ಪೊಲೀಸರ ಮೇಲಿನ ಸೇಡಿಗೆ ಶಂಕರಾಚಾರ್ಯರ ಪುತ್ಥಳಿ ಬಳಕೆ ಮಾಡಿದ ಕಿಡಿಗೇಡಿ
ಚಿಕ್ಕಮಗಳೂರು, ಆಗಸ್ಟ್ 14: ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಪಟ್ಟಣದಲ್ಲಿನ ಶಂಕರಾಚಾರ್ಯರ ಪುತ್ಥಳಿಗೆ ಎಸ್.ಡಿ.ಪಿ.ಐ ಬಾವುಟ ಪ್ರಕರಣಕ್ಕೆ ಹೊಸ ಟ್ವಿಸ್ಟ್ ದೊರೆತಿದ್ದು, ಪೊಲೀಸರ ಮೇಲಿನ ಸೇಡಿಗೆ ಶಂಕರಾಚಾರ್ಯರ ಪುತ್ಥಳಿಯನ್ನು ಕಿಡಿಗೇಡಿ ಬಳಕೆ ಮಾಡಿದ್ದಾನೆ.
ಕಳ್ಳತನ ಪ್ರಕರಣದಲ್ಲಿ ವಿಚಾರಣೆ ಎದುರಿಸಿದ್ದ ಆರೋಪಿಯಿಂದ ಈ ಕೃತ್ಯ ನಡಿದಿದೆ. ಪೊಲೀಸರ ಮೇಲಿನ ದ್ವೇಷಕ್ಕೆ ಕೋಮು ಗಲಭೆಯನ್ನು ಸೃಷ್ಟಿಸುವ ಉಪಾಯ ಹೆಣೆದಿದ್ದ ಎನ್ನಲಾಗಿದೆ.
ಸಿಸಿಟಿವಿ ದೃಶ್ಯದಿಂದ ಶಂಕರಾಚಾರ್ಯರ ಪುತ್ಥಳಿ ಮೇಲೆ ಬೇರೊಂದು ಧರ್ಮದ ಬಾವುಟ ಪ್ರಕರಣ ಬಯಲಾಗಿದೆ. ಶೃಂಗೇರಿ ಮೂಲದ ಎಮೀಲ್ ಎಂಬ ಕಿಡಿಗೇಡಿಯಿಂದ ಕೃತ್ಯ ನಡೆದಿದೆ. ಶೃಂಗೇರಿಯ ಚಿನ್ನದ ಅಂಗಡಿ ಕಳ್ಳತನ ಪ್ರಕರಣದಲ್ಲಿ ಮಿಲಿಂದಾ ಅಲಿಯಾಸ್ ಮಿಲ್ಲಿ ವಿಚಾರಣೆ ಎದುರಿಸಿದ್ದನು.

ಬೆಂಗಳೂರಿನ ಡಿಜೆ ಹಳ್ಳಿ ಹಾಗೂ ಕೆಜಿ ಹಳ್ಳಿಯ ಗಲಭೆ ಘಟನೆ ಹಸಿಯಾಗಿರುವ ಹೊತ್ತಿನಲ್ಲೇ ಮಲೆನಾಡಿನಲ್ಲಿ ಅಶಾಂತಿ ಮೂಡಿಸುವ ಹುನ್ನಾರ ಮಾಡಿದ್ದ ಎನ್ನಲಾಗಿದೆ.
ಶಂಕರಾಚಾರ್ಯರ ಪುತ್ಥಳಿಗೆ ಎಸ್.ಡಿ.ಪಿ.ಐ ಸಂಘಟನೆ ಬಾವುಟ ಹಾಕಿ ಅಶಾಂತಿ ಮೂಡಿಸುವ ಯತ್ನ ನಡೆಸಿದ್ದು, ಆರೋಪಿಯ ಹಿನ್ನೆಲೆಯ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಸಿಸಿಟಿವಿಯಲ್ಲಿ ಬಾವುಟ ಹಾಕುವ ದೃಶ್ಯ ಸೆರೆಯಾಗಿದ್ದು, ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಶೃಂಗೇರಿಯ ಶಂಕರಾಚಾರ್ಯರ ಪುತ್ಥಳಿಗೆ ಎಸ್.ಡಿ.ಪಿ.ಐ ಸಂಘಟನೆ ಬಾವುಟ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಅವರು ಹೇಳಿಕೆ ನೀಡಿದ್ದು, ಕುಡಿದ ನಶೆಯಲ್ಲಿ ಆರೋಪಿ ಈ ರೀತಿ ಕೃತ್ಯ ಮಾಡಿದ್ದಾನೆ ಎಂದರು.
ಆರೋಪಿ ಮಿಲಿಂದಾ ಅಲಿಯಾಸ್ ಮಿಲ್ಲಿ ಈ ಕೃತ್ಯ ಎಸಗಿದ್ದು, ಈತ ಯಾವುದೇ ಸಂಘಟನೆ, ಪಕ್ಷಕ್ಕೆ ಸೇರಿದವನಲ್ಲ ಇದು ಪೋರ್ವ ನಿಯೋಜಿತ ಘಟನೆ ಅಲ್ಲ. ತನಿಖೆಯಲ್ಲಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ತಿಳಿಸಿದರು.












Click it and Unblock the Notifications