ತರೀಕೆರೆ: ನಮಗೆ ಮಗನ ಚಿನ್ನ, ಹಣ ಬೇಡ, ಅವನ ಹೆಲ್ಮೆಟ್, ವಾಚ್ ಹುಡುಕಿಕೊಡಿ: ಪೊಲೀಸರ ಬಳಿ ಅಂಗಲಾಚಿದ ಮೃತ ಯೋಧನ ಪೋಷಕರು
ಚಿಕ್ಕಮಗಳೂರು, ಮೇ, 29: ಇತ್ತೀಚೆಗಷ್ಟೇ ತರೀಕೆರೆ ತಾಲೂಕಿನ ತಣಿಗೆಬೈಲಿನ ಕಾಮಾಂಡೋ ಒಬ್ಬರು ಮೃತಪಟ್ಟಿದ್ದರು. ಇನ್ನು ಮಗನನ್ನು ಕಳೆದುಕೊಂಡ ತಂದೆ, ತಾಯಿಗಳು ಪೊಲೀಸರ ಬಳಿ ಹೋಗಿ, ನನ್ನ ಮಗನ ಮೊಬೈಲ್, ವಾಚ್ ಹಾಗೂ ಹೆಲ್ಮೇಟ್ ಹುಡುಕಿಕೊಡಿ ಎಂದು ಮನವಿ ಮಾಡಿರುವ ಘಟನೆ ನಡೆದಿದೆ.
ಮೃತಪಟ್ಟ ದೀಪಕ್‌ನ ಕೊರಳಿದ್ದ ಸರ, ಕೈಯಲ್ಲಿದ್ದ ಉಂಗುರ, ಜೇನಿನಲ್ಲಿದ್ದ ಹಣವನ್ನು ಪೋಷಕರು ಕೇಳಳಿಲ್ಲ. ಬದಲಾಗಿ ಮಗನ ಮೊಬೈಲ್, ವಾಚ್ ಹಾಗೂ ಹೆಲ್ಮೇಟ್ ಕೊಡಿ ಅಂತಾ ಪೊಲೀಸರ ಬಳಿ ಕೇಳಿದ್ದಾರೆ. ಆದರೆ ಪೊಲೀಸರು ಮಾತ್ರ ನಾವೇನು ಹುಡುಕಿಕೊಂಡು ಹೋಗುವುದಕ್ಕೆ ಆಗುತ್ತದೆಯಾ? ಅಂತಾ ಪ್ರಶ್ನಿಸುವ ಮೂಲಕ ಮೃತಪಟ್ಟ ಸೈನಿಕನ ತಂದೆ, ತಾಯಿಗಳಿಗೆ ಬೈದಿದ್ದಾರೆ.

ಇನ್ನು 22 ವರ್ಷದ ಎನ್.ಎಸ್.ಜಿ. ಬ್ಲ್ಯಾಕ್ ಕ್ಯಾಟ್ ಕಮಾಂಡೋ ಮಗನನ್ನು ಕಳೆದುಕೊಂಡ ಹೆತ್ತವರು, ಮಗನ ಮೊಬೈಲ್, ವಾಚ್ ಹಾಗೂ ಹೆಲ್ಮೇಟ್‌ಗಾಗಿ ಕಣ್ಣೀರಿಡುತ್ತಿದ್ದಾರೆ. 2018ರಲ್ಲಿ ಸೇನೆಗೆ ಸೇರಿದ ದೀಪಕ್ ನಾಲ್ಕೇ ವರ್ಷಕ್ಕೆ ಬ್ಲ್ಯಾಕ್ ಕ್ಯಾಟ್ ಕಮಾಂಡೋ ಆಗಿದ್ದ. ನಂತರ 2020ರಲ್ಲಿ ಮದುವೆ ಕೂಡ ಆಗಿತ್ತು. ರಜೆ ಮೇಲೆ ಊರಿಗೆ ಬಂದಿದ್ದ ದೀಪಕ್ ಮತ್ತೆ ಮರಳಿ ವಾಪಸ್ ಹೋಗುವಾಗ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಯಡಿಯೂರು ಸಮೀಪದ ಹೇಮಾವತಿ ಕ್ರಾಸ್ ಬಳಿ ಅಪಘಾತಕ್ಕೀಡಾಗಿ ಸಾವನ್ನಪ್ಪಿದ್ದರು.
ನಂತರ ಸೇನೆಯ ಗೌರವಗಳೊಂದಿಗೆ ದೀಪಕ್ ಅವರ ಅಂತ್ಯಸಂಸ್ಕಾರವನ್ನು ಕೂಡ ಮಾಡಲಾಗಿತ್ತು. ಆದರೆ, ಈ ಯೋಧನ ಸಾವು ಮಾತ್ರ ಇಂದಿಗೂ ನಿಗೂಢವಾಗಿದೆ. ಅಪಘಾತದಲ್ಲಿ ಸಾವನ್ನಪ್ಪಿದರು ಅನ್ನುವುದು ಹೇಗೆ, ಯಾವ ವಾಹನ ಅನ್ನೋದು ಇಂದಿಗೂ ನಿಗೂಢವಾಗಿದೆ. ಹಾಗಾಗಿ, ಮೃತ ದೀಪಕ್ ಪೋಷಕರು ನಮ್ಮ ಮಗನೇ ಹೋದ. ಆತನ ಮೈಮೇಲಿದ್ದ ಚಿನ್ನ-ಹಣ ಯಾವುದೂ ಬೇಡ. ಆತನ ಮೊಬೈಲ್, ವಾಚ್, ಹೆಲ್ಮೇಟ್ ಕೊಡಿ ಎಂದು ಪೊಲೀಸರಿಗೆ ಮನವಿ ಮಾಡಿದ್ದರು.
