ಯಡಿಯೂರಪ್ಪ ಭೇಟಿ ಮಾಡಿದ ಸಿ. ಟಿ. ರವಿ; ಮನವಿ ಏನು?
ಚಿಕ್ಕಮಗಳೂರು, ಫೆಬ್ರವರಿ 02: ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಬಜೆಟ್ ಮಂಡನೆಯ ತಯಾರಿಯನ್ನು ಆರಂಭಿಸುತ್ತಿದ್ದಾರೆ. ಚಿಕ್ಕಮಗಳೂರು ಶಾಸಕ, ಮಾಜಿ ಸಚಿವ ಸಿ. ಟಿ. ರವಿ ಜಿಲ್ಲೆಯ ಜನರ ಪರವಾಗಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ, "ಚಿಕ್ಕಮಗಳೂರು ಜಿಲ್ಲೆ ನಿರಂತರ ಅಭಿವೃದ್ಧಿಯನ್ನು ಕಾಣುತ್ತಿದೆ" ಎಂದು ಹೇಳಿದ್ದಾರೆ. ಬಜೆಟ್‌ನಲ್ಲಿ ಜಿಲ್ಲೆಯ ಜನರ ಬೇಡಿಕೆಗಳಿಗೆ ಆದ್ಯತೆ ನೀಡಬೇಕು ಎಂದು ಮನವಿಯನ್ನು ಮಾಡಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಜನತೆಯ ಹಾಗೂ ಜನ ಪ್ರತಿನಿಧಿಗಳ ಬಹುದಿನದ ಬೇಡಿಕೆಗಳಾದ ಚಿಕ್ಕಮಗಳೂರು ಜಿಲ್ಲೆಗೆ ಪ್ರತ್ಯೇಕ ಹಾಲು ಉತ್ಪಾದಕರ ಸಹಕಾರ ಒಕ್ಕೂಟ ಸ್ಥಾಪನೆ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ಸ್ಥಾಪನೆ ಮಾಡುವ ಕುರಿತಾಗಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿದೆ.

2021-22 ನೇ ಸಾಲಿನ ಬಜೆಟ್‌ನಲ್ಲಿ ಈ ಕುರಿತು ಘೋಷಣೆ ಮಾಡಿ, 100 ಕೋಟಿ ರೂಪಾಯಿ ಅನುದಾನವನ್ನು ಪ್ರಸಕ್ತ ವರ್ಷದಲ್ಲಿ ಕಾಯ್ದರಿಸುವಂತೆ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ವಿಧಾನಪರಿಷತ್ ಉಪಸಭಾಪತಿ ಎಂ. ಕೆ. ಪ್ರಾಣೇಶ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಜೀವರಾಜ್, ಜಿಲ್ಲೆಯ ಶಾಸಕರಾದ ಬೆಳ್ಳಿ ಪ್ರಕಾಶ್ ಹಾಗೂ ಎಂ. ಪಿ. ಕುಮಾರಸ್ವಾಮಿ ಅವರು ಸಿ. ಟಿ. ರವಿ ಅವರ ಜೊತೆಗಿದ್ದರು.
ಪ್ರಸ್ತುತ ಕೊಡಗು, ಚಿಕ್ಕಮಗಳೂರು, ಹಾಸನ ಜಿಲ್ಲೆಗಳನ್ನು ಸೇರಿಸಿ ಹಾಸನ ಹಾಲು ಒಕ್ಕೂಟವಿದೆ. ಚಿಕ್ಕಮಗಳೂರಿಗೆ ಪ್ರತ್ಯೇಕ ಹಾಲು ಉತ್ಪಾದಕರ ಒಕ್ಕೂಟ ಬೇಕೆಂಬುದು ಪ್ರಮುಖ ಬೇಡಿಕೆಯಾಗಿದೆ.












Click it and Unblock the Notifications