ಮಳೆ ಆರ್ಭಟ: ಚಿಕ್ಕಮಗಳೂರಲ್ಲಿ 158 ಅಪಾಯಕಾರಿ ಸ್ಥಳ ಗುರುತು
ಚಿಕ್ಕಮಗಳೂರು, ಜುಲೈ 21: ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆ ಆರ್ಭಟದಿಂದ ಭೂ ಕುಸಿತ ಉಂಟಾಗಿದೆ, ನದಿಗಳು ತುಂಬಿ ಹರಿಯುತ್ತಿದ್ದು, ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಆಗಸ್ಟ್ ತಿಂಗಳಲ್ಲಿ ಜಿಲ್ಲೆಯಲ್ಲಿ ಇನ್ನೂ ಹೆಚ್ಚಿನ ಮಳೆಯಾಗುವ ಮುನ್ಸೂಚನೆ ಇದ್ದು, ಚಿಕ್ಕಮಗಳೂರು ಪೊಲೀಸ್ ಇಲಾಖೆ ಮುನ್ನೆಚ್ಚರಿಕೆ ಕೈಗೊಂಡಿದೆ.
ಚಿಕ್ಕಮಗಳೂರಿನಲ್ಲಿ ಮಳೆಯಿಂದ ಅಪಾಯ ಸಂಭವಿಸಬಹುದಾದ ಜಾಗಗಳ ಗುರುತು ಮಾಡಲಾಗಿದೆ. ಒಟ್ಟು 158 ಅಪಾಯಕಾರಿ ಸ್ಥಳಗಳನ್ನು ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಗುರುತು ಮಾಡಲಾಗಿದೆ. ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ಅಪಾಯಕಾರಿ ಜಾಗಗಳ ಗುರುತು ಮಾಡಲಾಗಿದ್ದು, ಆಗಸ್ಟ್ ತಿಂಗಳಲ್ಲಿ ಮಳೆ ತೀವ್ರ ಸ್ವರೂಪ ಪಡೆಯುವ ಸೂಚನೆ ಹಿನ್ನಲೆಯಲ್ಲಿ ಅಪಾಯಕಾರಿ ಸ್ಥಳಗಳಲ್ಲಿ ಹೆಚ್ಚಿನ ನಿಗಾ ವಹಿಸಲಾಗಿದೆ.

ಯಾವ-ಯಾವ ಸ್ಥಳಗಳು?: ಚಿಕ್ಕಮಗಳೂರು ಜಿಲ್ಲೆಯ ಮಲೆನಾಡಿನ 158 ಸ್ಥಳಗಳು ಅಪಾಯಕಾರಿ ಎಂದು ಪಟ್ಟಿ ಮಾಡಲಾಗಿದೆ. ಇವುಗಳಲ್ಲಿ ಪ್ರತಿ ಮಳೆಗಾಲದಲ್ಲಿ ಅಪಾಯಕ್ಕೆ ತುತ್ತಾಗುವ ಸ್ಥಳಗಳು ಸೇರಿವೆ. ಶೃಂಗೇರಿ ತಾಲೂಕಿನಲ್ಲಿ 87, ಎನ್. ಆರ್. ಪುರ ತಾಲೂಕಿನಲ್ಲಿ 21 ಸ್ಥಳಗಳನ್ನು ಪಟ್ಟಿ ಮಾಡಲಾಗಿದೆ.
ಮೂಡಿಗೆರೆ ತಾಲೂಕಿನಲ್ಲಿ 17 ಅಪಾಯಕಾರಿ ಸ್ಥಳಗಳನ್ನು ಗುರುತು ಮಾಡಲಾಗಿದ್ದು, ಈ ಸ್ಥಳಗಳ ಮೇಲೆ ಜಿಲ್ಲಾಡಳಿತ, ವಿಪತ್ತು ನಿರ್ವಹಣಾ ತಂಡ, ಪೊಲೀಸ್ ಇಲಾಖೆ ತೀವ್ರ ನಿಗಾವಹಿಸಿದೆ. ಒಂದು ವೇಳೆ ಅಪಾಯ ಸಂಭವಿಸಿದರೆ ಸ್ಥಳಾಂತರಿಸಲು 77 ಸುರಕ್ಷಿತ ಜಾಗಗಳ ಗುರುತು ಸಹ ಮಾಡಲಾಗಿದೆ.
