ಚಿಕ್ಕಮಗಳೂರು; 10 ದಿನಗಳ ದತ್ತ ಜಯಂತಿಗೆ ಭಾನುವಾರ ಚಾಲನೆ
ಚಿಕ್ಕಮಗಳೂರು, ಡಿಸೆಂಬರ್ 17; ಕಾಫಿನಾಡು ಚಿಕ್ಕಮಗಳೂರಿನಲ್ಲಿ ದತ್ತ ಜಯಂತಿ 2023ಕ್ಕೆ ಭಾನುವಾರ ಚಾಲನೆ ಸಿಗಲಿದೆ. ಮಾಜಿ ಶಾಸಕ ಸಿ. ಟಿ. ರವಿ ಸೇರಿದಂತೆ ಸಾವಿರಾರು ಕಾರ್ಯಕರ್ತರು ಮಾಲೆ ಧರಿಸಲಿದ್ದಾರೆ. ಚಿಕ್ಕಮಗಳೂರಿನಲ್ಲಿ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ.
ಡಿಸೆಂಬರ್ 17ರ ಭಾನುವಾರದಿಂದ 10 ದಿನಗಳ ಕಾಲ ದತ್ತಜಯಂತಿ ಸಂಭ್ರಮ ನಡೆಯಲಿದೆ. ವಿಎಚ್‌ಪಿ, ಬಜರಂಗದಳ ನೇತೃತ್ವದಲ್ಲಿ ನಡೆಯಲಿರುವ ದತ್ತಜಯಂತಿಗೆ ದತ್ತಮಾಲಾಧಾರಣೆ ಮೂಲಕ ಭಾನುವಾರ ಚಾಲನೆ ದೊರೆಯಲಿದೆ.

ಹಿಂದೂ, ಬಿಜೆಪಿ ಕಾರ್ಯಕರ್ತರು ಸೇರಿ ಚಿಕ್ಕಮಗಳೂರು ಜಿಲ್ಲೆಯಾದ್ಯಂತ 4 ಸಾವಿರಕ್ಕೂ ಅಧಿಕ ಕಾರ್ಯಕರ್ತರು ದತ್ತಲಾಲೆ ಧಾರಣೆ ಮಾಡಲಿದ್ದಾರೆ. ದತ್ತಜಯಂತಿ ಅಂಗವಾಗಿ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ, ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಾದ್ಯಂತ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ.
ಇನಾಂ ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದಲ್ಲಿ ನಡೆಯಲಿರುವ ದತ್ತಜಯಂತಿ ಕಾರ್ಯಕ್ರಮಕ್ಕೆ ಚಿಕ್ಕಮಗಳೂರು ಜಿಲ್ಲಾಡಳಿತ ಅಗತ್ಯ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ. ಸಂಚಾರ ದಟ್ಟಣೆ ಕಡಿಮೆ ಮಾಡಲು ಪ್ರವಾಸಿಗರು ಜಿಲ್ಲೆಯ ಪ್ರವಾಸವನ್ನು ಮುಂದೂಡಿ ಎಂದು ಸಹ ಮನವಿ ಮಾಡಲಾಗಿದೆ.
ಹೋಮಕ್ಕೆ ಕಾಂಗ್ರೆಸ್ ಆಕ್ಷೇಪ; ದತ್ತಜಯಂತಿಯ ಹಿನ್ನಲೆಯಲ್ಲಿ ಜಿಲ್ಲಾಡಳಿತದ ವಿರುದ್ಧ ಕಾಂಗ್ರೆಸ್ ಮುಖಂಡರು ಕಿಡಿಕಾರಿದ್ದಾರೆ. ಇದು ರಾಜಕೀಯ ಪ್ರೇರಿತ ಉತ್ಸವ. ದತ್ತಜಯಂತಿ ಉತ್ಸವದಲ್ಲಿ ಡಿಸಿ, ಎಸ್ಪಿ ಮತೀಯ ಸಂಘಟನೆಗಳ ಜೊತೆ ಕೈಜೋಡಿಸಿದರೆ ಮುಖ್ಯಮಂತ್ರಿಗಳಿಗೆ ದೂರು ನೀಡುತ್ತೇವೆ ಎಂದು ಕಾಂಗ್ರೆಸ್ ವಕ್ತಾರ ದೇವರಾಜ್ ಹೇಳಿದ್ದಾರೆ.
