ಮೂಡಿಗೆರೆ ತಾಲೂಕು ಕಚೇರಿಯಲ್ಲಿಆತ್ಮಹತ್ಯೆಗೆ ಯತ್ನಿಸಿದ ನಿರಾಶ್ರಿತರು
ಪರಿಹಾರಕ್ಕಾಗಿ ನಾಲ್ಕು ವರ್ಷದಿಂದ ಕಾದು ಕಾದು ಸುಸ್ತಾದ ನಿರಾಶ್ರಿತರು ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮೂಡಿಗೆರೆ ತಹಶೀಲ್ದಾರ್ ಕಚೇರಿಯಲ್ಲಿ ನಡೆದಿದೆ. ಈ ಬಗ್ಗೆ ಮಾಹಿತಿ ಇಲ್ಲಿದೆ.
ಚಿಕ್ಕಮಗಳೂರು, ಫೆಬ್ರವರಿ 10: ಪರಿಹಾರಕ್ಕಾಗಿ ನಾಲ್ಕು ವರ್ಷದಿಂದ ಕಾದು ಕಾದು ಸುಸ್ತಾದ ನಿರಾಶ್ರಿತರು ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮೂಡಿಗೆರೆ ತಹಶೀಲ್ದಾರ್ ಕಚೇರಿಯಲ್ಲಿ ನಡೆದಿದೆ. ಅಧಿಕಾರಿಗಳ ಮುಂದೆ ಆತ್ಮಹತ್ಯೆಗೆ ಯತ್ನಿಸಿದವರು ಮೂಡಿಗೆರೆ ತಾಲೂಕಿನ ಮಧುಗುಂಡಿ-ಮಲೆಮನೆ ಗ್ರಾಮಸ್ಥರಾಗಿದ್ದಾರೆ.
2019ರ ಆಗಸ್ಟ್ 9ರಂದು ಧಾರಾಕಾರ ಮಳೆಯಾಗಿದ್ದು, ಮಲೆಮನೆ-ಮಧುಗುಂಡಿ ಗ್ರಾಮಗಳು ಅಸ್ತವ್ಯಸ್ತಗೊಂಡಿದ್ದವು.ಈ ಗ್ರಾಮದಲ್ಲಿ ಮನೆಗಳು ಇರುವ ಕುರುಗಳು ಇರರದಂತಹ ಸ್ಥಿತಿ ನಿರ್ಮಾಣವಾಗಿತ್ತು. ಗುಡ್ಡದ ಮಣ್ಣು ಕುಸಿದು ಬಿದ್ದು ಊರಿಗೆ ಊರೇ ನೆಲಸಮವಾಗಿತ್ತು. ಈ ವೇಳೆ ಜನರು ರಾತ್ರೋರಾತ್ರಿ ಮನೆಯಿಂದ ಓಡಿಬಂದು ಜೀವ ಉಳಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಸಚಿವ ಆರ್.ಅಶೋಕ್, ಸಿ.ಟಿ.ರವಿ, ಶೋಭಾ ಕರಂದ್ಲಾಜೆ, ಮಾಧುಸ್ವಾಮಿ ಸೇರಿದಂತೆ ಹಲವಾರು ನಾಯಕರು ಘಟನಾ ಸ್ಥಳಕ್ಕೆ ಆಗಮಿಸಿ ಹೊಸ ಬದುಕಿನ ಭರವಸೆ ನೀಡಿದ್ದರು. ಆದರೆ ಆ ಭರವಸೆಗಳು ಇಂದಿಗೂ ಭರವಸೆಯಾಗೇ ಉಳಿದಿವೆ.
ಇಲ್ಲಿನ ಜನ ಹೋರಾಟ, ಮನವಿ ಏನೇ ಮಾಡಿದರು. ಸರ್ಕಾರದಿಂದ ಅಲ್ಪ ಪ್ರಮಾಣದ ಪರಿಹಾರ ಸಿಕ್ಕಿದೆ. ನಾಲ್ಕು ವರ್ಷದಿಂದ ಕಾದು-ಕಾದು ಸುಸ್ತಾದ ಜನರು ಶುಕ್ರವಾರ ತಾಲೂಕು ಕಚೇರಿಯಲ್ಲಿ ವಿಷ ಸೇವಿಸಿ, ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದರು. ಸ್ಥಳದಲ್ಲಿದ್ದ ಪೊಲೀಸರು ಪ್ರತಿಭಟನಾಕಾರರನ್ನು ತಡೆದಿದ್ದಾರೆ. ಇಲ್ಲವಾದರೆ, ಮೂಡಿಗೆರೆ ತಾಲೂಕು ಕಚೇರಿ ಹಾಗೂ ಸರ್ಕಾರ ಮತ್ತೊಂದು ಅನಾಹುತ ಸಂಭವಿಸುತ್ತಿತ್ತು.

