ಕಡೂರಿನಲ್ಲಿ ಇಂದು ವೈಎಸ್‌ವಿ ದತ್ತಾ ನಾಮಪತ್ರ ಸಲ್ಲಿಕೆ: ದೇವೇಗೌಡ ಹಾಜರು
ಕಡೂರು ಏಪ್ರಿಲ್ 18: ಚಿಕ್ಕಮಗಳೂರಿನ ಕಡೂರಿನಲ್ಲಿ ಇಂದು ವೈಎಸ್‌ವಿ ದತ್ತಾ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಈ ವೇಳೆ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರೂ ಹಾಜರಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇತ್ತೀಚಿಗೆ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದ ಕಡೂರು ಕ್ಷೇತ್ರದ ಮಾಜಿ ಶಾಸಕ ವೈ.ಎಸ್.ವಿ.ದತ್ತಾ ಮತ್ತೆ ಜೆಡಿಎಸ್ ಗೆ ಮರಳಿದ್ದಾರೆ. ಕಾಂಗ್ರೆಸ್ ನಿಂದ ಟಿಕೆಟ್ ಸಿಗದೆ ಅಸಮಾಧಾನಗೊಂಡು ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸುವುದಾಗಿ ಹೇಳಿಕೆ ನೀಡಿದ್ದ ದತ್ತಾ ಅವರು ಮಾಜಿ ಸಚಿವ ಎಚ್.ಡಿ. ರೇವಣ್ಣ ಮತ್ತು ಸಂಸದ ಪ್ರಜ್ವಲ್ ರೇವಣ್ಣ ಅವರ ಸಮ್ಮುಖದಲ್ಲಿ ಜೆಡಿಎಸ್ ಗೆ ವಾಪಸ್ಸಾದರು.

ಜೊತೆಗೆ ಜೆಡಿಎಸ್‌ನಿಂದ ದತ್ತಾ ಅವರಿಗೆ ಕಡೂರು ಟಿಕೆಟ್ ನೀಡಲಾಗಿದೆ. ಕಡೂರಿನ ಜೆಡಿಎಸ್ ಅಭ್ಯರ್ಥಿಯಾದ ವೈ.ಎಸ್.ವಿ.ದತ್ತಾ ಇಂದು ಸಂಸದ ಪ್ರಜ್ವಲ್ ರೇವಣ್ಣ, ಹೆಚ್‌ಡಿ ದೇವೇಗೌಡ ಅವರ ಕುಟುಂಬದೊಂದಿಗೆ ನಾಮಪತ್ರ ಸಲ್ಲಿಸಲಿದ್ದಾರೆ.
ನನ್ನ ಬಳಿ ಹಣ ಇಲ್ಲ, ಜಾತಿ ಇಲ್ಲ ನಾನೊಬ್ಬ ಸಾಲಗಾರ. ಆದರೆ ನನ್ನ ಬಳಿ ಜನ ಬೆಂಬಲ ಇದೆ, ನಾನು ಹೇಳಿದರೆ 10 ಸಾವಿರ ಜನ ಬರುತ್ತಾರೆ. ನನ್ನ ಬಳಿ ಆಸ್ತಿ, ಇಲ್ಲದಿದ್ದರೆ ಪ್ರೀತಿ ಇಲ್ಲವೇ. ಜಾತಿ ರಾಜಕಾರಣಿ ಬೇಡ, ಪ್ರೀತಿ ರಾಜಕಾರಣ ಮಾಡೋಣ ಅಂತಾ ದತ್ತಾ ಕರೆ ಕೊಟ್ಟಿದ್ದಾರೆ.
ದತ್ತಾ ಬಗ್ಗೆ ವ್ಯಂಗ್ಯವಾಡಿದ್ದ ಎಚ್‌ಡಿ ಕುಮಾರಸ್ವಾಮಿ
ಕಳೆದ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ ಸೋತಿದ್ದ ಮಾಜಿ ಸಚಿವ ವೈಎಸ್‌ವಿ ದತ್ತಾ ಅವರು ಕಾಂಗ್ರೆಸ್ ಸೇರಿದ್ದಾಗ ಜೆಡಿಎಸ್ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಕೋಪಗೊಂಡಿದ್ದರು. ವೈಎಸ್‌ವಿ ದತ್ತಾ ಅವರ ಬಗ್ಗೆ ವ್ಯಂಗ್ಯವಾಡಿದ್ದರು. 'ವೈಎಸ್‌ವಿ ದತ್ತಾ ಯಾರೆಂದೇ ನನಗೆ ಗೊತ್ತಿಲ್ಲ. ಅವರು ತುಂಬಾ ದೊಡ್ಡವರು. ಅವರ ಬಗ್ಗೆ ನನಗೆ ಏನೂ ಗೊತ್ತಿಲ್ಲ. ಅವರ ಬಗ್ಗೆ ನಾನೇಕೆ ಚರ್ಚೆ ಮಾಡಲಿ' ಎಂದು ಎಚ್‌ಡಿ ಕುಮಾರಸ್ವಾಮಿ ವ್ಯಂಗ್ಯವಾಡಿದ್ದರು.
