ಆರಂಭಕ್ಕೂ ಮುನ್ನವೇ ಜಿಲ್ಲಾ ನುಡಿ ಜಾತ್ರೆಗೆ ಬಂತು ವಿಘ್ನ
ಚಿಕ್ಕಮಗಳೂರು, ಜನವರಿ 03: ಕಾಫಿನಾಡು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಜ್ಜಾಗುತ್ತಿದೆ. ಇದೇ ಜನವರಿ 10ರಂದು ಶೃಂಗೇರಿಯಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ದಿನಾಂಕ ನಿಗದಿಯಾಗಿದೆ. ಆದರೆ ಸಮ್ಮೇಳನದ ಆರಂಭಕ್ಕೂ ಮುನ್ನವೇ ಅಪಸ್ವರ ಕೇಳಿಬಂದಿದ್ದು, ಪ್ರತಿಭಟನೆ ನಡೆದಿದೆ.
ಇದಕ್ಕೆ ಕಾರಣ ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಕಲ್ಕುಳಿ ವಿಠ್ಠಲ ಹೆಗ್ಡೆ ಅವರನ್ನು ಆಯ್ಕೆ ಮಾಡಿರುವುದು. ಜಿಲ್ಲಾ ಸಾಹಿತ್ಯ ಪರಿಷತ್, ಮೂಲತಃ ಶೃಂಗೇರಿಯವರಾದ, "ಮಂಗನ ಬ್ಯಾಟೆ" ಕೃತಿಯ ಮೂಲಕ ಮಲೆನಾಡಿನ ಚಿತ್ರಣವನ್ನು ಸೊಗಸಾಗಿ ಬಿಂಬಿಸಿದ್ದ ಕಲ್ಕುಳಿ ವಿಠ್ಠಲ ಹೆಗಡೆ ಅವರನ್ನು ಸಮ್ಮೇಳನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದೆ. ಆದರೆ ಅವರನ್ನು ಆಯ್ಕೆ ಮಾಡಿರುವುದಕ್ಕೆ ಜಿಲ್ಲೆಯಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ.
"ಮಂಗನ ಬ್ಯಾಟೆ" ಕೃತಿಯಲ್ಲಿ ವಿಠ್ಠಲ ಹೆಗಡೆ ಶೃಂಗೇರಿ ಮಠವನ್ನು ಅವಹೇಳನಕಾರಿಯಾಗಿ ಬಿಂಬಿಸಿದ್ದಾರೆ ಹಾಗೂ ಅವರು ನಕ್ಸಲ್ ಬೆಂಬಲಿಗ ಎಂಬ ಆರೋಪ ಇದೆ. ಹಾಗಾಗಿ ಈ ನಿರ್ಣಯಕ್ಕೆ ವಿರೋಧ ವ್ಯಕ್ತವಾಗಿದೆ. ಈ ಹಿಂದೆಯೂ ಇದೇ ಕಾರಣಕ್ಕೆ ವಿವಾದ ಉಂಟಾಗಿ, ಸಾಮಾಜಿಕ ಜಾಲತಾಣಗಳಲ್ಲಿ ವಿರೋಧ ವ್ಯಕ್ತವಾಗಿತ್ತು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರ ಆಯ್ಕೆಯ ಬಗ್ಗೆ ಗಮನಹರಿಸಿ ಪರಾಮರ್ಶೆ ಮಾಡಬೇಕು ಎಂಬ ಮಾತುಗಳು ಕೇಳಿ ಬಂದಿದ್ದವು.

ಇದೀಗ ಸಮ್ಮೇಳನ ಸಮೀಪಿಸುತ್ತಿರುವ ಈ ಹೊತ್ತಿನಲ್ಲಿ ಶ್ರೀರಾಮ ಸೇನೆ, ಎಬಿವಿಪಿ, ಭಜರಂಗದಳ, ವಿಶ್ವ ಹಿಂದೂ ಪರಷತ್ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದೆ. ಶೃಂಗೇರಿಯಲ್ಲಿ ನಕ್ಸಲ್ ವಿರೋಧಿ ಹೋರಾಟ ಸಮಿತಿ ಶೃಂಗೇರಿ ಪಟ್ಟಣದ ಬಸ್ ನಿಲ್ದಾಣದಿಂದ ಮಾರ್ಕೆಟ್ ವರೆಗೆ ಸಮ್ಮೇಳನ ಅಧ್ಯಕ್ಷರ ಬದಲಾವಣೆ ಮಾಡಿ ಕನ್ನಡ ಸಾಹಿತ್ಯ ಪರಿಷತ್ ಉಳಿಸಿ ಘೋಷಣೆಯೊಂದಿಗೆ ಪ್ರತಿಭಟನೆ ನಡೆಸಿದೆ.












Click it and Unblock the Notifications