ಸೀರೆ ಸೆರಗಿನಿಂದ ಅವಾಂತರ: ಬೈಕ್ ಚಕ್ರದೊಳಗೆ ಸಿಲುಕಿದ ಮಹಿಳೆ ಕಾಲು
ಬೈಕ್‌ನ ಹಿಂಬದಿಯಲ್ಲಿ ಕೂತಿದ್ದ ಮಹಿಳೆಯ ಸೀರೆ ಸೆರಗು ಹಾಗೂ ನೆರಿಗೆ ಬೈಕ್‌ನ ಚಕ್ರಕ್ಕೆ ಸಿಕ್ಕಿ, ಕಾಲು ಕೂಡ ಬೈಕ್‌ನ ಚಕ್ರದೊಳಗೆ ಸಿಲುಕಿಕೊಂಡು ಸುಮಾರು ಒಂದು ಗಂಟೆಗಳ ಕಾಲ ಮಹಿಳೆ ನರಳಾಡಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಪಟ್ಟಣದಲ್ಲಿ ನಡೆದಿದೆ.
ಚಿಕ್ಕಮಗಳೂರು, ಫೆಬ್ರವರಿ 8: ಬೈಕ್‌ನಲ್ಲಿ ತೆರಳುವ ವೇಳೆ ಬೈಕ್ ಸವಾರನಷ್ಟೇ ಹಿಂಬದಿ ಸವಾರರು ಕೂಡ ಅಪಘಾತವಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿರಬೇಕು. ಬೈಕ್ ಸವಾರಿ ವೇಳೆ ಹಿಂಬದಿ ಸವಾರರು ಕೂಡ ಹೆಲ್ಮೇಟ್ ಧರಿಸುವುದಷ್ಟೇ ಅಲ್ಲದೇ ಇತರ ವಿಚಾರದಲ್ಲಿ ಕೂಡ ಎಚ್ಚರಿಕೆಯಿಂದ ಇರಬೇಕು.
ಮುಖ್ಯವಾಗಿ ಮಹಿಳೆಯರು ಬೈಕ್‌ನಲ್ಲಿ ತೆರಳುವ ವೇಳೆ ಎಚ್ಚರ ವಹಿಸಬೇಕು. ಚೂಡಿದಾರ್ ಹಾಗೂ ಸೀರೆ ಧರಿಸಿ ಬೈಕ್‌ನಲ್ಲಿ ತೆರಳುವ ವೇಳೆ ಬಟ್ಟೆ ಬೈಕ್ ಚಕ್ರಕ್ಕೆ ಸಿಗದಂತೆ ಮೊದಲೇ ಎಚ್ಚರಿಕೆಯಿಂದ ಇರಬೇಕು. ಏಕೆಂದರೆ ಸೀರೆ ಧರಿಸಿ ಬೈಕ್‌ನಲ್ಲಿ ತೆರಳುತ್ತಿದ್ದ ಮಹಿಳೆಯ ಕಾಲು ಚಕ್ರದೊಳಗೆ ಸಿಲುಕಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಪಟ್ಟಣದಲ್ಲಿ ನಡೆದಿದೆ.
ಬೈಕ್‌ನ ಹಿಂಬದಿಯಲ್ಲಿ ಕೂತಿದ್ದ ಮಹಿಳೆಯ ಸೀರೆ ಸೆರಗು ಹಾಗೂ ನೆರಿಗೆ ಬೈಕ್‌ನ ಚಕ್ರಕ್ಕೆ ಸಿಕ್ಕಿ, ಕಾಲು ಕೂಡ ಬೈಕ್‌ನ ಚಕ್ರದೊಳಗೆ ಸಿಲುಕಿಕೊಂಡು ಸುಮಾರು ಒಂದು ಗಂಟೆಗಳ ಕಾಲ ಮಹಿಳೆ ನರಳಾಡಿದ ಘಟನೆ ನಡೆದಿದೆ.

ತರೀಕೆರೆ ಪಟ್ಟಣ ಸಮೀಪದ ಇಟ್ಟಿಗೆ ಗ್ರಾಮದ ಯಶೋದಾ ಬಾಯಿ ಎನ್ನುವ ಮಹಿಳೆ ಬೈಕ್‌ನಲ್ಲಿ ತರೀಕೆರೆ ಪಟ್ಟಣಕ್ಕೆ ತೆರಳುವಾಗ ಈ ದುರ್ಘಟನೆ ಸಂಭವಿಸಿದೆ. ಮೊದಲು ಬೈಕ್‌ನ ಹಿಂದೆ ಕೂತಿದ್ದ ಯಶೋದಾ ಬಾಯಿ ಅವರ ಸೀರೆಯ ಸೆರಗು ಹಾಗೂ ನೆರಿಗೆ ಬೈಕ್‌ನ ಚಕ್ರಕ್ಕೆ ಸಿಲುಕಿದೆ. ಹೀಗೆ ಕೆಲವು ದೂರ ಕ್ರಮಿಸಿದ ಬಳಿಕ ಮಹಿಳೆಯ ಕಾಲು ಗೇರ್ ಬಾಕ್ಸ್ ಮೂಲಕ ಚಕ್ರದ ಒಳಗೆ ಸಿಲುಕಿಕೊಂಡಿದೆ. ಈ ವೇಳೆ ಕೂಡಲೇ ಮಹಿಳೆ ಹಾಗೂ ಬೈಕ್ ಸವಾರ ಕೆಳಕ್ಕೆ ಬಿದ್ದಿದ್ದಾರೆ.
ಬೈಕ್ ಸವಾರ ಕೂಡಲೇ ಎದ್ದು ರಸ್ತೆಯಲ್ಲಿ ಬಿದ್ದಿದ್ದ ಯಶೋದಾ ಬಾಯಿ ಅವರನ್ನು ಮೇಲಕ್ಕೆತ್ತಲು ಯತ್ನಿಸಿದ್ದಾರೆ. ಈ ವೇಳೆ ಕಾಲು ಗೇರ್ ಬಾಕ್ಸ್ ಮೂಲಕ ಚಕ್ರದ ಒಳಗೆ ಸಿಲುಕಿರುವುದು ಕಂಡುಬಂದಿದೆ. ಸುಮಾರು ಒಂದು ಗಂಟೆಗಳ ಕಾಲ ಮಹಿಳೆಯ ಕಾಲು ಹೊರಕ್ಕೆ ತೆಗೆಯಲು ಯತ್ನಿಸಲಾಗಿದೆ. ಕೊನೆಯಲ್ಲಿ ಬೈಕ್‌ನ ಚೈನ್ ಕತ್ತರಿಸಿ ಗೇರ್ ಬಾಕ್ಸ್ ಬಿಚ್ಚಿ ಮಹಿಳೆಯ ಕಾಲನ್ನು ಹೊರ ತೆಗೆದಿದ್ದಾರೆ.
ಘಟನೆಯಲ್ಲಿ ಮಹಿಳೆಯ ಕಾಲಿಗೆ ಗಂಭೀರ ಗಾಯವಾಗಿದ್ದು, ತೀವ್ರ ರಕ್ತಸ್ರಾವ ಉಂಟಾಗಿದೆ. ಈ ಅಪಘಾತದ ದೃಶ್ಯ ನೋಡುಗರ ಎದೆ ಝಲ್ ಎನಿಸುವಂತಿತ್ತು. ಗಂಭೀರ ಗಾಯಗೊಂಡಿದ್ದ ಮಹಿಳೆಯನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗಿದೆ.












Click it and Unblock the Notifications