ಭದ್ರೆಯ ಒಡಲಲ್ಲಿ ಮೈನವಿರೇಳಿಸುವ ರಾಫ್ಟಿಂಗ್; ನೀವು ಹೋಗೋದು ಯಾವಾಗ?
ಚಿಕ್ಕಮಗಳೂರು, ಸೆಪ್ಟೆಂಬರ್ 30: ಚಿಕ್ಕಮಗಳೂರಿನಲ್ಲಿ ಸಾಮಾನ್ಯವಾಗಿ ಕಾರು rally ನಡೆಯುತ್ತಿತ್ತು. ಇದೀಗ ರಿವರ್ ರಾಫ್ಟಿಂಗ್ ಕೂಡ ಇಲ್ಲಿ ಜನಪ್ರಿಯವಾಗುತ್ತಿದೆ. ವರುಣನ ರುದ್ರನರ್ತನದ ಬಳಿಕ ಕಾಫಿನಾಡು ಶಾಂತಗೊಂಡಿದ್ದು, ಸಾಧಾರಣ ಮಳೆಯಾಗುತ್ತಿದೆ. ನದಿ, ಹಳ್ಳ-ತೊರೆಗಳು ಮೈದುಂಬಿ ಹರಿಯುತ್ತಿವೆ. ಅಪಾಯದ ಮಟ್ಟವಲ್ಲದಿದ್ದರೂ ಮೈದುಂಬಿ ಹರಿಯುತ್ತಿರುವ ಭದ್ರೆಯ ಒಡಲಿನಲ್ಲಿ ಸಾಹಸಮಯ ರಾಫ್ಟಿಂಗ್ ಕೂಡ ರೋಮಾಂಚನಕಾರಿಯಾಗಿರಲಿದೆ. ಮೈ ನವಿರೇಳಿಸುವ ಈ ಸಾಹಸದಲ್ಲಿ ಪಾಲ್ಗೊಳ್ಳಲು ಪ್ರವಾಸಿಗರೂ ಮುಗಿ ಬೀಳುತ್ತಿದ್ದಾರೆ.
ಈ ಮೈದುಂಬಿ ಹರಿಯುತ್ತಿರುವ ಭದ್ರೆಯ ಒಡಲಲ್ಲಿ ಸಾಹಸಮಯ ರಾಫ್ಟಿಂಗ್ ನಡೆಸುವುದೇ ಒಂದು ಮಜಾ. ಜಿಲ್ಲೆಯಲ್ಲಿ ಸುಮಾರು 300 ಕಿ.ಮೀ. ವ್ಯಾಪ್ತಿಯಲ್ಲಿ ವೇಗವಾಗಿ ಭದ್ರೆ ಹರಿಯುತ್ತಾಳೆ. ಮಳೆಗಾಲದಲ್ಲಿ ಮೂಡಿಗೆರೆ ತಾಲೂಕಿನ ಬಾಳೆಹೊಳೆ ಬಳಿ ಕಳೆದ ಹತ್ತು ವರ್ಷಗಳಿಂದ ರಾಫ್ಟಿಂಗ್ ನಡೆಯುತ್ತಿದೆ. ಪ್ರವಾಹದಂತೆ ಹರಿಯುವ ಭದ್ರೆ ನದಿಯಲ್ಲಿ ಬೋಟ್ ಮೇಲೆ ಕೂತು ಇಳಿಜಾರಿನಲ್ಲಿ ಧುಮ್ಮಿಕ್ಕುವುದೇ ರೋಮಾಂಚನ.

ಜಿಲ್ಲೆಯ ಏಸ್ ಪ್ಯಾಡಲರ್ರ್ಸ್ ಸಂಸ್ಥೆ ಮೊದಲ ಬಾರಿಗೆ ಭದ್ರೆಯ ಒಡಲಲ್ಲಿ ರಾಫ್ಟಿಂಗ್ ಏರ್ಪಡಿಸಿದೆ. ಏಸ್ ಸಂಸ್ಥೆ ಭದ್ರಾ ನದಿಯಲ್ಲಿ ಸಮೀಕ್ಷೆ ನಡಿಸಿ, ಅಪಾಯವಿಲ್ಲದೆ ರಾಫ್ಟಿಂಗ್ ನಡೆಸಲು ಜಿಲ್ಲಾಡಳಿತ ಅನುಮತಿಯೂ ನೀಡಿದೆ. ಕುದುರೆಮುಖ, ಕಳಸ ಸೇರಿದಂತೆ ಘಟ್ಟಪ್ರದೇಶದಲ್ಲಿ ಮಳೆಯಾಗುತ್ತಿದೆ. ಈ ನಡುವೆಯೂ ಪ್ರವಾಸಿಗರು ರಾಫ್ಟಿಂಗ್ ನ ಮೋಜು ಅನುಭವಿಸುತ್ತಿದ್ದಾರೆ.

ಹಿಮಾಚಲ ಪ್ರದೇಶ, ಉತ್ತರಪ್ರದೇಶ, ಸೇರಿದಂತೆ ಉತ್ತರ ಭಾರತದಿಂದ ಬಂದಿರುವ ಗೈಡ್ ಗಳು ನಿರ್ದೇಶನ ನೀಡುತ್ತಾರೆ. 4 ರಿಂದ 10 ಕಿ.ಮೀ. ವರೆಗೂ ಸಾಗಬಹುದಾದ ರಾಫ್ಟಿಂಗ್ ನಲ್ಲಿ ಸ್ಥಳೀಯರು ಹಾಗೂ ಪ್ರವಾಸಿಗರು ಪಾಲ್ಗೊಳ್ಳುತ್ತಿರುವುದು ಆಯೋಜಕರಿಗೂ ಉತ್ಸಾಹ ತಂದಿದೆ. ಹೊರ ಜಿಲ್ಲೆ, ಹೊರ ರಾಜ್ಯಗಳಿಂದಲೂ ಇಲ್ಲಿನ ರಾಫ್ಟಿಂಗ್ ಗಾಗಿ ಬರುತ್ತಿದ್ದಾರೆ. ಸರ್ಕಾರ ಕೂಡ ವಿಶ್ವ ಪ್ರವಾಸೋದ್ಯಮ ದಿನದ ಅಂಗವಾಗಿ ಇಲ್ಲಿ ವಿದ್ಯಾರ್ಥಿಗಳಿಗೆ ರಾಫ್ಟಿಂಗ್ ಆಯೋಜಿಸಿತ್ತು.











Click it and Unblock the Notifications