ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾಫಿನಾಡಲ್ಲಿ ಸೌಲಭ್ಯ ವಂಚಿತರಾದ 35 ಆದಿವಾಸಿ ಕುಟುಂಬಗಳು

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಜುಲೈ, 25: ಬಿಳಗಲ್ ಗ್ರಾಮದ ಬಳಿ ಅಪಾಯದ ಮಟ್ಟದಲ್ಲಿ ಹರಿಯುತ್ತಿರುವ ಭದ್ರಾ ನದಿ ದಾಟಲು ತೂಗು ಸೇತುವೆ ಇದ್ದು, ಇಲ್ಲಿ ವಾಹನಗಳ ಸಂಚಾರ ಇಲ್ಲವೇ ಇಲ್ಲ. ಆದ್ದರಿಂದ ಅನಾರೋಗ್ಯ ಪೀಡಿತರನ್ನು, ಗರ್ಭಿಣಿ, ಬಾಣಂತಿಯರನ್ನು ಹೊತ್ತು ಸಾಗಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕು ವ್ಯಾಪ್ತಿಯ ಸಂಸೆ ಗ್ರಾಮ ಪಂಚಾಯತ್‍ಗೆ ಒಳಪಪಟ್ಟಿರುವ ಬಿಳಗಲ್ ಗ್ರಾಮದ 35 ಗಿರಿಜನ ಕುಟುಂಬಗಳು ಸಂಚಾರಕ್ಕೆ ಸಮರ್ಪಕ ರಸ್ತೆ, ಸೇತುವೆ ಇಲ್ಲದೆ ಪರದಾಡುತ್ತಿವೆ. ಇಲ್ಲಿನ ಜನರಿಗೆ ಸಾರಿಗೆ ಸೌಲಭ್ಯದ ಕೊರತೆಯಿಂದ ಹೊರಜಗತ್ತಿನ ಸಂಪರ್ಕವೇ ಇಲ್ಲದಂತಾಗಿದೆ.

ಚಿಕ್ಕಮಗಳೂರು; ಯೂತ್‌ ಕಾಂಗ್ರೆಸ್‌ ಕಾರ್ಯಕರ್ತರ ಮಾರಾಮಾರಿಚಿಕ್ಕಮಗಳೂರು; ಯೂತ್‌ ಕಾಂಗ್ರೆಸ್‌ ಕಾರ್ಯಕರ್ತರ ಮಾರಾಮಾರಿ

ಗ್ರಾಮದ ಮಂಜುಳ ಮಾತಾನಾಡಿ, "ಗ್ರಾಮದಿಂದ ಅಂಗನವಾಡಿ ಕೇಂದ್ರ 3 ಕಿ. ಮೀ. ದೂರದಲ್ಲಿದೆ. ಅಂಗನವಾಡಿ ಕೇಂದ್ರಕ್ಕೆ ಹೋಗಲು ಭದ್ರಾನದಿಯಲ್ಲಿರುವ ತೂಗುಸೇತುವೆ ದಾಟಬೇಕು. ತೂಗು ಸೇತುವೆ ಶಿಥಿಲಗೊಂಡಿದ್ದು, ಮಕ್ಕಳನ್ನು ಒಂಟಿಯಾಗಿ ಕಳುಹಿಸಲು ಭಯ ಆಗುತ್ತಿದೆ. ಅಲ್ಲದೇ ಗ್ರಾಮಕ್ಕೆ ಮೊಬೈಲ್ ನೆಟ್‍ವರ್ಕ್ ಸಮಸ್ಯೆ ಇದ್ದು, ತುರ್ತು ಸಂದರ್ಭಗಳಲ್ಲಿ ಹೊರಜಗತ್ತಿನ ಸಂಪರ್ಕ ಸಾಧ್ಯವಾಗುತ್ತಿಲ್ಲ" ಎಂದರು.