ಮೊಬೈಲ್‌ನಲ್ಲಿ ಸೇನೆಯ ಸೀಕ್ರೆಟ್ ಕೋಡ್ ಇದೆ ಎಂದು ಹೇಳುತ್ತಿದ್ದ, ಹಾಗೆಯೆ ಹೆಲ್ಮೆಟ್‌ನಲ್ಲಿ ಕ್ಯಾಮೆರಾವೂ ಇದೆ. ಇದರಿಂದ ಅವನ ಸಾವಿಗೆ ಕಾರಣ ಏನೆಂದು ಗೊತ್ತಾಗಬಹುದು. ಆದ್ದರಿಂದ ದಯವಿಟ್ಟು ಹೆಲ್ಮೇಟ್ ಕೊಡಿ ಎಂದು ಪೊಲೀಸರಿಗೆ ಮನವಿ ಮಾಡಿದ್ದಾರೆ.
ಬೈಕ್‌ಗೆ ಅಪಘಾತ ಮಾಡಿದ ಲಾರಿಯವನು ಮೊಬೈಲ್ ತೆಗೆದುಕೊಂಡು ಹೋಗಿದ್ದಾನೆ. ಮನೆಯವರು ಫೋನ್ ಮಾಡಿದಾಗ ಲಾರಿ ಚಾಲಕನೇ ಅಪಘಾತ ಆಗಿದೆ, ಆಸ್ಪತ್ರೆಗೆ ಬನ್ನಿ ಎಂದಿದ್ದಾನೆ. ದೀಪಕ್ ಸ್ನೇಹಿತ ಫೋನ್ ಮಾಡಿದಾಗಲೂ ಲಾರಿ ಚಾಲಕ ಗುದ್ದಿದ್ದಾನೆ ಎಂದು ಹೇಳಿದ್ದರು. ಆಗ ಗಾಬರಿ ಆಯ್ತು ಅದಕ್ಕೆ ಬಂದುಬಿಟ್ಟೆ ಆಸ್ಪತ್ರೆಗೆ ಹೋಗಿ ಎಂದಿದ್ದಾನೆ. ಪೊಲೀಸರು ಫೋನ್ ಮಾಡಿದಾಗಲೂ ನೆಲಮಂಗಲದಲ್ಲಿ ಇದ್ದೇನೆ ಬಂದು ಫೋನ್ ತೆಗೆದುಕೊಂಡು ಹೋಗಿ ಎಂದಿದ್ದನಂತೆ.
ಪೊಲೀಸರು ಲೊಕೇಶನ್ ಆಧಾರದ ಮೇಲೆ ಅಪರಾಧಿಯನ್ನು ಹಿಡಿಯಬಹುದಿತ್ತು. ಆದರೆ ಇನ್ನೂ ಹಿಡಿದಿಲ್ಲ ಎಂದು ಆರೋಪಿಸಿರುವ ಕುಟುಂಬಸ್ಥರು, ಪೊಲೀಸರು ಯೋಧರಿಗೂ ಹೀಗೆ ಮಾಡುತ್ತಾರಾ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆ, ಕುಣಿಗಲ್ ಪೊಲೀಸರು ರಸ್ತೆಯಲ್ಲಿ ಪ್ರತಿದಿನವೂ ಅಪಘಾತದಲ್ಲಿ ಸಾವುಗಳು ಸಂಭವಿಸುತ್ತಲೇ ಇರುತ್ತವೆ ನಾವೇನು ಮಾಡುವುದಕ್ಕೆ ಆಗುತ್ತದೆ ಅಂದರಂತೆ. ಪೊಲೀಸರು ಇರುವುದೇ ಸಮಾಜದ ಶಾಂತಿ ಕಾಪಾಡುವುದರ ಜೊತೆ ನೊಂದವರಿಗೆ ನ್ಯಾಯ ಕೊಡಿಸುವುದಕ್ಕೆ. ಆದರೆ, ಓರ್ವ ಯೋಧನ ಸಾವಿಗೂ ಈ ರೀತಿ ಮಾತನಾಡುತ್ತಾರೆ ಅಂದರೆ ಪೊಲೀಸರು ದೇಶದೊಳಗಿರುವ ಸೈನಿಕರು ಅನ್ನುವದು ತಪ್ಪು ಅನಿಸುತ್ತದೆ ಎಂದು ಅಲ್ಲಿನ ಜನರು ಮಾತನಾಡಿಕೊಳ್ಳುತ್ತಿದ್ದಾರೆ.
ಅದೇನೆ ಇರಲಿ, ಆ ನೊಂದ ಜೀವಗಳು ಹಣ, ಚಿನ್ನ ಕೇಳುತ್ತಿಲ್ಲ. ಬದಲಿಗೆ ಮಗನ ಮೊಬೈಲ್, ಹೆಲ್ಮೇಟ್ ಕೇಳುತ್ತಿದ್ದಾರೆ ಅಷ್ಟೆ. ಕೂಡಲೇ ಸರ್ಕಾರ ಇತ್ತ ಗಮನಹರಿಸಬೇಕು. ಮಗನನ್ನು ಕೊಡುವುದಕ್ಕೆ ಆಗಲ್ಲ ನಿಜ. ಆದರೆ ಆತನ ವಸ್ತುಗಳನ್ನಾದರೂ ಹಿಂದುರುಗಿಸಿ, ಆ ಸಾವಿಗೆ ನ್ಯಾಯ ಕೊಡಿಸಬೇಕಿದೆ ಎನ್ನುವುದು ಇಲ್ಲಿನ ಸ್ಥಳೀಯರ ಅಭಿಪ್ರಾಯವಾಗಿದೆ.












Click it and Unblock the Notifications