ಅಭಿವೃದ್ಧಿಗೆ ಅಡ್ಡಗಾಲು:ಡಿ.ಎನ್ ಜೀವರಾಜ್ ವಿರುದ್ಧ ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡ ಗರಂ
ಚಿಕ್ಕಮಗಳೂರು, ಡಿಸೆಂಬರ್ 5 : ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಜೀವರಾಜ್ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಶೃಂಗೇರಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡ ಆರೋಪಿಸಿದ್ದಾರೆ.
ಜೀವರಾಜ್ ಅಭಿವೃದ್ಧಿಗೆ ಅಡ್ಡಗಾಲು ಹಾಕುತ್ತಿದ್ದು, ಇದರಿಂದ ತನಗೆ ಬೇಸರವಾಗಿದೆ. ಈ ಸಂಬಂಧ ತಾನು ಧರ್ಮಸ್ಥಳ ಸೇರಿದಂತೆ ಶಕ್ತಿ ಕೇಂದ್ರಗಳಲ್ಲಿನ ದೇವರ ಮೊರೆ ಹೋಗುತ್ತೇನೆ ಎಂದು ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದ್ದಾರೆ.
ಮೂಡಿಗೆರೆಯ ತಳವಾರ ಗ್ರಾಮದಲ್ಲಿ ಕಾಡಾನೆ ಸೆರೆ: ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
ಈ ಸಂಬಂಧ ವಿಡಿಯೋ ಮೂಲಕ ಹೇಳಿಕೆ ನೀಡಿರುವ ಅವರು, ಸಿಎಂ ರಾಜಕೀಯ ಕಾರ್ಯದರ್ಶಿ ಜೀವರಾಜ್, ಶೃಂಗೇರಿ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ತಮಗೆ ಆರಂಭದಿಂದಲೂ ತೊಂದರೆ ನೀಡುತ್ತಿದ್ದು, ಇಂದಿಗೂ ಅದನ್ನು ಮುಂದುವರಿಸಿದ್ದಾರೆ. ಶಾಸಕನಾಗಿ ಜನಪರ ಕೆಲಸ ಮಾಡುವ ಅವಕಾಶ ನನಗೆ ಸಿಕ್ಕಿದ್ದು, ಈ ಕೆಲಸ ಮಾಡಲು ಜೀವರಾಜ್ ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಆರೋಪಿಸಿದರು.
ಜೀವರಾಜ್ ಮಾಡಿರುವ ಅನ್ಯಾಯ, ಅಪಪ್ರಚಾರಗಳ ಬಗ್ಗೆ ದೇವರ ಮುಂದೆ ಆಣೆ ಮಾಡಿ ಹೇಳುತ್ತೇನೆ. ಜೀವರಾಜ್ ಹೇಳುವ ದೇವಸ್ಥಾನಕ್ಕೆ ನಾನು ಬರುತ್ತೇನೆ. ಅಲ್ಲಿ ಅವರೂ ಆಣೆ ಮಾಡಲಿ, ನಾನೂ ಆಣೆ ಮಾಡುತ್ತೇನೆ ಎಂದು ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡ, ಜೀವರಾಜ್‌ಗೆ ಸವಾಲು ಹಾಕಿದ್ದಾರೆ.
ನಾನು ಸಿದ್ದಾರ್ಥ ಅವರ ಆಸ್ತಿ ಖರೀದಿ ಮಾಡಿರುವುದು ಬಹಳ ವರ್ಷಗಳ ಹಿಂದೆ. ಅಂದಿನ ಜಮೀನಿಗಿದ್ದ ಮಾರುಕಟ್ಟೆ ದರಕ್ಕೆ ಅದನ್ನು ಖರೀದಿ ಮಾಡಿದ್ದೇನೆ. ಅದರ ಅಂದಾಜು ಮೊತ್ತ 14ರಿಂದ15 ಕೋಟಿ ಅಷ್ಟೇ. ಆದರೆ ಜೀವರಾಜ್ 274 ಕೋಟಿ ರೂಪಾಯಿ ಮೌಲ್ಯದ ಜಮೀನು ಖರೀದಿ ಮಾಡಿದ್ದೇನೆ ಎಂದು ಆರೋಪಿಸಿದ್ದಾರೆ. ಜೀವರಾಜ್ ಅವರಿಗೆ 15 ಕೋಟಿ ರೂಪಾಯಿ, 274 ಕೋಟಿ ರೂಪಾಯಿ ನಡುವಿನ ವ್ಯತ್ಯಾಸ ಗೊತ್ತಿಲ್ಲವಾ..? 80 ಕೋಟಿ ರೂಪಾಯಿ ವಂಚನೆ ಮಾಡಿದ್ದೇನೆ ಎನ್ನುತ್ತಿರುವ ಜೀವರಾಜ್‍ಗೆ ಬುದ್ಧಿ ಇಲ್ವಾ..? ಅವರು ಅವಿದ್ಯಾವಂತರಾ..? ಜನರಲ್ಲಿ ಏಕೆ ಗೊಂದಲ ಮೂಡಿಸುತ್ತಿದ್ದೀರಿ..? ಎಂದು ಪ್ರಶ್ನಿಸಿದ್ದಾರೆ.

ಇನ್ನು ನಾನು ಸರ್ಕಾರಕ್ಕೆ ವಂಚನೆ ಮಾಡಿರುವುದು ನಿಜವಾದರೆ ತನಿಖೆ ಮಾಡಿಸಲಿ, ನಾನು ತನಿಖೆಗೆ ಸಿದ್ಧ. ಆದರೆ ಹೋದಲ್ಲೆಲ್ಲಾ ಅಪಪ್ರಚಾರ ಮಾಡುತ್ತಿರುವುದನ್ನು ಸಹಿಸುವುದಿಲ್ಲ. ಈ ವಿಚಾರವನ್ನು ಸುಮ್ಮನೆ ಬಿಡಲ್ಲ. ನನ್ನ ಮನಸಿಗೆ ನೋವಾಗಿದ್ದು, ಈಗಾಗಲೇ ಎರಡು ದೇವಾಲಯಗಳಿಗೆ ಹೋಗಿ ಆಣೆ ಮಾಡಿದ್ದೇನೆ. ಚರ್ಚ್, ಮಸೀದಿ ಸೇರಿದಂತೆ ಎಲ್ಲಾ ಧಾರ್ಮಿಕ ಸ್ಥಳಗಳಿಗೆ ಹೋಗಿ ಪ್ರಾರ್ಥನೆ ಮಾಡುತ್ತೇನೆ. ಕೆಟ್ಟ ಮನಸ್ಥಿತಿಯವರಿಗೆ ಒಳ್ಳೆ ಬುದ್ಧಿ ಕೊಡು ಎಂದು ದೇವರಲ್ಲಿ ಕೇಳಿಕೊಂಡಿದ್ದೇನೆ. ಶೃಂಗೇರಿ ಕ್ಷೇತ್ರದ ಜನರು ಜೀವರಾಜ್ ಅವರ ನಡವಳಿಕೆ ನೋಡುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಸೋಲುವ ಹತಾಶೆಯಿಂದ ಜೀವರಾಜ್ ಇಂತಹ ಹೇಳಿಕೆ ನೀಡುತ್ತಿದ್ದಾರೆ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದ್ದಾರೆ.