"ಇತ್ತೀಚಿನ ಭಾರೀ ಮಳೆ ಸಂದರ್ಭ ಶಾಲೆಗೆ ರಜೆ ನೀಡಿದ್ದು, ನೆಟ್‍ವರ್ಕ್ ಸಮಸ್ಯೆಯಿಂದ ನಮಗೆ ಮಾಹಿತಿ ಇಲ್ಲದೇ ಮಕ್ಕಳನ್ನು ಶಾಲೆಗೆ ಕಳುಹಿಸಿದ್ದೆವು. ಮಕ್ಕಳು ಶಾಲೆಗೆ ಹೋಗಿ ರಜೆ ಎಂದು ಭಾರೀ ಮಳೆಯಲ್ಲೇ ಹಿಂದುರುಗುತ್ತಿದ್ದರು. ಗಿರಿಜನರ ಅಭಿವೃದ್ಧಿಗೆ ನಕ್ಸಲ್ ಪ್ಯಾಕೇಜ್ ಅನುದಾನ ಬರುತ್ತಿದೆ ಎನ್ನುತ್ತಾರೆ. ನಮಗೆ ಮಾತ್ರ ಯಾವ ಪ್ಯಾಕೇಜ್ ಸಿಕ್ಕಿಲ್ಲ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ಬಾಣಂತಿಯೊಬ್ಬರನ್ನು ಮರದ ಬಡಿಗೆಗಳ ಸಹಾಯದಿಂದ ಗ್ರಾಮಸ್ಥರು ಹೊತ್ತು ಸಾಗಿಸಿದ್ದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದನ್ನು ಕಂಡ ಜನರು ಸ್ಥಳೀಯ ಶಾಸಕರು ಹಾಗೂ ಜನಪ್ರತಿನಿಧಿಗಳ ವಿರುದ್ಧ ವ್ಯಾಪಕ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ.

ಕಳಸ ತಾಲೂಕಿನ ಸಂಸೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಬಿಳಗಲ್ ಗ್ರಾಮದಲ್ಲಿ ಸುಮಾರು 35 ಗಿರಿಜನ ಸಮುದಾಯದ ಕುಟುಂಬಗಳು ವಾಸಿಸುತ್ತಿವೆ. ಈ ಕುಟುಂಬಗಳು ಮೂಲತಃ ಕುದುರೆಮುಖ ಅಭಯಾರಣ್ಯ ವ್ಯಾಪ್ತಿಯ ನಿವಾಸಿಗಳಾಗಿದ್ದು, ಕುದುರೆಮುಖದಲಿರುವ ಲಕ್ಯಾ ಡ್ಯಾಂ ನಿರ್ಮಾಣದ ಸಂದರ್ಭದಲ್ಲಿ ಅಲ್ಲಿಂದ ಅವರನ್ನು ಒಕ್ಕಲೆಬ್ಬಿಸಿದ್ದರು. ಕೊನೆಗೆ ಸಂತ್ರಸ್ಥರಿಗೆ ಬಿಳಗಲ್ ಗ್ರಾಮದಲ್ಲಿ ಪುನರ್ವಸತಿ ಕಲ್ಪಿಸಲಾಗಿತ್ತು. ಬಿಳಗಲ್ ಗ್ರಾಮದ ಪಕ್ಕದಲ್ಲಿ ಭದ್ರಾ ನದಿ ಸೇರಿದಂತೆ ಸಣ್ಣ ಹಳ್ಳವೊಂದು ಹರಿಯುತ್ತಿದ್ದು, ಎರಡು ನದಿಗಳನ್ನು ದಾಟಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ಸಾರಿಗೆ ವ್ಯವಸ್ಥೆ ಇಲ್ಲದೇ ಗ್ರಾಮಸ್ಥರ ಪರದಾಟ

ಸಾರಿಗೆ ವ್ಯವಸ್ಥೆ ಇಲ್ಲದೇ ಗ್ರಾಮಸ್ಥರ ಪರದಾಟ

ಭದ್ರಾ ನದಿ ದಾಟಲು ಸುಸಜ್ಜಿತವಾದ ಆಧುನಿಕ ತೂಗು ಸೇತುವೆಯನ್ನು ನಿರ್ಮಿಸಲಾಗಿದ್ದು, ಮತ್ತೊಂದು ನದಿ ದಾಟಲೂ ಸೇತುವೆಯನ್ನು ಕಲ್ಪಿಸಲಾಗಿದೆ. ಗ್ರಾಮದ ಜನರು ಈ ಸೇತುವೆ ಹಾಗೂ ತೂಗು ಸೇತುವೆ ಮೂಲಕ ಹೊರ ಜಗತ್ತಿನ ಸಂಪರ್ಕ ಸಾಧಿಸುತ್ತಿದ್ದಾರೆ. ಆದರೆ ತೂಗು ಸೇತುವೆ ಮೂಲಕ ವಾಹನಗಳ ಸಂಚಾರ ಸಾಧ್ಯವಿಲ್ಲದ ಪರಿಣಾಮ ಗ್ರಾಮದಲ್ಲಿರುವ ಜನರು ಅನಾರೋಗ್ಯಕ್ಕೆ ತುತ್ತಾದ ಸಂದರ್ಭದಲ್ಲಿ ಹಾಗೂ ಗರ್ಭಿಣಿ, ಬಾಣಂತಿಯರನ್ನು ಆಸ್ಪತ್ರೆಗೆ ಸಾಗಿಸಲು ಮರದ ಬಡಿಗೆಗಳಳನ್ನು ಬಳಸಲಾಗುತ್ತದೆ. ಈ ಬಡಿಗೆಗಳಿಗೆ ಅವರನ್ನು ಕಟ್ಟಿಕೊಂಡು ಸುಮಾರು 2 ಕಿ.ಮೀ. ದೂರ ನಡೆದು, ಬಳಿಕ ವಾಹನಗಳ ಮೂಲಕ ಆಸ್ಪತ್ರೆಗೆ ಸಾಗಿಸಬೇಕಿದೆ.