ಕಡೂರು ಪಟ್ಟಣದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಮಾವೇಶದಲ್ಲಿ ಕಳೆದ ಶನಿವಾರ (ಏಪ್ರಿಲ್ 8) ಮಾತನಾಡಿ ಮಾಜಿ ಶಾಸಕ ವೈಎಸ್‌ವಿ ದತ್ತ ವಿರುದ್ಧ ಟೀಕಾಪ್ರಹಾರ ನಡೆಸಿದ ಎಚ್‌ಡಿ ಕುಮಾರಸ್ವಾಮಿ, ನನ್ನದು ಸಣ್ಣ ಪಕ್ಷ. ನನ್ನ ಪಕ್ಷಕ್ಕೆ ಅವರೇಕೆ ಬರುತ್ತಾರೆ? ಅವರು ರಾಷ್ಟ್ರೀಯ ಪಕ್ಷದಿಂದ ಸ್ಪರ್ಧಿಸಲು ಹೊರಟವರು. ನನ್ನ ಪಕ್ಷದಲ್ಲಿ ಅವರಿಗೆ ಏನು ಸಿಗುತ್ತೆ ಎಂದು ಕಿಚಾಯಿಸಿದ್ದರು.
ನಮ್ಮ ಪಕ್ಷಕ್ಕೆ ಅವರು ದೋಖಾ ಮಾಡಿ ಹೋಗಿದ್ದಾರೆ. ಹಾಗಿದ್ದರೂ ಕೂಡ ಕಡೂರು ವಿಧಾನಸಭಾ ಕ್ಷೇತ್ರವನ್ನು ಉಳಿಸಿಕೊಳ್ಳುತ್ತೇವೆ. ನಾವು ಅವರಿಗೆ ಏನು ಅನ್ಯಾಯ ಮಾಡಿದ್ದೀವಿ ಅಂತಾ ಹೇಳಲಿ ಎಂದ ಎಚ್‌ಡಿಕೆ, ನಮಗಿಂತ ಹೆಚ್ಚಾಗಿ 40 ವರ್ಷಗಳಿಂದ ದೇವೇಗೌಡರಿಗೆ ಅವರು ಮಾನಸ ಪುತ್ರರಾಗಿದ್ದರು. ಹೀಗಿದ್ದರೂ ಜೆಡಿಎಸ್ ಪಕ್ಷಕ್ಕೆ ಮೋಸ ಮಾಡಿದ್ದಾರೆ ಎಂದು ಕುಮಾರಸ್ವಾಮಿ ಕಿಡಿ ಕಾರಿದ್ದರು.
ಇಂದು ದತ್ತಾ ನಾಮಪತ್ರ ಸಲ್ಲಿಕೆಯ ವೇಳೆಯೂ ಕುಮಾರಸ್ವಾಮಿ ಭಾಗಿಯಾಗಿರಲಿಲ್ಲ. ಬದಲಿಗೆ ದೇವೇಗೌಡ ಹಾಗೂ ರೇವಣ್ಣ ಭಾಗಿಯಾಗಿದ್ದರು.
ದತ್ತಾ ಜೆಡಿಎಸ್ ಮನೆ ಮಗ ಎಂದ ಎಚ್‌ಡಿ ರೇವಣ್ಣ
ದತ್ತಾ ಬಗ್ಗೆ ಮಾತನಾಡಿದ ಎಚ್‌ಡಿ ರೇವಣ್ಣ, " ದತ್ತಾ ಜೆಡಿಎಸ್ ಸೇರ್ಪಡೆ ಏನಿಲ್ಲ, ಜೆಡಿಎಸ್ ಅವರ ಕಳೆದ 50 ವರ್ಷದ ಮನೆ. ಅವರಿಗೆ ಅವರ ಮನೆಗೆ ಬರೋದಕ್ಕೆ ಏನು ಹೊಸ ಸಂಪ್ರದಾಯ ಬೇಕಿಲ್ಲ. ಅವರ ಮನೆಗೆ ಅವರು ಬಂದಿದ್ದಾರೆ. ದೇವೇಗೌಡರೇ ಹೇಳಿದ ಮೇಲೆ ಎಲ್ಲಾ ಮುಗಿಯಿತು. ಈ ಹಿಂದೆ ಕಡೂರು ಟಿಕೆಟ್ ಘೋಷಣೆ ಅಭ್ಯರ್ಥಿ ಧನಂಜಯ್ ಅವರನ್ನ ಕರೆಸಿ ದೇವೇಗೌಡರು ಮಾತನಾಡುತ್ತಾರೆ. ಜೆಡಿಎಸ್ ಗೆಲ್ಲಬೇಕು, ಕಾರ್ಯಕರ್ತರು ಉಳಿಯಬೇಕು, ದೇವೇಗೌಡರು, ಕುಮಾರಣ್ಣ ನಿರ್ಣಯ ಮಾಡುತ್ತಾರೆ'' ಎಂದರು.
'ದತ್ತನ ಬಳಿ ಇರೋದು ಒಂದು ಪಂಚೆ, ಒಂದು ಶರ್ಟ್ ಅಷ್ಟೆ. ನಾನೇ ಮಿನಿಸ್ಟರ್ ಆದಾಗ ಕಾರು ಕೊಡಿಸ್ತೀನಿ ಅಂದೆ. ಬೇಡ ಸರ್, ನಂಗೇ ಆಟೋನೆ ಸಾಕು ಅಂದಿದ್ರು' ಎಂದು ರೇವಣ್ಣ ದತ್ತಾ ಸರಳತೆಯನ್ನು ಸ್ಮರಿಸಿದರು.












Click it and Unblock the Notifications