ಹಾಸನ: ಬೈಕ್-ಸ್ಕೂಟರ್ ನಡುವೆ ಭೀಕರ ಅಪಘಾತ: ಇಬ್ಬರು ಸಾವು, ಮೂವರಿಗೆ ಗಾಯ
ಹಾಸನ, ಜೂನ್, 15: ಇತ್ತೀಚಿನ ದಿನಗಳಲ್ಲಿ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಲಿವೆ. ಹಾಗೆಯೇ ಇದೀಗ ರಾಷ್ಟ್ರೀಯ ಹೆದ್ದಾರಿ ಹಿರೀಸಾವೆ-ಮೇಟಿಕರೆ ವೃತ್ತದಲ್ಲಿ ಇಂದು (ಜೂನ್ 15) ಬೈಕ್-ಸ್ಕೂಟರ್ ಡಿಕ್ಕಿ ಹೊಡೆದುಕೊಂಡಿದ್ದು, ಅಪಘಾತದಲ್ಲಿ ಇಬ್ಬರು ಮೃತಪಟ್ಟು, ಮೂವರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಹೋಬಳಿಯ ಬಾಳಗಂಚಿ ನಿವಾಸಿ ಚಂದ್ರೇಗೌಡ (50) ಮತ್ತು ತುಮಕೂರು ಜಿಲ್ಲೆ ತುರುವೇಕೆರೆ ತಾಲ್ಲೂಕು ವಡಕೇಘಟ್ಟ ಗ್ರಾಮದ ಲಕ್ಷ್ಮಮ್ಮ (55) ಮೃತಪಟ್ಟವರು. ಚಂದ್ರೇಗೌಡ ಅವರು ಪತ್ನಿ ಸವಿತಾ ಹಾಗೂ ಅತ್ತಿಗೆ ಲಕ್ಷ್ಮಮ್ಮ ಜೊತೆಗೆ ಹಿರೀಸಾವೆಯಲ್ಲಿ ಸಂಬಂಧಿಕರ ಮದುವೆ ಸಮಾರಂಭದಲ್ಲಿ ಭಾಗವಹಿಸಿ, ಸ್ಕೂಟರ್‌ನಲ್ಲಿ ಸ್ವಗ್ರಾಮಕ್ಕೆ ಹೋಗುತ್ತಿದ್ದರು.

ಅಪಘಾತದಲ್ಲಿ ಸವಿತಾ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗೆ ಬೆಂಗಳೂರಿಗೆ ರವಾನಿಸಲಾಗಿದೆ. ಹಾಸನದ ಕಡೆಯಿಂದ ಬೆಂಗಳೂರಿಗೆ ಚಲಿಸುತ್ತಿದ್ದ ಬೈಕ್‌ನಲ್ಲಿ ಮಂಜುನಾಥ್ ದಂಪತಿಗಳಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಈ ಪ್ರಕರಣ ಹಿರಿಸಾವೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಈ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ಸಂಚರಿಸುತ್ತಿದ್ದು, ಆಗಾಗ ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ. ಆದ್ದರಿಂದ ಇಲ್ಲಿ ಶೀಘ್ರದಲ್ಲೇ ಅಂಡರ್ಪಾಸ್ ನಿರ್ಮಾಣ ಮಾಡಿ ಸಮಸ್ಯೆಗಳನ್ನು ನಿಯಂತ್ರ ಮಾಡುವಂತೆ ಸಾರ್ವಜನಿಕರು ಅಧಿಕಾರಿಗಳಿಗೆ ಒತ್ತಾಯ ಮಾಡಿದ್ದಾರೆ.
ಕಾಂಗ್ರೆಸ್ ಶಾಸಕರ ಕಾರು ಅಪಘಾತ: ಇತ್ತೀಚೆಗಷ್ಟೇ ಮಾಜಿ ಡಿಸಿಎಂ, ಕಾಂಗ್ರೆಸ್ ಶಾಸಕ ಲಕ್ಷ್ಮಣ್ ಸವದಿ ತೆರಳುತ್ತಿದ್ದ ಕಾರು ಅಪಘಾತಕ್ಕೀಡಾದ ಘಟನೆ ಅಥಣಿ ತಾಲೂಕಿನ ಬಳಿ ನಡೆದಿತ್ತು.
ಅಥಣಿಯಿಂದ ಬೆಂಗಳೂರಿನತ್ತ ಪ್ರಯಾಣ ಮಾಡುತ್ತಿದ್ದ ವೇಳೆ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ದರೂರು ಗ್ರಾಮದ ಬಳಿ ಪಿಕಪ್ ವಾಹನ ವಾಹನ ಡಿಕ್ಕಿ ಹೊಡೆದ ಪರಿಣಾಮ ಕಾಂಗ್ರೆಸ್ ಶಾಸಕ ಲಕ್ಷ್ಮಣ್ ಸವದಿ ಅವರ ಕಾರಿನ ಮುಂಭಾಗ ಜಖಂ ಆಗಿದೆ. ಸದ್ಯ ಲಕ್ಷ್ಮಣ್ ಸವದಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದು, ಬೇರೆ ವಾಹನದಲ್ಲಿ ಪ್ರಯಾಣ ಮುಂದುವರೆಸಿದ್ದರು ಎಂದು ತಿಳಿದುಬಂದಿತ್ತು. ಸ್ಥಳಕ್ಕೆ ಅಥಣಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಭೀಕರ ಅಪಘಾತ: ಕಾರುಗಳ ನಡುವೆ ಭೀಕರ ಅಪಘಾತ ಸಂಭವಿಸಿ ಇಬ್ಬರು ಸಾವನ್ನಪ್ಪಿದ್ದು, ನಾಲ್ವರು ಗಂಭೀರ ಗಾಯಗೊಂಡ ಘಟನೆ ಮಂಡ್ಯ ಜಿಲ್ಲೆ ಮದ್ದೂರಿನ ನಿಡಘಟ್ಟ ಬಳಿ ಕಳೆದ ಭಾನುವಾರ ನಡೆದಿತ್ತು. ಅಪಘಾತದಲ್ಲಿ ಮಸೂದ್ ಹಾಗೂ ಅಯಾನ್ ಮೃತಪಟ್ಟಿದ್ದು, ಖುಷಿ, ಚಿಕ್ಕು, ಮುಜಾಯಿದ್ ಪಾಷ, ಬಸವರಾಜು, ಪಾರ್ವತಿ ಎಂಬುವವರು ಗಂಭೀರ ಗಾಯಗೊಂಡಿದ್ದರು. ಗಾಯಗೊಂಡವರನ್ನು ಬೆಂಗಳೂರು ಹಾಗೂ ಇನ್ನೂ ಕೆಲವರಿಗೆ ಮೈಸೂರು ಆಸ್ಪತ್ರೆಯಲ್ಲಿ ಚಿಕಿತ್ಸೆಗೆಂದು ದಾಖಲಿಸಲಾಗಿತ್ತು.












Click it and Unblock the Notifications