ಕಳೆದ 2 ದಿನಗಳ ಹಿಂದೆ ಹೆರಿಗೆಗೆ ತೆರಳಿದ್ದ ಮಹಿಳೆಯೊಬ್ಬರನ್ನು 2 ಮರದ ಬಡಿಗೆಗಳಿಗೆ ಕಟ್ಟಲಾದ ಚೇರ್‌ವೊಂದರಲ್ಲಿ ಕೂರಿಸಿಕೊಂಡು ಹೋಗುತ್ತಿರುವ ದೃಶ್ಯ ಎಂಥವರ ಮನಸ್ಸು ಕಲಕಿಬಿಡುತ್ತದೆ. ನಾಲ್ಕೈದು ಜನರು ತೂಗು ಸೇತುವೆ ಮೇಲೆ ಹರಸಾಹಸ ಪಡುತ್ತಾ ಬಾಣಂತಿಯನ್ನು ಆಸ್ಪತ್ರೆಗೆ ಹೊತ್ತು ಸಾಗಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಗ್ರಾಮಸ್ಥರು ಹೊರ ಜಗತ್ತಿನ ಸಂಪರ್ಕಕ್ಕೆ ಪಡಿಪಾಟಲು ಅನುಭವಿಸುತ್ತಿರುವುದನ್ನು ಕಂಡು ಸ್ಥಳೀಯರು ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜನಪ್ರತಿನಿಧಿಗಳ ವಿರುದ್ಧ ಆದಿವಾಸಿಗಳು ಕಿಡಿ

ಜನಪ್ರತಿನಿಧಿಗಳ ವಿರುದ್ಧ ಆದಿವಾಸಿಗಳು ಕಿಡಿ

ಸೇತುವೆ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿದೆ ಎಂದು ಕ್ಷೇತ್ರದ ಶಾಸಕರು ಪ್ರತಿ ಬಾರಿ ಹೇಳುತ್ತಿದ್ದಾರೆ. ಆದರೆ ಅಧಿಕಾರಿಗಳು ಮಾತ್ರ ಸೇತುವೆ ನಿರ್ಮಾಣಕ್ಕೆ ಇದುವರೆಗೂ ಮುಂದಾಗಿಲ್ಲ. ಅನುದಾನ ಎಲ್ಲಿಗೆ ಹೋಗಿದೆಯೋ ಗೊತ್ತಿಲ್ಲ ಎಂದು ಅಲ್ಲಿನ ಜನರು ಅಸಮಾಧಾನ ಹೊರಹಾಕಿದರು. ಹಳ್ಳಕ್ಕೆ ನಿರ್ಮಿಸಿರುವ ಸೇತುವೆ ಉಪಯೋಗ ಇದ್ದರೂ ಇಲ್ಲದಂತಾಗಿದೆ. ತೂಗುಸೇತುವೆ ಇರುವ ಜಾಗದಲ್ಲಿ ಸುಸಜ್ಜಿತ ಸೇತುವೆ ನಿರ್ಮಿಸಿದಲ್ಲಿ ಮಾತ್ರ ಬಿಳಗಲ್ ಗ್ರಾಮದೊಳಗೆ ವಾಹನಗಳು ಬರಲು ಸಾಧ್ಯವಾಗಲಿದೆ ಎಂದು ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ.

