ಎಚ್‌ಡಿಕೆ ದತ್ತಮಾಲೆ ಹೇಳಿಕೆ ಸ್ವಾಗತಿಸಿದ ಬಜರಂಗದಳ, ವಿಎಚ್‌ಪಿ
ಚಿಕ್ಕಮಗಳೂರು, ನವೆಂಬರ್ 20: "ಸಮಯ ಬಂದರೆ ದತ್ತ ಮಾಲೆಯನ್ನೂ ಹಾಕುತ್ತೇವೆ" ಎಂಬ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ನಾಯಕ ಎಚ್. ಡಿ. ಕುಮಾರಸ್ವಾಮಿ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಈ ಹೇಳಿಕೆಯನ್ನು ವಿಶ್ವ ಹಿಂದೂ ಪರಿಷತ್, ಬಜರಂಗದಳ ಸ್ವಾಗತಿಸಿವೆ. ದತ್ತಮಾಲೆ ಧಾರಣೆ ಮಾಡುವಂತೆ ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ಕುಮಾರಸ್ವಾಮಿಯನ್ನು ಆಹ್ವಾನಿಸುವ ಸಾಧ್ಯತೆಯೂ ಇದೆ. ಪ್ರತಿಪಕ್ಷ ನಾಯಕರಾಗಿ ಆಯ್ಕೆಯಾಗಿರುವ ಆರ್. ಅಶೋಕ ಸಹ ದತ್ತಮಾಲೆ ಧರಿಸುವ ಕುರಿತು ಮಾತನಾಡಿದ್ದಾರೆ.

ಸೋಮವಾರ ವಿಶ್ವ ಹಿಂದು ಪರಿಷತ್‌ನ ಕಾರ್ಯಕಾರಣಿ ಸದಸ್ಯ ರಘು ಸಕಲೇಶಪುರ ಟ್ವೀಟ್ ಮಾಡಿ ಎಚ್. ಡಿ. ಕುಮಾರಸ್ವಾಮಿ ಹೇಳಿಕೆ ಸ್ವಾಗತಿಸಿದ್ದಾರೆ. "ಮಾನ್ಯ ಕುಮಾರಸ್ವಾಮಿಯವರು ದತ್ತಮಾಲೆಧಾರಣೆ ಮಾಡಲು ನಿರ್ಧರಿಸಿರುವುದು ಸ್ವಾಗತಾರ್ಹ. ನಿಮ್ಮ ರಾಜಕೀಯ ಭವಿಷ್ಯ ಬದಲಾಗಲಿದ್ದು, ಇನ್ನಷ್ಟು ಶಕ್ತಿ ನೀಡಲಿ ಎಂದು ದತ್ತಾತ್ರೇಯ ಸ್ವಾಮಿಯಲ್ಲಿ ಬೇಡುತ್ತೇನೆ" ಎಂದು ಹೇಳಿದ್ದಾರೆ.
ಎಚ್‌ಡಿಕೆಗೆ ಆಹ್ವಾನ ಸಾಧ್ಯತೆ; ವಿಶ್ವ ಹಿಂದೂ ಪರಿಷತ್, ಬಜರಂಗದಳದ ವತಿಯಿಂದ ಡಿಸೆಂಬರ್ 17ರಿಂದ 26ರ ತನಕ ದತ್ತಜಯಂತಿ ನಡೆಯಲಿದೆ. ಈ ಸಂದರ್ಭದಲ್ಲಿ ದತ್ತಜಯಂತಿಯಲ್ಲಿ ಪಾಲ್ಗೊಳ್ಳಲು ಎಚ್. ಡಿ. ಕುಮಾರಸ್ವಾಮಿಗೆ ಆಹ್ವಾನ ನೀಡುವ ನಿರೀಕ್ಷೆ ಇದೆ. ಸಂಘಟನೆಯ ಮುಖಂಡರು ಖುದ್ದಾಗಿ ಎಚ್. ಡಿ. ಕುಮಾರಸ್ವಾಮಿಯನ್ನು ಭೇಟಿಯಾಗಿ ದತ್ತಜಯಂತಿಯಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ನೀಡುವ ಸಾಧ್ಯತೆ ಇದೆ.
ಚಿಕ್ಕಮಗಳೂರಿನಲ್ಲಿ ಮಾತನಾಡಿದ್ದ ಎಚ್. ಡಿ. ಕುಮಾರಸ್ವಾಮಿ, "ದತ್ತಮಾಲೆ ಹಾಕುವ ಸಮಯ ಬಂದರೆ ದತ್ತಮಾಲೆಯನ್ನು ಹಾಕುತ್ತೇನೆ. ದತ್ತಮಾಲೆ ಏಕೆ ಹಾಕಬಾರದು?, ದೇವರ ಕಾರ್ಯಕ್ರಮ, ಹಾಕೋದು ಬಂದರೆ ಹಾಕುತ್ತೇನೆ, ಅದು ಕಾನೂನು ಬಾಹಿರವಾಗಿ ಅಲ್ಲ, ಕಾನೂನು ಬಾಹಿರವಾಗಿ ಯಾವುದನ್ನೂ ಮಾಡುವುದಿಲ್ಲ" ಎಂದು ಹೇಳಿದ್ದರು.
