಾರಿಗಳನ್ನು ಬಳಸಿದ ಫ್ಯಾನ್ಸಿ ಡ್ರಸ್ ಸ್ಪರ್ಧೆ, ಸಂಜೆ 5 ರಿಂದ 7ರವರೆಗೆ 8 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ವೈಯಕ್ತಿಕ ವಿಭಾಗದಲ್ಲಿ ಜಾನಪದ ಮತ್ತು ಭಾವಗೀತೆ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.

ಗಮನ ಸೆಳೆಯಲಿರೋ ವಿವಿಧ ಬಗೆಯ ಹೂಗಳು
ಫೆಬ್ರವರಿ 11ರಂದು ಸಾರ್ವಜನಿಕರಿಗಾಗಿ ಮನೆ ಆವರಣದಲ್ಲಿ ನಡೆಯುವ ಸ್ಪರ್ಧೆಗಳ ಅಂಗವಾಗಿ ತೀರ್ಪುಗಾರರು ಸ್ಥಳಗಳಿಗೆ ತೆರಳಿ, ವಿವಿಧ ಜಾತಿಯ ಅಲಂಕಾರಿಕ ಕುಂಡಗಳ ಜೊಡಣೆ, ಮನೆ ಮತ್ತು ಸಂಸ್ಥೆಗಳ ಆವರಣದಲ್ಲಿ ಉದ್ಯಾನವನಗಳ ಸ್ಪರ್ಧೆಯ ತೀರ್ಪಗಳನ್ನು ಕೈಗೊಳ್ಳುವರು. ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಮಾಣ ಪತ್ರ ಮತ್ತು ನೆನಪಿನ ಕಾಣಿಕೆಯನ್ನು ವಿತರಿಸಲಾಗುವುದು.












Click it and Unblock the Notifications