ಬಿಳಗಲ್ ಗ್ರಾಮದ ಜನರು ಈ ಸಮಸ್ಯೆ ಬಗ್ಗೆ ಸ್ಥಳೀಯ ಗ್ರಾಮ ಪಂಚಾಯತಿ ಸೇರಿದಂತೆ ಕ್ಷೇತ್ರದ ಶಾಸಕ ಎಂ. ಪಿ. ಕುಮಾರಸ್ವಾಮಿಗೂ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಭದ್ರಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ತೂಗು ಸೇತುವೆ ಜಾಗದಲ್ಲಿ ಸುಸಜ್ಜಿತ ಸೇತುವೆ ನಿರ್ಮಿಸಿಕೊಡಬೇಕೆಂದು ನಿವಾಸಿಗಳ ಮನವಿಯನ್ನು ಸಲ್ಲಿಸಿದ್ದರು. ಇದುವರೆಗೂ ಸ್ಪಂದೆನೆ ಸಿಗದ ಪರಿಣಾಮ ಗ್ರಾಮದಲ್ಲಿ ಅನಾರೋಗ್ಯಕ್ಕೆ ತುತ್ತಾದವರನ್ನು ಮರದ ಬಡಿಗೆಗಳಿಗೆ ಕಟ್ಟಿ ಹೊತ್ತು ಸಾಗಿಸಬೇಕಾದ ಪರಿಸ್ಥಿತಿ ಮುಂದುವರಿದಿದೆ.

"ಆಸ್ಪತ್ರೆಗೆ ಹೋಗಲು 3 ಕಿ.ಮೀ ನಡೆಯಬೇಕು"

ಗ್ರಾಮದ ಸಮಸ್ಯೆ ಬಗ್ಗೆ ವಸಂತಿ ಮಾತನಾಡಿ, "ನಮ್ಮ ಗ್ರಾಮ ಸಂಪರ್ಕಕ್ಕೆ ಸೇತುವೆ ಇಲ್ಲ. ತೂಗು ಸೇತುವೆ ಇದ್ದು, ಅದರ ಮೇಲೆ ವಾಹನಗಳು ಬರುವುದಿಲ್ಲ. ಗರ್ಭಿಣಿಯಾಗಿದ್ದ ನನ್ನನ್ನು ಯಾವುದೇ ದಾರಿ ಇಲ್ಲದೆ ಕುಟುಂಬಸ್ಥರು ಜುಲೈ, 11ರಂದು ಚೇರ್‌ಗೆ ಕಟ್ಟಿಕೊಂಡು ಹೊತ್ತುಕೊಂಡು ಆಸ್ಪತ್ರೆಗೆ ದಾಖಲಿಸಿದ್ದರು. ನಂತರ ಜುಲೈ 4ಕ್ಕೆ ಡೆಲಿವರಿಯಾಗಿದ್ದು, ವಾರ ಕಳೆದ ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಯಿತು. ಆಗಲೂ ನನ್ನನ್ನು ಚೇರ್‌ಗೆ ಕಟ್ಟಿಕೊಂಡೇ ಹೊತ್ತುಕೊಂಡು ಬಂದಿದ್ದಾರೆ. ಅನೇಕ ವರ್ಷಗಳಿಂದ ಸೇತುವೆ ಸಮಸ್ಯೆಯಿಂದ ಬಳಲುತ್ತಿದ್ದೇವೆ. ನಮ್ಮ ಸಮಸ್ಯೆಗೆ ಯಾರೂ ಸ್ಪಂದಿಸಿಲ್ಲ. ಅನಾರೋಗ್ಯಕ್ಕೆ ತುತ್ತಾದ ಸಂದರ್ಭದಲ್ಲಿ ವಾಹನಗಳಿಗೆ ಕರೆ ಮಾಡಲೂ ನೆಟ್‍ವರ್ಕ್ ಸಹ ಇರುವುದಿಲ್ಲ. ಗ್ರಾಮದಿಂದ ಸುಮಾರು 3 ಕಿಲೋ ಮೀಟರ್‌ ದೂರು ನಡೆದುಕೊಂಡು ಹೋಗಬೇಕು. ನಾವಿರುವ ಜಾಗ ಅರಣ್ಯ ಇಲಾಖೆಗೆ ಸೇರಿದ್ದು ಎನ್ನುತ್ತಿದ್ದಾರೆ. ಇದರಿಂದಾಗಿ ನಮ್ಮೂರಿಗೆ ಮೂಲಸೌಕರ್ಯ ಸಿಗುತ್ತಿಲ್ಲ" ಎಂದು ಗೋಳು ತೋಡಿಕೊಂಡರು.

