17% ವೇತನ ಹೆಚ್ಚಳ: ಸರ್ಕಾರಿ ನೌಕರರಿಗೆ ಸರ್ಕಾರದ ಮೇಲೆ ನಂಬಿಕೆ ಬಂದಿಲ್ಲ: ಎಚ್.ಡಿ. ಕುಮಾರಸ್ವಾಮಿ
ಸರ್ಕಾರಿ ನೌಕರರಿಗೆ 17% ವೇತನ ಹೆಚ್ಚಳ ಮಾಡುತ್ತೇವೆ ಸಿಎಂ ಹೇಳಿದ್ದಾರೆ. ಆದರೆ ನೌಕರರಿಗೆ ನಂಬಿಕೆ ಬಂದಿಲ್ಲ ಎಂದು ಎಚ್.ಡಿ. ಕುಮಾರಸ್ವಾಮಿ ಪ್ರತಿಕ್ರಿಯಿಸಿದರು.
ಚಿಕ್ಕಮಗಳೂರು, ಮಾರ್ಚ್, 01: 7ನೇ ವೇತನ ಆಯೋಗ ಜಾರಿಗೆ ತರುವಂತೆ ಆಗ್ರಹಿಸಿ ರಾಜ್ಯ ಸರ್ಕಾರಿ ನೌಕರರು ನಡೆಸುತ್ತಿರುವ ಪ್ರತಿಭಟನೆಗೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಂಪೂರ್ಣ ಬೆಂಬಲ ವ್ಯಕ್ತವಾಗಿದೆ. ಇನ್ನು ಈ ಬಗ್ಗೆ ಚಿಕ್ಕಮಗಳೂರಿನಲ್ಲಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದು, ಸರ್ಕಾರಿ ನೌಕರರಿಗೆ 17% ವೇತನ ಹೆಚ್ಚಳ ಮಾಡುತ್ತೇವೆ ಸಿಎಂ ಹೇಳಿದ್ದಾರೆ. ಆದರೆ ನೌಕರರಿಗೆ ನಂಬಿಕೆ ಬಂದಿಲ್ಲ. ದುಡ್ಡು ಎಲ್ಲಿದೆ ತರುತ್ತಾರೆ ನೋಡೋಣ. ಅದನ್ನು ಬಜೆಟ್ ದಿನ ಘೋಷಣೆ ಮಾಡಬೇಕಿತ್ತು. ಇಷ್ಟೆಲ್ಲಾ ಸಮಸ್ಯೆ ಎದುರಾಗುತ್ತಿರಲಿಲ್ಲ ಎಂದರು.
ಅಭೂತಪೂರ್ವ ಬೆಂಬಲ ಸಿಕ್ಕಿದೆ
ಚಿಕ್ಕಮಗಳೂರು ಕ್ಷೇತ್ರದಲ್ಲಿ ಅಭೂತಪೂರ್ವ ಬೆಂಬಲ ಪಂಚರತ್ನ ರಥಯಾತ್ರೆಗೆ ಸಿಕ್ಕಿದೆ - ಹೆಚ್ ಡಿಕೆ
ಪಂಚರತ್ನ ರಥಯಾತ್ರೆಗೆ ಚಿಕ್ಕಮಗಳೂರು ಕ್ಷೇತ್ರದಲ್ಲಿ ಅಭೂತಪೂರ್ವ ಬೆಂಬಲ ಸಿಕ್ಕಿದೆ. ಯಾತ್ರೆ ವೇಳೆ ಜನರು ಸಾಕಷ್ಟು ಸಂಕಷ್ಟಗಳನ್ನು ಹೇಳಿಕೊಂಡಿದ್ದಾರೆ ಎಂದರು. ಹಾಗೆಯೇ ಚಿಕ್ಕಮಗಳೂರಿನ ತೇಗೂರಿನಲ್ಲಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಶಾಸಕರಿಂದ ತಾರತಮ್ಯ ನಡೆಯುತ್ತಿದೆ ಎಂದು ಜನರು ಹೇಳಿದ್ದಾರೆ. ಮತ ಹಾಕಿದವರಿಗೆ ಒಂದು ಮತ ಹಾಕದವರಿಗೆ ಮತ್ತೊಂದು ರೀತಿ ನೋಡುತ್ತಾರೆ ಎಂದು ಜನರು ತಿಳಿಸಿದ್ದಾರೆ ಎಂದರು.