ಆತ್ಮಹತ್ಯೆಗೆ ಯತ್ನಿಸಿದ ನಿರಾಶ್ರಿತರು ಸರ್ಕಾರ, ತಾಲೂಕು ಆಡಳಿತ ಹಾಗೂ ಜನನಾಯಕರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ನೆರೆಪರಿಹಾರ ಅಂತ ಮೂಡಿಗೆರೆಗೆ ನೂರಾರು ಕೋಟಿ ಹಣ ಬಂದರೂ ಅದು ಎಲ್ಲಿ ಹೋಯ್ತು ಎಂದು ಪ್ರಶ್ನಿಸಿದ್ದಾರೆ. ಮೂಡಿಗೆರೆ ಶಾಸಕ ಕುಮಾರಸ್ವಾಮಿ ಕೋಟ್ಯಾಂತರ ರೂಪಾಯಿ ಮನೆ ಕಟ್ಟುತ್ತಿದ್ದಾರೆ. ನಮಗೆ ಇರೋದಕ್ಕೆ ಒಂದು ಸೂರು ಬೇಡ್ವಾ. ಸರ್ಕಾರ ಹಾಗೂ ಶಾಸಕರಿಗೆ ನಮ್ಮ ನೋವು ಅರ್ಥವಾಗಿಲ್ವಾ ಎಂದು ವ್ಯವಸ್ಥೆ ವಿರುದ್ಧ ಕಿಡಿಕಾರಿದ್ದಾರೆ.
ಭೈರಾಪುರ ಗ್ರಾಮಕ್ಕೆ ಹೋಗಿ ಎನ್ನುತ್ತಿದ್ದಾರೆ. ಭೈರಾಪುರ ವಾರ್ಷಿಕ 300 ಇಂಚು ಮಳೆ ಬೀಳುವ ಪ್ರದೇಶ. ದಟ್ಟಕಾನನ. ಕಾಡುಪ್ರಾಣಿಗಳ ಹಾವಳಿಗೆ ಮಿತಿಯೇ ಇಲ್ಲ. ಅಲ್ಲಿನ ಜನರೇ ಅಲ್ಲಿ ಏನೂ ಮಾಡಲಾಗದೆ ಕೈಕಟ್ಟಿ ಕೂತಿದ್ದಾರೆ. ಆ ಕಾಡಿಗೆ ಹೋಗಿ ನಾವು ಹೋಗಿ ಏನು ಮಾಡುವುದು. ನಮ್ಮ ಜಾಗವನ್ನ ಸರ್ಕಾರಕ್ಕೆ ಬರೆದುಕೊಟ್ಟಿದ್ದೇವೆ. ಸರ್ಕಾರ ನಮಗೆ ಸೂಕ್ತ ಬದಲಿ ಜಾಗವನ್ನಾದರೂ ನೀಡಿದರೆ ಸಾಕು. ನಮ್ಮ ಬದುಕನ್ನ ನಾವು ನೋಡಿಕೊಳ್ತೇವೆ. ಆದರೆ ಸರ್ಕಾರ ಪ್ರತಿಸಾರಿ ಬಂದಾಗಲೂ ನಮ್ಮ ಮೂಗಿಗೆ ತುಪ್ಪಾ ಸವರಿ, ಶಾಸಕರು ಬಣ್ಣದ ಮಾತುಗಳನ್ನಾಡಿ ಕಳಿಸುತ್ತಾರೆ. ನಮಗೆ ಬದುಕು ಬೇಕು ಇಲ್ಲ, ವಿಷ ಬೇಕು ಎಂದು ತಾಲೂಕು ಕಚೇರಿಯಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
2019ರ ಮಲೆನಾಡ ರಣಮಳೆ ಸಾವಿರಾರು ಜನರ ಬದುಕಿನ ಮೇಲೆ ಬರೆ ಎಳೆದಿದೆ. ಶತಮಾನದ ಬದುಕು ಕಣ್ಣೆದುರೇ ಕೊಚ್ಚಿ ಹೋಗುವಾಗ ಜನ ಮೂಕಪ್ರೇಕ್ಷಕರಾಗಿ ನಿಂತಿದ್ದರು. ಸರ್ಕಾರ ಅವರ ನೆರವಿಗೆ ಬರಲಿಲ್ಲ. ಅವರಿಗೆ ಮತ್ತೆ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗ್ತಿಲ್ಲ. ಇವರ ಪಾಲಿಗೆ ಸರ್ಕಾರ ಇದ್ದು ಇಲ್ಲದಂತಾಗಿದೆ. ಬಡ ಹಾಗೂ ಮಧ್ಯಮ ವರ್ಗದ ಜನ ಒಂದೇ ಜೀವಿತಾವಧಿಯಲ್ಲಿ ಎರಡನೇ ಬಾರಿಗೆ ಹೊಸ ಬದುಕು ಕಟ್ಟಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ಸರ್ಕಾರ ಕಳೆದುಕೊಂಡಿದ್ದೆಲ್ಲವನ್ನೂ ನೀಡೋದಕ್ಕೆ ಸಾಧ್ಯವಿಲ್ಲ. ಆದರೆ, ಮೂಲಭೂತ ಸೌಲಭ್ಯವನ್ನಾದರೂ ನೀಡಬೇಕಿತ್ತು. ಆದರೆ ಸರ್ಕಾರ ಆ ಯೋಜನೆಗೆ ಹೋಗಿಲ್ಲ ಎನ್ನುವುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ.












Click it and Unblock the Notifications