ಯಡಿಯೂರಪ್ಪರನ್ನ ಜೈಲಿಗೆ ಕಳುಹಿಸಲು ನೀವೇ ಕಾರಣ-ಸಿ.ಟಿ ರವಿ ವಿರುದ್ಧ ಭೋಜೇಗೌಡ ಕಿಡಿ
ಕುಮಾರಸ್ವಾಮಿಯನ್ನೇ ಮುಖ್ಯಮಂತ್ರಿ ಮಾಡುತ್ತೇವೆ ಎಂದು ಯಾರ್ಯಾರು ಬಂದು ಕಾಲು ಹಿಡಿಯುತ್ತಾರೋ ಗೊತ್ತಿಲ್ಲ. ಆದರೆ ಮುಂದಿನ ಚುನಾವಣೆ ಬಳಿಕ ಕಾಲು ಹಿಡಿಯುವುದಂತೂ ಗ್ಯಾರಂಟಿ ಎಂದು ವಿಧಾನಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಹೇಳಿದ್ದಾರೆ.
ಹಾಸನ, ಫೆಬ್ರವರಿ 9: ಸೂರ್ಯ,ಚಂದ್ರ ಹುಟ್ಟುವುದು ಎಷ್ಟು ಸತ್ಯವೋ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಎಚ್.ಡಿ ಕುಮಾರಸ್ವಾಮಿ ಮುಖ್ಯಮಂತ್ರಿ ಆಗುವುದು ಅಷ್ಟೇ ಸತ್ಯ ಎಂದು ವಿಧಾನಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಹೇಳಿದ್ದಾರೆ.
ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿಯನ್ನೇ ಮುಖ್ಯಮಂತ್ರಿ ಮಾಡುತ್ತೇವೆ ಎಂದು ಯಾರ್ಯಾರು ಬಂದು ಕಾಲು ಹಿಡಿಯುತ್ತಾರೋ ಗೊತ್ತಿಲ್ಲ. ಆದರೆ ಮುಂದಿನ ಚುನಾವಣೆ ಬಳಿಕ ಕಾಲು ಹಿಡಿಯುವುದಂತೂ ಗ್ಯಾರಂಟಿ. ಕುಮಾರಸ್ವಾಮಿ ಕಾಲು ಹಿಡಿಯಲ್ಲ. ಆದರೆ ದೇವೇಗೌಡರ ಕಾಲು ಹಿಡಿಯುತ್ತಾರೆ ಎಂದರು.
ಈ ರಾಜ್ಯದಲ್ಲಿ ಬಿಎಸ್ ಯಡಿಯೂರಪ್ಪ ಇಲ್ಲದಿದ್ದರೆ ಬಿಜೆಪಿ ದೊಡ್ಡ ಸೊನ್ನೆ. ಯಡಿಯೂರಪ್ಪ ಇಲ್ಲದ ಬಜೆಪಿ ಶೂನ್ಯ. ಬಿಜೆಪಿಯಲ್ಲಿ ನೂರು ಜನ ನಾಯಕರಿರಬಹುದು. ಆದರೆ ಬಿಜೆಪಿ ನಿಂತಿರುವುದು ಯಡಿಯೂರಪ್ಪ ಅವರ ಮೇಲೆ. ಸಮ್ಮಿಶ್ರ ಸರ್ಕಾರ ಮಾಡದಿದ್ದರೆ ಯಡಿಯೂರಪ್ಪ ಬಿಜೆಪಿಯೊಳಗೆ ಇಷ್ಟು ಪ್ರಭಾವಿ ಆಗುತ್ತಿರಲಿಲ್ಲ ಎಂದು ಹೇಳಿದರು.

ಇನ್ನು ದಕ್ಷಿಣ ಭಾರತದಲ್ಲಿ ಬಿಜೆಪಿ ಬಾಗಿಲು ತೆರಯಲು ಅಂದಿನ ಸಮ್ಮಿಶ್ರ ಸರ್ಕಾರವೇ ಕಾರಣ. ಆದರೆ, ಇಂದು ಅದೇ ಪಕ್ಷದವರು ದಕ್ಷಿಣ ಭಾರತದಲ್ಲಿ ಬಿಜೆಪಿ ಬಾಗಿಲು ತೆಗೆದವರನ್ನು ಮನೆಗೆ ಕಳುಹಿಸಿದ್ದಾರೆ ಎಂದು ಬಿಜೆಪಿ ನಾಯಕರ ನಡೆಯ ವಿರುದ್ಧ ಭೋಜೇಗೌಡ ಅಸಮಾಧಾನ ಹೊರಹಾಕಿದ್ದಾರೆ.
ಇನ್ನು ಜೆಡಿಎಸ್ ಪಕ್ಷ ತೊರೆಯುತ್ತೇವೆ ಎಂದು ಹೇಳುವ ನಾಯಕರ ಬಗ್ಗೆ ಮಾತನಾಡಿದ ಅವರು, ಹಾಸನದಲ್ಲಿ ಜೆಡಿಎಸ್ ಪಕ್ಷ ಬಿಡುತ್ತೇವೆ ಎಂದು ಹೇಳಿದವರದ್ದು, ಎರಡು ವರ್ಷದ ಧಾರಾವಾಹಿ. ಅವರು ಹೋರದೆ ನಮ್ಮ ಪಕ್ಷ ಹೋಗಿಬಿಡುತ್ತದಾ. ಅರಸೀಕೆರೆ, ಅರಕಲಗೂಡಿಗೆ ಅಭ್ಯರ್ಥಿಗಳಿದ್ದಾರೆ. ನೂರಾರು ನಾಯಕರು ಜೆಡಿಎಸ್ ಬಿಟ್ಟು ಹೋಗಿದ್ದಾರೆ. ಆದರೆ ಕಳೆದ ಚುನಾವಣೆಯಲ್ಲಿ 37 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ವಿರುದ್ಧ ಕಿಡಿಕಾರಿದ ಭೋಜೇಗೌಡ, ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರನ್ನು ಜೈಲಿಗೆ ಕಳುಹಿಸಲು ನೀವೆ ಕಾರಣ. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಿದ ಆಪಾದನೆಯೂ ನಿಮ್ಮ ಮೇಲಿದೆ. ಯಡಿಯೂರಪ್ಪನವರಿಗೆ ವಯಸ್ಸಾಗಿದೆ, ಕಿವಿ ಕೇಳಿಸಲ್ಲ, ಬಂದವರನನು ಗುರುತು ಹಿಡಿಯುವುದಿಲ್ಲ, ಓಡಾಡಲು ಆಗುವುದಿಲ್ಲ ಎನ್ನುವ ಕಾರಣ ನೀಡಿ ಮುಖ್ಯಮಂತ್ರಿ ಸ್ಥಾನದಿಂದ ಇಳಿಸಲಾಗಿದೆ. ಇದರ ಎಲ್ಲಾ ಕೀರ್ತಿ, ಅಪಕೀರ್ತಿಗಳು ಕೂಡ ನಿಮಗೆ ಸಲ್ಲುತ್ತದೆ. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸುವಲ್ಲಿ ನೀವು ಸೇರಿದಂತೆ ಅನೇಕರಿದ್ದಾರೆ. ಅದರಲ್ಲಿ ಪ್ರಮುಖ ಪಾತ್ರ ನಿಮ್ಮದೇ ಇದನ್ನು ನಾನು ಹೇಳುತ್ತಿಲ್ಲ. ಹೀಗೆ ಜನ ಮಾತನಾಡುತ್ತಿದ್ದಾರೆ ಎಂದು ಹೇಳಿದರು.












Click it and Unblock the Notifications