ಕಳೆದ ಬಾರಿ ಇದ್ದದ್ದು ಮತೀಯ ಸರ್ಕಾರ. ಕೋರ್ಟ್ ಆದೇಶ, ಕಾನೂನು ಎಲ್ಲವನ್ನೂ ಉಲ್ಲಂಘನೆ ಮಾಡಿ, ಅವರಿಗೆ ಮನಸ್ಸಿಗೆ ಬಂದಂತೆ ದತ್ತಜಯಂತಿ ಮಾಡಿಕೊಂಡಿದ್ದಾರೆ. ಹಿಂದೆ ಸದಾನಂದಗೌಡರನ್ನೇ ಬಂಧಿಸಿದ್ದಾರೆ. ಆದರೆ ಈ ಹಿಂದೆ ಕಟ್ಟುನಿಟ್ಟಾಗಿ ದತ್ತಜಯಂತಿ ನಡೆಯುತ್ತಿತ್ತು. ಅದು ಜಾರಿಗೆ ಬರಬೇಕು ಎಂದು ಒತ್ತಾಯಿಸಿದ್ದಾರೆ.
ಮತೀಯ ಶಕ್ತಿಗಳ ಜೊತೆ ಕೈ ಜೋಡಿಸಬಾರದು. ದತ್ತಪೀಠ ಬಜರಂಗದಳ, ವಿಎಚ್‌ಪಿ ಆಸ್ತಿಯಲ್ಲ. ಅದು ಈ ನಾಡಿನ ಸರ್ವಧರ್ಮಗಳ ಶ್ರದ್ಧಾಕೇಂದ್ರ. ಜಿಲ್ಲಾಡಳಿತ ಕೋರ್ಟ್ ಹೇಳಿದಂತೆ ದತ್ತಜಯಂತಿ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಮುಸ್ಲಿಂ ಸಮುದಾಯದವರು ಕೂಡ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಬಾಬಾಬುಡನ್ ಗಿರಿ ಹೋರಾಟ ಸಮಿತಿ ಸದಸ್ಯ ಸಿರಾಜ್ ಮಾತನಾಡಿ, "ಕೋರ್ಟ್ ಆದೇಶವಿಲ್ಲದೆ ಅಲ್ಲಿದ್ದ ದತ್ತಪಾದುಕೆಗಳನ್ನು ಸ್ಥಳಾಂತರಿಸಿದ್ದಾರೆ. ದತ್ತಪೀಠ ಆಡಳಿತ ಸಂವರ್ದನಾ ಸಮಿತಿ ವಿರುದ್ಧ ಕ್ರಮಕೈಗೊಳ್ಳಿ ಅಂದರೆ ಆಗಲ್ಲ. ನಾವು ನಮ್ಮ ಉರುಸ್ ಸಂದರ್ಭದಲ್ಲಿ ಹಸಿರು ಬಟ್ಟೆ ಕೊಡಿ ಅಂತ ಕೇಳಿದ್ದೆವು. ಗುಹೆಯೊಳಗೆ ಕಾಣಿಕೆ ಡಬ್ಬವಿದ್ದು, ಕಾಣಿಕೆಯನ್ನು ಹುಂಡಿಯಲ್ಲಿ ಹಾಕಬೇಕು. ಆದರೆ, ಅರ್ಚಕರು ಹಣ ವಸೂಲಿ ಮಾಡುವ ವ್ಯವಹಾರ ಮಾಡುತ್ತಿದ್ದಾರೆ" ಎಂದು ದೂರಿದರು.
