ವಿವಿ ಸಾಗರ ಜಲಾಶಯದಲ್ಲಿ ಆತ್ಮಹತ್ಯೆಗೆ ಮುಂದಾಗಿದ್ದ 6 ಜನರನ್ನು ರಕ್ಷಿಸಿದ 112 ಸಹಾಯವಾಣಿ ಸಿಬ್ಬಂದಿ
ಚಿತ್ರದುರ್ಗ,ಡಿ.6: ಕೌಟುಂಬಿಕ ಕಲಹದಿಂದ ಬೇಸತ್ತು ಕುಟುಂಬವೊಂದರ 6 ಜನ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ವಾಣಿವಿಲಾಸ ಜಲಾಶಯಕ್ಕೆ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದರು. ಆದರೆ, ರಾಜ್ಯ ಸರ್ಕಾರದ 112 ಸಹಾಯವಾಣಿ ಸಿಬ್ಬಂದಿ ಸಕಾಲಕ್ಕೆ ಘಟನಾ ಸ್ಥಳಕ್ಕೆ ಹೋಗಿ ಆತ್ಮಹತ್ಯೆಗೆ ಮುಂದಾದವರನ್ನು ರಕ್ಷಿಸಿದ ಘಟನೆ ಸೋಮವಾರ ಸಂಜೆ ಚಿತ್ರದುರ್ಗದಲ್ಲಿ ನಡೆದಿದೆ.
ಹಿರಿಯೂರು ತಾಲೂಕಿನ ರಂಗೇನಹಳ್ಳಿ ಗ್ರಾಮದ ಸಕ್ರಪ್ಪ ಎಂಬವರ ಪತ್ನಿ ರತ್ನಮ್ಮ ಕೌಟುಂಬಿಕ ಕಲಹದಿಂದ ಬೇಸತ್ತು ಗಂಡನಿಂದ ಬೇರೆಯಾಗಿ ಹಿರಿಯೂರು ನಗರದ ಸಕ್ಕರೆ ಕಾರ್ಖಾನೆ ವಸತಿ ಗೃಹದಲ್ಲಿ ಎರಡು ತಿಂಗಳಿನಿಂದ ನೆಲೆಸಿದ್ದರು. ಈ ತಾಯಿಯ ಮೂವರು ಮಕ್ಕಳು ಸಹ ಇದ್ದರು. ರತ್ನಮ್ಮ ಜೊತೆ ಸಕ್ರಪ್ಪ ಅವರ ಸಹೋದರಿಯೂ ವಾಸವಿದ್ದರು. ಹೆಂಡತಿಯಿಂದ ದೂರವಿದ್ದ ಸಕ್ರಪ್ಪ ಸೋಮವಾರ ತನ್ನ ಪತ್ನಿ ವಾಸವಾಗಿದ್ದ ಮನೆಯ ಹತ್ತಿರ ಬಂದು ಗಲಾಟೆ ಮಾಡಿದ್ದಾನೆ.
ಈ ಗಲಾಟೆಯಿಂದ ಬೇಸತ್ತ ರತ್ನಮ್ಮ, ಇದೇ ರೀತಿ ತೊಂದರೆ ಕೊಟ್ಟರೆ ಮಾರಿಕಣಿವೆ ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ರತ್ನಮ್ಮ ಮಕ್ಕಳ ಜೊತೆ ಕೆರೆ ಕಡೆ ವಿವಿ ಸಾಗರ ಜಲಾಶಯದತ್ತ ಹೊರಟಿದ್ದಾರೆ. ಈ ಸಂದರ್ಭದಲ್ಲಿ ತಾವೂ ಸಹ ಸಾಯುತ್ತೇವೆ ಎಂದು ಸಕ್ರಪ್ಪ ಮತ್ತು ಆತನ ಸಹೋದರಿಯೂ ಹಿಂಬಾಲಿಸಿದ್ದಾರೆ. ಈ ಮಧ್ಯೆ ಎಚ್ಚೆತ್ತುಕೊಂಡ ರತ್ನಮ್ಮ, ತನ್ನ ಮಕ್ಕಳನ್ನು ಸಕ್ರಪ್ಪ ಎಲ್ಲಿ ನೀರಿಗೆ ತಳ್ಳಿ ಸಾಯುಸುತ್ತಾನೆ ಎಂಬ ಭಯದಿಂದ ಮಹಿಳಾ ಮತ್ತು ಮಕ್ಕಳ ಸಹಾಯವಾಣಿ 112 ಕ್ಕೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.

ತಕ್ಷಣವೇ ಸಹಾಯವಾಣಿ ಕೇಂದ್ರದ ಸಿಬ್ಬಂದಿ ಪೊಲೀಸ್ ಹೊಯ್ಸಳ ತಂಡಕ್ಕೆ ವಿಷಯ ತಿಳಿಸಿದ್ದು, ಪೊಲೀಸ್ ಅಧಿಕಾರಿ ಗಂಗಾಧರ್ ಮತ್ತು ರವಿ ತಕ್ಷಣ ಕಾರ್ಯಪ್ರವೃತ್ತರಾಗಿ ಘಟನಾ ಸ್ಥಳಕ್ಕೆ ಹೋಗಿದ್ದಾರೆ. ಜಲಾಶಯದ ಬಳಿ ಆತ್ಮಹತ್ಯೆಗೆ ಮುಂದಾದವರನ್ನು ಮನ ಒಲಿಸಿ ಹಿರಿಯೂರಿನ ಗ್ರಾಮಾಂತರ ಠಾಣೆಗೆ ಕರೆತಂದಿದ್ದಾರೆ. ಠಾಣೆಯಲ್ಲಿ ಪೋಲಿಸರು ಪತಿ ಪತ್ನಿಗೆ ಬುದ್ಧಿವಾದ ಹೇಳಿ ಮನೆಗೆ ಕಳುಹಿಸಿದ್ದಾರೆ. ಸಕ್ರಪ್ಪ ತನ್ನ ಅಕ್ಕನ ಮಗಳು ರತ್ನಮ್ಮಳನ್ನು ಮದುವೆಯಾಗಿದ್ದು, ಒಬ್ಬ ಮಗ, ಇಬ್ಬರು ಹೆಣ್ಣು ಮಕ್ಕಳಿದ್ದಾರೆ.
ಇನ್ನೂ ಯಶಸ್ವಿ ಕಾರ್ಯಾಚರಣೆ ನಡೆಸಿದ ಇಆರ್ ಎಸ್ಎಸ್ ಕೇಂದ್ರದ ಸಿಬ್ಬಂದಿಯಾದ ಹೊಯ್ಸಳ -07 ವಾಹನದ ಅಧಿಕಾರಿ ಮತ್ತು ಚಾಲಕರಿಗೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಜಿ ರಾಧಿಕಾ ಅಭಿನಂದಿಸಿದ್ದಾರೆ.
ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಬೆಂಗಳೂರಿನಲ್ಲಿ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ SAHAI ಸಹಾಯವಾಣಿ ಇಂತಿದೆ: 080 - 25497777












Click it and Unblock the Notifications