ಬಿಜೆಪಿಯವರ ಭದ್ರಕೋಟೆಗಳು ಅಲುಗಾಡುತ್ತಿವೆ
ಜೆಡಿಎಸ್ ಎರಡು ಜಿಲ್ಲೆಗೆ ಸೀಮಿತ ಎಂದು ಬಿಜೆಪಿಯವರು ಹೇಳಿದ್ದಾರೆ. ಆದರೆ ಅವರ ಭದ್ರಕೋಟೆಗಳು ಅಲುಗಾಡುತ್ತಿವೆ. ಮೊದಲು ಅಲ್ಲಿ ಭದ್ರ ಮಾಡಿಕೊಳ್ಳಲಿ ಯಾವ ಬ್ರಹ್ಮಾಸ್ತ್ರ ಕೂಡ ಜೆಡಿಎಸ್ ಭದ್ರಕೋಟೆ ಜಿಲ್ಲೆಗಳಲ್ಲಿ ನಡೆಯಲ್ಲ ಎಂದರು. ಬಿಜೆಪಿಯವರು ಜೆಸಿಬಿ ಮೂಲಕ ಖಜಾನೆ ಲೂಟಿ ಮಾಡುತ್ತಿದ್ದಾರೆ. ಜನರು ಎರಡು ರಾಷ್ಟ್ರೀಯ ಪಕ್ಷಗಳನ್ನು ಹೊರಗಿಡಲು ತೀರ್ಮಾನಿಸಿದ್ದಾರೆ ಎಂದರು.
ಜನರ ಬಳಿ ನಾನು ಹೋಗುತ್ತಿದ್ದೇನೆ
ಜೆಡಿಎಸ್‌ನ ಮುಗಿಸುವುದಾಗಿ ಹೇಳಿದ್ದಾರೆ. ಕೇವಲ 20 ಸ್ಥಾನ ಗೆಲ್ಲುತ್ತದೆ ಎನ್ನುತ್ತಿದ್ದರು. ಆದರೆ ಜನರ ಬೆಂಬಲ ನೋಡಿದರೆ ಬಿಜೆಪಿ ಕಾಂಗ್ರೆಸ್‌ಗಿಂತ ಒಂದು ಹೆಜ್ಜೆ ಮುಂದೆ ಇದೆ. ನಾನು ಜನರನ್ನು ಕರೆಸುತ್ತಿಲ್ಲ, ಜನರಿದ್ದ ಬಳಿ ನಾನು ಹೋಗುತ್ತಿದ್ದೇನೆ ಎಂದರು.

ಸಿದ್ದರಾಮಯ್ಯ ವಿರುದ್ದ ಎಚ್‌ಡಿಕೆ ವಾಗ್ದಾಳಿ
ಸಿದ್ದರಾಮಯ್ಯನವರೇ ಪದೇ-ಪದೇ ಜೆಡಿಎಸ್ ಬಗ್ಗೆ ಚರ್ಚೆ ಮಾತನಾಡಬೇಡಿ. ರಾಜ್ಯದ ಆರ್ಥಿಕ ಪರಿಸ್ಥಿರಿ ಹದೆಗೆಟ್ಟು ಹೋಗಿದೆ. ಇದರಲ್ಲಿ ಬಿಜೆಪಿಯದ್ದು ಮಾತ್ರವಲ್ಲ, ನಿಮ್ಮದೂ ಪಾಲಿದೆ ಎಂದು ಮಾಜಿ ಎಚ್.ಡಿ.ಕುಮಾರಸ್ವಾಮಿ ಚಿಕ್ಕಮಗಳೂರಿನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮಾತಾನಾಡಿದ ಅವರು, ಸಿದ್ದರಾಮಯ್ಯನವರೇ ಚುನಾವಣೆಗೆ ಹೋಗುವ ಮುನ್ನ ಯೋಜನೆ ಜಾರಿ ಮಾಡಿದ್ದೀರಿ. ಆದರೆ ದುಡ್ಡು ಇಟ್ಟಿರಲಿಲ್ಲ, ನಿಮ್ಮ ತಪ್ಪಮ್ಮು ಸರಿಪಡಿಸಲು ಆಗದಂತಹ ವಾತಾವರಣವನ್ನು ನಿರ್ಮಿಸಿದ್ದೀರ. ನೀವು ತಾಜ್ ವೆಸ್ಟ್ ಎಂಡ್ ಹೊಟೆಟ್‌ನಲ್ಲಿ ಕಾಲ ಕಳೆಯುತ್ತಿದ್ದರು ಎಂದು ಪದೇ ಪದೇ ಹೇಳುತ್ತೀರ. ಆದರೆ ನಾನು ಇಡೀ ದಿನ ಜನರ ಸಂಪರ್ಕದಲ್ಲಿ ಇರುತ್ತಿದ್ದೆ ಎಂದು ತಿರುಗೇಟು ನೀಡಿದ್ದಾರೆ.












Click it and Unblock the Notifications