ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟ, ಹೆಬ್ಬಾಳೆ ಸೇತುವೆ ಮುಳುಗಡೆ, ಸಂಚಾರ್ ಬಂದ್
ಚಿಕ್ಕಮಗಳೂರು, ಜುಲೈ 4 : ಚಿಕ್ಕಮಗಳೂರಿನ ಮಲೆನಾಡು ಭಾಗದಲ್ಲಿ ಮಳೆಯ ಆರ್ಭಟ ಜೋರಾಗಿದ್ದು ಜನಜೀವನ ಅಸ್ತವ್ಯಸ್ತವಾಗಿದೆ. ಕಳಸ ತಾಲೂಕಿನ ಕುದುರೆಮುಖ ಭಾಗದಲ್ಲಿ ಭಾರೀ ಮಳಯಾಗಿದ್ದು ಭಾರೀ ಮಳೆಯಿಂದ ಭದ್ರಾ ನದಿ ಅಪಾಯಮಟ್ಟ ಮೀರಿ ಹರಿಯುತ್ತಿದೆ. ಕಳಸ ಸಮೀಪದ ಹೆಬ್ಬಾಳೆ ಸೇತುವೆ ಮುಳುಗಡೆಯಾಗಿದ್ದು, ಪರಿಣಾಮ ಕಳಸ- ಹೊರನಾಡು ಸಂಪರ್ಕ ಕಡಿತಗೊಂಡಿದೆ.
ಕಳಸ ಹಾಗೂ ಕುದುರೆಮುಖ ಸುತ್ತಮುತ್ತ ಭಾನುವಾರ ರಾತ್ರಿಯಿಂದ ಬಿಟ್ಟು ಬಿಡದೇ ಮಳೆ ಸುರಿಯುತ್ತಿದೆ. ಭಾರೀ ಮಳೆಯಿಂದ ಭದ್ರಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಇದರಿಂದ ಕಳಸ-ಹೊರನಾಡಿಗೆ ಸಂಪರ್ಕ ಕಲ್ಪಿಸುವ ಹೆಬ್ಬಾಳೆ ಸೇತುವೆ ಮುಳುಗಡೆಯಾಗಿದೆ.
ಚಿಕ್ಕಮಗಳೂರು ಮಳೆ ಅಬ್ಬರ, ತುಂಬಿ ಹರಿಯುತ್ತಿರುವ ಭದ್ರೆ
ಹೆಬ್ಬಾಳೆ ಮುಳುಗಡೆಯಾದ ಪರಿಣಾಮ ಹೊರನಾಡು ಅನ್ನಪೂರ್ಣೇಶ್ವರಿ ದೇಗುಲ ಹಾಗೂ ಕಳಸ ಸಂಪರ್ಕ ಕಡಿತಗೊಂಡಿದೆ. ದೇವಸ್ಥಾನಕ್ಕೆ ಹೋಗಲು ಅನ್ಯ ಮಾರ್ಗವಿದ್ದರೂ ಸುಮಾರು 8-10 ಕಿ. ಮೀ. ಸುತ್ತಿ ಬಳಸಿ ಹೋಗಬೇಕಾದ ಅನಿವಾರ್ಯ ಪ್ರವಾಸಿಗರದ್ದಾಗಿದೆ.
ಜಿಲ್ಲೆಯಾದ್ಯಂತ ಮಳೆ; ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಾಗುತ್ತಿದ್ದು, ನದಿಗಳು ಮೈದುಂಬಿ ಹರಿಯುತ್ತಿವೆ. ತುಂಗಾ, ಭದ್ರಾ, ಹೇಮಾವತಿ ನದಿಗಳು ಮೈದುಂಬಿ ಹರಿಯುತ್ತಿವೆ. ಇನ್ನು ಜಿಲ್ಲೆಯ ಮೂಡಿಗೆರೆ, ಕೊಪ್ಪ, ಎನ್. ಆರ್. ಪುರ, ಶೃಂಗೇರಿ, ಚಿಕ್ಕಮಗಳೂರು, ಕಳಸ, ತರೀಕೆರೆ ತಾಲೂಕಿನಲ್ಲಿ ಧಾರಾಕಾರ ಮಳೆಯಾಗುತ್ತಿದ್ದು ಜನಜೀವನ ಅಸ್ತವ್ಯಸ್ತವಾಗಿದೆ. ಇನ್ನು ಚಿಕ್ಕಮಗಳೂರು ತಾಲೂಕಿನಲ್ಲೂ ಬಿಟ್ಟುಬಿಟ್ಟು ಮಳೆ ಸುರಿಯುತ್ತಿದೆ. ಧಾರಾಕಾರ ಮಳೆಯಿಂದ ನದಿಗಳಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬಂದಿದೆ. ತುಂಗಾ, ಭದ್ರಾ, ಹೇಮಾವತಿ ನದಿಗಳ ಹರಿವಿನ ಮಟ್ಟ ಹೆಚ್ಚಾಗಿದೆ.
17 ಎಕರೆ ಹುಲ್ಲುಗಾವಲು ಗೋಮಾಳದ ಮೇಲೆ ಸರ್ಕಾರದ ಕಣ್ಣು, ರೈತರ ಆಕ್ರೋಶ

ಶಾಲಾ ಮಕ್ಕಳ ಪರದಾಟ; ಭಾನುವಾರ ಸಂಜೆಯಿಂದ ಸೋಮವಾರ ಬೆಳಗ್ಗೆವರೆಗೆ ಮಳೆ ನಿರಂತರವಾಗಿ ಸುರಿಯುತ್ತಿದ್ದ ಪರಿಣಾಮ ಶಾಲೆಗೆ ತೆರಳುವ ಮಕ್ಕಳು ಪರದಾಡುವಂತಾಗಿತ್ತು. ಕೆಲವರು ಮಕ್ಕಳನ್ನ ಕಾರು, ಬೈಕಿನಲ್ಲಿ ಶಾಲೆಗೆ ಬಿಟ್ಟು ಬಂದಿದ್ದಾರೆ. ಕೆಲವು ಮಕ್ಕಳು ಮಳೆಯ ನಡೆವೆಯೂ ಶಾಲೆಗೆ ತೆರಳುತ್ತಿದ್ದದ್ದು ಕಂಡು ಬಂತು.