ಭಕ್ತರಿಗೆ ಮುಕ್ತವಾದ ಚಿಕ್ಕಮಗಳೂರಿನ ಶಾರದಾಂಬೆಯ ದೇಗುಲ, ದತ್ತಪೀಠ...
ಚಿಕ್ಕಮಗಳೂರು, ಜೂನ್ 08: ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ರಾಜ್ಯದ ಖಾಸಗಿ ಮತ್ತು ಹಿಂದೂ ಧಾರ್ಮಿಕ ದತ್ತಿ ವ್ಯಾಪ್ತಿಯ ದೇವಾಲಯಗಳು ಇಂದಿನಿಂದ ತೆರೆದಿದ್ದು, ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಶಾರದಾಂಬೆ ಹಾಗೂ ಬಾಬಾಬುಡನ್ ಗಿರಿಯ ಗುರುದತ್ತಾತ್ರೇಯ ಸ್ವಾಮಿ ದರ್ಗಾ ಕೂಡ ಇಂದಿನಿಂದ ಭಕ್ತರಿಗೆ ಮುಕ್ತವಾಗಿವೆ. ದರ್ಶನಕ್ಕೆ ಭಕ್ತರಿಗೆ ದೇವಸ್ಥಾನದಲ್ಲಿ ಅವಕಾಶ ಮಾಡಿಕೊಡಲಾಗಿದೆ.
ಈ ಹಿಂದೆ ಶೃಂಗೇರಿಯ ಶಾರದಾಂಬೆ ದೇವಾಲಯ ಹಾಗೂ ಹೊರನಾಡು ಅನ್ನಪೂರ್ಣೇಶ್ವರಿ ದೇಗುಲಗಳು ಜೂನ್ 8ರ ನಂತರವೂ ತೆರೆಯುವುದಿಲ್ಲ ಎನ್ನಲಾಗಿತ್ತು. ಕೆಲವೊಂದು ಧಾರ್ಮಿಕ ಕೈಂಕರ್ಯಗಳಿಗೆ ಸಮಸ್ಯೆ ಆಗುವ ಹಿನ್ನೆಲೆಯಲ್ಲಿ ದೇವಾಲಯ ತೆರೆಯುವುದಿಲ್ಲ ಎಂದು ಆಡಳಿತ ಮಂಡಳಿಗಳು ತಿಳಿಸಿದ್ದವು. ಆದರೆ ಇದೀಗ ಶೃಂಗೇರಿ ಶಾರದಾ ದೇಗುಲದಲ್ಲಿ ಭಕ್ತರಿಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ.
ಜೂನ್ 8ರ ನಂತರವೂ ತೆರೆಯಲ್ಲ ಚಿಕ್ಕಮಗಳೂರಿನ ಈ ಎರಡು ದೇವಾಲಯಗಳು
ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ಪಟ್ಟಣದಲ್ಲಿರುವ ಶಾರದಾಂಬೆ ದೇವಿಯ ದೇಗುಲದಲ್ಲಿ ಬೆಳಗ್ಗೆ 6 ಗಂಟೆಯಿಂದಲೇ ಭಕ್ತರಿಗೆ ದರ್ಶನ ಭಾಗ್ಯ ದೊರೆತಿದೆ. ಬೆಳಗ್ಗೆ 6ರಿಂದ ಮಧ್ಯಾಹ್ನ 12, ಸಂಜೆ 5ರಿಂದ ರಾತ್ರಿ 8 ಗಂಟೆವರೆಗೆ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಭಕ್ತರಿಗೆ ಕೇವಲ ಕುಂಕುಮ ಪ್ರಸಾದ ಮಾತ್ರ ನೀಡಲಿದ್ದು, ಬೇರೆ ಯಾವುದೇ ರೀತಿಯ ಪ್ರಸಾದವನ್ನು ನೀಡಲಾಗುವುದಿಲ್ಲ. ಒಮ್ಮೆಗೆ ದೇವಸ್ಥಾನದ ಒಳಗೆ 20-25 ಭಕ್ತರಿಗಷ್ಟೆ ಅವಕಾಶವಿದ್ದು, ದೇವಾಲಯದಲ್ಲಿ ಮುಂದಿನ ತೀರ್ಮಾನದವರೆಗೂ ಅನ್ನಸಂತರ್ಪಣೆ ಇರುವುದಿಲ್ಲ ಎಂದು ದೇಗುಲ ಆಡಳಿತ ಮಂಡಳಿ ತಿಳಿಸಿದೆ.
ವಿವಾದಿತ ಬಾಬಾಬುಡನ್ ಗಿರಿಯ ಶ್ರೀಗುರುದತ್ತಾತ್ರೇಯ ಸ್ವಾಮಿ ದರ್ಗಾಕ್ಕೂ ಭಕ್ತರಿಗೆ ಜಿಲ್ಲಾಡಳಿತ ಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಗಿದೆ. ಸಾಮಾಜಿಕ ಅಂತರ ಕಾಪಾಡಿಕೊಂಡು ದರ್ಶನ ಮಾಡುವಂತೆ ಮನವಿ ಮಾಡಲಾಗಿದ್ದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಜಿಲ್ಲಾಡಳಿತ ಮಾರ್ಕಿಂಗ್ ಮಾಡಿದೆ. ಗುಹೆಯ ಹೊರಭಾಗದಿಂದ ಹಿಡಿದು ಗುಹೆಯ ಒಳಗೂ ಮಾರ್ಕಿಂಗ್ ಮಾಡಲಾಗಿದೆ. ಇಂದಿನಿಂದ ರಾಜ್ಯದೆಲ್ಲೆಡೆ ದೇವಸ್ಥಾನಗಳು ಓಪನ್ ಆದ ಹಿನ್ನಲೆ ದತ್ತಪೀಠದಲ್ಲಿಯೂ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಮೂಡಿಗೆರೆಯ ಹೊರನಾಡು ಅನ್ನಪೂರ್ಣೇಶ್ವರಿಯ ದೇವಸ್ಥಾನವನ್ನು ಇನ್ನೂ ತೆರೆಯಲಾಗಿಲ್ಲ.