ಸಚಿವ ಜಮೀರ್ ಅಹ್ಮದ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದ ಅವರು, "ಅವರ ಧರ್ಮದ ಬಗ್ಗೆ ಅಷ್ಟು ಅಭಿಮಾನ ಇದೆ. ನಮ್ಮ ಧರ್ಮದ ಧರ್ಮಾಭಿಮಾನಕ್ಕೆ ನಾನು ಭಯ ಪಡುತ್ತೀನಾ, ಜಾತ್ಯತೀತತೆ ಅಂದರೆ ಏನು?. ಅಲ್ಲೆಲ್ಲೋ ಹೋಗಿ ನಿಮ್ಮ ಮಂತ್ರಿ ಮಾತನಾಡಿದ್ದಾರಲ್ಲ, ನಮ್ಮ ಸಮಾಜದ ಖಾದರ್ ಅವರಿಗೆ ಬಿಜೆಪಿ ಶಾಸಕರು ಕೈಮುಗೀಬೇಕು ಇದು ಜಾತ್ಯತೀತ ಅಲ್ವಾ?. ಜಾತ್ಯತೀತತೆ ಬಗ್ಗೆ ಚರ್ಚೆ ಮಾಡಲು ಕಾಂಗ್ರೆಸ್ಸಿಗರಿಗೆ ಯಾವ ಯೋಗ್ಯತೆ ಇದೆ?" ಎಂದು ಪ್ರಶ್ನೆ ಮಾಡಿದ್ದರು.
ಎಚ್. ಡಿ. ಕುಮಾರಸ್ವಾಮಿ ಡಿಸೆಂಬರ್ 6ರಂದು ದತ್ತಪೀಠಕ್ಕೆ ಭೇಟಿ ನೀಡಲಿದ್ದಾರೆ ಎಂಬ ಮಾಹಿತಿ ಇದೆ. ದತ್ತಮಾಲೆ ಧರಿಸಿ ದತ್ತಪೀಠಕ್ಕೆ ಭೇಟಿ ನೀಡಲು ಅವರು ಶಾಸಕರಿಗೆ ಸಹ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಕೆಲವು ದಿನಗಳ ಹಿಂದೆ ಜೆಡಿಎಸ್‌ನ ಎಲ್ಲಾ ಶಾಸಕರ ಜೊತೆ ಎಚ್. ಡಿ. ಕುಮಾರಸ್ವಾಮಿ ಹಾಸನಾಂಬೆ ದೇವಾಲಯಕ್ಕೆ ಭೇಟಿ ನೀಡಿ ದರ್ಶನ ಮಾಡಿದ್ದರು. ಆದರೆ ಡಿಸೆಂಬರ್ 4ರಿಂದ ವಿಧಾನಮಂಡಲದ ಚಳಿಗಾಲದ ಅಧಿವೇಶನ ಬೆಳಗಾವಿಯಲ್ಲಿ ಆರಂಭವಾಗಲಿದೆ. 19 ಜೆಡಿಎಸ್ ಶಾಸಕರು ಕಲಾಪಕ್ಕೆ ಗೈರಾಗಿ ದತ್ತಪೀಠಕ್ಕೆ ಆಗಮಿಸಲಿದ್ದಾರೆಯೇ? ಎಂಬುದು ಪ್ರಶ್ನೆ.
ಎಚ್. ಡಿ. ಕುಮಾರಸ್ವಾಮಿ ಮೊದಲ ಬಾರಿಗೆ ದತ್ತಪೀಠಕ್ಕೆ ಭೇಟಿ ನೀಡಲಿದ್ದಾರೆ. 2023ರ ಕರ್ನಾಟಕ ವಿಧಾನಸಭೆ ಚುನಾವಣೆ ಬಳಿಕ ಅವರು ಎನ್‌ಡಿಎ ಮೈತ್ರಿಕೂಟಕ್ಕೆ ಬೆಂಬಲ ಘೋಷಣೆ ಮಾಡಿದ್ದಾರೆ. 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಜೊತೆ ರಾಜ್ಯದಲ್ಲಿ ಸೀಟು ಹೊಂದಾಣಿಕೆ ಮಾಡಿಕೊಂಡು ಚುನಾವಣೆ ಎದುರಿಸುವ ತಂತ್ರ ರೂಪಿಸಿದ್ದಾರೆ. ಈ ಹಿನ್ನಲೆಯಲ್ಲಿ ಅವರ ದತ್ತಮಾಲೆ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಕಾರಣವಾಗಿದೆ.












Click it and Unblock the Notifications