"ಜಿಲ್ಲಾಡಳಿತ ಕಾನೂನು ಪ್ರಕಾರ ಕ್ರಮ ಕೈಗೊಂಡಿಲ್ಲ. ತುಳಸಿಕಟ್ಟೆ ಪಕ್ಕ ಹೋಮ ಮಾಡುವುದಕ್ಕೆ ಅವಕಾಶ ಕೊಟ್ಟಿದ್ದಾರೆ. ಕೊಡಲಿ, ನಮಗೂ ಅದರ ಪಕ್ಕದಲ್ಲಿರುವ ಗೋರಿಗಳಿಗೆ ಪೂಜೆ ಮಾಡಲು ಅವಕಾಶ ನೀಡಲಿ. ಅದಕ್ಕೆ ಕೋರ್ಟ್ ಆದೇಶವಿಲ್ಲ ಎನ್ನುತ್ತಾರೆ. ಜಿಲ್ಲಾಡಳಿತ ಒಂದು ಧರ್ಮದ ಪರ ಕೆಲಸ ಮಾಡುತ್ತಿರುವುದು ತಪ್ಪು" ಎಂದರು.
"ಹೋಮ ಮಾಡುವುದಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ನಮಗೂ ನಮಾಜ್ ಮಾಡಲು ಅನುಮತಿ ನೀಡಲಿ. ಕಳೆದ ಬಾರಿ ಬಿಜೆಪಿ ಸರ್ಕಾರವಿತ್ತು. ಈ ಬಾರಿ ನಮ್ಮ, ನಮ್ಮ ಪರವಾದ ಸರ್ಕಾರವಿದೆ. ಆದರೆ ಈ ಸರ್ಕಾರವೂ ನಮ್ಮ ವಿರೋಧವಾಗಿಯೇ ಹೋಗುತ್ತಿದೆ. ಈ ಬಾರಿ ನಮ್ಮ ಬೇಡಿಕೆ ಈಡೇರದಿದ್ದರೆ ಲೋಕಸಭೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತೇವೆ" ಎಂದು ಎಚ್ಚರಿಕೆ ನೀಡಿದ್ದಾರೆ.
ಚಿಕ್ಕಮಗಳೂರು ಶಾಸಕ ಹೆಚ್. ಡಿ. ತಮ್ಮಯ್ಯ ಮಾತನಾಡಿ, "ದತ್ತಜಯಂತಿ ಆಚರಣೆ ಕುರಿತು ಜಿಲ್ಲಾಡಳಿತದೊಂದಿಗೆ ಚರ್ಚಿಸುತ್ತೇನೆ. ಸರ್ಕಾರ, ಕೋರ್ಟ್ ಆದೇಶದಂತೆ ದತ್ತಜಯಂತಿ ನಡೆಯುತ್ತದೆ" ಎಂದರು.
"ನಾನು ಈ ಬಾರಿ ದತ್ತಮಾಲೆ ಹಾಕುವ ಬಗ್ಗೆ ಇನ್ನೂ ನಿರ್ಧಾರ ಮಾಡಿಲ್ಲ. ದೇವರು ಯಾವ ರೀತಿ ಮನಸ್ಸು ಕೊಡುತ್ತಾನೋ ನೋಡೋಣ" ಎಂದು ಶಾಸಕ ಹೆಚ್. ಡಿ. ತಮ್ಮಯ್ಯ ಹೇಳಿದರು.
ಶಾಸಕ ತಮ್ಮಯ್ಯ ದತ್ತಮಾಲೆ ಹಾಕುತ್ತಾರಾ?, ಇಲ್ಲವಾ? ಎಂಬುದು ಸಾಕಷ್ಟು ಕುತೂಹಲ ಮೂಡಿಸಿದೆ. ದಶಕಗಳ ಕಾಲ ಬಿಜೆಪಿಯಲ್ಲಿದ್ದ ತಮ್ಮಯ್ಯ ಪ್ರತಿವರ್ಷ ದತ್ತಮಾಲೆಯನ್ನು ಕಡ್ಡಾಯವಾಗಿ ಹಾಕುತ್ತಿದ್ದರು. ಆದರೆ ಈ ಬಾರಿ ಅವರು ಕಾಂಗ್ರೆಸ್‌ನಿಂದ ಚಿಕ್ಕಮಗಳೂರು ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಆದ್ದರಿಂದ ಈ ಬಾರಿಯೂ ಅವರು ದತ್ತಮಾಲೆ ಹಾಕುತ್ತಾರಾ? ಎಂಬುದು ಪ್ರಶ್ನೆ.












Click it and Unblock the Notifications