Sabarimala Ayyappa Swami Mala: ಅಯ್ಯಪ್ಪಸ್ವಾಮಿ ಮಾಲಾಧಾರಿ ವಿದ್ಯಾರ್ಥಿಗೆ ಕಾಲೇಜು ಪ್ರವೇಶ ನಿರಾಕರಣೆ: ಮುಂದೇನಾಯ್ತು?
ಚಿಕ್ಕಮಗಳೂರು, ನವೆಂಬರ್ 21: ರಾಜ್ಯದಲ್ಲಿ ಒಂದಲ್ಲ ಒಂದು ವಿವಾದಗಳು ಸೃಷ್ಟಿಯಾಗುತ್ತಲಿರುತ್ತವೆ. ಹಾಗೆಯೇ ಇದೀಗ ಶಬರಿಮಲೆ ಅಯ್ಯಪ್ಪಸ್ವಾಮಿ ಮಾಲೆ ಧರಿಸಿದ ಕಾರಣ ವಿದ್ಯಾರ್ಥಿಯೋರ್ವನನ್ನ ಪ್ರಾಂಶುಪಾಲರು ತರಗತಿ ಪ್ರವೇಶಕ್ಕೆ ನಿರಾಕರಣೆ ಮಾಡಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಾಲೇಜೊಂದರಲ್ಲಿ ನಡೆದಿದೆ. ಹಾಗಾದ್ರೆ, ಮುಂದೇನಾಯ್ತು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ರಾಜ್ಯದಲ್ಲಿ ಧರ್ಮ, ಜಾತಿ ಆಧಾರಿತ ವಿಚಾರದ ವಿವಾದಗಗಳು ನಡೆಯುತ್ತಲಿವೆ. ಈ ನಡುವೆಯೇ ಇದೀಗ ಕಾಲೇಜೊಂದರಲ್ಲಿ ಅಯ್ಯಪ್ಪಸ್ವಾಮಿ ಮಾಲೆ ಧರಿಸಿದ ಕಾರಣಕ್ಕೆ ವಿದ್ಯಾರ್ಥಿಯನ್ನು ಪ್ರಾಂಶುಪಾಲರು ತರಗತಿಯಿಂದ ಹೊರಗಡೆ ಕಳುಹಿಸಿದ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ. ಮಾಲೆ ಬಿಚ್ಚಿಡುವಂತೆ ಪ್ರಾಂಶುಪಾಲರ ಮನವಿಗೆ ವಿದ್ಯಾರ್ಥಿ ಒಪ್ಪಿರಲಿಲ್ಲ. ವಾದ-ಪ್ರತಿವಾದ ಮುಂದುವರೆದಿತ್ತು. ಇನ್ನೇನು ಪರಿಸ್ಥಿತಿ ಹದಗೆಡುವ ಹೊತ್ತಲೇ ಪೊಲೀಸರು ಹಾಗೂ ಇನ್ನಿತರೆ ಮಾಲಧಾರಿಗಳು ಮಧ್ಯಪ್ರವೇಶಿಸಿ ಶಾಂತಗೊಳಿಸಿದ್ದಾರೆ.

ವಿದ್ಯಾರ್ಥಿಯನ್ನು ಪ್ರಾಂಶುಪಾಲರು ಕಾಲೇಜಿನಿಂದ ಹೊರಹಾಕಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ, ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿನ ಕಡ್ಲೆಮಕ್ಕಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದಿದೆ. ದ್ವಿತೀಯ ಪಿಯುಸಿ ವಿದ್ಯಾರ್ಥಿ ಇದೇ ಮೊದಲ ಬಾರಿಗೆ ಅಯ್ಯಪ್ಪಸ್ವಾಮಿ ಮಾಲೆ ಧರಿಸಿ ಕಾಲೇಜಿಗೆ ತೆರಳಿದ್ದ. ಈ ವೇಳೆ ಕಾಲೇಜು ಆಡಳಿತ ಮಂಡಳಿ ಮಾಲೆ ತೆಗೆಯದಿದ್ದರೆ ಒಳಗಡೆ ಪ್ರವೇಶ ಇಲ್ಲ ಎಂದು ಆತನನ್ನ ಕಾಲೇಜಿನಿಂದ ಹೊರಹಾಕಿದೆ.
ಮಾಲೆ, ವಸ್ತ್ರ, ಸರ ಎಲ್ಲಾವನ್ನು ಬಿಚ್ಚಿಟ್ಟು ಬ್ಯಾಗಿನಲ್ಲಿ ಇಟ್ಟುಕೊಂಡು ಬಂದರೆ ಒಳಗಡೆ ಪ್ರವೇಶ ನೀಡಲಾಗುತ್ತದೆ ಎಂದು ಕೇಳಿಕೊಂಡಿದ್ದಾರೆ. ಆಗ ಮಾಲಾಧಾರಿ ನಾನು ತೆಗೆಯುವುದಿಲ್ಲ ಅಂತಾ ಹಠ ಹಿಡಿಸಿದ್ದಾನೆ. ಈ ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಹಿರಿಯ ಮಾಲಾಧಾರಿಗಳು ಹಾಗೂ ಪೊಲೀಸರು ಕಾಲೇಜು ಆಡಳಿತ ಮಂಡಳಿಯ ಮನವೊಲಿಕೆ ಮಾಡಿ ಪುನಃ ವಿದ್ಯಾರ್ಥಿಯನ್ನು ಕಾಲೇಜಿಗೆ ಕಳುಹಿಸಿದ್ದಾರೆ.
ಪೊಲೀಸರು ಹಾಗೂ ಮಾಲಾಧಾರಿಗಳು ಹೋದ ಬಳಿಕ ಕಾಲೇಜು ಆಡಳಿತ ಮಂಡಳಿ ಸಹ ಸುಮ್ಮನಾಗಿದ್ದು, ವಸ್ತ್ರವನ್ನ ಸೊಂಟಕ್ಕೆ ಕಟ್ಟಿಕೊಳ್ಳುವಂತೆ ಸೂಚನೆ ನೀಡಿದೆ. ಇನ್ನು ಪ್ರಾಂಶುಪಾಲರು ಜಾತಿ-ಧರ್ಮವನ್ನ ಬಿಂಬಿಸುವಂತೆ ಕಾಲೇಜಿಗೆ ಬರುವಂತಿಲ್ಲ. ಈ ಬಗ್ಗೆ ಸರ್ಕಾರದಿಂದ ಸೂಚನೆ ಕೂಡ ಇದೆ ಎಂದು ಹೇಳಿದ್ದಾರೆ. ಆದರೆ, ಮಾಲಾಧಾರಿ ಗುರುಸ್ವಾಮಿ, ಪೊಲೀಸರು ಹೋದ ಬಳಿಕ ಪರಿಸ್ಥಿತಿ ಶಾಂತಗೊಂಡಿದೆ ಎಂದು ತಿಳಿದುಬಂದಿದೆ. ಸಾಮಾನ್ಯವಾಗಿ ರಾಜ್ಯದಲ್ಲಿ ಇಂತಹ ಘಟನೆಗಳು ಆಗಾಗ ನಡೆಯುತ್ತಲಿರುತ್ತವೆ. ಇಂತಹ ಘಟನೆಗಳಿಂದ ಪರಿಸ್ಥಿತಿ ಕೂಡ ಹದಗೆಟ್ಟಿರುವ ಉದಾಹರಣೆಗಳು ಇವೆ.












Click it and Unblock the Notifications