ಕೊಪ್ಪ ತಾಲೂಕಿನ ಗುಡ್ಡೆತೋಟದ 14 ಕುಟುಂಬಗಳ ಮೇಲೆ ತೀವ್ರ ನಿಗಾ ವಹಿಸಲಾಗಿದೆ. ಭಾರೀ ಮಳೆ ಸುರಿದರೆ ಕುಟುಂಬಗಳು ಅಪಾಯಕ್ಕೆ ಸಿಲುಕುವ ಸಾಧ್ಯತೆ ಇದೆ. ಅಪಾಯಕಾರಿ ಸ್ಥಳಗಳ ಕುರಿತು ಈಗಾಗಳೇ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯನ್ನು ಸಹ ನಡೆಸಿದ್ದಾರೆ.
ಈಗ ಸುರಿಯುತ್ತಿರುವ ಮಳೆಯಿಂದಾಗಿಯೂ ಅಪಾರ ಹಾನಿಯಾಗಿದೆ. ಚಿಕ್ಕಮಗಳೂರು ಜಿಲ್ಲಾಧಿಕಾರಿ, ಎಸ್ಪಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ಮತ್ತು ಇತರೆ ಅಧಿಕಾರಿಗಳು ಭೂಕುಸಿತ ಸಂಭವಿಸಿರುವ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಅಧಿಕಾರಿಗಳ ತಂಡ ಶೃಂಗೇರಿ ಪಟ್ಟಣದಲ್ಲಿರುವ ಗಾಂಧಿ ಮೈದಾನ ಹಾಗೂ ಶೃಂಗೇರಿ ತಾಲ್ಲೂಕಿನಲ್ಲಿರುವ ತ್ಯಾವಣ, ಸಾಲುಮರ, ಕುರದಮನೆ ರಸ್ತೆ ಮತ್ತು ನೆಮ್ಮಾರು ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಚಾರ್ಮಾಡಿ ಘಾಟ್‌ಗೆ ಭೇಟಿ ನೀಡಿ, ಭೂಕುಸಿತ ಸಂಭವಿಸಬಹುದಾದ ಸ್ಥಳಗಳನ್ನು ಹಾಗೂ ಪ್ರಕೃತಿ ವಿಕೋಪಗಳನ್ನು ಎದುರಿಸಲು ಕೈಗೊಂಡಿರುವ ಕ್ರಮಗಳನ್ನು ಪರಿಶೀಲನೆ ನಡೆಸಿತು. ಪ್ರವಾಹ, ಭೂಕುಸಿತ ಮತ್ತು ತೂಗು ಸೇತುವೆ ಹಾನಿ ಆಗಿರುವ ಸ್ಥಳಗಳನ್ನು ಪರಿಶೀಲಿಸಿ ಸ್ಥಳೀಯ ಮಟ್ಟದ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದರು.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆ ಅಬ್ಬರ ಮುಂದುವರೆದ ಹಿನ್ನಲೆಯಲ್ಲಿ ಮನೆಗಳು ಕುಸಿಯುತ್ತಿವೆ. ಮನೆ ಗೋಡೆ, ಮೇಲ್ಛಾವಣಿ ಕುಸಿದು, ದಿನ್ಯನಿತ್ಯ ಬಳಸುವ ಅಗತ್ಯವಸ್ತುಗಳು ಮಣ್ಣು ಪಾಲಾದ ಘಟನೆಯೂ ನಡೆದಿದೆ. ಹಳುವಳ್ಳಿ ಗ್ರಾಮದ ತಾರಿಕೊಂಡ ಉಮಾ ರಮೇಶ್ ಮನೆಗೆ ಮಳೆಯಿಂದಾಗಿ ಹಾನಿಯಾಗಿದೆ. ಜಿಲ್ಲೆಯ ವಿವಿಧ ಪ್ರದೇಶದಲ್ಲಿ ಮನೆಗಳು ಕುಸಿದಿವೆ.
ಮಳೆ ಹಿನ್ನಲೆಯಲ್ಲಿ ಜಿಲ್ಲೆಯ ವಿವಿಧ ಜಲಪಾತಗಳು ಮೈದುಂಬಿ ಹರಿಯುತ್ತಿವೆ. ಪ್ರವಾಸಕ್ಕೆ ಆಗಮಿಸಿದ ಜನರು ಫಾಲ್ಸ್ ಸಮೀಪ ಹೋಗದಂತೆ ನಿಷೇಧ ಹೇರಲಾಗಿದೆ. ದತ್ತಪೀಠ ತಪ್ಪಲಿನಲ್ಲಿರುವ ಫಾಲ್ಸ್ ಸೇರಿದಂತೆ ವಿವಿಧ ಫಾಲ್ಸ್‌ಗೆ ಹೋಗುವ ರಸ್ತೆಯನ್ನು ಪೊಲೀಸರು ಬಂದ್ ಮಾಡಿದ್ದಾರೆ.












Click it and Unblock the Notifications