45 ವರ್ಷಗಳಿಂದ ಬದುಕುತ್ತಿದ್ದೇವೆ

45 ವರ್ಷಗಳಿಂದ ಬದುಕುತ್ತಿದ್ದೇವೆ

ಸ್ಥಳೀಯ ಸುರೇಶ್ ಈ ಬಗ್ಗೆ ಮಾತನಾಡಿ, "ಬಿಳಗಲ್ ಗ್ರಾಮ ಕಳಸ ತಾಲೂಕಿನ ಕುಗ್ರಾಮ, ಮೂಲಸೌಕರ್ಯವಿಲ್ಲದ ಗ್ರಾಮವಾಗಿದೆ. ಕುದುರೆಮುಖ ಕಂಪೆನಿಯವರು ಲಕ್ಯಾ ಡ್ಯಾಂ ನಿರ್ಮಾಣಕ್ಕಾಗಿ ನಮ್ಮನ್ನು ಒಕ್ಕಲೆಬ್ಬಿಸಿ ಇಲ್ಲಿ ಪುನರ್ವಸತಿ ಕಲ್ಪಿಸಿದ್ದರು. ಸುಮಾರು 45 ವರ್ಷಗಳಿಂದ ಈ ಗ್ರಾಮದಲ್ಲಿ ಮೂಲ ಸೌಕರ್ಯಗಳಿಲ್ಲದೇ ಬದುಕುತ್ತಿದ್ದೇವೆ. ರಸ್ತೆ, ನೆಟ್‍ವರ್ಕ್, ಶಾಲೆ ಸೌಲಭ್ಯಗಳಿಲ್ಲ. ಗ್ರಾಮದಲ್ಲಿ 30 ಶಾಲಾ ಕಾಲೇಜು ಮಕ್ಕಳಿದ್ದು, ಹತ್ತಿರದಲ್ಲಿ ಶಾಲೆಗಳಿಲ್ಲ. 10-25ಕಿಲೋ ಮೀಟರ್‌ ದೂರ ನಡೆದುಕೊಂಡೇ ಶಾಲೆಗೆ ಹೋಗಬೇಕು" ಎಂದರು.

"ಗ್ರಾಮದ ಪಕ್ಕದಲ್ಲಿ ಭದ್ರಾನದಿ ಹರಿಯುತ್ತಿದ್ದು, 30 ವರ್ಷಗಳ ಹಿಂದೆ ನಿರ್ಮಿಸಿರುವ ಶಿಥಿಲಾವಸ್ಥೆಯಲ್ಲಿರುವ ತೂಗು ಸೇತುವೆ ಮೂಲಕ ಗ್ರಾಮಸ್ಥರು, ಶಾಲಾ ಮಕ್ಕಳು ಪ್ರಾಣಭೀತಿ ಬಿಟ್ಟು ತಿರುಗಾಡಬೇಕು. ಗ್ರಾಮದಲ್ಲಿ ಅನಾರೋಗ್ಯಕ್ಕೆ ತುತ್ತಾದವರನ್ನು ಬಡಿಗೆಗಳಿಗೆ ಕಟ್ಟಿ ಹೊತ್ತು ಸಾಗಬೇಕು. 3 ಕಿ. ಮೀ. ದೂರದಲ್ಲಿ ಅಂಗನವಾಡಿ ನಿರ್ಮಿಸಿದ್ದಾರೆ. ನದಿ ದಾಟಬೇಕೆಂಬ ಕಾರಣಕ್ಕೆ ಅಂಗನವಾಡಿಯನ್ನು ರಸ್ತೆ ಬದಿಯಲ್ಲಿ ನಿರ್ಮಿಸಿದ್ದು, ಗ್ರಾಮಸ್ಥರು ತಮ್ಮ ಮಕ್ಕಳನ್ನು ನದಿ, ತೂಗುಸೇತುವೆ ಮೂಲಕ ಕರೆ ತಂದು ಅಂಗನವಾಡಿಗೆ ಬಿಡಬೇಕು. ಮಕ್ಕಳು, ಗ್ರಾಮಸ್ಥರ ಪ್ರಾಣಕ್ಕೆ ಏನಾದರೂ ಪರವಾಗಿಲ್ಲ ಎಂಬುದು ಜನಪ್ರತಿನಿಧಿಗಳು, ಅಧಿಕಾರಿಗಳ ನಿಲುವಾಗಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.

Recommended Video

ಆಸ್ಟ್ರೇಲಿಯಾ ಕ್ರಿಕೆಟ್ ಲೋಕಕ್ಕೆ ಸಾವಿರ ಕೋಟಿ ಲಾಭ ಮಾಡಿಕೊಟ್ಟ ಪಂತ್!! | Oneindia Kannada

English summary
In Chikkamagaluru district Bilagal village there is no bridge to cross the Bhadra river which is flowing at a dangerous level. Tribal families seeks basic amenities. Know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X